ವಿಶೇಷ ಲೇಖನ
ಮರೆಯಾದ ಶತಮಾನದ ಸಂತ
ಸುಲೋಚನಾ ಮಾಲಿಪಾಟೀಲ
ನಮ್ಮ ಭೂಮಾತೆಯ ಮಡಿಲಲ್ಲಿ ತಮ್ಮ ಶುಭ್ರವಾದ ಛಾಯೆಯನ್ನು ಬಿಟ್ಟು ಹೋದ ಕೆಲವು ಪೂಣ್ಯಾತ್ಮರ ಬಗ್ಗೆ ಕೇಳಿದ್ದೆವೆ, ಓದಿದ್ದೆವೆ, ಕೆಲವರನ್ನು ಪ್ರತ್ಯಕ್ಷ ಕಂಡಿದ್ದೆವೆ. ಉಪಮಿಸಲಾಗದ ಉಪಮಾತೀತರನ್ನು ಆ ದೇವರು ಈ ಮನುಕುಲಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ಶರಣ, ಸಂತ, ದಾಸ, ಜ್ಞಾನಿಗಳ, ವಿಜ್ಞಾನಿಗಳ ಪಧಗಳು ಒಂದೊಂದಾದರೆ ಇವೆಲ್ಲವುಗಳನ್ನು ಒಳಗೊಂಡ ಶ್ರೇಷ್ಟ, ದಾರ್ಶನಿಕ, ಆಧ್ಯಾತ್ಮಿಕ, ಸರಳ ಸಜ್ಜನಿಕೆಯ ನಡೆಯುಳ್ಳ ಶುಭ್ರತೆಯ ಶುಭ್ರ ಬದುಕನ್ನು ಅಳವಡಿಸಿಕೊಂಡ ವಿಶೇಷ ವ್ಯಕ್ತಿತ್ವತೆಯ ಸಿದ್ಧೇಶ್ವರ ಸ್ವಾಮಿಗಳು ಒಂದು. ಇಂತಹ ಸಂತನನ್ನು ಹಿಂದೆಯೂ ನೋಡಿಲ್ಲ ಮುಂದೆಯೂ ನೋಡುವುದಿಲ್ಲ. ಅಂತಹವರ ಸನ್ನಿಧಿಯಲ್ಲಿ ಇದ್ದ ನಾವುಗಳೇ ಸೌಭಾಗ್ಯ ಶಾಲಿಗಳು. ನಾವು ಕಾಣದಂತಹ ಬಸವಣ್ಣನವರನ್ನು ಅವರಲ್ಲಿ ಕಾಣುತ್ತಿದ್ದೆವೆ. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಬದುಕಿದ ಶರಣರಿವರು. ಲಿಂಗತಾರತಮ್ಯ, ಜಾತಿ, ಧರ್ಮ,ಬಡವ ಶ್ರೀಮಂತರನ್ನದೆ ಎಲ್ಲರನ್ನು ಆದರಿಸಿ ಮಾತನಾಡುವ, ಪ್ರೀತಿಸುವ ಸ್ವಭಾವ ಅವರಲ್ಲಿ ಬೇರೂರಿತ್ತು. ನಿಸರ್ಗ ಪ್ರೇಮಿಗಳು, ಸಕಲ ಸಾಕಾರ ಮೂರ್ತಿ ಸಿದ್ಧೇಶ್ವರ ಸ್ವಾಮಿಗಳಾಗಿದ್ದರು.
ಅವರ ಪ್ರವಚನಗಳು ಕೂಡ ಪ್ರಕೃತಿಯ ಪರಿಸರದಲ್ಲಿ ಕಂಡುಕೊಂಡ ಆನಂದಿಸುವ, ಮನಕೆ ಮುದ ನೀಡುವ ವಿಷಯಗಳಾಗಿದ್ದವು. ಜನಜಂಗುಳಿಯ ಗದ್ದಲವಿಲ್ಲದ ಪ್ರಶಾಂತತೆಯ ವಾತಾವರಣವನ್ನು ಬಹಳ ಇಷ್ಟಪಡುತ್ತಿದ್ದರು. ನಿಸರ್ಗದ ಜೊತೆಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಜುಳುಜುಳು ಹರಿವ ನದಿ, ಬೆಲಿಯಿಲ್ಲದೆ ಸ್ವಚ್ಛಂದವಾದ ಜೀವನ ನಡೆಸುವ ಪಶು ಪಕ್ಷಿಗಳು, ಕೊಗಿಲೆಗಳ ಸುಸ್ವರ ಗಾನ, ಪಕ್ಷಿಗಳ ಕಲರವ, ಭೃಂಗಗಳ ನಿನಾದ, ಪುಷ್ಪಗಳ ಸುಂಗಂಧದ ಪರಿಮಳ, ಹಸಿರು ವನಸಿರಿಯ ಮಧ್ಯೆ ಸೂರ್ಯ ಚಂದ್ರರ ಆಟ. ಇದೆಲ್ಲವು ನಿಸರ್ಗ ತನ್ನ ತಾನು ಬೆಳೆಸಿಕೊಂಡು ಉಳಿಸಿಕೊಂಡು ಮನುಕುಲಕ್ಕೆ ಉಡುಗೊರೆಯಾಗಿ ನೀಡಿದೆ. ನಾವೆಲ್ಲರೂ ಕೂಡ ಅದನ್ನು ಉಳಿಸಿಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಂದವಾಗಿ ಬೆಳೆಸಿ ಆನಂದಿಸಬಹುದೆಂಬುದು ಪ್ರವಚನಗಳಲ್ಲಿ ಬಿಂಬಿಸುವ ಪದಗಳಾಗಿದ್ದವು. ಸಿದ್ಧೇಶ್ವರ ಸ್ವಾಮಿಗಳು ದೊಡ್ಡ ಆಧ್ಯಾತ್ಮಿಕ ಚಿಂತಕರು. ಉತ್ತರ ಕರ್ನಾಟಕದ ಬಿಜ್ಜರಗಿಯ ಗ್ರಾಮದಲ್ಲಿ ಜನಿಸಿ ದೇವರು ತಮ್ಮ ನಾಲ್ಕನೆಯ ತರಗತಿಯ ಅಧ್ಯಯನ ನಂತರ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದು ನೆಲೆಸಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಕೂಡ ಸಿದ್ಧೇಶ್ವರ ಸ್ವಾಮಿಜಿಯರನ್ನು ಅವರ ಬಾಲ್ಯದಲ್ಲಿಯೇ ಬೆಳೆಸಿ ಕೊಂಡ ಆಧ್ಯಾತ್ಮಿಕ ಚಿಂತನೆ ಮತ್ತು ಚಾಣಾಕ್ಷತೆಯನ್ನು ಕಂಡು ಹಿಡಿದಿದ್ದರು. ತಮ್ಮ ಜೊತೆ ಪ್ರವಚನೆ ಬೋಧನೆಗೆ ಕರೆದುಕೊಂಡು ಹೋಗುತ್ತಿದ್ದರು. ಸಿದ್ಧೇಶ್ವರ ಸ್ವಾಮಿಗಳು ಕೂಡ ತಮ್ಮ ಮುಂದಿನ ಅಧ್ಯಯನವನ್ನು ಜ್ಞಾನ ಯೋಗಾ ಶ್ರಮದಲ್ಲಿ ಮುಂದುವರೆಸಿಕೊಂಡು ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ತತ್ವ ಶಿರೋಮಣಿಯೆಂಬ ಪುಸ್ತಕವನ್ನು ಬರೆದರು.
ಪಂಚಭಾಷೆಗಳನ್ನು ( ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಮತ್ತು ಇಂಗ್ಲಿಷ್) ಮಾತಾಡುವದು ಬರೆಯುವುದನ್ನು ಕಲಿತವರಾಗಿದ್ದರು. ಪರಿಸರವನ್ನು ಉಳಿಸಿ, ಪರಿಸರವನ್ನು ಬೆಳೆಸಿ, ಪರಿಸರವನ್ನು ಪ್ರೀತಿಸಿಯೆಂಬುವ ಮಂತ್ರ ಅವರದ್ದಾಗಿತ್ತು.
ಜೀವನಕ್ಕೆ ಬೇಕಾಗುವ ಅಮೂಲ್ಯ ಶಕ್ತಿ ಈ ಪ್ರಕೃತಿಯ ಮಡಿಲಲ್ಲಿ ಅಡಗಿದೆ. ತಮಗೆ ಬೇಕಾಗಿರುವುದನ್ನು ಹುಡುಕಿ ಪಡೆಯುವ ಮನಸ್ಸು, ಧ್ಯೇಯ ನಮ್ಮದಾಗಿರಬೇಕು. ಹಲವಾರು ಪುಸ್ತಕಗಳನ್ನು ಬರೆದು ಈ ಸಮಾಜಕ್ಕೆ ಕೊಟ್ಟಿದ್ದಾರೆ. ಅವರ ಪುಸ್ತಕಗಳ ಅಧ್ಯಯನದಿಂದ, ಪ್ರವಚನ ಕೇಳುವುದರಿಂದ ಸಾಕಷ್ಟು ಜನರು ತಮ್ಮ ಜೀವನದ ದಿಕ್ಸೂಚಿಯನ್ನೆ ಬದಲಿಸಿಕೊಂಡು ಶಾಂತಿ, ನೆಮ್ಮದಿ, ಸಂತಸವನ್ನು ಪಡೆದುಕೊಂಡಿದ್ದಾರೆ. ಸಿದ್ಧೇಶ್ವರ ಸ್ವಾಮಿಗಳಿಗೆ ಸಾಕಷ್ಟು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ನೀಡಲು ಬಂದಾಗ ಅವರು ಸ್ವೀಕರಿಸದೆ, ಇದರ ಅವಶ್ಯಕತೆ ನನಗಿಲ್ಲವೆಂದು ಅಂದವರು. ನಾನೊಬ್ಬ ಸಾಧಾರಣ ಮನುಷ್ಯ, ನಿಮ್ಮೆಲ್ಲರಲ್ಲಿಯೇ ನಾನೋಬ್ಬನೆಂದು ಎಲ್ಲ ಪ್ರಶಸ್ತಿಗಳನ್ನು ತಿರುಗಿ ಕಳುಹಿಸಿದವರು. ಈ ಆಧುನಿಕ ಯುಗದಲ್ಲಿ ಅಂತಹ ಶ್ರೇಷ್ಟ ವ್ಯಕ್ತಿಯನ್ನು ಕಾಣುವುದೇ ನಮ್ಮ ಸೌಭಾಗ್ಯವಲ್ಲವೇ. ಮುಂದಿನ ಮಕ್ಕಳಿಗೆ ಆ ಭಾಗ್ಯ ಲಭಿಸುವುದೋ ಇಲ್ಲೋ ಗೊತ್ತಿಲ್ಲ. ಸೂರ್ಯ ಬೆಳಕು ಚೆಲ್ಲುವಂತೆ ಜನರ ಮನಗಳಲ್ಲಿ ಒಳ್ಳೆಯ ಚಿಂತನೆಯ ವಿಚಾರಗಳನ್ನು ಬೆಳಗಿಸಿದರು ಸಿದ್ಧೇಶ್ವರ ಸ್ವಾಮಿಗಳು. ತಮ್ಮಲ್ಲಿ ಶಕ್ತಿ ಇರುವಷ್ಟು ದಿನ ಎಲ್ಲೆಡೆ ತಿರುಗಾಡಿ ಆಧ್ಯಾತ್ಮಿಕ ಚಿಂತನೆ ಮತ್ತು ಪ್ರವಚನ ಮೂಲಕ ಜ್ಞಾನ ಭೋದನೆಗಳನ್ನು ನೀಡುವ, ಹಂಚುವ ಉದ್ದೇಶ ಅವರು ಇಟ್ಟುಕೊಂಡವರು. ಅವರ ಉಡುಗೆ, ತೊಡುಗೆ, ನಡಿಗೆ, ಕೊಡುಗೆಗಳನ್ನು ನೋಡಿದರೆನೆ ಅವರದೆಂತಹ ವ್ಯಕ್ತಿತ್ವಯೆಂಬುದು ಗೊಚರಿಸುತ್ತಿತ್ತು. ಕಿಸೆಯಿಲ್ಲದ ಸ್ವಚ್ಛ ಶುಭ್ರ ಬಿಳಿಯ ಜುಬ್ಬ ಮತ್ತು ಬಿಳಿಯ ಪಾಯಜಾಮ್ ಅಲ್ಲದೇ ಹಣೆಯ ಮೇಲೆ ಮೂರು ಬಿಟ್ಟು ವಿಭೂತಿ, ಬಾಯಲ್ಲಿ ಜ್ಯಾನವನ್ನು ಬಿಂಬಿಸುವ ತತ್ವ ಸಿದ್ಧಾಂತಗಳ ವೈಖರಿ ಇವೆಲ್ಲವುಗಳು ಅವರ ಜೀವನ ಶೈಲಿಯನ್ನು ಎತ್ತಿ ತೊರಿಸುತ್ತಿದ್ದವು. ಸಿದ್ಧೇಶ್ವರ ಸ್ವಾಮಿಗಳು ಸಮಯಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಅವರು ಪ್ರವಚನ ಹೇಳಲು ಬರುತ್ತಾರೆಂದರೆ ಸಾಕು, ಎಲ್ಲ ಧರ್ಮದವರು ಒಗ್ಗಟ್ಟಾಗಿ ಕೇಳಲು ಬರುವ ಸುತ್ತಮುತ್ತಲಿನ ಭಕ್ತಾದಿಗಳಿಗೆ ವಾಹನಗಳ ಅನಕೂಲ, ಪ್ರಸಾದದ ವ್ಯವಸ್ಥೆ ಮಾಡಲು ಅಣಿಯಾಗುತ್ತಿದ್ದರು. ಪ್ರತಿದಿನ ಒಂದು ತಾಸಿನ ಶಾಂತ ಪ್ರಸನ್ನತೆಯ ಜನಜಾತ್ರೆ ದೊಡ್ಡ ಪ್ರಮಾಣದಲ್ಲಿ ಸೇರಿಕೊಳ್ಳುತ್ತಿತ್ತು. ಅಲ್ಲಿ ಒಂದು ಸೂಜಿ ಬಿದ್ದರು ಅದರ ಸಪ್ಪಳ ಎಲ್ಲರಿಗೂ ಕೇಳಿಸುವಂತಿರುತ್ತಿತ್ತು. ಅವರ ನುಡಿಗಳೇ ಅಮೃತ ಸವಿದಂತಿರುತ್ತಿತ್ತು. ನಮ್ಮ ದೇಶಕ್ಕೆ ಅಂತಹ ವ್ಯಕ್ತಿಗಳ ಅವಶ್ಯಕತೆ ಬಹಳವಿದೆ. ಇಂದು ನಾವುಗಳು ಅವರನ್ನು ಕಳೆದುಕೊಂಡು ಅನಾಧರಾಗಿದ್ದೆವೆ. ಅವರ ಅಂತರಾತ್ಮ ಶುಭ್ರತೆಯ ಬೆಳಕಿದ್ದಂತೆ. ಎಂದಿಗೂ ಯಾರಿಂದಲೂ ಯಾವುದನ್ನು ಅಪೆಕ್ಷೇ ಮಾಡದೆ ಸಮಾಜದ ಹಿತಗೋಸ್ಕರ ಮತ್ತು ಬಡವರ, ಅನಾಧರ, ಅನಾನಕೂಲತೆಗಳು ಇದ್ದವರ ಶ್ರೇಯಸ್ಸಿಗಾಗಿ ಜ್ಞಾನ ದಾಸೋಹ, ಅನ್ನ ದಾಸೋಹ ನಡೆಸಿಕೊಂಡು ಬಂದವರು. ಆಶ್ರಮಕ್ಕೆ ಬಂದ ಭಕ್ತಾದಿಗಳಿಗೆ ತಾವೇ ಸ್ವತಹನಿಂತು ಊಟ ಬಡಿಸುವವರು.
ಅವರು ಜೀವನದಲ್ಲಿ ಅಲೋಪತಿ ಔಷದಗಳನ್ನು ಸ್ವಿಕರಿಸಿದವರೆ ಅಲ್ಲ. ಯಾವಾಗಲೂ ಆಯುರ್ವೇದ ಹೋಮಿಯೋಪತಿಗೆ ಬೆಲೆ ಕೊಟ್ಟವರು. ತಮ್ಮ ಜೀವನದ ಕೊನೆಯ ದಿನವನ್ನು ಸಮೀಪಿಸುತ್ತಿದ್ದಂತೆ ಆಹಾರವನ್ನು ತ್ಯಜಿಸಿ ಇಚ್ಛಾಮರಣವನ್ನು ಸ್ವೀಕಾರ ಮಾಡಿದರು. ನಾನೆಂಬುವುದನ್ನು ಮರೆತು ಈ ಬಯಲೋಳಗೆ ಹುಟ್ಟಿದ ಧ್ಯೇಯ ಪ್ರಕೃತಿಯ ಮಡಿಲಿನ ಬಯಲಲ್ಲಿ ಬಯಲಾಗಿ ಹೋಗುವಂತೆ ಬದುಕಿರೆಂದು ಹೇಳುತ್ತಿದ್ದರು. ಸಿದ್ಧೇಶ್ವರ ಸ್ವಾಮಿಗಳು ಮೂರ್ತಿ ಪೂಜೆಗೆ ನಿಶಿದ್ಧರು. ಪ್ರಕೃತಿಯೇ ದೇವರೆಂದವರು. ಅವರ ಸಂದೇಶಗಳು ಯಾವ ಆಶಾಪಾಶಗಳಿಗೆ ಸಿಲುಕದೆ ಗುರಿಯಾಗಿದೆ ನಿಮ್ಮ ಪರಿಸರವನ್ನು ಉಳಿಸಿ, ಬೆಳೆಸಿ , ಅದರಿಂದ ಆನಂದ ಅನುಭವಿಸಿರಿ. ಉಳಿದವರಿಗೆ ಅದರ ಬಗ್ಗೆ ಜ್ಞಾನವನ್ನು ಹಂಚಿರೆನ್ನುವುದಾಗಿತ್ತು. ಅವರು ನುಡಿದಂತೆ ನಡೆದ ದೇವರು. ಈ ಪವಿತ್ರ ಭೂಮಿಯಲ್ಲಿ ಸಿದ್ಧೇಶ್ವರ ಸ್ವಾಮಿಗಳಂತಹ ಶರಣರು ಮತ್ತೆ ಮರಳಿ ಜನ್ಮತಾಳಿ ಬರಲಿ. ಈ ಭೂಮಾತೆಯ ಸೇವೆಯನ್ನು ಎಲ್ಲರೂ ಸೇರಿಕೊಂಡು ಮಾಡುವಂತಹ ಪ್ರವೃತ್ತಿ ಬೆಳೆಸಿಕೊಳ್ಳುವರಾಗಲಿ ಅಂದಾಗ ಸಿದ್ಧೇಶ್ವರ ಸ್ವಾಮಿಗಳ ಭಕ್ತರಾಗಲು ನಾವು ಸಾರ್ಥಕವಾದಂತೆ.
ಯಾಕೆ ಮೂಕನಾದೆಯೋ ಗುರುವೇ ನೀ
ಯಾಕೆ ಮೂಕನಾದಿ ಲೋಕಪಾಲಕಯೆನ್ನ
ಸಾಕುವವರಾರಯ್ಯ ನೀ ನಿರದ ಲೋಕವ
ತಮ್ಮ ಕೊನೆಯ ಪಯಣದಲ್ಲೂ ಸರಳ ಸೂತ್ರಗಳಲ್ಲೂ ತಿಳಿಸಿದವರು. ತಮ್ಮ ಯಾವುದೇ ಮೂರ್ತಿ ಸ್ಥಾಪನೆಯಾಗಬಾರದು. ನಾನು ನನ್ನ ಭಕ್ತರ ಮನದಲ್ಲಿ ಸ್ಥಾಪಿತನಿರಬೇಕು. ನನ್ನ ದೇಹದ ಬೂದಿ ನದಿ ಸಮುದ್ರದಲ್ಲಿ ಹರಿಯಲು ಬಿಡಿ. ಯಾವುದೇ ಬಾಹ್ಯ ಆಡಂಬರ ಬೇಕಾಗಿಲ್ಲವೆಂದು ತಿಳಿಸಿದವರು. ಇಂತಹ ವ್ಯಕ್ತಿ ನಮಗೆ ದೊರಕಿರುವುದೆ ಅಪರೂಪ. ಭೂಮಾತೆಯ ಮಡಿಲಿಗೆ ಆ ದೇವರು ಶಾಂತಚಿತ್ತದಿಂದ ಸುಂದರವಾಗಿ ಕೆತ್ತಿದ ವರ್ಜವನ್ನು ನಮಗೆ ಅರ್ಪಿಸಿದ್ದಾನೆ. ಹೌದಲ್ಲವೇ.
—————————–
ಸುಲೋಚನಾ ಮಾಲಿಪಾಟೀಲ
Good article.