ಬಾಗೇಪಲ್ಲಿ-ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ-ಗಜಲ್

ಅರುಣನ ಕಿರಣವು ತಂಪೆರೆದಾಗ ಮೂಡುವುದು ಎನ್ನ ಗಜಲ್
ಬೆಳದಿಂಗಳು ಮೈ ತಾಪವ ಏರಿಸಿದಾಗ ಹೊಳೆವುದು ಎನ್ನ ಗಜಲ್.

ಪ್ರೇಮಿಗಳಿಬ್ಬರ ಪ್ರೀತಿ ಸದಾ ವೃದ್ಧಿಸಲು ಸಹಕಾರಿ ವಿಯೋಗವದು
ವಿರಹದಾ ನೋವು ಹೆಚ್ಚಿದಾಗ ಮನ ತಣಿಸುವುದು ಎನ್ನ ಗಜಲ್

ಹುಣ್ಣಿಮೆ ರಾತ್ರಿಯಲಿ ಕಡಲಲೆಗಳು ಭೋರ್ಗೆರೆಯುವುದು ಸಹಜ
ಉಬ್ಬರದ ಅಲೆ ಮೇಲಿಂದ ಇಳಿದಾಗ ಹಾಡಿಸುವುದು ಎನ್ನ ಗಜಲ್

ಮಾತು ಗಂಟಲಿಗೆ ಜಗಳವಾಗಿ ಮಿಮುಖ ಆಗಿರುವ ವೇಳೆಯಲಿ
ಬುದ್ಧಿಯಲಿ ಮಿಂದು ದ್ವಿಪದಿ ಆಗಿಸುವಾಗ ಬರೆಸುವುದು ಎನ್ನ ಗಜಲ್

ಕಾಮವನು ಪ್ರೇಮದಿಂದ ಬೇರ್ಪಡಿಸುವುದು ಸುಲಭ ಸಾಧ್ಯವಲ್ಲ
ಕೂಡಿಕೆಯ ಶೃಂಗದಲಿ ತೇಲುವಾಗ ಮಿಂಚುವುದು ಎನ್ನ ಗಜಲ್

ಕೃಷ್ಣಾ! ಏನು ಉಪಮೆಯ ನೀಡಿದರೂ ಬಣ್ಣಿಸೆ ಅಸದಳವು ಎನ್ನ ಗಜಲ್
ಗೋಪಿಕೆಯರು ಓರೆ ನೋಟದಿ ನೋಡಿದಾಗ ಸ್ಪುರಿಸುವುದು ಎನ್ನ ಗಜಲ್


Leave a Reply

Back To Top