ಕಾವ್ಯ ಸಂಗಾತಿ
ಕವಿ ಶೂನ್ಯತೆ
ವಿದ್ಯಾಶ್ರೀ ಅಡೂರ್
ಬರಲೊಲ್ಲೆನೆನುತಿಹಳು ಕಾವ್ಯಕನ್ನಿಕೆಯಿಂದು
ಕುಪಿತಳಾಗಿಹಳೇನೋ ನನ್ನ ಮೇಲೆ..
ಹಿಡಿಯಲಾಗದೆ ಅವಳ ಕನವರಿಸುತಿಹೆನಿಲ್ಲಿ
ಅವ್ಯಕ್ತ ಗೆರೆಗಳದು ಹಣೆಯ ಮೇಲೆ..
ಮುಗುಳುನಗೆಗೊಂದರ್ಥ ನಿಶ್ಶಬ್ಧಕಿನ್ನೊಂದು
ಪದಪುಂಜದೊಡತಿಯದು ಮಿಂಚು ಬೆಳಕು..
ಎಷ್ಟು ಹಲುಬಿದರೂನು ಎಷ್ಟು ನಲುಗಿದರೂನು
ಬರಲೊಲ್ಲದಿರುವವಳ ಕಾಯಬೇಕು..
ಹನಿಯುವಳು ಮಂಜಂತೆ ತೊನೆಯುವಳು ಮಳೆಯಂತೆ
ಅಡಿಗಡಿಗೆ ಬರಗಾಲ ಅವಳದೇ ಇಚ್ಛೆ..
ಬಂದಾಗ ಝಳಪಿಸುತಾ ಬರದಾಗ ಮರುಗಿಸುತಾ
ಸರ್ವತಂತ್ರಳೂ ಅವಳೇ,ಅವಳದೇ ಸ್ವೇಚ್ಛೆ..
ಚೆಂದದ ಕವಿತೆ.
ಪದಗಳ ಹೆಣೆದ ಶೈಲಿ ಉತ್ತಮ ವಾಗಿತ್ತು. ಹೋಲಿಕೆಯ ಛಾಯಾ ಚಿಂತೆನೆಗೆ ದಾರಿಯಾಗಿತ್ತು.