ನಿಮ್ಮೊಂದಿಗೆ
ಹೊಸ ವರ್ಷ, ಹೊಸ ಕನಸು;
ದ್ವೇಷ ಬಿಡಿ, ಮನುಷ್ಯರನ್ನು ಪ್ರೀತಿಸಿ..
ಪ್ರೀತಿಯ ಸಂಗಾತಿ ಬಳಗವೇ,
ಲೇಖಕಿ, ಲೇಖಕರೆ, ಸಾಹಿತ್ಯ ಓದುಗರೇ,
ಸಾಹಿತಿ ಅಥವಾ ಲೇಖಕನಾಗುವವನು ತನ್ನ ಸ್ವಂತ ಜೀವನದಲ್ಲಿ ವಿಶಾಲ ಮನೋಧರ್ಮವನ್ನು ಸ್ಥಾಪಿಸಿಕೊಳ್ಳುವುದು ಅಗತ್ಯ ಎಂದು ಕುವೆಂಪು 1957 ಧಾರವಾಡದಲ್ಲಿ ನಡೆದಿದ್ದ 39 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದರು ಎಂಬುದನ್ನು ಲೇಖಕ ರಘುನಾಥ ಚ.ಹ. ನೆನಪಿಸಿದ್ದಾರೆ .ಹಾಗೆಯೇ ನಮ್ಮ ತೇಗಿನಲ್ಲಿ ಹೊರಬೀಳುವುದು ನಾವು ತಿಂದುದರ ವಾಸನೆ ತಾನೆ ಎಂದು ಕುವೆಂಪು ಹೇಳಿದ್ದನ್ನು ಸಹ ನೆನಪಿಸಿದ್ದಾರೆ . ಕಾರಣ ಕನ್ನಡ ಸಾಹಿತ್ಯ ಪರಿಷತ್ತಿನ ಜುಟ್ಟು ಹಿಡಿದ ಮಹೇಶ್ ಜೋಶಿ ಎಂಬ ಅರೆ ಬೆಂದ ಹಾಗೂ ವರ್ಣ ವ್ಯವಸ್ಥೆ ಪ್ರತಿಪಾದಕ ಈಚೆಗೆ ಆಡಿರುವ ಮಾತಿನ ಕಾರಣವಾಗಿ. ಡಿ.29 ರಂದು ಹಾವೇರಿಯಲ್ಲಿ ಮಾಧ್ಯಮಗಳ ಮಾತನಾಡಿರುವ ಜೋಶಿ ಅವರು ತನ್ನನ್ನು ತಾನು ಜಾತ್ಯಾತೀತ ವ್ಯಕ್ತಿ ಎಂದು, ಮುಸ್ಲಿಮ ಬರಹಗಾರರಿಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸಿದವರನ್ನು ಮನೋರೋಗದಿಂದ ನರಳುತ್ತಿರುವ ಪ್ರಗತಿಪರ ಚಿಂತಕರು ಎಂದು ಹೊಸ ಸಂಶೋಧನೆಯನ್ನು ಮಾಡಿದ್ದಾರೆ. ಹಾವೇರಿ ಸಮ್ಮೇಳನದಲ್ಲಿ
ಮುಸ್ಲಿಮ್ ಸಮುದಾಯಕ್ಕೆ ಸ್ವಾಗತ, ನಿರೂಪಣೆ, ಪೆಂಡಲ್ ಹಾಕುವುದನ್ನು ನೀಡಿರುವುದೇ , ಕನ್ನಡ ಧರ್ಮವೆಂದು, ಶಿಶುವಿನಾಳ ಶರೀಫರ ಹೆಸರು ವೇದಿಕೆ ಇಟ್ಟಿರುವುದೇ ಸಾಮಾಜಿಕ ನ್ಯಾಯ ಎಂಬ ಫರ್ಮಾನು ಸ್ವರೂಪದ ಅಧಿಕಾರದ ಭಾಷೆಯಲ್ಲಿ ಮಾತನಾಡಿದ್ದಾರೆ. ಇದು ರಾಜ್ಯ ಕಸಾಪ ಅಧ್ಯಕ್ಷರ ಯೋಗ್ಯತೆಯನ್ನು ದಾಖಲಿಸಿದಂತಾಗಿದೆ.
ಕಸವರ ಮೆಂಬುದು ನೆರೆ ಸೈರಿಸಲಾರ್ಪೋಡೆ ಪರ ವಿಚಾರಮಮಂ ,
ಪರ ಧರ್ಮಮಂ ಎಂದು ಕವಿರಾಜಮಾರ್ಗಕಾರ ಹೇಳಿಯಾಗಿದೆ. ಅದರ ತದ್ವಿರುದ್ಧವಾಗಿ ಕರ್ನಾಟಕದ ಅಧಿಕಾರ ಕೇಂದ್ರ ಚಲಿಸುತ್ತಿದೆ. ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿ ರೂಪಾಂತರವಾಗಿ ಬದಲಾಗುರುವ ಕಸಾಪಕ್ಕೆ , ಚುಕ್ಕಾಣಿ ಹಿಡಿದ ಮನಸು ಸಹ ಅಂಥದ್ದೆ.
ಇಂತಹ ವಿಷಮ ಸ್ಥಿತಿಯಲ್ಲಿ ಸಾಹಿತಿ ಅಥವಾ ಲೇಖಕನಾದವನು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕಿದೆ.
ನಮ್ಮ ಬದುಕು ದೊಡ್ಡದಾಗದೆ, ನಮ್ಮ ಸಾಹಿತ್ಯ ದೊಡ್ಡದಾಗದು ಎನ್ನುತ್ತಾರೆ ಶಿವರಾಮ ಕಾರಂತರು .
ಇಂತಹ ವಿಷಮ ಸ್ಥಿತಿಯಲ್ಲಿ ನಮ್ಮನ್ನು ಆರೋಗ್ಯಪೂರ್ಣರನ್ನಾಗಿ ಇಡುವುದು ನಮ್ಮ ಹಿರಿಯರು ಬಾಳಿ ಬದುಕಿದ ‘ಬದುಕು ಮತ್ತು ಬರಹ’
ನಾರಿ ತನ್ನ ಮನೆಯಲ್ಲಿ ಕಳುವೆಡೆ
ತಾಯಿಯ ಮೊಲೆ ಹಾಲು ನಂಜಾದೊಡೆ ಇನ್ನಾರಿಗೆ ದೂರಲಿ ಕೂಡಲ ಸಂಗಮದೇವಾ
ಒಲೆ ಹತ್ತಿ ಉರಿದೊಡೆ ನಿಲಲುಬಹುದು;
ಧರೆ ಹತ್ತಿ ಉರಿದೊಡೆ ನಿಲಲು ಬಾರದು ? ಎಂದ ಬಸವಣ್ಣನ ಕಾಲದ ಸ್ಥಿತಿ, ಸನ್ನಿವೇಶ ಈಗ ಕರ್ನಾಟಕದಲ್ಲಿದೆ.
ಇಂತಹ ಹೊತ್ತಿನಲ್ಲಿ ಬರಹಗಾರ, ಲೇಖಕ, ಲೇಖಕಿಯ ಹೊಣೆಗಾರಿಕೆ ಏನು ?? ಏನನ್ನು ಓದಬೇಕು, ಏನನ್ನು ಬರೆಯಬೇಕು ಎಂಬುದನ್ನು ಸಹ ನಿರ್ಧರಿಸಿ.
ಕನ್ನಡ ಸಾಹಿತ್ಯದಲ್ಲಿ ಪಂಪ, ವಚನಕಾರರು, ಶಿಶುವಿನಾಳ ಶರೀಫ , ಸರ್ವಜ್ಞ, ಕುವೆಂಪು ಯಾಕೆ ಪದೇ ಪದೇ ನೆನಪಾಗುತ್ತಾರೆ ಎಂಬುದನ್ನು ಕ್ಷಣ ಕಾಲ ಯೋಚಿಸಿ. ಒಂದೇ ಕವಿತೆ ಬರೆದರೂ ಅಡ್ಡಿಯಿಲ್ಲ, ಚೆನ್ನಾಗಿ ಬದುಕಿ. ಬದುಕನ್ನು ಪ್ರೀತಿಸಿ,ಮನುಷ್ಯರನ್ನು ಪ್ರೀತಿಸಿ, ಧರ್ಮವನ್ನಲ್ಲ.
ನನ್ನ ಪಕ್ಕದವನನ್ನು ಮುಸ್ಲಿಮ್, ಕ್ರಿಶ್ಚಿಯನ್ ಎಂಬ ಕಾರಣಕ್ಕೆ ವಿನಾಕಾರಣ ದ್ವೇಷಿಸುವುದ ಕಲಿಸುವುದು ಧರ್ಮವೂ ಅಲ್ಲ, ಮನುಷ್ಯತ್ವವೂ ಅಲ್ಲ.
ಇವತ್ತು ಧರ್ಮ ದ್ವೇಷಿಗಳು ಯಾರ ಪಕ್ಕದಲ್ಲಿದ್ದಾರೆ, ಅವರು ಯಾವ ಪಕ್ಷದ ಬೆಂಬಲಿಗರು ಎಂಬುದನ್ನು ಬರಹಗಾರ, ಸಾಹಿತಿ ಎಂದು ಕರೆದುಕೊಳ್ಳುವವ ಯೋಚಿಸದಿದ್ದರೆ, ಅಂಥವನು ಬರೆದದ್ದು ಕಾಲದ ಕಸದ ಬುಟ್ಟಿಗೆ ಬೀಳಲಿದೆ.
ಕಳ್ಳರಿಂದ, ಖೂಳರಿಂದ ದೂರ ಇರುವುದು ಅಥವಾ ತಣ್ಣಗೆ ನಮ್ಮ ಪಾಡಿಗೆ ನಾವು ಬರೆಯುತ್ತಾ, ವೇದಿಕೆಗಾಗಿ ಕಾಯುತ್ತಾ ಕೂರುವುದೋ? ಅಥವಾ ಸಾಧ್ಯವಿರುವ ಕಡೆ ನಮ್ಮ ಪ್ರತಿರೋಧ ದಾಖಲಿಸುವುದೋ ?
ಯೋಚಿಸಿ.
ಹೊಸ ವರ್ಷ ಶುಭತರಲಿ.
ಸಂಗಾತಿ ಸಂಪಾದಕೀಯ ಬಳಗ