ಲಲಿತ ಪ್ರಬಂಧ

ನಮ್ಮೂರ ಜಾತ್ರೆಲಿ..

Image result for images of rural indians fair

ಜ್ಯೋತಿ ಡಿ.ಬೊಮ್ಮಾ.

ನಮ್ಮೂರ ಜಾತ್ರೆಲಿ..

ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ ಬಿಂಬಿಸುವದು.


ಹೆಜ್ಜೆ ಹೆಜ್ಜೆಗೂ ಕಟೌಟಗಳು.ಸ್ವಾಗತ ಕೋರುವ ನೆಪದಿಂದ ತಮ್ಮ ತಮ್ಮ photo ಗಳನ್ನು ಬೀದಿ ಬೀದಿಗಳಲ್ಲಿ ನಿಲ್ಲಿಸಿ ಹೆಮ್ಮೆ ಪಡುವ ಊರಿನವರು, ರಸ್ತೆಗಳನ್ನು ಅಲಂಕರಿಸಿ ತಳಿರು ತೊರಣ,ಹೂಗಳಿಂದ ಮಾಡಿದ ಸ್ವಾಗತ ಕಮಾನುಗಳು,ಊರವರನ್ನೂ ರಂಜಿಸಲು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ತಹರೆವಾರಿ ಅಂಗಡಿಗಳು,ಬಾಯಲ್ಲಿ ನೀರೂರಿಸುವ ತಿನಿಸಿನ ಬಂಡಿಗಳು, ಮತ್ತು ಎಲ್ಲೆಲ್ಲೂ ಜನ ಜನ ಜನ

ಜಾತ್ರೆಯ ಪ್ರಮುಖ ಘಟ್ಟವೆ ರಥೋತ್ಸವ ,ಅದಕ್ಕೂ ಮುನ್ನಾದಿನ ಅಗ್ಗಿ ತುಳಿಯುವದು ಇರುತ್ತದೆ.ಈ ಶಬ್ದದ ಅರ್ಥ ಎನೇನು ಹೊಂದಿಕೆಯಾಗದು.ಅಗ್ನಿಗೆ ಪ್ರದಕ್ಷಿಣೆ ಹಾಕುವದನ್ನೆ ಅಗ್ನಿ ತುಳಿಯುವದು ಎನ್ನ್ನುತ್ತಾರೆ.ಕೆಲವೊಂದು ಕಡೆ ಕೆಂಡದ ಮೇಲೂ ನಡೆಯುತ್ತಾರಂತೆ. ಕಾಡು ಉಳಿಸಿ ಎಂದು ಸಾರುವರೆಲ್ಲರೂ ಕೈಯಲ್ಲಿ ಕಟ್ಟಿಗೆ ತುಂಡುಗಳನ್ನಿಡಿದು ಅಗ್ನಿ ಕುಂಡಕ್ಕೆ ಎಸೆದು ದಿಗಂತಕ್ಕೆ ಮುಖಮಾಡಿ ಉರಿಯುವ ಬೆಂಕಿಗೆ ಪ್ರದಕ್ಷಿಣೆ ಹಾಕುತ್ತ, ತೆಂಗಿನ ಕಾಯಿ ಒಡೆಯುತ್ತ ,ಮನೆಯಿಂದ ತಂದ ನೈವೇದ್ಯ ತೋರುತ್ತ (ಎಸೆಯುತ್ತ ) ಸಾಗುವರು.ನನ್ನ ಕೈಗೂ ಕೊಟ್ಟ ಕಟ್ಟಿಗೆ ಚೂರುಗಳು ಅಗ್ನಿಗೆ ಎಸೆಯಬೇಕೋ ಬೇಡವೋ ಎಂಬ ಸಂದಿಗ್ಧ ದಲ್ಲಿ ಯಾಕೋ ಎಸೆಯಲು ಮನಸ್ಸು ಒಪ್ಪದೆ ಹಾಗೆ ಕೈಯಲ್ಲಿ ಹಿಡಿದುಕೊಂಡು ಬಂದು ಅಮ್ಮನಿಂದ ಬೈಸಿಕೊಂಡಾಯಿತು.ರಸ್ತೆ
ಮೇಲೆಲ್ಲ ಕಟ್ಟಿಗೆ ಮಾರುವವರದೆ ಜಾತ್ರೆ .ದುಡ್ಡು ಕೊಟ್ಟು ಕೊಂಡು ಬೆಂಕಿಗೆ ಎಸೆದು ಭಕ್ತಿಯಿಂದ ಪರವಶವಾಗುವವರ ದಂಡು ಹೆಚ್ಚುತ್ತ ಹೋಯಿತು.

ಜಾತ್ರೆಗೆ ಹೋದಮೇಲೆ ದೇವಸ್ಥಾನ ಕ್ಕೆ ಹೋಗದೆ ಇ ರಕಾಗುತ್ತೆಯೆ .ಅಲ್ಲಿ ಜನರ ದಂಡು ,ಎಲ್ಲರಿಗೂ ದೇವರಿಗೆ ಬಟ್ಟೆ (ಹೊದಿಕೆ) ಮಾಡುವ ಸಂಭ್ರಮ.ಬಟ್ಟೆ ಕೊಳ್ಳಲು ಹೋದ ಅಮ್ಮನನ್ನು ಹಿಂಬಾಲಿಸಿದೆ.ಬಟ್ಟೆ ಮರುವವರು ಬಂಡಿಗಳ ಮೇಲೆ ಎರಡು ವಿಧದ ಬಟ್ಟೆಗಳನ್ನಿಟ್ಟಿದ್ದರು ಬೆಲೆ ಕೆಳಲಾಗಿ ಒಂದರ ಬೆಲೆ ನೂರೂ ರೂ.ಮತ್ತೊಂದರ ಬೆಲೆ ನೂರೈವತ್ತು ರೂಗಳು.ವ್ಯತ್ಯಾಸ ಕೇಳಿದಾಗ ನೂರೈವತ್ತು ಬೆಲೆಯ ವಸ್ತ್ರಗಳು ಹೊಚ್ಚಹೊಸದು.ನೂರು ರೂ ಬೆಲೆಯ ವಸ್ತ್ರಗಳು ದೇವರಿಗೆ ಉಡಿಸಿ ಮತ್ತೆ ತಂದವುಗಳು.ಅದೇ ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ.ಅಮ್ಮ ನೂರೈವತ್ತು ಕೊಟ್ಟು ಹೋಸ ವಸ್ತ್ರ ಗಳನ್ನೆ ಕೊಂಡಳು ಅವು ಮತ್ತೆ ಇಲ್ಲಿಗೆ ಬರುತ್ತೆ ಎಂದು ತಿಳಿಸಿ ಹೇಳುವ ನನ್ನ ಪ್ರಯತ್ನ ಗೊರ್ಕಲ್ಲ ಮೇಲೆ ನೀರು ಸುರಿದಂತೆ ,ವ್ಯರ್ಥ. ದೇವಸ್ಥಾನ ದಲ್ಲಿ ಒಂದು ಕಿ ಮಿ ವರೆಗೆ ದೇವರಿಗೆ ಬಟ್ಟೆ ಮಾಡುವವರ ಕ್ಯೂ , ನಾನು ಮೆಲ್ಲನೆ ಅಮ್ಮನಿಂದ ತಪ್ಪಿಸಿಕೊಂಡು ದೂರದಲ್ಲಿ ಪರಿಚಿತರೊಂದಿಗೆ ಮಾತಾಡುತ್ತ ಕುಳಿತೆ. ಸುಮಾರು ಸಮಯದ ನಂತರ ನನ್ನನ್ನೂ ಹುಡುಕುತ್ತ ಬಂದ ಅಮ್ಮನ ಕೈಯಲ್ಲಿ ವಸ್ತ್ರಗಳು ಹಾಗೆ ಇದ್ದವು.
ದೇವರಿಗೆ ಬಟ್ಟೆ ಮಾಡಿಲ್ಲವೆ ಎಂದು ಕೇಳಿದಕ್ಕೆ ಬಂದ ಉತ್ತರದಿಂದ ಅವಕ್ಕಾದೆ. ” ಗುಡಿಯಲ್ಲಿ ದೇವರಿಲ್ಲವಂತೆ ” ಉತ್ಸವ ಮೂರ್ತಿಯನ್ನು ಊರಲ್ಲಿ ಮೆರವಣಿಗೆ ಮಾಡಲು ಒಯ್ದಿದ್ದರು.ದೇವರು ಬರುವವರೆಗೂ ದೇವರಿಲ್ಲದ ಗುಡಿಯಲ್ಲಿ ಕಾಯುತ್ತ ಕುಳಿತೆವು .ದೇವರು ಬಂದರು , ಎಲ್ಲರೂ ಕೈಯಲ್ಲಿರುವ ವಸ್ತ್ರಗಳನ್ನೂ ಲಗುಬಗೆಯಿಂದ ದೇವರ ಮುಂದೆ ಇಡತೊಡಗಿದರು ದೂರ ಇದ್ದವರು ದೇವರ ಸಮೀಪ ಇರುವವರಿಗೆ ಮಾಡಲು ಕೊಟ್ಟು ದೂರದಿಂದಲೆ ಹರಕ ತೀರಿಸಿ ನಡೆದರು. ದೇವರ ಮುಂದೆ ವಸ್ತ್ರ ಗಳ ರಾಶಿ ಹೆಚ್ಚಾದಂತೆ ಸ್ವಯಂ ಸೇವಕರು ಅವುಗಳನ್ನು ತೆರವುಗೊಳಿಸಿ ಹೊರಗೆ ಮಾರುವವರ ಬಂಡಿಗಳಿಗೆ ವರ್ಗಾಯಿಸುತಿದ್ದರು ಕೊಳ್ಳುವವರು ಮತ್ತೆವೆ ಕೊಂಡು ದೇವರಿಗೆ ಎರಿಸುತಿದ್ದರು.ಒಟ್ಟಿನಲ್ಲಿ ಈ ರೀತಿಯ ಆಚರಣೆ ಗಳಿಂದ ಅನೇಕರ ಬದುಕಿನ ಬಂಡಿ ಸಾಗುತ್ತದೆ. ಆಚರಿಸುವರಿಗೆ ಮನಶ್ಯಾಂತಿ ದೊರೆಯಬಹುದು.
ಹರಕೆಯ ಬೇರೆ ಬೇರೆ ಬಗೆಗಳು ಪ್ರಕಟವಾದವು.
ಸಕ್ಕರೆ ಹಂಚುವ ಹರಕೆಯವರು.ಪೇಡೆ ಹಂಚುವ ಹರಕೆಯವರು ಎಲ್ಲರ ಕೈಗೂ ಸಕ್ಕರೆ ಪೇಡೆಗಳನ್ನು ತುಂಬ ತೊಡಗಿದರು ತಿನ್ನಲೂ ಆಗದೆ ಬಿಸಾಡಲೂ ಆಗದೆ ಪ್ರತಿಯೊಬ್ಬರು ತಮ್ಮ ಕೈಯಲ್ಲಿರುವದನ್ನೂ ಮತ್ತೊಬ್ಬರಿಗೆ ಹಂಚತೊಡಗಿದರು ಹಂಚುವ ಪ್ರಕ್ರಿಯೆ ಮುಂದುವರೆಯುತಿತ್ತು.ಮನೆಗೆ ಹೋಗಿ ಎಲ್ಲರೊಂದಿಗೆ ಕುಳಿತು ಹೋಳಿಗೆ ಊಟಮಾಡಿದ್ದು ಸಂತೋಷದಾಯಕವಾಗಿತ್ತು.

ಮರದಿನ ಸಂಜೆ ಬಾಲ್ಯದ ಗೆಳತಿಯರೊಡನೆ ಜಾತ್ರೆಗೆ ಹೋದ ಸಂದರ್ಬ ಮನಸ್ಸನ್ನು ಉಲ್ಲಾಸ ಗೊಳಿಸಿತು. ಸಂಜೆಯ ತಂಪಿನಲ್ಲಿ ಜನರೆಲ್ಲ ಏಳುವ ಧೂಳನ್ನು ಲೆಕ್ಕಿಸದೆ ,ತಾಯಂದಿರು ಅಜ್ಜ ಅಜ್ಜಿಯರು ಚಿಕ್ಕ ಮಕ್ಕಳ ಕೈಹಿಡಿದು ಅವು ಕೇಳುವ ವಸ್ತುಗಳೆಲ್ಲ ಗದರುತ್ತಲೆ ಚೌಕಾಶಿ ಮಾಡಿ ಕೊಡಿಸುತ್ತ ,ಜಾತ್ರೆಯ ಸವಿಯನ್ನು ಮಕ್ಕಳಿಗಿಂತ ಹೆಚ್ಚು ಅನುಭವಿಸುತ್ತ ಒಡಾಡುವದನ್ನು ನೋಡುವದೆ ಚಂದ.
ಏನು ಕೊಳ್ಳಬೇಕು ,ಎಲ್ಲಿ ಹೋಗಬೇಕೆಂಬ ನಿರ್ದಿಷ್ಟ ಗುರಿಇರದೆ ಗೆಳತಿಯರೆಲ್ಲ ಕಾಲು ಹೋದ ಕಡೆ ಹೋಗುತ್ತ ,ಹಳೆ ನೆನಪುಗಳು ಮೆಲುಕುಹಾಕುತ್ತ ,ಅಂಗಡಿಗಳಲ್ಲಿರುವ ವಸ್ತುಗಳನ್ನು ಸುಮ್ಮನೆ ನೋಡುತ್ತ , ಮನೆಯಲ್ಲಿ ಹೆಚ್ಚಾಗಿ ಬಿದ್ದಿರುವ ಬಳೆ ಪಿನ್ನು ಟಿಕಳಿಗಳನ್ನೆ ಮತ್ತೆ ಮತ್ತೆ ಕೊಳ್ಳುತ್ತ ಆಟದ ಯಂತ್ರಗಳಿರುವ ಮೈದಾನಕ್ಕೆ ಬಂದಾಯಿತು.ಅಲ್ಲಿರುವ ಜೋಕಾಲಿ ತಿರುಗುಣಿಗಳಲ್ಲಿ ಕುಳಿತು ತಲೆ ತಿರುಗಿದರು ಬಿಡದೆ ಮತ್ತೆ ಮತ್ತೆ ಗಿರಕಿ ಹೊಡೆಯುತ್ತ ಅಕ್ಷರಶ ಮಕ್ಕಳಾದೆವು ,ಎದೆಯುದ್ದ ಬೆಳೆದ ಮಕ್ಕಳಿದ್ದಾರೆಂಬುದು ಮರೆತು.
ಹರೆಯದಲ್ಲಿ ಹಿಂದಿಂದೆ ಅಲೆದ ಹುಡುಗರೆಲ್ಲ ಈಗ ಪ್ರೌಢರಾಗಿ ಎದುರಿಗೆ ಸಿಕ್ಕರೂ ಎಕವಚನದಲ್ಲಿ ಮಾತಾಡಬೇಕೊ ಬಹುವಚನದಲ್ಲಿ ಮಾತಾಡಬೇಕೋ ತೋಚದೆ ತಡವರಿಸತೊಡಗಿದಾಗ ಅವರ ಪರಿಪಾಟಲು ಕಂಡು ನಗುತ್ತ ಮತ್ತದೆ ಹಳೆ ಆತ್ಮಿಯತೆಯಿಂದ ಮಾತಾಡಿದಾಗ ನಾವೆಲ್ಲ ಮತ್ತೆ ಇಪ್ಪತೈದು ವರ್ಷ ಹಿಂದೆ ಹಾರಿದ್ದಾಯಿತು. ಜಾತ್ರೆಯು ತುಂಬಾ ನಾವೆಲ್ಲ ಗೆಳೆಯ ಗೆಳತಿಯರು ಒಡಾಡಿದ್ದೆ ಒಡಾಡಿದ್ದು.ಜೀಲೆಬಿ ಮಿರ್ಚಿ ಭಜಿ ಚೂಡವಾಗಳನ್ನು ತಿನ್ನುತ್ತ ಈಗಿನ ಮತ್ತು ಹಳೆಯ ವಿಷಯಗಳು ಮಾತಾಡುತ್ತ ಜಾತ್ರೆ ಎಂಬ ಮಾಯಾಲೋಕದಲ್ಲಿ ಮುಳುಗಿದೋದೆವು.


ಇಷ್ಟರಲ್ಲೆ ಅನೇಕ ವರ್ಷಗಳಿಂದ ಮರೆಯಾದವರ ಮುಖದರ್ಶನವಾಗಿ ,ಒಂದು ಆತ್ಮಿಯ ನಗುವಿನಿಂದ ,ಆರಾಮ ,ಆರಾಮ ,ಎಂಬ ಕುಶಲೋಪರಿಯಿಂದ ಮರೆಯಾದ ಎಷ್ಟೊ ಸಂಬಂಧಗಳು ಗೆಳೆತನಗಳು ಮತ್ತೆ ಚಿಗುರಿದವು.ಕೆಲವು ನಿಮಿಷದ ಮಾತಿನಿಂದ ಮರೆಯಾದ ಬಾಂಧವ್ಯ ಮತ್ತೆ ಬೆಸೆಯಿತು.ಮನದಿಂದ ಮರೆಯಾದವರು ಮತ್ತೆ ಮನದಲ್ಲಿ ನಿಂದರು.
ನನ್ನೂರಿನ ಜಾತ್ರೆ ನನ್ನೂರಿನ ಜನರೊಡನೆ ಬಾಂಧವ್ಯ ಬೆಸೆದಿಡುವ ಹಂದರವಾಯಿತು.

******

Leave a Reply

Back To Top