ದ್ಯಾಮಿ…ಶಿ ಕಾ ಬಡಿಗೇರರ ಕಥೆ

ಕಥಾ ಸಂಗಾತಿ

ದ್ಯಾಮಿ…

ಶಿ ಕಾ ಬಡಿಗೇರ

‘ಆಯ್ತಾರ್ಕೊಮ್ಮೆ ಎಂಗರ ಮಾಡಿ ಮಲ್ಲಯ್ಯನ ಗುಡಿಗೆ ಓಗ್ಬಾರ್ದಾ…! ಚೂರ್ ಎಣ್ಣಿ ತಗಂಡು, ದೀಪ ಮುಡ್ಸಿ, ಎರ್ಡ ಉದ್ನಿಕಡ್ಡಿ ಅಚ್ಚಿ ಕೈಮುಗುದು ಬಂದ್ರ..ದೇವ್ರಿಚ್ಚಾ ಯೇಳಾಕಾಗಾದಿಲ್ಲ , ಕಣ್ ಬಿಟ್ರು ಬಿಡ್ಬಹುದು. ಬರೋ ಬ್ಯಾಸ್ಗಿಗ್ಯ , ಕಂಕಣ ಬಲ ಯಾಕ ಕೂಡಿ ಬರಬಾರದು…ಅಂತೀನಿ….’ಮದುವೆ ವಯಸ್ಸಿಗೆ ಬಂದ ದ್ಯಾಮಿಗೆ ಯಾವ ಗಂಡೂ ಹೊಂದಿಕೆಯಾಗದಿದ್ದುದಕ್ಕೆ  ಪರಿಹಾರ ಮಾರ್ಗೋಪಾಯವಾಗಿ ಓಣಿಯ ಯಜಮಾನಿ ಪಾರವ್ವಕ್ಕಳ ಮಾತು ಸಹಜವಾಗಿತ್ತು. ಇಪ್ಪತ್ತರ ಹರೆಯವನ್ನು ಹಿಂದಿಕ್ಕಿ ದ್ಯಾಮಿ ಆಗಲೇ ಮುಂದಕ್ಕೆ ಹೆಜ್ಜೆ ಇಟ್ಟಿದ್ದಳು.

ಊರ ದೇವತೆ ದ್ಯಾಮವ್ವ ತಾಯಿಯ ಕೃಪಾಕಟಾಕ್ಷೆಯಿಂದ ಹುಟ್ಟಿದವಳು ಈ ದ್ಯಾಮಿ. ದ್ಯಾಮಿಯ ತಾಯಿ ಕಾಳವ್ವ ಬಸಂತಪ್ಪನನ್ನು ಮದುವೆಯಾಗಿ ಒಂದು ಪಟ್ಟ ಮುಗಿದರೂ, ಬಂಜಿಯಾಗಿಯೇ ಉಳಿದಳು. ಆಗ ಇದೇ ಪಾರವ್ವಕ್ಕ’ ಊರ ದೇವತೆ ದ್ಯಾಮವ್ವಳ ಪಾದಕ್ಕ ಶರಣಾಗಿ, ಪ್ರತಿ ಮೂರು ವರುಷಕ್ಕೊಮ್ಮೆ ಬರೋ ಆಕಿ ಜಾತ್ರಿಗೆ ಒಂದು ಕ್ವಾಣ್ಗರ ಬಿಡ್ತೀನಿ ಅಂತ ಬೇಡಿಕ್ಯಾ, ನೋಡವಾಗ ಎಂಗಿರುತ್ತ ನನ್ನ ಮಾತಿನ ಚಮತ್ಕಾರ’ ಅಂತ ದ್ಯಾಮಿ ತಾಯಿ ಕಾಳವ್ವಗ ಸಲಹೆ ಕೊಟ್ಟಿದ್ದಳಂತೆ. ಅದರ ಫಲವೇ  ಈ ಕಥೆಯ ಕಥಾ ನಾಯಕಿ  ‘ ದ್ಯಾಮಿ’.

ಬಾಳ ವರುಷಕ್ಕ ಮಗಳು ಹುಟ್ಯಾಳಂತ ಬಸಂತಪ್ಪ ಕಾಳವ್ವ ಊರ ದ್ಯಾಮವ್ವಳ ಹರಕೆಯನ್ನು ಬಾಳ ಭಕುತಿಯಿಂದ ತೀರಿಸಿದರು. ಈಗ ಮಗಳು ಎದಿ ಉದ್ದ ಬೆಳದು ತಾಯಿನ್ನ ಮೀರಿಸ್ಯಾಳ. ಏನಾರ ಮಾಡಿ ನಾಲ್ಕು ಅಕ್ಕಿ ಕಾಳು ತಲಿಮ್ಯಾಲ ಹಾಕಿ ತಣ್ಣಗ ಕಣ್ ಮುಚ್ಚಿ ಬಿಟ್ರಾತು ಅನ್ನೋ ಖುಷಿಯೊಳಗ ಗಂಡ ಹೆಂಡತಿ ಇಬ್ಬರೂ ಅದಾರ. ದುರಂತ ಅಂದ್ರ ಬಂದು ಹೋದ ಒಂದೂ ವರಾನೂ ದ್ಯಾಮಿಯನ್ನು ಒಪ್ಪಿಕೊಳ್ಳದಿರುವದು.

ದ್ಯಾಮಿ ಯಾವೂದರಲ್ಲೂ ಕಮ್ಮಿ ಇಲ್ಲ. ಮೈ, ಕೈ ತುಂಬಿಕೊಂಡು ನಂಜನಗೂಡಿನ ರಸಬಾಳೆ ಆಗ್ಯಾಳ.ಹೊಲ, ಮನಿ ಎಲ್ಲಿ ಬೇಕಲ್ಲಿ ಕೆಲಸ ಮಾಡಾಕ ರೆಡಿ ಇರೊ ಹುಡುಗಿ. ದ್ಯಾಮಿ ಓಣಿ ಮಂದಿಗೆಲ್ಲ ಅತ್ಯಂತ ಪ್ರೀತಿಯ ಹೆಸರು. ಯಾರಿಗೂ ಸಹ ಅವಳ ಹೆಸರು ‘ದ್ಯಾಮವ್ವ’ ಅಂತ ಗೊತ್ತಿಲ್ಲ. ಕೂಸು ಇದ್ದಾಗಲೇ ಎಲ್ಲರೂ ‘ದ್ಯಾಮಿ’ ಎಂದೇ ಕರೆದದ್ದು , ಈಗಲೂ ಅದೇ ಹೆಸರು ಅಂಟಿಕೊಂಡಿದೆ. ದ್ಯಾಮಿಯ ಸ್ವಾದರ ಮಾವ ಶಿವ್ಯಾ ದ್ಯಾಮಿನ ಮದ್ವಿ ಆಕಾನ ಅನ್ನೋ ಮೊದಲಿದ್ದ ಗುಸು ಗುಸು ಮಾತು ಈಗ ಯಾರ ಬಾಯಾಗೂ ಇಲ್ಲ. ಈಗ್ಗೆ ಎರಡು ವರ್ಷಗಳ ಹಿಂದ ಯಾವುದೋ ಹುಡಿಗಿ ಓಡಿಸಿಗೆಂಡು  ಹೋಗಿ, ಮೈಲಾರ ಗುಡ್ಡದಾಗ ಲಗ್ನ ಆಗ್ಯಾನ ಅನ್ನೊ ಸುದ್ದಿ ಸಣ್ಣಾಗಿ ಹಬ್ಬಿ, ಊರ ಮಂದಿ ಮುಂದ ದ್ಯಾಮಿಯ ಅವ್ವ ಕಾಳವ್ವ ಮಾರಿ ಎತ್ತದಂಗ ಆಗೇದ.ದ್ಯಾಮಿಯೂ ತನ್ನ ಸ್ವಾದರ ಮಾವನ ಇಂಥ ಕೆಟ್ಟ ನಡವಳಿಕೆಗೆ ಬ್ಯಾಸತ್ತು, ಮೇಣದ ಬತ್ತಿಯಂಗ ಒಳ ಒಳಗ ಸುಟ್ಟುಕೊಳ್ಳಾಕ ಹತ್ತಿದ್ದು ಯಾರಿಗೂ ಕಾಣಲಿಲ್ಲ. ಅವನನ್ನೇ ಮುದುವೆಯಾಗಿ ಸಂಸಾರದ ನೊಗ ಹೊರಬೇಕೆಂಬ ಹಂಬಲವೂ ದ್ಯಾಮಿಗಿಲ್ಲ ಎಂಬ ವಿಷಯ ತಾಯಿ ಕಾಳವ್ವಗೂ ಗೊತ್ತಿತ್ತು.ಇರುವಾಕಿ ತಾನೊಬ್ಬಳೆ, ಮದುವೆಯಾಗಿ ಗಂಡನ ಮನೆಗೆ ಹೋದರೆ, ಅಪ್ಪ, ಅವ್ವರನ್ನು ನೋಡಿಕೊಳ್ಳಾಕ ಯಾರದಾರ? ಮದುವೆ ಮಾತು ಬಂದಾಗ ಇಂಥ ಪ್ರಶ್ನೆ ಅವಳಲ್ಲಿ ಚಿಗುರೊಡೆಯುತ್ತಿತ್ತು.ಆದರೂ ಹೆಣ್ಣಾದ ಬಳಿಕ ಅದು ಅನಿವಾರ್ಯ ಅನ್ನುವ ಸಣ್ಣ ತಿಳುವಳಿಕೆ ಅವಳಿಗಿತ್ತು.

ಅವತ್ತು ಬೇಸ್ತ್ಯಾರ. ಮಟ ಮಟ ಮಧ್ಯಾಹ್ನ. ದ್ಯಾಮಿ ಆಡು ಇಡಕೊಂಡು ಒಬ್ಬಾಕಿನ ಮಂಡಬಾಳ ಸರುವಿನ ಕಡಿಗೆ ಹೊಂಟಿದ್ಲು.ಮಸಾರಿ ಕಡಿಗೆ ಹುಡುಗರು ದನ ಮೇಸೋದು ಅವಳಿಗೆ ಗೊತ್ತಿತ್ತು. ಆಡು ತುಸ ಬಾಯಾಡಿಸ್ಕೊಂಡ್ ಬಂದ್, ಆಮ್ಯಾಕ ಸಂತಿಗೋದ್ರಾತು ಅನ್ನೋದು ಅವಳ ಲೆಕ್ಕಾಚಾರ. ಈರಣ್ಣನ ಗುಡಿ ಹತ್ರ ಬಂದ ದ್ಯಾಮಿ, ಜಾಲಿ ಕಂಟಿ ಹಿಡಿದು ಅವುಗಳನ್ನು ಕೆಳಕ್ಕೆ ಜಗ್ಗಿ, ಜಗ್ಗಿ ತಪ್ಪಲ ತಿನ್ಸೋ ಖುಷಿಯೊಳಗ, ಎದೆಯ ಮೇಲಿನ ಬಟ್ಟೆ ಜಾರಿ ಜಾರಿ ಬೀಳುತ್ತಿದ್ದನ್ನು , ಅಲ್ಲೇ ಹುಣಸೆ ಮರದ ಕೆಳಗ ಎತ್ತು ಮೇಯಿಸುತ್ತಿದ್ದ ದೊಡ್ಡ ಈರ ಕದ್ದು ಕದ್ದು ನೋಡುತ್ತಿದ್ದ. ನೆತ್ತಿ ಸುಡುತ್ತಿದ್ದ ಸೂರ್ಯ ಎಷ್ಟು ಪ್ರಖರವಾಗಿದ್ದನೋ, ಅಷ್ಟೇ ಪ್ರಮಾಣದಲ್ಲಿ ದೊಡ್ಡೀರನ ಯವ್ವನ ಕೂಡ ಉರಿವ  ಜ್ವಾಲೆಯಾಗಿತ್ತು. ಯವ್ವನದ ಎದೆಗಳೆಂದರೆ ಯಾವ ಹಣ್ಣಿನ ರುಚಿಗೂ ಹೋಲಿಕೆಯಾಗದ ಹಣ್ಣುಗಳೆಂದು ಕಾವ್ಯದ ಶೈಲಿಯಲ್ಲಿ ದೊಡ್ಡೀರ ತನ್ನ ವಾರಿಗೆಯ ಗೆಳೆಯರ ಜೊತೆ ಸೇರಿಕೊಂಡಾಗ ಆಡುತ್ತಿದ್ದ ಮಾತಿಗೆಗೆಳೆಯರೆಲ್ಲಾ ಭಲೇ ! ಅಂದಿದ್ದರಂತೆ. ಈಗ ದೊಡ್ಡೀರನ ಕಣ್ಣೆದುರು ಕುಣಿಯುತ್ತಿದ್ದ ದ್ಯಾಮಿಯ ಆಕರ್ಷಕ ಸ್ತನಗಳು, ಅವನೊಳಗಿನ ಯವ್ವನದ ಕೆರೆಯ ಕೋಡಿ ಒಡೆಯುವಂತೆ ಮಾಡಿತ್ತು. ತನ್ನ ಬಿಟ್ಟು ಬೇರಾರೂ ಅಲ್ಲಿಲ್ಲ ಅನ್ನುವ ಮುಗ್ದ ಆಲೋಚನೆ ದ್ಯಾಮಿಯದು. ಇಷ್ಟೊತ್ತು ಸುಮ್ಮನೆ ತಪ್ಪಲು ತಿನ್ನುತ್ತಿದ್ದ ಆಡು ರಾಕ್ಷಸ ಆಕಾರದ ಹುಣಸೆ ಮರದ ಕಡೆ ನೋಡುತ್ತ ‘ಬ್ಯಾ…’ ಅಂದಿತು.ಕೂಡಲೇ ದ್ಯಾಮಿ ತನ್ನ ದೃಷ್ಟಿ ಆಚೆ ಹರಿಸಿದಾಗ, ಹಾವು ತುಳಿದು ಬೆಚ್ಚಿ ಬೀಳುವಂತೆ, ಅವಳೆದೆ ಯಾಕೋ ಜೋರಾಗಿ ಬಡಿದುಕೊಳ್ಳತೊಡಗಿತು.  ದೊಡ್ಡೀರ ಕೆಂಡದುಂಡೆಯಂಥ ತನ್ನ ಕಣ್ಣುಗಳಿಂದ ದ್ಯಾಮಿಯನ್ನು ಸುಡತೊಡಗಿದ. ದ್ಯಾಮಿ ದೊಡ್ಡೀರನ ಇಂಥ ನೋಟಕ್ಕ ಬೆವರತೊಡಗಿದಳು. ತಾನು ನಂಬಿ ಬಂದಿದ್ದ ದನ ಕಾಯೋ ಹುಡುಗರ್ಯಾರೂ ಅವಳ ಕಣ್ಣಿಗೆ ಬೀಳಲಿಲ್ಲ. ಆಗ ಅವಳಿಗೆ ಕುಂತ ನೆಲವೇ ಕುಸಿದಂತೆ ಆಯಿತು. ಅವಸರದೊಳಗೆ ಎದೆಯ ಮೇಲಿನ ಬಟ್ಟೆಯನ್ನು ಮುಚ್ಚಿಕೊಂಡವಳೇ ಊರ ಹಾದಿ ತುಳಿಯಲು, ಆಡಿನ ಹಗ್ಗ ಹಿಡಿದಳು. ಹಸಿದ ಹುಲಿ ಜಿಂಕೆ ಕಂಡರೆ ಬಿಟ್ಟೀತೆ? ಅದೇಗೆ ಅವಳ ಬಳಿ ಬಂದಿದ್ದನೋ ! ದ್ಯಾಮಿ ತನ್ನ ಕಣ್ಣುಗಳನ್ನೇ ತಾ ನಂಬದಾದಳು. ‘ ಯಾಕ ದೊಡ್ಡೀರಣ್ಣ , ಹಿಂಗ್ಯಾಕ ನನ್ನ ನೋಡಾಕತ್ತಿ? ಇಂಗ್ಯಾಕ ಮಾಡಾಕತ್ತಿ? ದ್ಯಾಮಿ ಉಗುಳು ನುಂಗಿದಳು. ‘ ದ್ಯಾಮಿ, ನನಗ ಅಣ್ಣ ಅಂತ ಕರದು, ನನ್ನೊಳಗಿನ ಕಾಮದ ಕೆಂಡದ ಮ್ಯಾಲೆ ನೀರ್ ಹಾಕೋ ಯತ್ನ ಮಾಡಬೇಡ, ನೀ ಅಂದ್ರ ನನಗ ಏನೇನೋ. ಖರೇ ಹೇಳ್ಬಕಂದ್ರ, ಆ ದ್ಯಾವ್ರು ನಿನ್ನ ನನಗಾಗಿನ ಉಟ್ಸ್ಯಾನಂತ ನನಗನಸ್ತದ. ನಾನಿನ್ನ ಎಷ್ಟ್ ಪ್ರೀತಿಸ್ತೀನಿ ಅಂದ್ರ, ಅದನ್ನ ಬಾಯಿಂದ ಏಳ್ಬಾರದು, ಬರದು ಕೊಡಾಕಂದ್ರ, ನನಗ  ಓದಾಕಾಗ್ಲಿ ಇಲ್ಲ ಬರಿಯಾಕಾಗ್ಲಿ ಬರಂಗಿಲ್ಲ, ನಂದು ಒಂದಾ ಮಾತು, ನಿನ್ನ ಲಗ್ನ ಆಕಿನಿ, ‘ ದೊಡ್ಡೀರ ನಾಲಿಗೆಯಿಂದ ತುಟಿ ಸವರಿಕೊಂಡ.

ಮೇಲೆ ಉರಿವ ಸೂರ್ಯನ ಝಳ, ಎದುರು ಗಂಡೆದೆಯ ದೊಡ್ಡೀರನ ಮಾತಿನ ಝಳ . ದ್ಯಾಮಿ ಅಕ್ಷರಶಃ ಕುದ್ದು ಹೋದಳು. ತಮ್ಮಿರುವಿಕೆಯನ್ನು ಯಾರಾದರೂ ಊರ ಮಂದಿ ನೋಡಿದರ ನನ್ನ ಗತಿ ಏನು? ಎಂಬ ಗೌರವದ ಪ್ರಶ್ನೆ ದ್ಯಾಮಿ ತಲೆಯಲ್ಲಿ ಮಿಸುಕಾಡತೊಡಗಿತು. ಹಾವಿನೆದುರು ನಿಂತ ಕಪ್ಪೆಯ ಮನಸ್ಥಿತಿ ದ್ಯಾಮಿಯನ್ನು ಹೊಕ್ಕರೂ , ಅವನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಅವಳಿಗೆ ಮತ್ತೊಂದು ಹಾವು ನಿಂತಂತೆ ದೊಡ್ಡೀರ ತನ್ನ ಭೀಮ ಬಾಹುಗಳನ್ನು ಅವಳ ಕತ್ತು ಸುತ್ತ ಹಾಕಿ , ಅವಳ ತುಟಿಗೆ ತನ್ನ ತುಟಿ ಸೇರಿಸಲು ಮುಂದಾದಾಗ, ದ್ಯಾಮಿ ಗಟ್ಟಿ ದನಿಯಲಿ ಯಾರನ್ನೂ ಸಹಾಯಕ್ಕೆ ಕೂಗಿಕೊಳ್ಳಲಿಲ್ಲ. ಒಂದು ವೇಳೆ ಕಿರುಚಿದರೂ, ಅಲ್ಲಿ ನಾಲ್ಕು ಕಿವಿಗಳ ಹೊರತು ಅನ್ಯ ಕಿವಿಗಳಿಲ್ಲ ಎಂಬ ಆಲೋಚನೆ ದ್ಯಾಮಿಯದಾಗಿರಬೇಕು. ಸಿಕ್ಕ ಬೇಟೆಯನ್ನು ಮೃಗ ಬಿಟ್ಟೀತೆ? ಅವನ ಬಾಹುಗಳು ಅವಳ ಮೈ ಮೇಲೆ ಹಾವಿನಂತೆ ಹರಿದಾಡಿದವು. ಜಾಲಿ ತಪ್ಪಲು ಮೇಯುತ್ತಿದ್ದ ಆಡು, ನಾಚಿಕೊಂಡಂತೆ ಪಕ್ಕದಲ್ಲಿದ್ದ ತೊಗರಿ ಹೊಲ ಹೊಕ್ಕು ತನ್ನ ಬಿಡುಗಡೆಯ ಸಂಭ್ರವನ್ನು ತೊಗರಿಕಾಯಿ ತಿಂದು ಆಚರಿಸಿಕೊಂಡಿತು. ದೊಡ್ಡೀರ ಮತ್ತು ದ್ಯಾಮಿ ಈಗ ಒಂದೇ ದೇಹವಾಗಿದ್ದರು. ಅವಳು ಉಟ್ಟಿದ್ದ ಬಟ್ಟೆಗಳೂ ಮೇಲಕ್ಕೆದ್ದು ಅವಳ ಬಲಿತ ಕೆಂದೊಡೆಗಳು ದೊಡ್ಡೀರನಿಗೆ ಆಹ್ವಾನ ನೀಡಿದಂತೆ ಆಕರ್ಷಕವಾಗಿ ಕಾಣತೊಡಗಿದವು. ಹೌದು ದೊಡ್ಡೀರ ಅಂದುಕೊಂಡಿದ್ದಂತೆ ದ್ಯಾಮಿ ರಸಪೂರಿತ ಮಾವಿನ ಹಣ್ಣೇ ಆಗಿದ್ದಳು.ದೊಡ್ಡೀರನ ಏದುಸಿರಿಗೆ ದ್ಯಾಮಿಯ ಎದೆಗಳು ಪುಟಿ ಪುಟಿದು ಚೆಂಡುಗಳಾಗುತ್ತಿದ್ದವು.ದ್ಯಾಮಿ ಈಗ ಗೊರಟು ಮಾತ್ರ.ಹಸಿರೊದ್ದು ಕಿಲ ಕಿಲ ನಗುತ್ತಿದ್ದ ಬದುವಿನ ಹುಲ್ಲು, ಮೈ ಮುರಿದುಕೊಂಡು ಚಾದರ ಹೊದ್ದು ಮಲಗಿಕೊಂಡಂತೆ ಕಾಣತೊಡಗಿತು. ಕೆಂಡದೊಳಗೆ ಸುಟ್ಟ ಬದನೆಕಾಯಿಯಂತೆ ದ್ಯಾಮಿ ಭಯದಲ್ಲಿ ಬೆಂದು ಹೋದಳು. ದೊಡ್ಡೀರ ಮಾತ್ರ ಸ್ವಲ್ಪವೂ ವಿಚಲಿತನಾಗಲಿಲ್ಲ. ‘ ದ್ಯಾಮಿ, ಈಗಿನಿಂದ ನಾವಿಬ್ರೂ ಗಂಡ-ಎಂಡ್ರು’. ‘ ನೀನೀಗ ಮನಿಗೆ ನಡಿ ನಾನದಿನಿ ಎದರ್ಬ್ಯಾಡ’ ಇಷ್ಟು ಹೇಳಿ ಈರ ತನ್ನ ಎತ್ತುಗಳ ಬಳಿ ಬರ ಬರನೆ ನಡೆದ.

ಬೆದರಿದ ಜಿಂಕೆಯಂತೆ ದ್ಯಾಮಿ, ನಿತ್ರಾಣಗೊಂಡು ಏಳುತ್ತಾ ಬೀಳುತ್ತಾ  ಆಡಿನ ಹಗ್ಗ ಹಿಡಿದು ಮನೆಯ ದಾರಿ ಹಿಡಿದಳು. ಅವಳ ಕಣ್ಣೆದುರು ದೊಡ್ಡೀರ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಹಾಗೂ, ಹೀಗೂ ಮನೆ ತಲುಪಿಕೊಂಡಳು.

ಜೋಳ ಹಸನು ಮಾಡುತ್ತಿದ್ದ ಕಾಳವ್ವ- ಮಗಳು ದ್ಯಾಮಿ ಅಷ್ಟು ದೌಡು ಮನಿಗೆ ಬಂದದ್ದು ಬಹಳ ಖುಷಿ ಕೊಟ್ಟಿತು.’ ‘ನೀನೇನೂ ಇವತ್ತು ಸಂತಿಗೆ ಓಗೋದು ಬ್ಯಾಡ, ನಿಮ್ಮಪ್ಪನ ಓಗಲಿ.ನಾನು, ನೀನು ಆ ಮೂಲಿಮನಿ ನಿಂಗಮ್ಮನ ಮಮ್ಮಗಳು ದೊಡ್ಡಾಕ್ಯಾಗಿದ್ಲಲ್ಲ, ಇವತ್ತು ಎಬುಸ್ತಾರಂತೆ, ಯೇಳ್ಯಾರ, ಓಗ್ಬರಾಣಂತ’ಎಂಬ ಅವ್ವನ ಮಾತೂ ಕಿವಿಗೆ ಹಾಕಿಕೊಳ್ಳದೇ, ಮಾರಿ ಮುಚಿಗೆಂಡು ಒಳ ನಡೆದಳು ದ್ಯಾಮಿ.ಗೂಟಕ್ಕ ಆಡು ಕಟ್ಟಿ ಆಕದಾ, ಎಂಗ್ ಬಿಟ್ಟೊಂಟ್ಲು ನೋಡ್, ..’ಊರ್ತುಡುಗಿ’ ಕಾಳವ್ವಳ ಮಾತು ಅವತ್ತು ಯಾಕೋ ಖಾರದ ಪುಡಿಯಾಗಿತ್ತು.

ದೊಡ್ಡೀರ ಅದೇ ಊರಿನ ದೊಡ್ಡ ಮನೆತನದ ಬಲಾಡ್ಯ ಹುಡುಗ. ನೂರಾರು ಎಕರೆ ಜಮೀನಿಗೆ ಒಡೆಯನಾಗಿದ್ದ ಸಿದ್ರಾಮಣ್ಣನ ಏಕೈಕ ಪುತ್ರ.ಊರೊಳಗೆ ಸಿದ್ರಾಮಣ್ಣನ ಮಾತೇ ಸರ್ವೋಚ್ಚ ನ್ಯಾಯಾಲಯದ ತೀರ್ಪು.ಲಂಪಟತನ ಹಾಗೂ ದುರ್ಜನಕ್ಕೆ ಇಡೀ ಊರಿಗೆ ಹೆಸರುವಾಸಿ.ಬಸಂತಪ್ಪನಂಥ ಕುಟುಂಬಗಳು ಅವನ ಪಾಲಿಗೆ ಸೂಕ್ಷ್ಮ ಕೀಟಗಳು. ಅಪ್ಪನ ನೀಚತನಕ್ಕೆ ತನಗೆ ಯಾರೂ ಕನ್ಯಾ ಕೊಡೋದಿಲ್ಲ ಅನ್ನುವ ಅನುಮಾನ ದೊಡ್ಡೀರನ ತಲೆಯೊಳಗ ಎಂದೋ ಚಿಗುರಿತ್ತು.ಷಹೊತ್ತು ಮುಳುಗಿದರೂ ಚಾದರ ಹೊದ್ದು ಮಲಗಿದ್ದ ದ್ಯಾಮಿ , ಕಸ ಗೂಡಿಸಿ, ನೀರು ಚಿಮುಕಿಸಲು ಮೇಲೇಳಲಿಲ್ಲ. ಕಾಳವ್ವ ಎಲ್ಲ ಕೆಲಸವನ್ನೂ ತಾನೇ ಮುಗಿಸಿ , ಬಾಗಿಲಿಗೆ ಊದಿನಕಡ್ಡಿ ಹಚ್ಚೊ ಹೊತ್ತಿಗೆ ಬಸಂತಪ್ಪ ಸಂತೆ ಚೀಲ ಹೊತ್ತು ಮನಿಗೆ ಕಾಲಿಟ್ಟ. ಮಗಳು ದ್ಯಾಮಿ ಮಲಗಿದ್ದನ್ನು ಗಮನಿಸಿದ ಅಪ್ಪ ‘ ಯಾಕ ದ್ಯಾಮವ್ವಗ ಆರಾಮಿಲ್ಲನು? ಜರಗಿರ  ಬಂದಿದ್ರ ಭಾಗ್ಯನಗರಕ್ಕರ ಓಗ್ತಿದ್ವಿ. ಕೇಳಿ ನೋಡು ಏನಂತಾಳ’, ಬಸಂತಪ್ಪ ಮಡದಿ ಕಾಳವ್ವಗ ಕೇಳಿದ. ‘ ಆಕಿಗೇನಾಗೇದ ಕಡದರ ನಾಕ್ತುಂಡಾಕಾಳ. ಮೈಗೆ ದಗುದ ಅತ್ತಬಾರದಂದ್ರ ಎಂಗ? ಗಂಡನನ್ನೇ ಪ್ರಶ್ನಿಸಿದಳು. ಆದರೂ ತಾಯಿ ಕರುಳು ಸುಮ್ಮನಾಗಲಿಲ್ಲ, ‘ ಏ! ದ್ಯಾಮಿ, ಮೂರಸಂಜಾಗಿಂದ ಮಕ್ಕಂಡಾಕಿ, ಇನ್ನೂ ಮಿಸುಗುವಲ್ಲಿ, ಏಳ್ಬಡದಾ , ನಿನುಗರ ಇವತ್ತು ಏನ್ ದರಿದ್ರ ಬಡದೈತಿ , ಪಿಕನಾಶಿ ಹಳೆ ಪಿಕನಾಶಿ…’ ಹೊದ್ದುಕೊಂಡಿದ್ದ ಚಾದರ ದರಕ್ಕನ ಎಳದು ಆಚೆ ಎಸೆದಳು ಕಾಳವ್ವ.ದ್ಯಾಮಿ ಮಾರಿ ನೋಡುತ್ತಲೆ ಕಾಳವ್ವ ದಂಗಾಗಿ ಹೋದ್ಲು.ದ್ಯಾಮಿ ಉಟ್ಟಿದ್ದ ಮೈ ಮೇಲಿನ ಬಟ್ಟೆಗಳೆಲ್ಲಾ ತೊಯ್ದು ತೊಪ್ಪೆಯಾಗಿದ್ದವು. ಕಣ್ಣನ್ನೋ ಕಣ್ಣೆಲ್ಲಾ ಒಲೆಯೊಳಗಿನ ನಿಗಿ ನಿಗಿ ಕೆಂಡ ಆಗಿದ್ದವು.’ ಏನಾ! ಚೂರು ಬಂದರ ಬಾ ಇಲ್ಲಿ. ಗಾಬರಿಯಿಂದ ಗಂಡನನ್ನು ಕರೆದಳು.ಕಾಲು ತೊಳೆಯುತ್ತಿದ್ದ ಬಸಂತಪ್ಪ ಅರ್ಧಕ್ಕೆ ಬಿಟ್ಟು  ಓಡಿ ಬಂದ. ದ್ಯಾಮಿಯ ದೈನೇಶಿ ಸ್ಥಿತಿ ಕಂಡ ಬಸಂತಪ್ಪ,’ ಯಾಕ್ಬೆ ಏನಾಗೈತಿ? ಬೇಸಿ ಅದಿಯಿಲ್ಲ? ಏನರ ತ್ರಾಸಾಗೈತೇನು? ನಡಿ ಬಡ ಬಡ ತೋರ್ಸಿಗೆಂಡ್ ಬರಾನ’ ತಂದೆ ಕಕ್ಕುಲಾತಿ ಹೊರಹಾಕಿದ.ದ್ಯಾಮಿಯ ಕಣ್ಣುಗಳು ಮಾತ್ರ ಎಂದೂ ಬತ್ತದ ಸಾಣಾಪುರ ಕೆರೆಯಂತೆ ತುಂಬಿ ಹರಿಯತೊಡಗಿದ್ದವು. ಬಾಯಿಬಿಟ್ಟು ಏನೂ ಹೇಳಾಕ ತಯಾರಿಲ್ಲ. ಎಷ್ಟು ರಮಿಸಿದರೂ, ಸಂತೈಸಿದರೂ , ಬುದ್ದಿಮಾತು ಹೇಳಿದರೂ ದ್ಯಾಮಿ ಗುಡಿಯೊಳಗಿನ ಶಿಲೆಯಂತೆ ಸ್ಥಿರವಾಗಿದ್ದಾಳೆ. ರಾತ್ರಿ ತುಂಬಾ ಹೊತ್ತಾದರೂ ದ್ಯಾಮಿ ಬಾಯಿ ತೆರೆದು ತನ್ನ ಬಾಳಿನಲ್ಲಿ ನಡೆದ ಅನಾಹುತ ಹೊರ ಹಾಕಲಿಲ್ಲ. ಮನೆಯಲ್ಲಿ ಯಾರೂ ಉಣ್ಣಲಿಲ್ಲ, ಅಡುಗೆ ಮಾಡಿದರೆ ತಾನೆ ಉಣ್ಣುವದು? ದ್ಯಾಮಿಯ ನೋವಿನ ಆಳ ತಿಳಿದುಕೊಳ್ಳುವಷ್ಟು ಬುದ್ದಿವಂತರಲ್ಲ ಬಸಂತಪ್ಪ ಮತ್ತು ದ್ಯಾಮಿ.

ಇನ್ನೆನು ಎಲ್ಲರೂ ಮಲಗಿ, ಮುಂಜಾನೆ ವಿಚಾರಿಸಿದರಾಯ್ತು ಅನ್ನುವಷ್ಟರಲ್ಲಿ, ‘ ಯಣ್ಣಾ ಯಣ್ಣಾ..’ಅಂತ ದಬ ದಬನೇ ಕದ ಬಾರಿಸುತ್ತಾ ಪಾರವ್ವಕ್ಕ ಹೊರ ನಿಂತಿದ್ದಳು.ಮೊದಲೇ ಮಗಳ ವಿಚಾರದಲ್ಲಿ ಮನಸ್ಸು ಕೆಡಿಸಿಕೊಂಡಿದ್ದ ಗಂಡ-ಹೆಂಡಿರು, ಪಾರವ್ವಳ ಆಗಮನ ಮತ್ತಷ್ಟು ದುಗುಡಕ್ಕೆ ಈಡು ಮಾಡಿತ್ತು. ದೌಡಾಯಿಸಿ ಬಸಂತಪ್ಪ ಕದ ತೆರೆದು, ‘ ಬಾರ್ಬೆ ತಂಗಿ ಒಳಗ , ಯಾಕ್ಬೆ ಇಟೊತ್ನ್ಯಾಗ ಏನ್ ? ಯಷ್ಟೊಂದು ಬೆವತಂಗ ಕಾಣ್ತಿಯಲ್ಬೆ.ಮದ್ಲ್ ಒಳಗ ಬಾ’ .ಪಾರವ್ವ ಅಷ್ಟು ಗಾಬರಿಯಿಂದ, ಅದು ಅಷ್ಟು ಹೊತ್ನ್ಯಾಗ, ನಮ್ ಮನಿಗಿ ಬಂದಾಳಂದ್ರ, ಅದು ನಂದ ಸುದ್ದಿ ಇರ್ತೈತಿ ಅನ್ನೋ ಆಲೋಚನೆ ಆಗಲೇ ದ್ಯಾಮಿಗೆ ಹೊಳೆದಿತ್ತು.ಅಂದಂಗ ನಮ್ ದ್ಯಾಮಿ ಎಲ್ಲಿ ಅದಾಳ?ಆಕಿಗೂಡ ತಟಗು ಮಾತಾಡ್ಬೇಕಾಗೈತಿ.ಮೂಲೆ ಹಿಡಿದು ಮಲಗಿದ್ದ ದ್ಯಾಮಿ ದಡಕ್ಕಂತ ಹೊದ್ದ ಹಾಸಿಗೆ ದೂರ ತಳ್ಳಿ ಎದ್ದು ಕುಳಿತಳು. ದ್ಯಾಮಿಯ ಮುಖ ನೋಡುತ್ತಲೇ ಪಾರವ್ವ ಎಲ್ಲವನ್ನು ಅರ್ಥೈಸಿಕೊಂಡಳು.

‘ ನೋಡ್ ದ್ಯಾಮಿ, ಯಾ ವಿಷ್ಯನೂ ಮುಚ್ಚಿಟಗಬ್ಯಾಡ. ಇದ್ದದ್ದು ಯೇಳು.ನಾನೇನು ಅಂತಿಂತಾಕಿ ಅಲ್ಲ. ಐದರಲಿ ಸೈನಿಕ್ರನ ಒಣಿಕಿ ತಗಂಡು ಕುಟ್ಟಿ ಹಾಕಿದ ಓಬವ್ವನ ಜಾತ್ಯಾಕಿ ಅದಿನಿ’ ಇಷ್ಟು ಮಾತು ಮುಗಿಯೋದ್ರೊಳಗ, ದ್ಯಾಮಿ ತನ್ನ ಮಧ್ಯಾಹ್ನದ ಇತಿಹಾಸವನ್ನು ಒಂದೊಂದು ಪದವೂ ಬಿಟ್ಟು ಹೋಗದಂಗ ಹೊರಗೆ ಹಾಕಿದಳು.ಅವಳ ಕತೆ ಕೇಳಿದ ಮುಗ್ದ ದಂಪತಿಗಳಿಬ್ಬರೂ ಅರೆ ಸತ್ತ ಹೆಣದಂತಾದರು.ಇಡೀ ತಮ್ಮ ಮನೆತನ ಟೈಟಾನಿಕ್ ಹಡಗಿನಂತೆ ಸಮುದ್ರದ ಆಳಕ್ಕೆ ಮುಳುಗಿದಂತೆ ಭಾಸವಾಯಿತು.

‘ ನೋಡು ಬಸಂತಪ್ಪ ನೀವೇನೂ ಚಿಂತಿ ಮಾಡಬ್ಯಾಡ್ರಿ. ಬೆಳಕರಿಲಿ ನಾನು ಏನೂ ಅಂತ ಅವರಿಗೆ ತೋರಿಸ್ತಿನಿ.ದೊಡ್ಡವರು ಅಂತ ತಿಳದು ಮರಿಯಾದೆ ಕೊಟ್ರ, ಸಣ್ಣವರನ್ನ ತುಳುದು ಓಗ್ತಾರಂದ್ರ ಅವ್ರು ಮನಿಸ್ಯಾರಲ್ಲ.ಇದು ಜೀವದ ಪ್ರಶ್ನೆ ಐತಿ.ಆ ಹುಡುಗುನೂ ಅಂಥವನಲ್ಲ. ಆದ್ರ ಅವರಪ್ಪ ಆ ಹುಡುಗನ್ನ ಬಡಿಸಿ,ಯಾವುದೋ ಊರ್ಗೆ ಕಳಿಸ್ಯಾನನ್ನೋ ಸುದ್ದಿ ಅದ. ಅವ್ನು ದ್ಯಾಮಿನಾ ಲಗ್ನಾಕಿನಿ ಅಂತ ಹಠ ಮಾಡಿದ್ದಕ್ಕ, ಅವನ ಮೈಯೆಲ್ಲಾ ಹಣ್ಣಾಗೋವಂಗ ಬಡಿಸಿ, ನಾಲ್ಕೈದು ಮಂದಿ ಕಲ್ತು ಅವ್ನ ಒತ್ಗೊಂಡೋಗ್ಯಾರ ಅನ್ನೋ ಸುದ್ದಿ, ಇರ್ಲಿ ಈಗ ಉಂಡು ಮಕ್ಕಳ್ರಿ, ಬೆಳಿಗ್ಗೆ ನಾನೇ ಬರ್ತೀನಿ’ ಅನ್ನೋ ಪಾರವ್ವಳ ಮಾತು ಬಸಂತಪ್ಪನಿಗೆ ನಿರಾಳವೆನಿಸಿದರೂ, ನಡೆದ ಘಟನೆ ಬರೆ ಹಾಕಿದಂತಾಗಿತ್ತು.

ಇಡೀ ರಾತ್ರಿ ಯಾರಿಗೂ ನಿದ್ರೆ ಹತ್ತಲಿಲ್ಲ. ಮುಂಜಾನೆ ಊರ ಮಂದಿಗೆ ಮುಖ ಎತ್ತಿ ತೋರಿಸುವದಾದ್ರೂ ಹ್ಯಾಗೆ ? ಈ ಪ್ರಶ್ನೆಗೆ ಉತ್ತರ ಮೂವರಲ್ಲಿ ಯಾರಿಗೂ ಇರಲಿಲ್ಲ.ಅಂತೂ ಬೆಳಕಾಯಿತು. ದ್ಯಾಮಿಗೆ ಮಾತ್ರ ಅದು ಕತ್ತಲೆಯೇ ಆಗಿತ್ತು. ದೊಡ್ಡೀರನ ಮಾತುಗಳೆಲ್ಲ ಅವಳ ಕಿವಿಯಲ್ಲಿ ಗುನುಗುಡುತ್ತಿದ್ದವು.

ಸಿದ್ರಾಮಣ್ಣ ತನ್ನ ಮಗ ಸಾಚಾ ಎಂದೇ ಬೀಗಿಕೊಂಡು ಊರಲ್ಲಿ ನಡೆದಾಡುತ್ತಿದ್ದ.ಆದರೆ, ಪಾರವ್ವ ಸುಮ್ಮನಿರುವ ಹೆಣ್ಣು ಮಗಳೆ? ಊರ ಹನುಮಂತ ದೇವರ ಗುಡಿಯೊಳಗ ಊರ ಮುಖಂಡರ ಸಭೆ ಕರೆದು, ದ್ಯಾಮಿಗೆ ಆದ ಅನ್ಯಾಯಕ್ಕೆ ನ್ಯಾಯ ಬೇಡಿದಳು. ಸಿದ್ರಾಮಣ್ಣ ಊರಿಗೆ ಮುಖಂಡನಾದರೂ ಆ ದಿನ ಪಂಚಾಯಿತಿಗೆ ತೀರ್ಪುಗಾರನಾಗಿ ಕೂಡಲಿಲ್ಲ. ಇಡೀ ಪಂಚಾಯಿತಿ ದೊಡ್ಡೀರನ ಪರವಾಗಿಯೇ ಇತ್ತು. ಆದ್ರ ಪಂಚಾಯಿತಿಗೆ ಬೇಕಾಗಿದ್ದ ದೊಡ್ಡೀರನಾಗಲಿ ಇಲ್ಲವೆ ದ್ಯಾಮಿಯಾಗಲಿ ಇಬ್ಬರಲ್ಲಿ ಒಬ್ಬರೂ ಹಾಜರಿಲ್ಲ. ಬಸಂತಪ್ಪ ಮತ್ತು ಕಾಳವ್ವ ಮಾತ್ರ ತಲೆ ತಗ್ಗಿಸಿ ಭೂಮಿಯನ್ನೇ ನೋಡುತ್ತಿದ್ದರು. ದೂರದಲ್ಲಿ ಕುಳಿತಿದ್ದ ಸಿದ್ರಾಮಣ್ಣ ಮೀಸೆ ಮಣ್ಣಾಗಿಲ್ಲ ಅನ್ನುವಂತೆ ಮುಸಿ ಮುಸಿ ನಗುತ್ತಾ ಆಗಾಗ ಮೀಸೆ ತಿರುವುತ್ತಿದ್ದ.

ಪಂಚಾಯಿತಿ ಮುಖಂಡರಾಗಿದ್ದ ಮುದಿಗೌಡರು ,’ ಈಗ ಎಲ್ರಿಗೂ ವಿಷ್ಯ ತಿಳದೈತಿ. ಎರಡು ಕೈ ಕೂಡಿದ್ರನಾ ಚಪ್ಪಾಳೆ ಆಗೂದು’ ಅಂದಾಗ, ನಡುವೆ ಬಾಯಿ ಹಾಕಿದ ಚಪ್ಪರದ ಮನಿ ಮಂಗಳಪ್ಪ, ‘ ನೋಡ್ರಿ ಇದರಾಗ  ಉಡಿಗಿದ ತಪ್ಪೈತಿ. ಬೇಕಂತ್ಲೆ ಮದ್ಯಾಣ ಒಲಕ ಓಗ್ಯಾಳ. ಎಣ್ಮಕ್ಕಳು ಅಂದ್ರ ಎಂಗ್ ಇರ್ಬೇಕು. ಕರಸ್ರಿ ಆಕಿನ್ನ .ಇಂದಾಗಡಿವೂರ್ ಆಳ್ಮಾಡಿ ಬಿಟ್ಟಾಳು ವಲಸು ತಂದು’, ಇದಕ್ಕೆ ಪಿಂಜಾರ ಮಾಬುಸಾಬ ತಕರಾರು ತೆಗೆದ. ಎಲ್ಲದಕ್ಕೂ ಎಣ್ಮಕ್ಳ ಕಾರ್ಣಾಗಾಂಗಿಲ್ಲ. ಆ ಮಗಿನ್ನ ಕರಿರಿ  ಅಂದ್ರ ಉಡುಗುನ್ನೂ ಕರಸ್ರಿ. ನ್ಯಾಯ ಅಂದ್ರ ಎಲ್ರಿಗೂ ಒಂದಾ ….’ ಎಂದಾಗ ಕುಂತವರೆಲ್ಲಾ ಹೌದೆಂದು ದನಿಗೂಡಿಸಿದರು. ಈ ನಡುವೆ ಎದ್ದು ನಿಂತ ಸಿದ್ರಾಮಣ್ಣ,’ ನಮ್ ದೊಡ್ಡೀರ ನಿನ್ನೆ ಮುಂಜಾನೆನೆ ಅಕ್ಕನ ಊರಿಗೆ ಓಗ್ಯಾನ. ಅವನ್ನ ಕರೆಯೋ ಮಾತೆಲ್ಲಿಂದ ಬಂತು? ಇದೆಲ್ಲ ಕುತಂತ್ರ ಅಂದಾಗ ನಡುವೆ ಬಾಯಿ ಹಾಕಿದ ಪಾರವ್ವ, ಅಂಗಂದ್ರ ನಿಮ್ಮ ಮಗನ್ನ ನಿನ್ನೆ ಯಾಕ ನೀವು ಇಡದು ಬಡಿದಿರಿ? ಬೇಕಂತ್ಲೆ ಆ ಉಡುಗನ್ನ ಊರ್ ಬಿಡಿಸ್ಯಾರ. ಆ ಉಡುಗಿ ಬಾಳ್ವಿ ಹಾಳಾಗಕಂತೂ ನಾ ಬಿಡಾಕಿ ಅಲ್ಲ ನೋಡ್ರಿ’.’ಅಲ್ಲಬೆ ಪಾರವ್ವ ಇಷ್ಟು ಕರಾರುವಕ್ಕಾಗಿ ಆ ಉಡುಗನ ಮ್ಯಾಲ ಸಂಶ ಕಟ್ಟಿಯಲ್ಲ.ಅವರಿಬ್ಬರೂ ಕೂಡಿದ್ದು ಯಾರರ ನೋಡ್ದ್ಯಾರು ಅದರನ? ಕರಸು ಅವರ್ನ’, ಶೆಟ್ಟರ ಯಂಕಣ್ಣನ ಮಾತು ಬಾಣದಂಗ ಹಾರಿಬಂತು.ಅಲ್ಲೆ ಕುಳಿತಿದ್ದ ದನ ಕಾಯೋ ನಿಂಗಜ್ಜ ಎದ್ದು ನಿಂತು, ‘ ನೋಡ್ರಿ ದಣೇರಾ ಬೇಗ್ಸ್ಯಾರೆ ನೀರ್ ಕುಡಿಯಾಕಂತ, ಸರುವಿನ ಕಡಿಗೆ ಹೋಗಿದ್ಯಾ, ಯಮನಪ್ಪಾರ ಒಲ್ದಾಗ ದ್ಯಾಮವ್ವನ ಆಡು ಮೇಯಾಕತ್ತಿತ್ತು, ಈ ಉಡಿಗಿ ಎಲ್ಲ್ಯಾದಳಂತ ನೋಡಾಕ ಓದಾಗ….ನನಗ ಯಾಕ್ಬೇಕಂಥ ಸುಮ್ನ ಬಂದ್ನೆರಿ’ ಅಂತ ಸಾಕ್ಷಿ ನುಡಿದ.ಕುಡಿದ ಮತ್ತಿನೊಳಗ ಸಿದ್ರಾಮಣ್ಣನ ತಮ್ಮ ಯಮನೂರ್ ಬಾಯಿ ಬಿಚ್ಚಿದ.’ ಲೇ ಸೂ…ಮಗನೆ, ಆ ಹಾ…ಗಿತ್ತಿ ಪಾರಿ ಕೂಡ ಕೂಡ್ಕೆಂಡು ಆಟ ಆಡಾಕತ್ತೀರಿ? ಮುಂದ್ ಬರೊ ಎಲಕ್ಷನ್ನಾಗ ನಮ್ಮಣ್ಣ ಸೋಲ್ಬೇಕಂತ ನಾಟಕ ಮಾಡ್ತಿರಿ ಮಕ್ಕಳ’ ಅಂತೇಳಿ ಕೈಯಲ್ಲಿದ್ದ ಕುಡುಗೋಲು ಬೀಸಿದ. ಸಿಟ್ಟಿಗೆದ್ದ ಪಾರವ್ವ ‘ ಚೊಲೊ ಮಾತಿಲ್ಲಿ ಏಳಾಕತ್ತಿನಿ, ಇದ ವರ್ತನೆ ಮುಂದುವರದ್ರ ನಾ ಪೋಲಿಸ್ ಸ್ಟೇಶನ್ ಗೆ ಕಂಪ್ಲೇಂಟ್ ಕೊಡ್ತಿನಿ’ ಅಂದಾಗ , ಪರಿಸ್ಥಿತಿ ಕೈ ಮೀರುವ ಆಲೋಚನೆ ಮಾಡಿದ ಮುಖಂಡರು, ‘ ನೋಡಪಾ ಸಿದ್ರಾಮಣ್ಣ, ನಿಮ್ಮ ಮಗ ದೊಡ್ಡೀರ ಎಲ್ಲಿದ್ದರೂ ಕರಸು. ಸಮಕ್ಷಮ ಈ ಕೇಸನ್ನ ಬಗೆ ಅರಸನಂತೆ. ಎಲ್ಲರೂ ನಿಮ್ಮ ನಿಮ್ಮ ಮನಿಗೆ ನಡಿರಿ’ ಅಂತ ಪಂಚರು ಹೇಳಿದಾಗ, ಎಲ್ಲರೂ ಎದ್ದು ನಡೆದರು.

ದ್ಯಾಮಿ ಐಯ್ನೋರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಊರ ಮಂದಿಗೆ ಗೊತ್ತಾದದ್ದು ಆರೋಗ್ಯ ಇಲಾಖೆಯ ತುರ್ತು ವಾಹನ ೧೦೮ ತನ್ನ ಸೈರನ್ ದನಿಯನ್ನು ಗಂಟಲು ಹರಿಯುವಂತೆಹೊರ ಹಾಕುತ್ತ ಊರ ಅಗಸಿ ದಾಟಿದಾಗಲೇ. ಮೇಲಕ್ಕೇರಿದ್ದ ಸಿದ್ರಾಮಣ್ಣನ ಮೀಸೆ ಕೆಳಕ್ಕೆ ಮುಖ ಮಾಡತೊಡಗಿದವು. ಒಳಗೊಳಗೆ ಸಣ್ಣದೊಂದು ನಡುಕ ಹುಟ್ಟಿತು.ಪೊಲೀಸ್, ಜೈಲು , ಕೋರ್ಟ ಸಂಗತಿಗಳೆಲ್ಲಾ ಕಣ್ಣು ಮುಂದೆ ಹಾದು ಹೋದವು.ಜಿಲ್ಲಾ ಆಸ್ಪತ್ರೆಯಲ್ಲಿ ದ್ಯಾಮಿ ಸಾವು, ಬದುಕಿನ ನಡುವೆ ಹೋರಾಟ ನಡೆಸಿದ್ದಳು. ಪೋಲಿಸ್ ಇನ್ಸ್ಪೆಕ್ಟರ್  ತಮ್ಮ ಸಿಬ್ಬಂದಿ ಜೊತೆಗೆ ಬಂದು ಸಮಗ್ರ ವಿಷಯವನ್ನು ಕಲೆ ಹಾಕಿ ಜೀಪಿನೊಳಗೆ ಹೊರಟು ಹೋದರು. ಮರು ದಿನ ಪೊಲೀಸ್ ಜೀಪು ಪೋಳಿಕಟ್ಟಿ ಹತ್ತಿರ ಬಂದು ನಿಂತಾಗ, ಊರ ಜನವೆಲ್ಲಾ ತಮ್ಮ ಕೆಲಸ ಬಗಿಸಿ ಬಿಟ್ಟು, ಏನಾಗುವದೆಂಬ ಲೆಕ್ಕಚಾರದಲ್ಲಿ ಸೇರಿದರು. ಜೀಪಿನಲ್ಲಿಯೇ ಬಂದಿದ್ದ ದೊಡ್ಡೀರ ತಲೆ, ಕೈ ಮತ್ತು ಕಾಲಿಗೆ ಕಟ್ಟು ಹಾಕಿಸಿಕೊಂಡಿದ್ದ. ಪಾರವ್ವ ಮುಂದೆ ಬಂದು,’ ನಮಸ್ಕಾರ್ರೀ ಸಾಯೇಬ್ರ’ ಎಂದು ಹೇಳುತ್ತ ಅಲ್ಲೇ ಕುಳಿತಳು. ಒಂದೆಡೆ ಬಸಲಿಂಗಪ್ಪ, ಕಾಳವ್ವ ನಿರ್ಜೀವಿಗಳಂತೆ ಕೂತಿದ್ದರು.ಸಿದ್ರಾಮಣ್ಣ ಊರು ಬಿಟ್ಟಿದ್ದ.ದೊಡ್ಡೀರನ ತಾಯಿ ಕೋಮಲಾ ಸೆರಗು ಹೊದ್ದು ಜನಕ್ಕ ಮುಖ ಕಾಣದಂತೆ ಕುಳಿತಿದ್ದಳು.ನೆನ್ನೆ ಜಮಾಯಿಸಿದ್ದ ಪಂಚರು ಇದ್ದರು.ಊರ ಜನರ ಗುಸು ಗುಸು ಮಾತುಗಳಿಗೆ ಯಾರ ಮಾತು ಯಾರಿಗೂ ಕೇಳುತ್ತಿರಲಿಲ್ಲ. ಇನ್ಸಪೆಕ್ಟರ್ ಎದ್ದು ನಿಂತು, ‘ ದಯಮಾಡಿ ಎಲ್ಲರೂ ಸಮಾಧಾನವಾಗಿರಬೇಕು. ಈ ಸಮಸ್ಯೆಯನ್ನು ದೊಡ್ಡದು ಮಾಡಲಿಕ್ಕೆ ನಾವು ತಯಾರು ಇಲ್ಲ.ಆಸ್ಪತ್ರೆಗೆ ಭೇಟಿ ನೀಡಿ ದ್ಯಾಮಿಯ ಹೇಳಿಕೆಯನ್ನು ಪಡೆದಿದ್ದೇವೆ.ದೇವರ ದಯೆಯಿಂದ ಹುಡುಗಿ ಹುಷಾರಾಗಿದ್ದಾಳೆ. ದೊಡ್ಡೀರ ನಿಜವಾಗಲೂ ದೊಡ್ಡ ಮನುಷ್ಯ. ಕಾರಣ ಇಷ್ಟೆ ಆತ ತನ್ನಿಂದಾದ ಪ್ರಮಾದವನ್ನು ಒಪ್ಪಿ ದ್ಯಾಮಿಯನ್ನು ಹೆಂಡತಿಯಾಗಿ ಸ್ವೀಕರಿಸಲು ತಯಾರಿದ್ದಾನೆ.ದೊಡ್ಡೀರನ ತಂದೆ ಸಿದ್ರಾಮಣ್ಣ ಅವರೂ ನನ್ನ ಜೊತೆ ಮೊಬೈಲ್ನಲ್ಲಿ ಮಾತನಾಡಿ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ದೊಡ್ಡೀರ ಮತ್ತು ದ್ಯಾಮಿಯರ ಮದುವೆ ಇದೇ ಕಾರ್ತಿಕ ಮಾಸದಲ್ಲಿ ನಡೆಯಲಿದೆ.ಮತ್ತು ಇಂತಹ ಒಂದು ಘನ ಕಾರ್ಯದಲ್ಲಿ ಟೊಂಕಕಟ್ಟಿ ಕೆಲಸ ಮಾಡಿದ ಪಾರವ್ವ ತಾಯಿಗೆ ನಾವು ಧನ್ಯವಾದಗಳನ್ನು ಹೇಳಲೇಬೇಕು’ ಎಂದಾಗ ಎಲ್ಲರೂ ಚಪ್ಪಾಳೆ ಹಾಕಿದರು.  ಹನುಮಂತ ದೇವರಿಗೆ ಎರಡೂ ಕೈ ಜೋಡಿಸಿ ಪಾರವ್ವ ನಮಸ್ಕರಿಸಿದಳು.


Leave a Reply

Back To Top