ಅಂಕಣ ಸಂಗಾತಿ
ಸಕಾಲ
ಉಪಕಾರ ಮಾಡುವವನು ಅಹಂಕಾರಿಯಾಗುತ್ತಾನೆ
ಉಪಕಾರ ಮಾಡುವವನು ಅಹಂಕಾರಿಯಾಗುತ್ತಾನೆ.
ಇದೊಂದು ವಿಚಿತ್ರ ಸನ್ನಿವೇಶ. ಸಹಾಯ ಬೇಡಿ ಬಂದವಗೆ ಸಹಾಯ ಹಸ್ತ ಚಾಚುವುದು ಸಹಜ.ಅದೇ ಜೀವನದ ಉದ್ದೇಶವಾದರೇ ಭ್ರಮೆಯ ನಡುವೆ ಆತಂಕ ಎದುರಾದರೇ ಸಹಾಯ ಸಾರ್ಥಕವಾದಿತೆ?ಎಲ್ಲರಿಗೂ ಬೇಕು,ಅನಾಯಾಸವಾಗಿ ಹಣ,ಸುಖ ಸಂಪತ್ತು,ಯಾರ ಜೀವನ ಏನಾದರೂ ಸರಿ ತಾವು ಸುಖವಾಗಿದ್ದರೆ ಸಾಕು. ಸುಖವೆನ್ನುವುದು ಒಂದು ಶಬ್ದ, ಒಂದು ಮಾನಸಿಕ ಸ್ಥಿತಿ. ಆದರೂ ಅದು ಒಂದೇ ಅಲ್ಲ. ಅದರ ಸ್ತರಗಳು ಬೇರೆಬೇರೆ ಇರುತ್ತವೆ. ಮನುಷ್ಯ ಒಬ್ಬನಾದರೂ ಅವನೊಳಗೆ ಅನೇಕ ಘಟಕಗಳಿವೆ. ಶರೀರ, ಮನಸ್ಸು, ಬುದ್ಧಿ, ಆತ್ಮಗಳಿಂದ ಕೂಡಿರುವವನು ಮನುಷ್ಯ. ಸುಖ ಎನ್ನುವುದು ಈ ನಾಲ್ಕಕ್ಕೂ ಸಂಬಂಧಪಟ್ಟಿದೆ. ಪಂಚೇಂದ್ರಿಯಗಳಿಂದ ಸಿಗುವ ಸುಖ ಶಾರೀರಿಕ ಸುಖ – ತಿನ್ನುವುದು, ಕುಡಿಯುವುದು, ನೋಡುವುದು, ವಾಸನೆ ಗ್ರಹಿಸುವುದು, ಕೇಳುವುದು, ಸ್ಪರ್ಶಿಸುವುದೆಲ್ಲ ಇದರಲ್ಲಿ ಸೇರಿದೆ. ಮನಸ್ಸಿಗೆ ಸಂಬಂಧಪಟ್ಟಿರುವ ಸುಖ ಮಾನಸಿಕ ಸುಖ. ಒಳ್ಳೆಯ ಪುಸ್ತಕದ ಓದಿನಲ್ಲಿ ಮಗ್ನನಾದವನಿಗೆ ಊಟ, ತಿಂಡಿ, ಆಟ ಯಾವುದೂ ಬೇಡ ಎನಿಸುತ್ತದೆ. ಕಾರಣ ಅವನಿಗೆ ಮಾನಸಿಕ ಸುಖ ಸಿಗುತ್ತದೆ. ಬುದ್ಧಿಯ ಸುಖ ಇದಕ್ಕಿಂತ ಮೇಲ್ಮಟ್ಟದ್ದು. ಆತ್ಮಕ್ಕೂ ಒಂದು ಸುಖವಿದೆ. ಉದಾರತೆ, ವಿಶಾಲತೆ, ತನ್ನಂತೆ ಎಲ್ಲರನ್ನೂ ಭಾವಿಸುವುದು, ಇನ್ನೊಬ್ಬರ ಸುಖದಲ್ಲಿ ತನ್ನ ಸುಖ ಕಾಣುವುದು, ಇನ್ನೊಬ್ಬರ ಸುಖಕ್ಕಾಗಿ ತಾನು ಕಷ್ಟಪಡುವುದು,ಇವೆಲ್ಲ ಆತ್ಮಿಕ ಸುಖದ ಲಕ್ಷಣಗಳು. ಆತ್ಮಿಕ ಸುಖವೇ ಶ್ರೇಷ್ಠವಾದ ಸುಖ ಎನ್ನಲಾಗುತ್ತದೆ.
ಇದು ಸತ್ಯವಾದರೂ,ಹೊಟ್ಟೆ ತುಂಬಿದವನಿಗೆ ಎಷ್ಟು ಉಣಬಡಿಸಲು ಸಾಧ್ಯ? ಸ್ವಾರ್ಥದ ಬೆನ್ನ ಹತ್ತಿ ಸುಖಪಡುವವನ ಸುಖ ಆತ್ಮಿಕ ಸುಖದ ಲಕ್ಷಣವಾಗುವುದಿಲ್ಲ.ಯಾವನು ಪಾರದರ್ಶಕ ಮನಸ್ಸಿನಿಂದ ಉಭಯ ಸಂಕಟಕ್ಕೆ ಒಳಗಾಗದೇ ತನ್ನನ್ನು ತೆರದುಕೊಳ್ಳುತ್ತಾನೋ ಉಪಾಕ ನಿಜವಾಗಲೂ ಅವನ ಕಾರ್ಯ ಮೆಚ್ಚುವಂತಹುದು.ಈ ಆತ್ಮಿಕ ಸುಖವನ್ನು ಪಡೆಯುವುದೇ ವೈಯಕ್ತಿಕವಾಗಿ ಒಬ್ಬನ ಜೀವನದ ಅಂತಿಮ ಗುರಿಯಾಗಿರುತ್ತದೆ. ಆದರೆ ಇದನ್ನು ಸಾಧಿಸಲು ಆತ ತ್ಯಾಗಿಯಾಗುವುದು, ಪರೋಪಕಾರಿಯಾಗುವುದು, ಇನ್ನೊಬ್ಬರ ಕುರಿತು ಉದಾರವಾಗಿ ಚಿಂತಿಸುವುದು ಅನಿವಾರ್ಯ. ಇಂತಹ ಜೀವನ ನಡೆಸಿರುವವರನ್ನೇ ಜನರು ದೀರ್ಘಕಾಲ ನೆನಪಿಸಿಕೊಳ್ಳುತ್ತಾರೆ. ಇಂತಹ ಜೀವನವನ್ನೇ ಸಾರ್ಥಕ ಜೀವನ ಎನ್ನುತ್ತಾರೆ. ಅದೊಂದು ಆದರ್ಶ ಜೀವನ ಎನ್ನುತ್ತಾರೆ.
ಮೋಸದಿಂದ,ವಂಚನೆಯಿಂದ,ದ್ರೋಹಬಗೆದು,ಕಣ್ಣಾಮುಚ್ಚಾಲೆಯಲಿ ತಾನು ಮಾಡುವ ಕೆಲಸ ಶ್ರೇಷ್ಠವೆಂದರೆ ಅದು ದುರ್ವಾಸನೆ ಕೂಡಿದ ಮನಸ್ಸಿನ ಅನಾವರಣ.ಅಲ್ಲಿ ಸ್ವಾರ್ಥ ಹೊರತು ಪಡಿಸಿ ಮತ್ತೇನು ಇರದು. ಅದಕ್ಕಾಗಿ ಪೂರ್ವಜರು ಶ್ರೇಷ್ಠರು ಎಂದು ಯಾರನ್ನು ಕರೆದರು ಎಂದು ಮೆಲುಕು ಹಾಕಿದರೇ,
ನಾವು ‘ಶ್ರೇಷ್ಠರು’ ಎಂದು ಗುರುತಿಸುವ ಎಲ್ಲರ ಜೀವನದಲ್ಲೂ ಈ ಗುಣಗಳನ್ನೇ ಕಾಣುತ್ತೇವೆ. ದಧೀಚಿ ಋಷಿ ವಜ್ರಾಯುಧದ ನಿಮಾರ್ಣಕ್ಕಾಗಿ ತನ್ನ ಬೆನ್ನೆಲುಬನ್ನೇ ನೀಡಿದ. ಅದನ್ನು ನೀಡಿದರೆ ತನ್ನ ಅಸ್ತಿತ್ವವೇ ನಷ್ಟವಾಗುವುದೆಂದು ತಿಳಿದೂ ನೀಡಿದ. ಅದಕ್ಕಾಗಿ ಆತ ಶ್ರೇಷ್ಠ. ರಾಜಾ ರಂತಿದೇವ ‘ನನಗೆ ಸ್ವರ್ಗಮೋಕ್ಷಗಳಾವುವೂ ಬೇಡ, ನೊಂದ ಜೀವಿಗಳ ದುಃಖದ ಶಮನವನ್ನು ಮಾಡುವ ಅವಕಾಶ ಮಾತ್ರ ಸಿಗಲಿ’ ಎಂದ. ಶಿಬಿಚಕ್ರವರ್ತಿ ಪುಟ್ಟ ಪಾರಿವಾಳವನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ. ಭೂಮಿಗೆ ಗಂಗೆಯನ್ನು ತರಲು ಸಗರನಿಂದ ಭಗೀರಥನವರೆಗೆ ನಾಲ್ಕೈದು ತಲೆಮಾರುಗಳ ರಾಜರು ಶ್ರಮಿಸಿದರು. ಪರಶುರಾಮ ದುಷ್ಟಕ್ಷತ್ರಿಯರನ್ನೆಲ್ಲ ನಾಶಮಾಡಿದ ನಂತರ ಅವರಿಂದ ಗೆದ್ದ ಭೂಮಿಯನ್ನೆಲ್ಲ ಕಶ್ಯಪಋಷಿಗೆ ದಾನಮಾಡಿ ತಪಸ್ಸಿಗೆ ನಡೆದ. ಹಾಗಾಗಿ ಅವನು ಅವತಾರಪುರುಷನೆನಿಸಿದ. ಶ್ರೀರಾಮ ಅಯೋಧ್ಯೆಯನ್ನು ಭರತನಿಗೆ ಬಿಟ್ಟುಕೊಟ್ಟ. ವಾಲಿಯನ್ನು ಕೊಂದನಂತರ ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟ. ರಾವಣನ ಮೇಲೆ ಯುದ್ಧ ಆರಂಭ ಆಗುವ ಮೊದಲೇ ವಿಭೀಷಣನಿಗೆ ಲಂಕೆಯನ್ನು ಕೊಟ್ಟ. ರಾಜನು ಶತ್ರುವಿನ ಮನೆಯಲ್ಲಿದ್ದವಳನ್ನು ಸ್ವೀಕರಿಸಿದನೆಂಬ ಆರೋಪ ಬಂದಾಗ ಪತ್ನಿಯನ್ನೇ ತ್ಯಜಿಸಿದ. ಹೀಗೆ ರಾಮಾಯಣವೆಂಬುದು ರಾಮನ ಸುಖ-ಸಂತೋಷಗಳ ಕಥೆ ಅಲ್ಲವೇ ಅಲ್ಲ. ಅದು ಅವನ ತ್ಯಾಗದ ಕಥೆ. ಈ ಕಥೆ ನಡೆದು ಕೋಟ್ಯಂತರ ವರ್ಷಗಳೇ ಆದರೂ ಇಂದಿಗೂ ರಾಮ ನಮಗೆ ಆದರ್ಶ. ಇಂದಿಗೂ ಮಕ್ಕಳಿಗೆ ಅವನ ಹೆಸರನ್ನು ಇಡುತ್ತೇವೆ, ಅವನಂತೆಯೇ ಆಗು ಎನ್ನುತ್ತೇವೆ. ಧರ್ಮರಾಜನಾದರೋ ತನ್ನೊಡನೆ ಬಂದ ನಾಯಿಗೆ ಸ್ವರ್ಗ ಸಿಗದಿದ್ದರೆ ತನಗೂ ಸ್ವರ್ಗ ಬೇಡವೇ ಬೇಡ ಎಂದ. ಶ್ರೀಕೃಷ್ಣ ತನ್ನ ಜೀವನದಲ್ಲಿ ಅನೇಕ ದುಷ್ಟ ರಾಜರನ್ನು ಸಂಹರಿಸಿದ, ಪಾಂಡವರ ಸಹಾಯದಿಂದ ಕೊಲ್ಲಿಸಿದ. ಆದರೆ ಯಾರ ರಾಜ್ಯವನ್ನೂ ತಾನು ಇಟ್ಟುಕೊಳ್ಳಲಿಲ್ಲ. ಅವನೆಂದೂ ರಾಜನಾಗಲಿಲ್ಲ ಅದಕ್ಕಾಗಿಯೇ ಅವನು ನಮಗೆ ಪೂಜ್ಯ. ಹೀಗೆ ತ್ಯಾಗದಿಂದಲೇ ಅಮರತ್ವ ಪ್ರಾಪ್ತಿ ಎಂದಿದ್ದಾರೆ ನಮ್ಮ ಹಿರಿಯರು.
ಮನುಷ್ಯ ತನ್ನ ಚಿಂತನೆಯಿಂದಾಗಿ ಸ್ವಾರ್ಥಿಯಾಗುತ್ತಾನೆ. ಸ್ವಾರ್ಥ ಬೇಕು, ಆದರೆ ಅದು ಅತಿಯಾದರೆ ಅದರಿಂದ ಹಾನಿ. ತನಗೆ ಮಾತ್ರವಲ್ಲ ಎಲ್ಲರಿಗೂ ಹಾನಿಯಾಗುತ್ತದೆ. ಸ್ವಾರ್ಥಿಯಾಗುವುದಕ್ಕಿಂತ ಪರೋಪಕಾರಿಯಾಗುವುದರಲ್ಲೇ ತನಗೂ ಸಮಾಜಕ್ಕೂ ಹಿತವಿದೆ.
ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಮಿದಂ ಶರೀರಮ್
ಜೀವನದಲ್ಲಿ ವ್ಯಕ್ತಿಯೊಬ್ಬನು ಪಡೆದುಕೊಳ್ಳುವುದಕ್ಕಿಂತ ನೀಡುವುದು ಹೆಚ್ಚಾಗಬೇಕು.ಆಗಲೇ ಅದಕ್ಕೆ ಸಾರ್ಥಕತೆ ನೂರು ಕೈಗಳಿಂದ ಪಡೆ, ಸಹಸ್ರ ಕೈಗಳಿಂದ ಹಂಚು ಮುಪ್ಪು ಸಾವುಗಳಿಲ್ಲದವನೆಂದು ತಿಳಿದು ಸಂಪಾದನೆ ಮಾಡು,ಆದರೆ ಯಮ ನಿನ್ನ ಜುಟ್ಟನ್ನು ಹಿಡಿದೆಳೆಯುತ್ತಿದ್ದಾನೆಂದು ತಿಳಿದು ಧರ್ಮಕಾರ್ಯದಲ್ಲಿ ತೊಡಗು. ಇತ್ಯಾದಿಗಳೆಲ್ಲವೂ ಮನುಷ್ಯ ಸಂಗ್ರಹಿಸುವುದಕ್ಕಿಂತ ಹೆಚ್ಚಾಗಿ ನೀಡಬೇಕೆಂಬುದನ್ನು ಮನಗಾಣಿಸುತ್ತವೆ.ಪ್ರತಿಯೊಬ್ಬನ ಮೇಲೂ ಹಲವು ತರಹದ ಋಣಗಳಿರುತ್ತವೆ. ಮಾತೃಋಣ, ಪಿತೃಋಣ; ಭ್ರಾತೃ, ಗುರು, ಮಿತ್ರ, ಸಮಾಜದ ಋಣಗಳಿವು. ಈ ಋಣಗಳೆಲ್ಲವನ್ನೂ ತೀರಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ.ಪ್ರಾಚೀನರು ಯಾರ ಋಣ ನಮ್ಮ ಮೇಲಿರುತ್ತದೆ ಎಂದು ಭಾವಿಸುತ್ತೇವೋ ಅವರನ್ನು ದೇವರೆಂದೇ ತಿಳಿದು ಅವರ ಸೇವೆ ಮಾಡಬೇಕು. ಅದಕ್ಕಾಗಿ ಹೇಳಿದ್ದಾರೆ:
ಮಾತೃದೇವೋ ಭವ
ಪಿತೃದೇವೋ ಭವ
ಆಚಾರ್ಯದೇವೋ ಭವ
ಇದನ್ನೇ ಮುಂದುವರಿಸಿ ವಿವೇಕಾನಂದರು ದೀನದೇವೋ ಭವ, ದರಿದ್ರದೇವೋ ಭವ, ಮೂರ್ಖದೇವೋ ಭವ ಎಂದು ವಿಸ್ತರಿಸಿ ಹೇಳಿದ್ದಾರೆ. ಹೀಗೆ ತಾಯಿ, ತಂದೆ, ಆಚಾರ್ಯ, ಅತಿಥಿ, ದೀನರು, ದರಿದ್ರರು, ರೋಗಿಗಳು, ಮೂರ್ಖರು ಎಲ್ಲರೂ ನನಗೆ ದೇವರು ಎಂದಾದರೆ ಅದೇ ಅಂತಿಮವಾಗಿ ಸಮಾಜದೇವೋ ಭವ, ರಾಷ್ಟ್ರ ದೇವೋ ಭವ ಆಗಿ ಬದಲಾಗುತ್ತದೆ. ಹೀಗೆ ಸಮಾಜದ ಹಿತದ ಕುರಿತು ಎಲ್ಲರೂ ಚಿಂತಿಸಿದಾಗ ಎಲ್ಲರ ಒಟ್ಟು ಸತ್ಕಾರ್ಯಗಳ ಫಲವಾಗಿ ಆ ಸಮಾಜ, ರಾಷ್ಟ್ರ ಸುಖ ಸಮೃದ್ಧವಾಗುತ್ತದೆ.ಪರೋಪಕಾರ’ದ ಶಬ್ದದಲ್ಲಿ ದೊಡ್ಡಸ್ತಿಕೆಯ ಭಾವ ಇದೆ. ಆದರೆ ‘ಸೇವೆ’ಯಲ್ಲಿ ವಿನಮ್ರತೆಯ ಭಾವ ಇರುತ್ತದೆ. ‘ಉಪಕಾರ’ಮಾಡುವವನು ಅಹಂಕಾರಿಯಾಗುತ್ತಾನೆ, ಆದರೆ ‘ಸೇವೆ’ಮಾಡುವವನು ವಿನಮ್ರನಾಗುತ್ತಾನೆ. ಅವನಲ್ಲಿ ಪ್ರೀತಿ, ದಯೆ, ಅನುಕಂಪಗಳೆಲ್ಲ ಕೂಡಿರುತ್ತವೆ.
ಒಮ್ಮೆ ಸ್ವಾಮಿ ಶ್ರೀರಾಮಕೃಷ್ಣ ಪರಮಹಂಸರು ಚಾವಡಿಯಲ್ಲಿ ಕುಳಿತು ಅಂಗಳವನ್ನು ನೋಡುತ್ತಿದ್ದರು. ಆ ಸಮಯದಲ್ಲಿ ಒಂದು ಹಸು ಅಂಗಳವನ್ನು ಪ್ರವೇಶಿಸಿ ಅಲ್ಲಿ ಹುಲ್ಲುಮೇಯತೊಡಗಿತು. ಆಗ ಪರಮಹಂಸರು ಇದ್ದಕ್ಕಿದ್ದಂತೆಯೇ ಅಯ್ಯೋ, ನನ್ನನ್ನು ತುಳಿಯುತ್ತಿದೆ, ತುಳಿಯುತ್ತಿದೆ, ಕಾಪಾಡಿ, ಕಾಪಾಡಿ ಎಂದು ಚೀರತೊಡಗಿದರು. ಶಿಷ್ಯರು ಓಡಿಬಂದು ನೋಡಿದಾಗ ಪರಮಹಂಸರು ನೆಲದ ಮೇಲೆ ಹೊರಳಾಡುತ್ತ ನೋವಿನಿಂದ ಚೀರುತ್ತಿದ್ದರು. ಪರಮಹಂಸರು ಕೈಸನ್ನೆಯಿಂದಲೇ ಹಸುವನ್ನು ಹೊರಕಳಿಸಲು ಸೂಚಿಸಿದರು. ಶಿಷ್ಯರು ಹಸುವನ್ನು ಹೊರಗೆ ಕಳಿಸಿ ಬಂದು ನೋಡಿದಾಗ ಪರಮಹಂಸರ ಎದೆ-ಬೆನ್ನುಗಳ ಮೇಲೆ ಹಸುವಿನ ಗೊರಸಿನ ಗುರುತು ಮೂಡಿತ್ತು. ಎಂದರೆ ಆ ಸಮಯದಲ್ಲಿ ಪರಮಹಂಸರು ಅಂಗಳದಲ್ಲಿದ್ದ ಹುಲ್ಲಿನೊಂದಿಗೆ ಏಕೀಭಾವರಾಗಿದ್ದರು. ಅದರಿಂದಾಗಿ ಹುಲ್ಲಿನ ಮೇಲೆ ಓಡಾಡಿದ ಹಸುವಿನ ಗೊರಸಿನ ಗುರುತು ಪರಮಹಂಸರ ಶರೀರದ ಮೇಲೆ ಮೂಡಿತ್ತು
ಈ ಎಲ್ಲ ವಿಷಯಗಳು ಪ್ರತಿಯೊಬ್ಬರಿಗೂ ಚಿರಪರಿಚಿತ.ಸುಖದ ಭಾವ,ಉಪಕಾರದ ಭಾವ ಎಲ್ಲವೂ ಜನರ ಅನುಕೂಲತೆಗಳಿಂದ ಕೂಡಿದ, ವೈಭವದಿಂದ ಕೂಡಿದ ಜೀವನವೇ ಸಾರ್ಥಕ ಜೀವನ ಎಂದುಕೊಂಡಿರುತ್ತಾರೆ. ಆದರೆ ಅದಲ್ಲ. ವಿವೇಕಾನಂದರು ಹೇಳಿದ್ದಾರೆ “ಇನ್ನೊಬ್ಬರಿಗಾಗಿ ಬದುಕುವ ಜೀವನವೇ ನಿಜವಾದ ಜೀವನ. ಉಳಿದವರೆಲ್ಲ ಬದುಕಿದ್ದರೂ ಸತ್ತಂತೆಯೇ” ಎಂದು. ಅದಕ್ಕಾಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಯಾವುದಾದರೊಂದು ರೀತಿಯಲ್ಲಿ ನಾವೆಲ್ಲರೂ ಇನ್ನೊಬ್ಬರಿಗಾಗಿ ಬದುಕಬೇಕು. ನಮ್ಮ ಶಕ್ತಿ, ಸಾಮರ್ಥ್ಯ, ಅಭಿರುಚಿಗಳಿಗೆ ಹೊಂದುವಂತಹ ಯಾವುದಾದರೊಂದು ಕ್ಷೇತ್ರದಲ್ಲಿ ತೊಡಗಿಕೊಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.
ಉಪಕಾರದ ಹೆಸರಲ್ಲಿ ಮೋಸ ಸಲ್ಲದು,ಅನುಮಾನಕ್ಕೆ ಎಡಮಾಡಿಕೊಡದೆ ಪಾರದರ್ಶಕ ಜೀವನ ನಡೆಸುವ ಧ್ಯೇಯವನ್ನು ಹೊಂದಿದರೆ ಮಾತ್ರ ಬದುಕು ಸಾರ್ಥಕಬಾಗುವುದು.ನಂಬಿಕೆಯ ಅಸ್ತ್ರ ಹೆಮ್ಮೆಯ ಶಿಖರವಾಗುವುದು.ಹಿರಿಯರು ಬಾಳಿಬದುಕಿದ ಗಳಿಗೆಗಳು ನಮಗೆ ದಾರಿ ದೀಪಗಳಾಗಿ ಬೆಳಗಲು ಸಾಧ್ಯವಾದಿತು.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ಅತೀ ಸುಂದರ ರೀ ಮೇಡಂ.ಮತ್ತೆ ಮತ್ತೆ ಓದಬೇಕು ಎಂಬ ಭಾವ
Nice madam