ಡಾ. ಪುಷ್ಪಾ ಶಲವಡಿಮಠ-ಕವಿತೆ-ಗಡಿಯಾರ ಬೇಕು ನನಗೆ

ಕಾವ್ಯ ಸಂಗಾತಿ

ಗಡಿಯಾರ ಬೇಕು ನನಗೆ

ಡಾ. ಪುಷ್ಪಾ ಶಲವಡಿಮಠ

ಬೆಳಗು ಜಾವಕೆ ಎದ್ದು
ಅಂಗಳ ಗುಡಿಸಿ ಚುಕ್ಕಿ ಎಣಿಸಿ
ರಂಗೋಲಿ ಇಟ್ಟು
ಒಳ ಬಂದಾಗ ತಡವಾಯಿತೇನೋ?!
ಎಂದು ಗಾಬರಿಯಿಂದ ಸುಧಾರಿಸಿಕೊಳ್ಳಲು
ಸಮಯ ಹೊಂದಿಸಿಕೊಳ್ಳಲು
ನನಗೆ ಸದಾ ಗಡಿಯಾರ ಬೇಕು

ಕಛೇರಿಗೆ ಹೊರಡುವ ಪತಿರಾಯ
ತಡವಾಗಿ ತಾ ಎದ್ದು ಅವನ
ಅವಸರಕೆ ಕುಣಿಯಲು
ನನ್ನ ಅಣಿಗೊಳಿಸಿ
ಚಹಾ ಪೇಪರ ತಾ ಆಸ್ವಾದಿಸಿ
ಸ್ಕೂಟರ್ ಹತ್ತುವವರೆಗೂ
ಚಸ್ಮಾ ಕರವಸ್ತ್ರ ಕೊಡುವ ವರೆಗೂ
ಸಮಯ ನೋಡಿಕೊಳ್ಳಲು
ನನಗೆ ಸದಾ ಗಡಿಯಾರ ಬೇಕು

ರಾತ್ರಿಯಿಡಿ ಮೊಬೈಲ್ ನೋಡಿ ದಣಿದ ಮಗ
ತಡವೇರಿ ಎದ್ದು ತಡಕಾಡಿ ಉಡುಪು ಧರಿಸಿ
ಹತ್ತು ನಿಮಿಷಕೆ ಇಷ್ಟದ ತಿಂಡಿ ಬೇಕೆಂದು
ಸತ್ಯಾಗ್ರಹ ಹೂಡಿದಾಗ
ಹತ್ತು ನಿಮಿಷ ಕೌಂಟ್ ಮಾಡಲು
ನನ್ನೆದುರಿಗೆ ಗಡಿಯಾರ ಇರಲೇಬೇಕು

ತಾಸೋತ್ತು ಕನ್ನಡಿಯ ಮುಂದೆಯೇ ಕುಳಿತು
ಕಾಲ ಕಳೆಯುಳ ಮಗಳಂತೂ
ಗಡಿಯಾರ ನೋಡಲಾರಳು
ಒಂದು ಈರುಳ್ಳಿ ಹೆಚ್ಚಿಕೊಟ್ಟರೆ
ಕೈ ಕಪ್ಪಾಗುವುದೆಂದು
ರಂಪ ಮಾಡುವ ಸುಕುಮಾರಿ
ಉಪವಾಸ ಹೋದರೆ ಮಗಳು ಸೊರಗುವಳೆಂದು
ಸಮಯ ಹೊಂದಿಸಲು ಹೆಣಗಾಡುವ ನನಗೆ
ಎದುರಿಗೆ ಗಡಿಯಾರ ಬೇಕು ಬೇಕು

ಅತ್ತೆ ಮಾವನ ಪತ್ತೆಯೂಟಕೆ
ಕಾಲಕಾಲಕೆ ಹೊಂದಿಸಿ ಮಾತ್ರೆ ನೀಡಲು
ಹೊತ್ತು ಹೊತ್ತಿಗೆ ಕತ್ತೆತ್ತಿ ಸಮಯ ನೋಡಲು
ನನಗೆ ಗಡಿಯಾರ ಬೇಕೇಬೇಕು

ನಿನಗೆ ಟೈಮ್ ಸೆನ್ಸೇ ಇಲ್ಲಾ
ಎಂದು ಬೈಸಿಕೊಂಡಾಗಲೆಲ್ಲಾ
ನನ್ನ ನೋಡಿ ನಗುವ
ಚಲನೆಗೆ ಸಾಕ್ಷಿಯಾದ
ಗಡಿಯಾರ ನನಗೆ ಬೇಕು ಬೇಕು
ಸದಾ ತನ್ನ ಮುಳ್ಳುಗಳಿಂದ ತಿವಿಯುತ್ತ
ಜಡವಾಗದಂತೆ ನನ್ನ
ಸದಾ ಎಚ್ಚರದಲ್ಲೇ ಇಡುವ
ಗಡಿಯಾರ ನನಗೆ ಬೇಕು ಬೇಕು
ಗಡಿಯಾರದೊಡಗೂಡಿ
ನಾನೂ ಗಡಿಯಾರವೇ ಇದೆ
ನಿಲ್ಲದಂತೆ ಚಲಿಸುತ್ತಲೇ ನಡೆದೆ


5 thoughts on “ಡಾ. ಪುಷ್ಪಾ ಶಲವಡಿಮಠ-ಕವಿತೆ-ಗಡಿಯಾರ ಬೇಕು ನನಗೆ

  1. ನೀವು ಗಡಿಯಾರದ ಅನುಯಾಯಿ ಏಂದು ಪ್ರಾಮಾಣಿಕವಾಗಿ ತೋರಿದ ನಿಮಗೆ ಮತ್ತು ನಿಮ್ಮ ಕವಿತೆಗೆ ಅಭಿನಂದನೆಗಳು.

  2. ನಿಜವಾಗಲೂ ಇವೆಲ್ಲವುಗಳ ಮಧ್ಯ ನಮ್ಮ ಅಸ್ಥಿತ್ವ ಏನೆಂದು ತಿಳಿಯಲೂ ಗಡಿಯಾರ ಬೇಕೇ ಬೇಕು

    1. ಸಂಗಾತಿ ಬಳಗದ ಸಹೋದರರ ಅಭಿಪ್ರಾಯಕ್ಕೆ ಅನಂತ ಧನ್ಯವಾದಗಳು

    2. ನಿಜ ಭಾಗ್ಯ ಮೇಡಂ, ಈ ಜವಾಬ್ದಾರಿಗಳ ಮದ್ಯೆ ನಮ್ಮತನ ಉಳಿಸಿಕೊಂಡು ಚಲನಶೀಲತೆಗೆ ಸಾಕ್ಷಿ ಆಗುವುದೇ ಮಹಿಳೆಯ ಅಸ್ಮಿತೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

  3. ತುಂಬಾ ಸುಂದರ ಕವನ ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338

Leave a Reply

Back To Top