ವಿಶೇಷಲೇಖನ
ಸ್ವಾಭಿಮಾನದ ಬದುಕು
ಸುಲೋಚನಾ ಮಾಲಿಪಾಟೀಲ
ಹನ್ನೆರಡು ವರ್ಷದ ಮಹಾಂತೇಶ ಮನೆಯಲ್ಲಿ ಒಬ್ಬನೆ ಕುಳಿತು ತಂದೆ, ತಾಯಿ, ತಮ್ಮ, ತಂಗಿಯರ ಬರುವಿಕೆಯ ದಾರಿಯನ್ನು ಕಾಯುತ್ತಾ ಕುಳಿತಿದ್ದ. ಅವನಿಗೂ ತನ್ನ ತಮ್ಮ ತಂಗಿಯರ ಹಾಗೆ ಶಾಲೆಗೆ ಹೋಗಬೇಕೆಂಬ ಆಸೆ. ಆದರೆ ವಿಧಿಯ ಆಟಕ್ಕೆ ಎಲ್ಲರೂ ತಲೆ ಬಾಗಬೇಕಲ್ಲವೆ? ಪಾಪ ಮಹಾಂತೇಶ ಹುಟ್ಟು ಕುರುಡನಾಗಿದ್ದ. ಕುಟುಂಬದ ಬಡತನದ ಬವಣೆಯಲ್ಲಿ ಬೆಂದುಹೊಗಿದ್ದ. ಒಮ್ಮೊಮ್ಮೆ ತಾನು ಭೂಮಿಗೂ ಭಾರ, ಹೆತ್ತವರಿಗೂ ಭಾರ ಅಂತ ಅಂದುಕೊಳ್ಳುತ್ತಿದ್ದ. ತನ್ನ ಹಣೆಬರಹಕ್ಕೆ ಒಮ್ಮೊಮ್ಮೆ ಶಪಿಸುತ್ತ ರೋಧಿಸುತಲೂ ಇದ್ದ. ಮನೆಗೆ ಬಂದವರ ಮುಂದೆ ತಾನು ಶಾಲೆಗೆ ಹೋಗಬೇಕೆಂಬ ಮನದಾಸೆ ಹೇಳಿಕೊಂಡು ತನ್ನನ್ನು ಅಂಧಮಕ್ಕಳ ಶಾಲೆಗೆ ಸೇರಿಸಲು ಗೊಗೊರೆಯುತ್ತ ಅಳುತ್ತಿದ್ದ. ಇವರು ವಾಸಿಸುತ್ತಿದ್ದ ಊರು ರಾಯಚೂರು ಜಿಲ್ಲೆ ಲಿಂಗಸೂರ ತಾಲೂಕಿನ ಕಾಳಾಪುರಯೆಂಬ ಒಂದು ಹಳ್ಳಿಯಾಗಿತ್ತು. ಮಹಾಂತೇಶನ ತಂದೆ ತಾಯಿ ಕೂಡ ಮಗನಿಗೆ ತಮ್ಮ ಬಡತನದ ಪರಿಸ್ಥಿತಿಯ ಅರಿವು ಮಾಡಿ ಸಮಾಧಾನದಿಂದ ಪಡಿಸುತ್ತಿದ್ದರು. ಆದರೆ ಆತನ ಮನೆಯ ಸುತ್ತಮುತ್ತಲಿನ ಕೆಲವು ಜನರು ಅವನ ಆಸೆಗಳನ್ನು ಕೇಳಿ ಅಪಹಾಸ್ಯ ಮಾಡುತ್ತಿದ್ದರು. ಇನ್ನು ಕೆಲವರು ಧೈರ್ಯ ತುಂಬುತ್ತಿದ್ದರು. ಅಂತ ನಿಲುವು ಪರಿಸ್ಥಿತಿಯಲ್ಲಿ ಮುಂದೆ ಬಂದು ಸಹಾಯ ಮಾಡುವವರು ಯಾರು ಕಾಣದೇ ಇರುವಲ್ಲಿ, ಭಗವಂತನನ್ನು ಪ್ರಾರ್ಥಿಸುತ್ತಿದ್ದನು. ನನ್ನ ಮರುಗನ್ನು ಆಲಿಸು ದೇವರೆ, ನನ್ನನ್ನು ಕುರುಡನಾಗಿ ಹುಟ್ಟಿಸಿರುವುದಲ್ಲದೆ, ನನಗೆ ನನ್ನ ಮನದ ಇಚ್ಛೆಗಳನ್ನು ಕೈಗೂಡಿಸಿಕೊಳ್ಳಲು ದಾರಿ ತೋರಿಸುವದಿಲ್ಲವೇ? ನನ್ನಲ್ಲಿ ಆಸೆಗಳು ತುಂಬಿವೆ. ಅವು ಬತ್ತಿಹೋಗುವ ಮುಂಚೆ ಕಣ್ಣು ತೆರೆದು ಕರುಣಿಸು, ದಯತೋರಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದ, ದೇವರನ್ನು ಪ್ರತಿದಿನವು ಕೇಳುತ್ತಿದ್ದ. ಅವನು ಮಾತಾಡುವಲ್ಲಿ ಜಾಣನು, ಚಾಣಾಕ್ಷತೆಯುಳ್ಳವನು ಆಗಿದ್ದ. ಆಡುವ ಮಾತುಗಳ ಕಲೆಯಿಂದ ಸುತ್ತಮುತ್ತಲಿನ ಜನರ ಮನಸನ್ನು ಗೆಲ್ಲುತ್ತ ನಗಿಸುತ್ತಿದ್ದ. ಇದರಿಂದ ಮಹಾಂತೇಶನ ಬಗ್ಗೆ ಎಲ್ಲರಿಗೂ ಅನುಕಂಪ, ಅವನ ಬುದ್ಧಿಶಕ್ತಿಗೆ ಅವನಿಗೆ ಸಹಾಯ ಮಾಡುವ ಹಂಬಲ ಎಲ್ಲರಲ್ಲಿತ್ತು. ಆದರೆ ಅಲ್ಲಿರುವ ಸುತ್ತಮುತ್ತಲಿನ ಜನ ಮತ್ತು ಆತನ ಪಾಲಕರು ಮನೆ ಗದ್ದೆ, ಒಕ್ಕಲುತನ ಬಿಟ್ಟು ಹೊರಗಿನ ಪ್ರಪಂಚವನ್ನು ನೋಡದ ಕಾರಣ ಸುಮ್ಮನಿದ್ದರು.
ತಮ್ಮೂರಿನಲಿಯೇ ಮೂರನೇ ವರ್ಗದ ವರೆಗೆ ಕಲಿಯುವ ಅವಕಾಶ ಶಿಕ್ಷಣ ಸೇವೆಯ ಕಾರ್ಯಕರ್ತರಿಂದ ದೊರೆಯುತ್ತದೆ. ಬರೆಯಲು ಆಗದೆ ಇದ್ದರೂ ಶಿಕ್ಷಕರು ಹೇಳುವುದನ್ನೆಲ್ಲ ಕೇಳಿ ನೆನಪಿನಲ್ಲಟ್ಟು ಕೊಂಡು ಕಲಿಯುತ್ತಾನೆ. ಮಹಾಂತೇಶ ಬಗ್ಗೆ ಊರ ಪ್ರಮುಖರಿಗೆ ತಿಳಿದಾಗ ಅವನನ್ನು ಭೆಟ್ಟಿಯಾಗಿ ಮಾತನಾಡಿಸಿದಾಗ ಆತನ ಸ್ವಭಾವ, ಜಾಣತನ, ಊರಿನವರ ಬಾಯಿಂದ ಅವನ ಬಗ್ಗೆ ಹೊಗಳಿಕೆ ಕೇಳಿ ಸಹಾಯಮಾಡಲು ಮುಂದಾಗುತ್ತಾರೆ. ರಾಯಚೂರಿನಲ್ಲಿ ಇರುವ ವಿಕಲಚೇತನ (ಅಂಗವಿಕಲ) ಮಕ್ಕಳಿಗಾಗಿ ವಸತಿ ಮತ್ತು ಶಾಲೆಯ ವ್ಯವಸ್ಥೆ ಇರುವಲ್ಲಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸುತ್ತಾರೆ. ಇದನ್ನು ಕೇಳಿದ ಮಹಾಂತೇಶನಿಗೆ ಸಂತಸವೋ ಸಂತಸ. ತಾನೂ ದೊಡ್ಡ ಶಾಲೆಗೆ ಹೋಗ ಬಲ್ಲೆ, ತನ್ನ ತಮ್ಮ, ತಂಗಿಯರಂತೆ ಓದು ಬರಹ ಕಲಿಯ ಬಲ್ಲೆಯೆಂಬ ಆಸೆ ನನಸಾಗುವಂತೆ ಅನ್ನಿಸುತ್ತದೆ. ಮನೆಯವರಿಗಂತೂ ಹಬ್ಬದ ದಿನ ಆಚರಿಸಿದಂತಾಗುತ್ತದೆ. ಮುಂದೊಂದು ದಿನ ಜೂನ್ ಒಂದರಂದು ಎಲ್ಲರೂ ಸೇರಿ ಮಹಾಂತೇಶನನ್ನು ಕರೆದುಕೊಂಡು ರಾಯಚೂರಿನ ಅಂಧ ಮಕ್ಕಳ ಆಶ್ರಮ ಮತ್ತು ಶಾಲೆಗೆ ಹೋಗುತ್ತಾರೆ. ಅಲ್ಲಿರುವ ವ್ಯವಸ್ಥೆಯನ್ನು ಕಂಡು ತಂದೆ ತಾಯಿಗೂ ಸಮಾಧಾನ ಆಗುತ್ತದೆ. ಅಲ್ಲಿ ಎಲ್ಲಾ ಮಕ್ಕಳನ್ನು ಹೊಲಿಸಿದಾಗ ವಯಸ್ಸಿನಲ್ಲಿ ಈತ ಹಿರಿಯವನಾದ ಕಾರಣ ಸೇರಿಸಿಕೊಳ್ಳಲು ಚರ್ಚೆ ನಡೆಯುತ್ತದೆ. ಅಲ್ಲಿಯೇ ಮುಖ್ಯಾಧ್ಯಾಪಕರು ಆತನ ಓದುವ ಹಂಬಲ, ಮಾತಾಡುವ ಚಾಣಾಕ್ಷತನಕ್ಕೆ ಅವರು ಮತ್ತು ಶಿಕ್ಷಕ ವರ್ಗ ಆತನನ್ನು ವಿಧ್ಯಾರ್ಥಿಯನ್ನಾಗಿ ಸ್ವಿಕರಿಸಲು ಒಪ್ಪಿಕೊಳ್ಳುತ್ತಾರೆ. ಇದರಿಂದ ಎಲ್ಲರಿಗೂ ಒಂದು ರೀತಿಯ ಸಮಾಧಾನದೊಂದಿಗೆ ನಿಟ್ಟುಸಿರು ಬಿಟ್ಟಂತಾಗುತ್ತದೆ.
ಮಹಾಂತೇಶ ಹೊಸ ಶಾಲೆ, ಹೊಸ ಸಹಪಾಠಿಗಳು ಮತ್ತು ಗುರುಗಳೊಂದಿಗೆ ಬಹು ಬೇಗ ಹೊಂದಿಕೊಳ್ಳುತ್ತಾನೆ. ಅಲ್ಲದೆ ಕೆಲವು ದಿನಗಳಲ್ಲಿಯೇ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ, ತನ್ನ ಸಹಪಾಠಿಗಳಿಗೆ ಒಳ್ಳೆಯ ಸ್ನೇಹಿತನಾಗಿ ಕಂಡು ಬರುತ್ತಾನೆ. ಸರಿಯಾಗಿ ಚೂಟಿತನದಿಂದ ತನ್ನ ವಿದ್ಯಾರ್ಜನೆಯನ್ನು ಮುಂದುವರಿಸುತ್ತಾನೆ. ಅದು ಪ್ರಾಧಮಿಕ ಶಾಲೆಯಾದ ಕಾರಣ ಎಲ್ಲ ಮಕ್ಕಳಿಗೆ ಹಿರಿ ಅಣ್ಣನಂತೆ ಪ್ರೀತಿಸುತ್ತಿರುತ್ತಾನೆ. ಹೀಗೆಯೇ ನಾಲ್ಕು ವರ್ಷಗಳು ಹೇಗೆ ಊರಳಿ ಹೋದವೆಂಬುದು ಆತನಿಗೆ ಗೊತ್ತಾಗಲೆಯಿಲ್ಲ. ಎಲ್ಲರ ಮನಸನ್ನು ಗೆದ್ದ ಮಹಾಂತೇಶ ಏಳನೇಯ ತರಗತಿಯಲ್ಲಿ ಪ್ರಧಮ ಶ್ರೇಣಿಯಲ್ಲಿ ಉತ್ತಿರ್ಣನಾಗುತ್ತಾನೆ. ಮುಂದಿನ ಶಿಕ್ಷಣಕ್ಕೆ ರಾಯಚೂರಿನಲ್ಲಿ ವ್ಯವಸ್ಥೆ ಇರದ ಕಾರಣ ಆತನು ತನ್ನ ಊರಿಗೆ ಮರಳಿ ಬರಲೇ ಬೇಕಾಗುತ್ತದೆ. ಶಾಲೆಯನ್ನು ಬಿಟ್ಟು ಬರುವಾಗ ಎಲ್ಲಾ ಗುರುಗಳಲ್ಲಿ ವಿನಂತಿಸಿಕೊಳ್ಳುತ್ತಾನೆ. ನನಗೆ ಮುಂದಿನ ಶಿಕ್ಷಣ ಪಡೆಯಲು ಎಲ್ಲಿಯಾದರೂ ಅವಕಾಶಮಾಡಿಕೊಡಿ. ತಮ್ಮಲ್ಲಿ ಬೇಡಿಕೊಳ್ಳುವದೆನೆಂದರೆ ಯಾವುದೇ ಊರಾಗಲಿ, ಎಷ್ಟೇ ದೂರವಿರಲಿ ನಾನು ಹೋಗಿ ಕಲಿಯಲು ಸಿದ್ಧನಿದ್ದೆನೆ. ನಮ್ಮಂತಹ ಮಕ್ಕಳ ಸಲುವಾಗಿ ಪ್ರೌಢಶಾಲೆಕಂಡು ಬಂದಲ್ಲಿ ತಪ್ಪದೇ ತಿಳಿಸಿರೆಂದು ಹೇಳುತ್ತಾನೆ. ಎಲ್ಲ ಶಿಕ್ಷಕರ ವೃಂದ ಆತನಲ್ಲಿ ಧೈರ್ಯ ತುಂಬಿ ಸಹಾಯ ಮಾಡುವುದಾಗಿ ತಿಳಿಸಿ ಆತನನ್ನು ಬಿಳ್ಕೊಡುತ್ತಾರೆ. ಮರಳಿ ತನ್ನೂರಿಗೆ ಬಂದ ಮಹಾಂತೇಶನಿಗೆ ಒಂದೊಂದು ದಿನ ಕಳಿಯುವುದು ಬಹಳ ಕಷ್ಟವಾಗುತ್ತದೆ. ಬಹಳ ಬೇಸರವಾದಾಗ ಶಾಲೆಯಲ್ಲಿ ಕಲೆತ ಹಾಡುಗಳನ್ನು ಹಾಡುತ್ತ, ಶಾಲೆಯಲ್ಲಿ ಕಳೆದ ದಿನಗಳ ಮೆಲಕು ಹಾಕುತ್ತಾ, ಏ ದೇವರೆ ಇದೊಂದು ಬಾರಿ ನಾನು ಶಿಕ್ಷಣದಲ್ಲಿ ಮುಂದುವರಿಯಲು ಅವಕಾಶ ಮಾಡಿ ಕೊಟ್ಟರೆ ಈ ಸಮಾಜಕ್ಕೆ ನಾನು ಏನೆಂಬುದನ್ನು ತೋರಿಸುತ್ತೆನೆಯಂತ ಮನದಲ್ಲಿಯೇ ಬೇಡಿಕೊಳ್ಳುತ್ತಿರುತ್ತಾನೆ. ಮಹಾಂತೇಶನ ಸಹನೆ, ಶಾಂತಿ ಗುಣ ಪರಿಕ್ಷಿಸಿದ ದೇವರು ಆತನ ಮೇಲೆ ಕರುಣೆ ತೋರಿಸುತ್ತಾನೆ. ತಾನು ಕಲಿತ ಪ್ರಾಧಮಿಕ ಶಾಲೆಯ ಮುಖ್ಯಾಧ್ಯಾಪಕ ಸಹಾಯದಿಂದ ಎಂಟು ಮತ್ತು ಒಂಬತ್ತನೇಯ ತರಗತಿಯ ವರೆಗೆ ಬಿದರಿ ಜಿಲ್ಲೆ ಹುಮನಾಬಾದ ತಾಲೂಕಿನಲ್ಲಿ ಕಲಿಯುತ್ತಾನೆ. ಅಲ್ಲಿ ಹತ್ತನೆ ತರಗತಿಯ ಇಲ್ಲದ ಕಾರಣ ತನ್ನ ಗುರುಗಳ ಮತ್ತು ಸ್ನೇಹಿತರ ಸಹಾಯದಿಂದ ಧಾರವಾಡದ ಸಮರ್ಧನ ಅಂಗವಿಕಲರ ಸಂಸ್ಥೆಯ ಶಾಲೆಯಲ್ಲಿ ಹತ್ತನೇಯ ತರಿಗತಿ ಕಲಿಯುವ ಅವಕಾಶ ಸಿಗುತ್ತದೆ. ತನ್ನ ಪಾಲಿಗೆ ದೇವರಂತೆ ಬಂದ ಗುರುಗಳನ್ನು ಅಪ್ಪಿಕೊಂಡು ಅವರು ಪಾದಗಳಿಗೆ ತನ್ನ ಕಣ್ಣಿರಿನ ಅಭಿಷೇಕ ಮಾಡುತ್ತಾನೆ. ಮುಖಾಧ್ಯಾಪಕರು ಮಹಾಂತೇಶ ನನ್ನು ಆಶಿರ್ವದಿಸಿ, ಮುಂದಿನ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಲು ಹೇಳುತ್ತಾರೆ. ತನಗೆ ಸಿಕ್ಕ ಅವಕಾಶ ಸಂಪೂರ್ಣ ಪ್ರತಿಫಲಿಸುವಂತೆ ಕಷ್ಟಪಟ್ಟು ಅಧ್ಯಯನ ಮಾಡುತ್ತಾನೆ. ಎಲ್ಲ ಶಿಕ್ಷಕರ ಪ್ರೀತಿಯ ವಿದ್ಯಾರ್ಥಿಯಾಗಿ, ಎಲ್ಲ ಸಹಪಾಠಿಗಳು ತನ್ನ ಬಂಧುಗಳೆಂದುಕೊಂಡು ಅವರಲ್ಲಿ ಸ್ನೇಹ, ವಿಶ್ವಾಸ, ಪ್ರೀತಿಬೆಳೆಸಿಕೊಳ್ಳುತ್ತ ವಿದ್ಯಾಭ್ಯಾಸ ಮಾಡುತ್ತಾನೆ. ಬಹಳ ಜಾಣನಾದ, ಅಪಾರ ನೆನಪಿನ ಶಿಕ್ಷೆಯುಳ್ಳವನಾದ ಮಹಾಂತೇಶನಿಗೆ ಕೆಲವು ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅವಕಾಶ ದೊರೆತಾಗ ಹಣದ ಕೊರತೆಯು ಉಂಟಾಗುತ್ತದೆ. ಬೇರೆ ಬೇರೆ ಊರಿಗೆ ಹೋಗಿ ಸ್ಪರ್ಧೆ ನಡೆಸಲು ಹಣದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ತನ್ನ ತಂದೆ ತಾಯಿಗೂ ತಿಳಿಸಿದೆ ತನಗೆ ಸಾಧ್ಯವಾಗುವ ಕೆಲಸಗಳನ್ನು ಶಾಲೆಯಲ್ಲಿ ಮಾಡುತ್ತಾ, ಚಿಕ್ಕ ಮಕ್ಕಳಿಗೆ ಅಭ್ಯಾಸ ತೆಗೆದುಕೊಳ್ಳುವುದರ ಮೂಲಕ ಹಣ ಕ್ರೂಢಿಕರಿಸುತ್ತಾನೆ. ಆ ಹಣವನ್ನು ಸ್ಪರ್ಧಿಸಿಸಲು ಉಪಯೋಗಿಸಿ ಸ್ಪರ್ಧೆ ಗೆಲ್ಲುವುದರ ಮೂಲಕ ಮತ್ತಷ್ಟು ಗುರುಗಳ ಪ್ರೀತಿಗೆ ಪಾತ್ರನಾಗುತ್ತಾನೆ. ಇದರಿಂದ ಆತನಲ್ಲಿ ಆತ್ಮವಿಶ್ವಾಸ, ಮನೋಬಲ ವೃದ್ಧಿಯಾಗುತ್ತದೆ. ತನ್ನ ಎಸ್ ಎಸ್ ಎಲ್ ಸಿ ಪ್ರಧಮ ಶ್ರೇಣಿಯಲ್ಲಿ ಉತ್ತಿರ್ಣನಾಗಿ ಅಲ್ಲಿದ್ದ ಗುರುಗಳ, ಮೇಲಧಿಕಾರಿಗಳ ಸಹಾಯದಿಂದ ಪದವಿಯನ್ನು ಕಲಿಯಲು ಕಾಲೇಜಿಗೆ ಹೆಜ್ಜೆಯಿಡುತ್ತಾನೆ. ಆತನಿಗೆ ತಾಂತ್ರಿಕ ವಿಜ್ಞಾನದಲ್ಲಿ ಬಹಳ ಆಸಕ್ತಯಿರುವುದರ ಮೂಲಕ ತನ್ನ ವಿಕಲಚೇತನ ಸಹಪಾಠಿ ಗೆಳೆಯರ ಜೊತೆಜೊತೆಗೆ ತನ್ನ ಪದವಿ ಮುಗಿಸಿ ಕೊಳ್ಳುವುದಲ್ಲದೆ ತಾನು ಕಲಿತ ಸಮರ್ಧನ ವಿಕಲಚೇತನರ ಸಂಸ್ಥೆಯಲ್ಲಿ ಶಿಕ್ಷನಾಗುತ್ತಾನೆ. ತನ್ನ ಶಕ್ತಿ ಸಾಮರ್ಥ್ಯದಿಂದ ತನ್ನ ಆಸೆಗಳನ್ನು ಪೂರೈಸಿಕೊಂಡ ಮಹಾಂತೇಶನನ್ನು ಕಂಡ ಆತನ ತಂದೆ ತಾಯಿ ಬಹಳ ಸಂತಸಪಡುತ್ತಾರೆ. ತನ್ನಂತೆ ಬಡತನದ ಜೀವನದಲ್ಲಿ ಕಷ್ಟ, ನೋವು, ವೇದನೆಗಳನ್ನು ಅನುಭವಿಸುವ ದಿನ ಯಾವ ಬಡಮಕ್ಕಳಿಗೂ ಬರದಿರಲೆಂದು ವಿದ್ಯಾಭ್ಯಾಸದಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡುತ್ತ, ಸ್ಪೂರ್ತಿ ತುಂಬುತ್ತಾ ತನ್ನಂತೆ ಆ ಮಕ್ಕಳು ಮುಂದೆ ಬರಲೆಂಬ ಅಪೆಕ್ಷೆಯೊಂದಿಗೆ ಸಹಕರಿಸುತ್ತಾನೆ. ಅವನಲ್ಲಿರುವ ಅಗಾಧ ಕಲೆಗಳು ಈ ಸಂಸ್ಥೆಯ ಮುಖಾಂತರ ಹೊರಚಿಮ್ಮುತ್ತವೆ. ಜಾನಪದ ಹಾಡುಗಳು ತಾನೆ ಸ್ವಂತ ರಚಿಸಿ ಹಾಡುತ್ತಿರುತ್ತಾನೆ. ಒಳ್ಳೆಯ ಭಾಷಣ ಮಾಡುವ ಕಲೆ, ಮಾತಾಡುವ ಕಲೆ, ಶರಣ, ಸಂತ, ಸೂಫಿ,ದಾಸರ ಹಾಡುಗಳನ್ನು ಕೆಳುವವರ ಮೈನೆವೆರೆಳುವಂತೆ ಸುಶ್ರಾವ್ಯವಾಗಿ ಹಾಡುತ್ತಾನೆ. ಮಾತನಾಡುವುದರಲ್ಲಿ, ಭಾಷಣದಲ್ಲಿ ಬೇರೆ ಯಾರೇ ಆಗಿರಲಿ ಆತನನ್ನು ಮಿರಿಸುವುದು ಸ್ವಲ್ಪ ಕಷ್ಟದ ಕೆಲಸ. ಅಲ್ಲದೆ ಚೆಸ್ ಮತ್ತು ಕ್ರಿಕೆಟ್ ಬಹಳ ಚೆನ್ನಾಗಿ ಆಡುವ ಹವ್ಯಾಸ ಬೆಳೆಸಿಕೊಂಡಿದ್ದಾನೆ. ಕಾರ್ಯಕ್ರಮಗಳನ್ನು ನಿರೂಪಕನಾಗಿ (ಆಂಕರ್ ) ನಡೆಸಿಕೊಡುತ್ತಾನೆ. ಇದರಿಂದ ಊರಿಂದೂರಿಗೆ ಕರೆದುಕೊಂಡು ಹೋಗಿ ಮಹಾಂತೇಶನಿಂದ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿಸಲಾಗುತ್ತದೆ. ಆತನ ಒಳ್ಳೆಯತನವೇ ಆತನಿಗೆ ದಾರಿದೀಪವಾಗಿದೆ. ಸರಳ ಸಜ್ಜನಿಕೆಯ ಗುಣ, ಪ್ರೀತಿ ವಾತ್ಸಲ್ಯ ತುಂಬಿದ ಮನ, ಅವನಿಗೆ ಆತ್ಮಿಯತೆಯಿಂದ ಮಾತಾಡಿಸುವ ಜನರಿಂದ, ಒಳ್ಳೆಯ ತಂದೆ ತಾಯಿಯ ಮಗನಾಗಿ, ಗುರುವೃಂದದಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿ, ತನ್ನ ಸಹಪಾಠಿಗಳೊಂದಿಗೆ ಒಳ್ಳೆಯ ಸ್ನೇಹಿತನಾಗಿ, ತನ್ನಂತೆ ಕಲಿಯುವ ಮಕ್ಕಳಿಗೆ ಸಮರ್ಥಿಸುವ ನಾಯಕನಾಗಿ ಹೊರಹೊಮ್ಮಿದಾನೆ.
ಶರೀರದ ಎಲ್ಲ ಅಂಗಾಂಗಗಳು ಸರಿಯಾಗಿದ್ದರೂ ತಂದೆತಾಯಂದಿರ, ಗುರುಗಳ ಮಾತು ಕೆಳದಿರುವ ಮಕ್ಕಳಿದ್ದಾರೆ. ಸರಿಯಾಗಿ ಶಿಕ್ಷಣ ಕಲಿಯದೆ ಜೀವನ ವ್ಯರ್ಥಮಾಡಿಕೊಳ್ಳುವ ಯುವ ಪಿಳಿಗೆಗಳಿಗೆ, ಪುಂಡಪೊಕರಿಗಳಿಗೆ ಪಾಠ ಕಲಿಸುವ ಮಹಾಂತೇಶ ಒಬ್ಬ ಆದರ್ಶ ವ್ಯಕ್ತಿ ಅಲ್ಲದೆ ಒಬ್ಬ ಸಾಧಕನು ಹೌದು. ಒಬ್ಬ ಸ್ವಾವಲಂಬಿ ಯುವಕನಾಗಿ, ಸಮಾಜದ ಸೇವಕನಾಗಿ ಎಲ್ಲೆಡೆ ಗುರುತಿಸಿಕೊಂಡಿದ್ದಾನೆ. ಆತನೊಬ್ಬ ಪರಿಶ್ರಮಿ, ಛಲಗಾರ ಹಿಡಿದ ಕೆಲಸ ಬಿಡದೆ ಸಾಧಿಸುವವನೆಂದರು ತಪ್ಪಿಲ್ಲ. ತನ್ನ ಮಾತಿನಲ್ಲಿಯೇ ಎಲ್ಲರ ಹೃದಯ ಗೆದ್ದು ಪ್ರೀತಿ ಸಂಪಾದಿಸುವ ವ್ಯಕ್ತಿ. ತನ್ನ ಜೀವನದಲ್ಲಿ ಸ್ವಾರ್ಧಿಯಾಗದೆ, ನಿಸ್ವಾರ್ಥಿಯಾಗಿ ಹಂಚಿ, ಹರವಿ ಬದುಕುವ ಸ್ನೇಹಜೀವಿ. ಮಹಾಂತೇಶನಂತಹ ವ್ಯಕ್ತಿ ಅಂತರಂಗದ ದಿವ್ಯದೃಷ್ಟಿಯೊಳಗೆ ಕಾಣುವ ಲೋಕವನ್ನು ಎತ್ತಿ ತೋರಿಸುವವನು. ಇಂತಹವರು ಒಳಗಣ್ಣು, ಅಂತರಂಗದ ಕಣ್ಣು, ನಾವು ಯಾರಿಗಿಂತಲೂ ಕಡಿಮೆಯಿಲ್ಲ. ನಮ್ಮಲ್ಲಿಯೂ ನಿಮಗಿಂತ ಹೆಚ್ಚಿನ ಸಾಮರ್ಥ್ಯ ದೇವರು ತುಂಬಿ ಕಳುಹಿಸಿದ್ದಾನೆ. ನಮಗೆ ಅವಕಾಶಗಳು ಬೇಕು ಅಷ್ಟೇ. ಸಾಮಾನ್ಯ ಜನರಿಗೆ ನಮ್ಮ ಪ್ರಾಭಲ್ಯ ಗೊತ್ತಾಗುವುದಿಲ್ಲ. ನಮ್ಮಂತೆ ಶ್ರಮಜೀವಿ, ಛಲಗಾರ, ಸಮಾನ ಭಾವನೆಯುಳ್ಳವರಿಗೆ, ಸಮಾಜದ ಹಿತ ಬಯಸುವವರಿಗೆ ಗೊತ್ತಾಗುತ್ತದೆಂದು ಅನ್ನುವ ಮಹಾಂತೇಶನನ್ನು ಪ್ರತ್ಯಕ್ಷ ಸಂಪರ್ಕಿಸಿದಾಗ ತಿಳಿಯುತ್ತದೆ. ಇಂತಹ ಮಕ್ಕಳನ್ನು ಪಡೆದ ತಂದೆ ತಾಯಂದಿರು ಧನ್ಯ. ಆತನ ಪಾಲಕರು, ಷೋಷಕರಲ್ಲದೆ, ಊರ ಜನರ ಬಾಯಿಂದಲೇ ಮಹಾಂತೇಶನ ಬಗ್ಗೆ ಗೌರವದ ಮಾತು ಕೇಳಬರುತ್ತವೆ. ಆತನ ಕುಟುಂಬದವರ ಬಡತನ ಆತನಿಂದಲೇ ನೀಗಿದಂತಾಗಿದೆ. ನಾವೆಲ್ಲರೂ ಸಹ ಇಂತಹ ಮಕ್ಕಳಿಗೆ ಸಹಾಯ, ಸಹಕಾರ, ಪ್ರೊತ್ಸಾಹ ನೀಡುತ್ತ ಆಶಿರ್ವದಿಸೋಣ.ಅಲ್ಲವೇ.
Very inspiring story. Thanks for sharing.