ಕಾವ್ಯ ಸಂಗಾತಿ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಘಟ ಸರ್ಪಗಳು ಕಾಲಲಿ ಹರದಾಡುತಿವೆ ಹೇಗೆ ಜೀವಿಸಲಿ
ದ್ವೇಷದಿ ಬಣ್ಣದ ಬಾವುಟಗಳು ಉರಿಯುತಿವೆ ಹೇಗೆ ಜೀವಿಸಲಿ
ಋತುಗಳ ಮುನಿಸಿನಲಿ ಧಾರಿಣಿಯ ಒಡಲು ಬಿರಿದು ಬಿಕ್ಕುತಿದೆ
ನೆಮ್ಮದಿಯ ನಿಲಯಗಳು ನಿತ್ಯ ಕುಸಿಯುತಿವೆ ಹೇಗೆ ಜೀವಿಸಲಿ
ನಲಿಯುವ ಹಕ್ಕಿಗಳ ರೆಕ್ಕೆ ಕತ್ತರಿಸಿ ಗೆಜ್ಜೆ ಕಟ್ಟಿ ಬಂಧಿಸಿದರು
ಬಿಳಿ ಪಾರಿವಾಳಗಳು ಗೂಡಲಿ ನರಳುತಿವೆ ಹೇಗೆ ಜೀವಿಸಲಿ
ಪಂಚಭೂತದಲಿ ನಿಮಿ೯ತವಾದ ದೇಹ ಮಣ್ಣಲಿ ಸೇರಿತು
ಪ್ರೇತಾತ್ಮಗಳು ಪಿಂಡಕೆ ಕಚ್ಚಾಡುತಿವೆ ಹೇಗೆ ಜೀವಿಸಲಿ
ಹಗಲಿರುಳು ಬುವಿಯ ಜೀವಿಗಳು ತಾಮಸದ ಮುಸುಕು ಹೊದ್ದಿವೆ
ಕಾಣದ ಕೈಗಳು ” ಪ್ರಭೆ” ನಂದಿಸುತಿವೆ ಹೇಗೆ ಜೀವಿಸಲಿ-