ಸೊಕ್ಕು ಎಸ್. ವಿ ಹೆಗಡೆ ಕವಿತೆ.

ಕಾವ್ಯ ಸಂಗಾತಿ

ಸೊಕ್ಕು

ಎಸ್. ವಿ ಹೆಗಡೆ

ಎದೆಯಾಳದಲ್ಲೆಲ್ಲೊ
ಅಡಗಿ ಕುಳಿತಿದೆ ವೇಷ ಮರೆಸಿ
ಕಂಡವರ ಕಣ್ಣಿಗೆ ಬೆಣ್ಣೆಯಾಗಿ
ತುಳಿದಾಗಲೆಲ್ಲಾ ಹೆಡೆಯೆತ್ತುವ
ವಿಷದ ಹಾವಾಗಿ ಬಿಸಿ ಉಸುರು
ಬಿಡುತ್ತ ತನ್ನದೆನ್ನುವ
ಹುತ್ತದಲಿ ಬೀಡು ಬಿಟ್ಟಿದೆ ಈ ಸೊಕ್ಕು॥

ಸರಿ ತಪ್ಪಿಗೆ ತನಗೆ ತಾನೆ ಸಾಕ್ಶಿ
ಹೇಳಿ ಸಮಾಧಾನ ಮಾಡಿ
ಹೊಗಳಿದವರ ಸಮ್ಮಾನ ಮಾಡಿ
ಬೆಟ್ಟು ಮಾಡಿದವರ ಜೊತೆ
ಸಾಶ್ವತ ಹಗೆತನ ಮಾಡಿ
ದ್ವೇಷದ ಹೊಗೆಯಲ್ಲಿ
ತನ್ನನ್ನೆ ತಾನು ಆಹುತಿ ಮಾಡುತಿದೆ॥

ಇಂದೊ ನಾಳೆಯೊ ಎನ್ನುವ
ಮರೆತು ಹೋಗುವ ಜೀವದ
ಜೊತೆಯಾಗಿ ಸಾಗುವ
ಕೊನೆಗೆ ಸೊರಗಿ ಬಾಡಿ
ಬೇಡದ ವಸ್ತುವಾಗಿ ನೆಲ
ಕಚ್ಚುವ ಮುನ್ನ ಹುತ್ತವಡೆದು
ಸೊಕ್ಕಿನ ಸೊಕ್ಕು ಮುರಿದು
ಕಿತ್ತೊಗೆಯುವದು ವಾಸಿ ॥


Leave a Reply

Back To Top