ಅಂಕಣ ಸಂಗಾತಿ
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -6
ಭಾರತವನ್ನು ಹಸಿರಾಗಿಸೋಣ
ಭಾರತವನ್ನು ಹಸಿರಾಗಿಸೋಣ
ಒಂದಿಷ್ಟು ಕಾವ್ಯಾತ್ಮಕವಾಗಿ ಬರೆದರೆ ಹೇಗೆ? ಯಾವಾಗಲೂ ಸೀರಿಯಸ್ ಆದ ಪ್ರಚಲಿತ ವಿಷಯಗಳೇ ಏಕೆ ಅಲ್ವಾ? ನಾ ನೋಡಿದ ಆ ಮರ ..ಇದೊಂದು ವಿಷಯ. ಎಲ್ಲರೂ ಪ್ರತಿನಿತ್ಯ ಮರಗಳನ್ನು ನೋಡುವುದಿಲ್ಲವೇ? ನೋಡುತ್ತೇವೆ. ಅದರಲ್ಲಿ ಏನು ಬಂತು ಸ್ಪೆಷಲ್ ಅಂದರೆ ಕೇರಳಕ್ಕೆ ಹೋಗಿ ಜಲಾವೃತ ಕಾಡನ್ನು ನೋಡುವುದಕ್ಕೂ, ಹಿಮಾಲಯದ ತಪ್ಪಲಿನ ಜಾಗದಲ್ಲಿ ಐಸನ್ನು ತನ್ನ ಮೇಲೆ ಹೊತ್ತು ನಿಂತ ಕೊನಿಫೆರಸ್ ಮರಗಳಿಗೂ, ಮಾವಿನ ಮರಕ್ಕೆ ಮತ್ತೆ ಹಲಸಿನ ಮರಕ್ಕೂ ವ್ಯತ್ಯಾಸ ಇಲ್ಲವೇ? ಜೊತೆಗೆ ಅದರ ಹಸಿರು ಮಿಶ್ರಿತ ವಿವಿಧ ಬಣ್ಣದ ತಾವೇ ಆಹಾರ ತಯಾರಿಸಿ, ಆಮ್ಲಜನಕ ಬಿಡುಗಡೆ ಮಾಡಿ, ನಾವು ಹೊರ ಬಿಟ್ಟ ಇಂಗಾಲದ ಡೈ ಆಕ್ಸೈಡ್ ನ್ನೂ ಒಳ ಸೇರಿಸಿಕೊಂಡು ಸರ್ವ ಪ್ರಾಣಿಗಳಿಗೆ ಬೇಕಾದ ಆಮ್ಲಜನಕ ತಯಾರಿಕೆ ಹಗಲಿನಲ್ಲಿಯೆ ಮಾಡಿ ಕೊಡುವ ಏಕೈಕ ಜೀವಿಗಳು ಮರಗಳು. ವೈಜ್ಞಾನಿಕವಾಗಿ ಹೀಗಾದರೆ, ಕಾವ್ಯಾತ್ಮಕವಾಗಿ ನಮ್ಮ ಗಿಡ ಮರಗಳು ನಮ್ಮನ್ನು ರಕ್ಷಿಸುವ ದೇವತೆಗಳು. ದೇವರ ಆರಾಧನೆ ಮಾಡುವ ಬದಲು ಗಿಡ ಮರಗಳನ್ನು ಬೆಳೆಸಿದರೆ ಸಾಕು, ಮಕ್ಕಳನ್ನು ಸಾಕುವ ಬದಲು ಗಿಡ ಮರಗಳನ್ನು ಸಾಕಿದರೆ ಪ್ರಶಸ್ತಿ ಆದ್ರೂ ತಂದು ಕೊಡುತ್ತವೆ. ಆದರೆ ಕೆಲವು ಮಕ್ಕಳು ಆಸ್ತಿ, ದುಡ್ಡಿಗಾಗಿ ತಮ್ಮ ಹೆತ್ತವರನ್ನು ದೂರ ಮಾಡಿ, ವೃದ್ಧಾಶ್ರಮಕ್ಕೆ ಹಾಕಿ ಬಿಡುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಸಾಲು ಮರದ ತಿಮ್ಮಕ್ಕ ಮಾದರಿ, ನಾವು ಗಿಡ ಮರಗಳನ್ನು ಬೆಳೆಸಿದರೆ ಅವು ನಮ್ಮ ನು ಬೆಳೆಸುತ್ತವೆ ಎಂಬ ಮಾತಿಗೆ.
ಗಿಡ ನೋಡಲು ಚಿಕ್ಕದಾದರೂ ಅದರ ಸಹಾಯ ಬಹಳವೇ ಇದೆ. ಚಿಗುರು, ಕಾಂಡ, ಬೇರು, ಎಲೆ, ಹೂ, ಕಾಯಿ, ಹಣ್ಣು, ಬೀಜ , ತಿರುಳು ….ಯಾವ ಭಾಗವನ್ನು ಬಿಟ್ಟಿದ್ದೇವೆ ನಾವು ಹೇಳಿ? ಎಲ್ಲಾ ಭಾಗಗಳ ಬಳಕೆ! ಬಿದಿರು, ಕಬ್ಬಿನ ಹುಲ್ಲು ಗಿಡಗಳಿಂದ ಹಿಡಿದು, ಗರಿಕೆ ಹುಲ್ಲಿನ ಜ್ಯೂಸ್, ಚೆಕ್ಕೆಯ ಕಷಾಯ, ಹೂವುಗಳ ಮದ್ದು, ತರಕಾರಿಯಾಗಿ, ಪೂಜೆಗೆ, ತಿನ್ನಲು, ಹಣ್ಣುಗಳ ಬಳಕೆ ಇಲ್ಲದೆ ಬದುಕು ಸಾಧ್ಯವೇ? ಇನ್ನೂ ನಾರು, ಬೇರು, ಕಾಂಡ, ಚಿಗುರು ಎಲ್ಲವೂ ಬೇಕಲ್ಲವೇ ನಮಗೆ! ಮಿತಿ ಮೀರಿದ ಜನಸಂಖ್ಯೆಗೆ ಸಸ್ಯಗಳು ಹೆಚ್ಚೇ ಬೇಕು. ಕಾರಣ ಅವು ನಮ್ಮ ಹೊಟ್ಟೆಯನ್ನು ತುಂಬುವುದರ ಜೊತೆಗೆ ಶ್ವಾಸಕೋಶದಲ್ಲಿ ಕೂಡಾ ಗಾಳಿ ತುಂಬುವ ಕಾರ್ಯ ಮಾದ ಬೇಕು. ಪರಿಸರ ಸ್ವಚ್ಚವಾಗಿ, ಸಮತುಕವಾಗಿ ಇಡಬೇಕು, ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಬೇಕು.
ಇಷ್ಟೇ ಸಸ್ಯಗಳ ಕಾರ್ಯವಲ್ಲ. ವಾತಾವರಣದ ತಾಪಮಾನವನ್ನು ಕಡಿಮೆ ಮಾಡುವುದು, ಎಲ್ಲಾ ಪ್ರದೇಶದಲ್ಲಿ ಕಾಲ ಕಾಲಕ್ಕೆ ಮಳೆ ಬರುವ ಹಾಗೆ ಮೋಡವನ್ನು ತಡೆದು ಮಳೆ ಸುರಿಸಿ, ಗಿಡ ಮರಗಳ ಅಸ್ತಿತ್ವವನ್ನು ಉಳಿಸಿ ಕೊಳ್ಳುವುದು. ಸೂರ್ಯನ ಪ್ರಖರ ಬೆಳಕಿಗೆ ತಂಪಿನ ನೆರಳು ನೀಡುವುದು. ರಸ್ತೆಗೆ ಅಡ್ಡವಾಗಿ ರಸ್ತೆ ಬದಿಯಲ್ಲಿ ಇದ್ದರೆ ರಸ್ತೆ ಅಗಲೀಕರಣದ ಸಮಯದಲ್ಲಿ ತಮ್ಮ ಪ್ರಾಣ ಕೊಡುವುದು. ಸತ್ತವರನ್ನು ಸುಡಲು, ಇದ್ದವರ ಊಟಕ್ಕೆ ಕಟ್ಟಿಗೆಯಾಗಲು ಸಾಯಲು ಯಾವ ಕಾಲಕ್ಕೂ ಸಿದ್ಧನಾಗಿ ಇರುವುದು! ಇದು ಮಾನವರು ಮಾಡುವ ಕುಹಕ ಕಾರ್ಯಗಳೇ ಅಲ್ಲವೇ?
ಗಿಡ ಮರ, ಹಸಿರು ಪರಿಸರ, ಗುಡ್ಡ ಬೆಟ್ಟ ಉಳಿಸಿ ಬೆಳೆಸಿ ಎಂಬ ಕೂಗು ಮಾತ್ರ ಕೇಳುತ್ತಿದೆ ಸರ್ವ ಕಡೆ. ವರ್ಷದ ಒಂದು ದಿನ ವನ ಮಹೋತ್ಸವ ಆಚರಿಸಿ ಆ ದಿನ ಗಿಡವನ್ನು ನೆಡಲಾಗುತ್ತದೆ ಮತ್ತು ಪರಿಸರವನ್ನೂ ಕೂಡಾ ಹೊಗಳುತ್ತಾರೆ. ಮತ್ತೆ ಮರುದಿನ ನೆಟ್ಟ ಗಿಡಕ್ಕೆ ನೀರು ಹಾಕುವವರೂ ಇಲ್ಲ ಅಲ್ಲಿ. ಪ್ರತಿ ವರ್ಷ ವನ ಮಹೋತ್ಸವದ ದಿನ ನೆಟ್ಟ ಗಿಡಗಳೆಲ್ಲ ಬದುಕಿದ್ದಿದ್ದರೆ ಇಂದು ಪರಿಸರ ಮಾಲಿನ್ಯ ಆಗುತ್ತಿರಲಿಲ್ಲ. ಅಲ್ಲದೆ ಪ್ರತಿಯೊಬ್ಬರ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟರು ಕೂಡಾ ಭಾರತದಲ್ಲಿ ಕನಿಷ್ಠ ಪಕ್ಷ ನೂರ ಐವತ್ತು ಕೋಟಿ ಹೊಸ ಗಿಡಗಳು ಬೆಳೆಯುತ್ತವೆ.
ಸಾಹಿತ್ಯ, ಬರವಣಿಗೆ, ಭಾಷಣ, ಹೊರತುಪಡಿಸಿ ಎಷ್ಟು ಗಿಡಗಳನ್ನು ನಾನು ನೆಟ್ಟು ಬೆಳೆಸುತ್ತಿದ್ದೇನೆ ಅದರಲ್ಲಿ ಯಾವ ಯಾವ ವರ್ಷ ನೆಟ್ಟ ಗಿಡಗಳು ಎಷ್ಟು, ಫಲ ನೀಡುವ ಗಿಡಗಳು ಎಷ್ಟು ಇತ್ಯಾದಿ ಲೆಕ್ಕ ಹಾಕಿ ಅತಿ ಹೆಚ್ಚು ಗಿಡ ನೆಟ್ಟವನು ಮತ್ತು ಅವುಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಮನುಜ ನಿಜವಾದ ಸಿರಿವಂತ ಅಲ್ಲವೇ?
ಈ ಪದ್ಮ ಭೂಷಣ, ಕರ್ನಾಟಕ ರತ್ನ ಪ್ರಶಸ್ತಿಗಳು ಇರುವ ಹಾಗೆ ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಗಿಡ ಮರ ನೆಟ್ಟು ಬೆಳೆಸುತ್ತಿರುವವರಿಗೂ ಒಂದು ಪ್ರಶಸ್ತಿ ಕೊಡಬೇಕು. ದುಡ್ಡು ಕೊಟ್ಟು ಪಡೆಯಲು ಸಾಧ್ಯ ಆಗದು ಇದು. ಕಾರಣ ಅವರು ನೆಟ್ಟ ಮರವನ್ನು ತೋರಿಸಬೇಕು ಅಲ್ಲವೇ? ಆಡಳಿತ ಪಕ್ಷ ಅದು ಯಾವುದೋ ಸಾಧನೆಗೆ ಯಾರಿಗೋ ಪ್ರಶಸ್ತಿ ನೀಡುವ ಬದಲು ಹೆಚ್ಚು ಹೆಚ್ಚು ಗಿಡ ಮರ ನೆಟ್ಟು ಅದನ್ನು ಪೋಷಿಸುವ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ ಅವರಿಗೆ ಮೇಲಿನ ಸ್ತರದ ವರೆಗೆ ಪ್ರಶಸ್ತಿ ಕೊಟ್ಟರೆ ಅದೆಷ್ಟೋ ಜನ ಭಾರತದಲ್ಲಿ ಪರಿಸರವನ್ನು ಬೆಳೆಸಲು ಪಣ ತೊಡುವುದು ಕಂಡು ಬರಬಹುದು. ಅದು ಪ್ರಶಸ್ತಿಗಾಗಿ ಬೆಳೆದರೂ ಸಮಾಜಕ್ಕೆ ಉಪಯೋಗವೇ ಅಲ್ಲವೇ? ಅದರಲ್ಲಿ ಸಂಘ ಸಂಸ್ಥೆಗಳಿಗೂ ಬೇರೆ ಪ್ರಶಸ್ತಿ ಇದ್ದರೆ ಗಿಡ ಮರದ ಹಸಿರು ಮತ್ತೆ ಹೆಚ್ಚಾಗಬಹುದು. ಟೆರೇಸ್ ಮೇಲಿನ ಗಿಡಗಳೂ ಹೆಚ್ಚಾದಾವು! ಮರಗಳಿಗೇ ಬೇರೆ ಪ್ರಶಸ್ತಿ ಆದರೆ ಮರಗಳ ಸಂಖ್ಯೆಯೂ ಹೆಚ್ಚಾದೀತು!
ಒಟ್ಟಾರೆ ಸಮಾಜ, ಆಡಳಿತ ಪಕ್ಷ, ಜನರ ಮನಸ್ಸುಗಳು ಒಂದಾಗಿ ಮನಗಳು ನಿಷ್ಕಲ್ಮಶವಾಗಿದ್ದರೆ, ಜಾತಿ ಬೇಧ ರಾಜಕೀಯ ಮರೆತು ಗಿಡ ಮರ ಬೆಳೆಸುವತ್ತ ಜನ ತಮ್ಮ ಮನಸ್ಸು ಹರಿಸಿದರೆ ಭಾರತವನ್ನು ಹಸಿರಾಗಿಸುವ ಕನಸು ನನಸಾಗಲು ಸಾಧ್ಯ ಇಲ್ಲವೇ? ನೀವೇನಂತೀರಿ?
ಹನಿಬಿಂದು
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154