ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಹೊಸಗನ್ನಡ ಪ್ರಬಂಧ ಸಂಕಲನ

ಸಂಪಾದಕರು ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪ್ರಕಾಶಕರು ಸಾಹಿತ್ಯ ಅಕಾಡೆಮಿ

ಮೊದಲ ಮುದ್ರಣ  ೧೯೬೧

ದ್ವಿತೀಯ ಮುದ್ರಣ ೨೦೧೯

ಬೆಲೆ  ರೂ ೧೯೫/-

30 ಪ್ರಸಿದ್ಧ ಲೇಖಕರಿಂದ ಬರೆಯಲ್ಪಟ್ಟ ಪ್ರಬಂಧಗಳ ಸಂಕಲನ ಇದು .ಗೊರೂರು ರಾಮಸ್ವಾಮಿ ಅಯ್ಯಂಗಾರರು ಸಂಪಾದಿಸಿದ ಈ ಪುಸ್ತಕದಲ್ಲಿ ಬರೆದವರೆಲ್ಲ ಘಟಾನುಘಟಿಗಳೇ.  ವಿವಿಧ ಹಣ್ಣುಗಳ ರಸಾಯನದಂತೆ ಬಗೆ ಬಗೆಯ ರಸಗಳಿಂದ ತುಂಬಿದ ಈ ಪುಸ್ತಕ ನಿಜಕ್ಕೂ ಓದಲೇಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಆದ್ಯತೆಯಲ್ಲಿ ಇರಬೇಕಾದದ್ದು. ಪ್ರಸ್ತಾವನೆಯಲ್ಲಿ ಗೊರೂರರು ಪ್ರಬಂಧ ಅಥವಾ ಹರಟೆ ಅಥವಾ ಲಲಿತ ಪ್ರಬಂಧ ಅಂದರೆ ಏನು ಎಂಬುದನ್ನು ತುಂಬಾ ಚೆನ್ನಾಗಿ ವರ್ಣಿಸುತ್ತಾರೆ ಅವರ ಮಾತಿನಲ್ಲೇ ಹೇಳುವುದಾದರೆ “ವೈಯುಕ್ತಿಕ ಭಾವನೆಗಳ ಒಂದು ಪದವಿನ್ಯಾಸ . ಒಂದು ವಿಷಯದ ಮೇಲೆ ಲೇಖಕನಿಗೆ ಏನು ಹೊಳೆಯುತ್ತದೆ ಆ ಭಾವನೆಗಳನ್ನು ಗುರುತಿಸುವ ಒಂದು ಆತ್ಮೀಯ ನಿರೂಪಣೆ; ಭಾವ ಗದ್ಯ.” ಎಷ್ಟು ಸಮರ್ಪಕವಾದ ವಿವರಣೆ  ಅಲ್ಲವೇ? ಒಂದು ಲಘು ಪ್ರಬಂಧ ಹೇಗಿರಬೇಕು ಅದರ ಗುಣಲಕ್ಷಣಗಳೇನು ಎಂಬುದನ್ನು  ಉದಾಹರಣೆ ಕೊಟ್ಟು ಹೇಳುವ ಅವರ ಮಾತುಗಳಲ್ಲೇ ನೋಡಿ “ಒಟ್ಟಿನಲ್ಲಿ ಲಘು ಪ್ರಬಂಧ ಹಗುರ ; ಲಾಡು ಚಿರೋಟಿ, ಮೈಸೂರು ಪಾಕ್ ಅನ್ನು ಕಂಠ ಪೂರ್ತಿ ಹೊಡೆಯುವ ಪುಷ್ಕಳ ಊಟವಲ್ಲ ಅದು. ಕೇಸರಿ ಬಾದಾಮಿ ಪಚ್ಚಕರ್ಪೂರಗಳನ್ನು ಸೇರಿಸಿ ಸುಖವಾಗಿ ಕಾಯಿಸಿದ ಹಾಲು. ಅದನ್ನು ಅಸ್ವಾದಿಸಿದ ಮೇಲೆಯೂ ಹಸಿವು ಹಾಗೆಯೇ ಇರುತ್ತದೆಯೇ ಹೊರತು ಹೆಚ್ಚು ಆಹಾರವನ್ನು ಸೇವಿಸಿದ ಮಂದತನ ಉಂಟಾಗುವುದಿಲ್ಲ .” ಅವರ ಪ್ರಸ್ತಾವನೆ ಓದಿದರೆ ಸಾಕು ಇಡೀ ಪುಸ್ತಕದ ಸ್ಥೂಲ ಚಿತ್ರಣ ದೊರಕಿ ಬಿಡುತ್ತದೆ.

ವಿಷಯ ಹಾಗೂ ಪ್ರಸ್ತುತಿಯ ಆಧಾರದ ಮೇಲೆ ನಾನು ಇಲ್ಲಿ ಸ್ಥೂಲವಾಗಿ ವಿಂಗಡಣೆ ಮಾಡಿಕೊಂಡು ಪ್ರತಿಯೊಂದು ಗುಂಪಿನಿಂದ ಒಂದು ಪ್ರಬಂಧದ ಬಗ್ಗೆ ಚಿಕ್ಕದಾಗಿ ಹೇಳುತ್ತೇನೆ ಆದರೆ ಇದರ  ಸೊಗಸು ಸೊಗಡನ್ನು ಆಸ್ವಾದಿಸಬೇಕೆಂದರೆ ನೀವೇ ಸ್ವತಹ ಇವುಗಳನ್ನು ಓದಿದಾಗ ಮಾತ್ರ ಸಾಧ್ಯ.

ಗಂಭೀರ ಪ್ರಬಂಧಗಳನ್ನು ನೋಡುವುದಾದರೆ 50 ವರ್ಷಗಳಲ್ಲಿ ಸಂಸ್ಕೃತಿಯ ರಂಗ (ಡಿವಿಜಿ )ಶಾಂತಿ (ಶ್ರೀನಿವಾಸ) ಕೋಗಿಲ (ವಿ ಕೃ ಗೋಕಾಕ) ಪ್ರಾಣಿ ಶಾಲೆಯ ಮೂಲಕ ಪಾಠ ಶಾಲೆಗಳಿಗೆ (ಪುತಿನ) ಸ್ವಂತ ಶ್ರಾದ್ಧ (ಶ್ರೀರಂಗ) ಇವುಗಳನ್ನು ಹೆಸರಿಸಬಹುದು.

ಈ ಐವತ್ತು ವರ್ಷಗಳಲ್ಲಿ ಸಂಸ್ಕೃತಿಯ ರಂಗ ಈ ಪ್ರಬಂಧದಲ್ಲಿ ಡಿವಿ ಗುಂಡಪ್ಪ ಅವರು ಕಳೆದ 50 ವರ್ಷಗಳಲ್ಲಿ ಸಂಸ್ಕೃತಿ ಕಂಡ ಬದಲಾವಣೆ ಮತ್ತು ಅದು ಹೋಗುತ್ತಿರುವ ದಿಕ್ಕಿನ ಬಗ್ಗೆ ವಿಶೇಷ ಚಿಂತನ ಮಂಥನ ನಡೆಸುತ್ತಾರೆ. ಈ ಮುಂಚೆ ಮದುವೆಯ ಕರೆಯೋಲೆಗಳು ಕೈಬರಹದಲ್ಲಿ ಇರುತ್ತಿದ್ದು ಹಾಗೂ ಹೋಟೆಲ್ ನ ತಿಂಡಿಗಳನ್ನು ಜನ ಅಷ್ಟಾಗಿ ಇಷ್ಟ ಪಡದೆ ಇದ್ದುದು ಈಗ  ಬದಲಾಗಿ ಹೋದದ್ದನ್ನು ನೆನೆಯುತ್ತಾರೆ. ಅಲ್ಲದೆ ಕಸುಬು ಮಾಡುವ ವಿವಿಧ ಕಲೆಗಾರರು ತಮ್ಮ ಆತ್ಮ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದರೆ ವಿನಹ ಕೂಲಿಗಾಗಿ ಅಲ್ಲ ಎನ್ನುತ್ತಾ ಅವರು ಹೇಳುವ ಈ ಮಾತು ತುಂಬಾ ಗಮನಾರ್ಹ “ಸಮಾಜಕ್ಕೆ ಕೆಲಸಗಾರರ ಹೆಮ್ಮೆ ನಷ್ಟವಾಗುವುದಕ್ಕಿಂತ ದೊಡ್ಡ ನಷ್ಟ ಇರಲಾರದು”.  ಮತ್ತೆ ಅವರು ಕೂಡು ಕುಟುಂಬಗಳು  ಛಿದ್ರ ಛಿದ್ರವಾಗಿ ಹೋಗುತ್ತಾ ಕುಟುಂಬದ ಪರಿಕಲ್ಪನೆ ಬದಲಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ . ಎಲ್ಲಕ್ಕಿಂತ ಮುಖ್ಯವಾಗಿ ಪೂರ್ವಿಕರು ದೇವರ ಪ್ರೀತಿಗೆಂದು ಜನ್ಮ ಸಾರ್ಥಕವಾಗಲೆಂದು ಯಾವುದಾದರು ಸಂಕಲ್ಪವನ್ನು ಮನಸ್ಸಿನಲ್ಲಿರಿಸಿಕೊಂಡು ಅದು ಕೂಡಿಬರುವ ಕಾಲದ ನಿರೀಕ್ಷಣೆಯಲ್ಲಿ ಬಾಳ್ಗೆ ನಡೆಸುತ್ತಿದ್ದು, ಈಗ ಆ ಪರಿಕಲ್ಪನೆ ಇಲ್ಲವಾಗಿದೆ. ಅಂದಂದಿನ ಪಾಡು ಅಂದಂದು ಎಂದು ಹೇಳುತ್ತಾ ಯಾಂತ್ರೀಕೃತ ಬದುಕಿನಲ್ಲಿ ಜನತೆಯ ಅಂತರಂಗ ಸಂಸ್ಕೃತಿಯ ಮಟ್ಟ ಇಳಿದುಹೋಗುವುದು ಸ್ವತಹ ಸಿದ್ಧ ಪರಿಣಾಮ ಎನ್ನುತ್ತಾರೆ .ಅದರ, ಅವರು ನುಡಿದ ಆ ಭವಿಷ್ಯದ ಪರಿಣಾಮವನ್ನು ನಾವು ಸಹ ಈಗ ನೋಡುತ್ತಿದ್ದೇವೆ ತಾನೆ?

ಹಾಸ್ಯ ಪ್ರಬಂಧಗಳ ಸಾಲಿನಲ್ಲಿ ಕುವೆಂಪು ಅವರ ರಾಮ ರಾವಣರ ಯುದ್ಧ, ಎನ್ಕೆ ಅವರ ಮೋಡಕಾ  ಬಾಜಾರ ,ಸಾವಿನ ಕೂಡ ಸರಸ ದರಾ ಬೇಂದ್ರೆ,  ಕಟು ಸತ್ಯ ರಂ ಶ್ರೀ ಮುಗಳಿ, ನಮ್ಮ ಎಮ್ಮೆಗೆ ಮಾತು ತಿಳಿಯುವುದೇ ಗೊರೂರು ರಾಮಸ್ವಾಮಿ ಅಯ್ಯಂಗಾರ್,  ದಿವಾನಖಾನೆಯ ಅಂದ ಚಂದ ಎ ಎನ್ ಮೂರ್ತಿರಾವ್ ನನ್ನ ಬೆನ್ನು ನಾ ಕಸ್ತೂರಿ, ನೆಗಡಿ ತೀನಂಶ್ರೀ, ಮಳೆ  ವಿಸೀ ಇವು ಪ್ರಮುಖವಾದವು.

ದಿವಾನಖಾನೆಯ ಅಂದ ಚಂದ ಈ ಪ್ರಬಂಧದಲ್ಲಿ ಎ ಎನ್ ಮೂರ್ತಿರಾವ್ ಅವರು ಆಧುನಿಕತೆಯ ಗಾಳಿ ಬೀಸಿ ತಮ್ಮ ಪತ್ನಿಯು ತಮ್ಮ ಮನೆಯ ದಿವಾನಖಾನೆಯನ್ನು ಸೋಫಾ ಪರದೆ ರತ್ನ ಕಂಬಳಿ ಇವೆಲ್ಲವುಗಳಿಂದ ಅಲಂಕರಿಸಿದ ವಿಷಯವನ್ನು ಹೇಳುತ್ತಾ ಅದಕ್ಕೆ ಕಾರಣವಾದದ್ದು ತಮ್ಮ ಸ್ನೇಹಿತರೊಬ್ಬರ ಮನೆಗೆ ಕೊಟ್ಟ ಭೇಟಿ ಎಂಬುದನ್ನು ಸೇರಿಸಲು ಮರೆಯುವುದಿಲ್ಲ. ಮನೆಯ ಅಲಂಕಾರವೆಲ್ಲ ಪೂರ್ತಿಯಾಗಿ ಅಂದವಾಗೇನೋ  ಕಾಣುತ್ತಿತ್ತು ಆದರೆ ಅಲ್ಲಿ ಸ್ವಚ್ಛಂದವಾಗಿ ಸ್ವತಂತ್ರವಾಗಿ ಕುಳಿತುಕೊಳ್ಳುವ ಹಾಗಿರಲಿಲ್ಲ .ಮನೆ ಮ್ಯೂಸಿಯಂ ಆಗಿಬಿಟ್ಟಿತ್ತು ಎನ್ನುವುದನ್ನು ತುಂಬಾ ರಸವತ್ತಾಗಿ ವರ್ಣಿಸುತ್ತಾರೆ .ತುಂಬು  ರಸಿಕತೆಯಿಂದ ತಮ್ಮ ಮನೆಯ ದಿವಾನಖಾನೆ ಚೆನ್ನಾಗಿ ಅಲಂಕರಿಸಿಕೊಂಡ ತಮ್ಮ ಪತ್ನಿಯಂತೆ ಕಾಣುತ್ತದೆ, ಆದರೆ ಸಲಿಗೆಯಿಂದ ಅಲಂಕಾರವನ್ನು ಕದಲಿಸುವ ಹಾಗಿಲ್ಲ ಹೀಗಾಗಿ ನನಗೆ ತೃಪ್ತಿ ಇಲ್ಲ.  ಅದಕ್ಕೆ ನನ್ನ ಒಲವು ನಲಿವುಗಳು ಬೇಕಾಗಿಲ್ಲ ಎಂದು ಹೇಳುತ್ತಾರೆ.  ತಮ್ಮ ಕೋಣೆಯ ಹಳೆಯ ಮೇಜು ಕುರ್ಚಿಗಳೆ ತಮಗೆ ನಿಜವಾದ ಸ್ನೇಹಿತರು. ಅವುಗಳ ಬಗ್ಗೆ ಯಾವ ಸ್ವಾತಂತ್ರ್ಯ ವಹಿಸಿದರು ಎಷ್ಟು ಸಲಗೆ ಹೊಂದಿದರೂ ನಡೆಯುತ್ತದೆ ಎಂದು ಹೇಳಿ ಪ್ರಬಂಧವನ್ನು ಈ ವಾಕ್ಯಗಳಿಂದ ಮುಗಿಸುತ್ತಾರೆ.” ದಿವಾನ ಖಾನೆಯಲ್ಲಿ ಕಾಣುವ ಪಾಷಾಣ ಹೃದಯದ ನಿಶ್ಚಲ ಸೌಂದರ್ಯ ನನಗೂ ಬೇಡ ನನ್ನ ಆತ್ಮೀಯರಿಗೂ ಬೇಡ”.

ಅವರು ಕೊಡುವ ಉದಾಹರಣೆಗಳು ಹೇಳುವ ತಿಳಿಸಿದ ಶೈಲಿ ನಮಗೆ ತಿಳಿ ನಗೆಯನ್ನು ತರಿಸದೆ ಬಿಡುವುದಿಲ್ಲ.

ವಾಸ್ತವಿಕತೆಯನ್ನು ಬಿಂಬಿಸುವಂತಹ ಪ್ರಬಂಧಗಳು ಬರಹಗಾರನ ಹಣೆಬರಹ ಗೋವಿಂದ ಪೈ ವ್ಯಾಸಂಗದ ಹವ್ಯಾಸ ಡಿಎಲ್ ನರಸಿಂಹಚಾರ್ ಸಾಹಿತ್ಯ ಭಂಡಾರಿ ದಬಾ ಕುಲಕರ್ಣಿ ಪಾದತ್ರಾಣ ರಾ ಕು, ಇಜಾರ ಸಂಪತ್ಗಿರಿ ರಾವ್ ಮುಂತಾದುವು.

ಬರಹಗಾರನ ಹಣೆಬರಹ ಈ ಕೃತಿಯಲ್ಲಿ ಗೋವಿಂದ ಪೈ ಮಂಜೇಶ್ವರ ಅವರು ಲೇಖಕನ ಕಷ್ಟ ಸುಖಗಳನ್ನು ವಿವರಿಸುತ್ತ ಇದು ನನ್ನದೇ ಅನುಭವ ಎಂದು ಹೇಳುತ್ತಾರೆ. ಸುಮಾರು ಅರ್ಧ ಶತಕ ಕಳೆದು ಹೋಗಿದ್ದರೂ ಲೇಖಕರ ಪಾಡು ಹಾಗೆ ಇದೆ ಸ್ವಲ್ಪವೂ ಸುಧಾರಿಸಿಲ್ಲ ಎನ್ನುವುದು ನಂಬಲೇ ಬೇಕಾದ ಕಟು ಸತ್ಯ. ಅವರು ಈ ವಿಷಯವನ್ನು ವಿವರಿಸಲು ಕೊಟ್ಟಿರುವ ಉದಾಹರಣೆಗಳು ಉದ್ದರಿಸಿರುವ ಶ್ಲೋಕಗಳು ಹಾಗೂ ಅವರ ಬಳಕೆಯ ಕೆಲವೊಂದು ಪದಗಳು ನಿಜಕ್ಕೂ ಅಪರೂಪವಾಗಿದೆ. ಕಾಲಾನುಗತಿಯಲ್ಲಿ ಎಷ್ಟೊಂದು ಪದಗಳು ಮಾಯವಾಗಿದೆಯಲ್ಲ ಎಂದೆನಿಸಿ ಭಯವಾಗುತ್ತದೆ. ಉದಾಹರಣೆಗೆ ಸರಿ ತರ= ಹೆಚ್ಚು ಸರಿ, ಶ್ರೋತ್ರ ನೇತ್ರ =ಕೇಳಲಿಕ್ಕೆ ಹಾಗೂ ನೋಡಲಿಕ್ಕೆ. ಸಂಪಾದಕರ ಪಕ್ಷಪಾತ ನೀತಿಯನ್ನು ವಿವರಿಸುವುದಕ್ಕೆ ಅವರು ಉಪಯೋಗಿಸಿರುವ ಈ ಗಾದೆ ನೋಡಿ “ತನ್ನವರು ಬಂದರೆ ಒಳಗಾಡು ಸಟ್ಟುಗವೇ ಹೆರವರು ಬಂದರೆ ಮೇಲಾಡು ಸಟ್ಟುಗವೇ”.  ಬರವಣಿಗೆಯ ಈ ಹವ್ಯಾಸವನ್ನು ಅವರು ಈ ಚೌಪದಿಯಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ

ಒರೆಯುವುದಕ್ಕಿಂತೊರೆಯದಿರಲು ಮೇಲೇಸು 

ತಂತಿಯ ಕಿವಿ ತಿರುವೆ ಸೂಜಿಗೆ ರಾಟ ಬರೆಯುವುದರಿಂ ಬರೆಯದಿರಲೆನಿತೊ ಲೇಸು

ಸೆರೆಯೊಳಗೆ ಕಂಟ, ಗಾಳಕ್ಕೆ ನೀರಾಟ

ಮತ್ತೆ ಕೆಲವು ಪ್ರಬಂಧಗಳು ವಿಡಂಬನೆಗಳ ಮೂಲಕ ಪ್ರಸ್ತುತ ಸ್ಥಿತಿಗಳ ಮೇಲೆ ಬೆಳಕು ಚೆಲ್ಲಿ ಸಮಸ್ಯೆಗಳ ಮೇಲೆ ಕ್ಷಕಿರಣ ಬೀರುತ್ತವೆ. ಕೊಲೆಪಾತಕನ ಶಿಕಾರಿ (ನವರತ್ನ ರಾಮರಾಯ)ಇನ್ನೊಂದು ಪುರಾಣ (ಜಡಭರತ), ಬಹಿರಂಗ ಪತ್ರ  (ರಾಶಿ)ಸ್ವತಂತ್ರ ಭಾರತದಲ್ಲಿ ವಿನಾಯಕ (ಜಿ ಪಿ ರಾಜರತ್ನಂ) ಹಳೆಯ ಸಬ್ ಎಸಿಸ್ಟೆಂಟ್ನ ಸುಳ್ಳು ಡೈರಿಯಿಂದ (ಪಂಜೆ ಮಂಗೇಶ್ವರ ರಾವ್)

ಜಡಭರತ ಅವರ ಇನ್ನೊಂದು ಪುರಾಣದಲ್ಲಿ ತಮ್ಮ ಗೆಳೆಯರನ್ನು ಸಂಶೋಧಕರ ಗುಂಪಿಗೆ ಕರೆದುಕೊಂಡು ಹೋದಾಗ ಅವರು ಹಾಸ್ಯವಾಗಿ ತಮ್ಮದೇ ಕಲ್ಪನೆಯ ತಮ್ಮದೇ ಸೃಷ್ಟಿಯ ಒಂದು ಪುರಾಣವನ್ನು ನಿಜವೇ ಎಂದು ನಂಬುವಂತೆ ಕಥೆಯನ್ನು  ಹೇಳಿ ಎಲ್ಲರೂ ನಂಬಿ ಅದು ಯಾವ ಪುರಾಣ ಎಂದು ಕೇಳಿದಾಗ ಇದು ಇನ್ನೊಂದು ಪುರಾಣ ನಾನೇ ಬರೆದದ್ದು ಎಂದು ಎಲ್ಲರನ್ನೂ ಆಶ್ಚರ್ಯ ತಮಾಷೆಗೆ ಸಿಲುಕಿಸುವ ಕಥೆ.  ಇದರಲ್ಲಿನ ಹಾಸ್ಯ ಮನಸ್ಸಿಗೆ ಮುಟ್ಟುತ್ತದೆ. ಕಡೆಯವರೆಗೂ ಕುತೂಹಲವನ್ನು ಕಾಪಾಡಿಕೊಂಡು ಬರುವುದು ಈ ಪ್ರಬಂಧದ ವೈಶಿಷ್ಟ್ಯ.

ಮೈಸೂರು ವಾಸುದೇವಾಚಾರ್ಯ ಅವರು ಬರೆದ ಟೈಗರ್ ವರದಚಾರ್ಯರು ಹಾಗೂ ಶಿವರಾಮ ಕಾರಂತರು ಬರೆದ ಸೀತೈತಾಳರು ವ್ಯಕ್ತಿ ಚಿತ್ರಣಗಳಾಗಿ ಮೂಡಿಬಂದಿವೆ.

ಮುನ್ನುಡಿಯಲ್ಲಿ ಉತ್ತಮ ಪ್ರಬಂಧದ ಲಕ್ಷಣದಲ್ಲಿ ಹೇಳಿದಂತೆ ಇಲ್ಲಿನ ಪ್ರಬಂಧಗಳು ನಮ್ಮನ್ನು ನಗಿಸುತ್ತವೆ, ಹೃದಯವನ್ನು ಅರಳಿಸುತ್ತವೆ, ಬುದ್ಧಿಯನ್ನು ಪ್ರಚೋದಿಸುತ್ತವೆ, ಭಾವನೆಗಳನ್ನು ಬೆಳೆಸುತ್ತವೆ.  ಆದರೆ ಇವೆಲ್ಲವೂ ಬಲವಂತವಾಗಿ ತುರುಕಿದಂತಿರದೆ ಸಹಜವಾಗಿ ತಾನೇ ತಾನಾಗಿ ಮೂಡುತ್ತವೆ.  50 ವರ್ಷದ ಹಿಂದಿನ ಸಾಮಾಜಿಕ ಪರಿಸ್ಥಿತಿಯ ಪರಿಚಯವಾಗುತ್ತದೆ ;ಅಂದಿನ ಮೌಲ್ಯಗಳು ನಮ್ಮ ಕಣ್ಣೆದುರು ಬರುತ್ತವೆ. ಕೆಲವೊಮ್ಮೆ ನಮ್ಮ ಪರಿಧಿಗೆ ನಿಲುಕದಂತಹ ಸಂಗತಿಗಳು ಎದುರಾಗುತ್ತದೆ ವಿಸ್ಮಯವನ್ನುಂಟು ಮಾಡುತ್ತದೆ.

ಖಂಡಿತವಾಗಿಯೂ ಓದಲೇ ಬೇಕು ಒಂದು ಬಾರಿಯಲ್ಲ ಮತ್ತೆ ಮತ್ತೆ ತಿರುಗಿ ಹಾಕಿದಷ್ಟು ನವ ನಾವೀನ್ಯ ಕಾಣುವಂತಹುದು. ಹೊಸ ಹೊಳಹು ಮೂಡಿಸುವಂತದ್ದು.

Some books should be tasted, some devoured , but only a few should be chewed and digested thoroughly

              _ Fancis Bacon   

ಕೆಲವು ಪುಸ್ತಕಗಳ ರುಚಿ ನೋಡಬೇಕು, ಕೆಲವನ್ನು ಗಪಗಪ ತಿಂದು ಬಿಡಬೇಕು, ಆದರೆ ಕೆಲವನ್ನು ಮಾತ್ರ ನಿಧಾನವಾಗಿ ಸವಿಯುತ್ತಾ ಅರಗಿಸಿಕೊಳ್ಳಬೇಕು .

                         _ ಫ್ರಾನ್ಸಿಸ್ ಬೇಕನ್

ಇಂತಹ ಮೂರನೆಯ ವರ್ಗಕ್ಕೆ ಸೇರಿದ ಪುಸ್ತಕವಿದು ಎಂದು ಧಾರಾಳವಾಗಿ ಹೇಳಬಹುದು .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top