“ತಾಯಿಯಾಗುವುದೆಂದರೆ”‌ ನಾಟಕ

ರಂಗಸಂಗಾತಿ

“ತಾಯಿಯಾಗುವುದೆಂದರೆ”‌ ನಾಟಕ

ಪೂಜಾ ರಘುನಂದನ್

ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಇದೇ 18 ರಂದು ಹಾಸನದ ಪೂಜಾ ರಘುನಂದನ್ ಅವರ ‘ತಾಯಿಯಾಗುವುದೆಂದರೆ’ ನಾಟಕವು ಪ್ರದರ್ಶನ ಆಗಲಿದೆ..!

ಹೊಸ ವಿಷಯದ, ‘ಅಪರೂಪ’ದ ಈ ‘ಏಕ ವ್ಯಕ್ತಿ ರಂಗ ಪ್ರದರ್ಶನ’ ಕುತೂಹಲವನ್ನೂ ಕೆರಳಿಸಿದೆ..!

ಈಗಾಗಲೇ ರಾಜ್ಯದ ಹಲವು ಕಡೆ ಪ್ರದರ್ಶನಗಳನ್ನು ಕಂಡು ತನ್ನ ವಿಷಯ ವೈವಿಧ್ಯ ಮತ್ತು ವಾಸ್ತವ ಬದುಕಾಧಾರಿತ ಪೂಜಾ ರಘುನಂದನ್ ಅವರ ನಟನೆಯಿಂದ ನೋಡುಗರ ಗಮನವನ್ನು ಅದು ಸೆಳೆದಿದೆ‌..!

ಅನನ್ಯ ಪ್ರತಿಭೆಯ ಪೂಜಾ ರಘುನಂದನ್ ಅವರು ಸೂಕ್ಷ್ಮ ಸಂವೇದನೆಯ ಬರಹಗಾರ್ತಿಯೂ ಹೌದು..!
ಇವರು ಬರೆದಿದ್ದ ಒಂದು ಲೇಖನವೇ ಈ ‘ತಾಯಿಯಾಗುವುದೆಂದರೆ’ ರಂಗ ಪ್ರಯೋಗವೆಂದರೆ ಅಚ್ಚರಿ ಪಡುತ್ತಾರೆ ಎಲ್ಲರೂ..!
ಹೀಗೆಯೇ ವಿಭಿನ್ನ ಸಾಮಾಜಿಕ ಕೆಲಸಗಳಿಂದ ಗುರುತಿಸಿಕೊಂಡಿರುವ ಪೂಜಾ ರಘುನಂದನ್ ತಮ್ಮ ಚಿಂತನೆಯನ್ನೇ ರಂಗಕ್ಕಿಳಿಸಿದ್ದಾರೆ..!

ನಾಡಿನ ಹೆಮ್ಮೆಯ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅವರ ಶ್ರಮದಿಂದ ಇದು ಏಕವ್ಯಕ್ತಿ ಅಭಿನಯದ ನಾಟಕವಾಗಿದೆ. ಸಮಾಜಕ್ಕೆ ಒಂದು ಸಂದೇಶವನ್ನೂ ಅದು ನೀಡುತ್ತದೆ..!

ಇದು ಅವರದೇ ಕತೆ, ಅವರ ತಳಮಳದ ದನಿ. ಮಕ್ಕಳನ್ನು ದತ್ತು ಪಡೆವ ತುಮುಲ, ಒಳ ದನಿಯ ಸಂಕಟ, ಅನುಭವಿಸಿದ ಖಾಲಿತನ, ಸಮಾಜದ ಮಾತುಗಳು, ಮಗಳೆಡೆಗಿನ ಅಸದಳವಾದ ಒಲವು, ಒಬ್ಬ ತಾಯಿಯ ನಿಜ ರೂಪ, ಮಾತಿಲ್ಲದ ವೇದನೆ ಎಲ್ಲವೂ ಈ ನಾಟಕದಲ್ಲಿ ಅನಾವರಣಗೊಂಡಿದೆ..!

ಹಾಸನದಲ್ಲಿ ಮೊದಲ ಬಾರಿ ಪ್ರದರ್ಶನವಾಗಿ ನಂತರ ಶಿವಮೊಗ್ಗ, ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆ ಪ್ರದರ್ಶನವಾಗಿದೆ ಈ ‘ತಾಯಿಯಾಗುವುದೆಂದರೆ’ ನಾಟಕವು ಪೂಜಾ ರಘುನಂದನ್ ಅವರಿಗೆ ಈಗ ಈ ಧಾರವಾಡದ ಶೋ ಮೆಚ್ಚಿನದಾಗಲಿದೆ. ಯಾಕೆಂದರೆ ಅವರ ಮೂಲ ಊರು ಇಲ್ಲೇ ಗದುಗಿನ ಹತ್ತಿರದು.

ಈ ಉತ್ತರ ಕರ್ನಾಟಕದ ಮಣ್ಣಿನ ನೆಲದ ಸಹಜ ಪಾರದರ್ಶಕವಾದ ಗುಣದವರು ಈಕೆ ಪೂಜಾ ರಘುನಂದನ್ ಅವರು..!

ಹಾಗಾಗಿ ನಾವೆಲ್ಲ ಅವರಿಗೆ ಹೆಚ್ಚು ಪ್ರೀತಿಯನ್ನು ತೋರಬೇಕಿದೆ.
ಪಾಪು, ಬೇಂದ್ರೆ, ಚಂಪಾ ಅವರು ಸೇರಿದಂತೆ ಅನೇಕಾನೇಕ ನಮ್ಮ ಧಾರವಾಡದ ನೆಲದ ಸಾಹಿತ್ಯ, ಸಾಂಸ್ಕೃತಿಕ ಘಮಕ್ಕೆ ಇದೊಂದು “ಕುಸುಮ”ವಾಗಿ ಸೇರ್ಪಡೆಯಾಗಲಿದೆ ಎಂದರೆ ತಪ್ಪಾಗಲಾರದು..!

ನಾಳೆ ಅಂದರೆ ಶುಕ್ರವಾರ ಸಂಜೆ ೫.೩೦ ಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಭವನದಲ್ಲಿ ಈ ನಾಟಕವು ಪ್ರದರ್ಶನಗೊಳ್ಳಲಿದೆ..!

ಇದೆಲ್ಲಾ ಇರಲಿ, ಈಗ ಈ ‘ಅವ್ವನಾಗುವುದೆಂದರೆ’ ನಾಟಕದ ಬಗೆಗೆ ಇನ್ನೊದಿಷ್ಟು ನೋಡೋಣ ಈಗ..!

‘ಅವ್ವನಾಗುವುದೆಂದರೆ’..! —

ತಾಯ್ತನವೆಂಬುದು ಕಳ್ಳುಬಳ್ಳಿಯಾಚೆಗೂ ಹಬ್ಬುವ ಹೂಬಳ್ಳಿಯಿದ್ದಂತೆ. ತಾಯಿಯಾಗುವ ಹಂಬಲದಲ್ಲಿ ಎದುರಿಸಿದ ಸಂಕಷ್ಟಗಳನ್ನು ರಂಗರೂಪಕ್ಕೆ ತಂದಿದ್ದಾರೆ ಕಲಾವಿದೆ ಪೂಜಾ ರಘುನಂದನ್ ಅವರು. ಅವರ ನಾಟಕದ ಕಥನ ಇಲ್ಲಿದೆ ನೋಡಿರಿ..!

ಇದು ಯಾರದ್ದೋ ಕಥೆ ಅಲ್ಲ. ಯಾರ ಉದಾಹರಣೆಯೂ ಅಲ್ಲ. ಇದು ನನ್ನದೇ ಕಥೆ. ಇವತ್ತೇ ಯಾಕೆ ಈ ಕಥೆ ಅಂದರೆ, ಇವತ್ತು ಹೇಳಿದರಷ್ಟೇ ಅದಕ್ಕೆ ಇನ್ನಷ್ಟು ಅರ್ಥ ಬರುತ್ತದೆ ಎನ್ನುತ್ತಾರೆ ಪೂಜಾ ರಘುನಂದನ್ ಅವರು..!

ಕುಂದಾನಗರಿ ಬೆಳಗಾವಿಯಲ್ಲಿ ಹುಟ್ಟಿ ಮಾಯಾನಗರಿ ಬೆಂಗಳೂರಿನಲ್ಲಿ ಆಗ ತಾನೆ ನೌಕರಿಗೆ ಸೇರಿದ್ದೆನು. ಹಾಸನದ ರಘುನಂದನರೊಟ್ಟಿಗೆ 2012 ರಲ್ಲಿ ಮದುವೆಯಾದೆನು. ಹೊಸ ಜೀವನ. ತುಂಬು ಕುಟುಂಬ. ಕೆಲಸಕ್ಕೆ ಸೇರುವ ಯೋಚನೆಯೂ ಇರಲಿಲ್ಲ. ಹಾಗಾಗಿ, ಹೊಸ ಸ್ನೇಹಿತರ ಭೇಟಿ, ಕಾರ್ಯಕ್ರಮಗಳ ತಿರುಗಾಟ.. ಹೀಗೆ ದಿನಗಳು ಉರುಳಿದಿವು..!

ಆಗ ಹೋದಲೆಲ್ಲ ಅನ್ಯರಿಂದ ಧುತ್ತನೆ ಎದುರಾಗುತ್ತಿದ್ದದ್ದು ‘ಗುಡ್‌ ನ್ಯೂಸ್ ಇಲ್ವಾ’ ಅನ್ನೋ ಪ್ರಶ್ನೆಯು. ಬೇರೆಯವರ ವೈಯಕ್ತಿಕ ಬದುಕಿನ ಬಗೆಗೆ ಜನರಿಗೆ ಯಾಕಿಷ್ಟು ಆಸಕ್ತಿ ಇರುತ್ತದೆ ಅನ್ನೋದು ಈವರೆಗೂ ಬಿಡಿಸಲಾಗದ ಒಗಟಾಗಿಯೇ ಉಳಿದಿದೆ ನನಗೆ ಎನ್ನುವ ಪೂಜಾ ರಘುನಂದನ್, ಈ ಕಾರಣಕ್ಕೆ ಬಹಳಷ್ಟು ನೊಂದಿದ್ದಾರೆ ಮತ್ತು ಕುತೂಹಲಗೊಂಡಿದ್ದಾರೆ.

ಈ ಮಧ್ಯೆ ಗುಡ್‌ನ್ಯೂಸ್‌ ಗೆ ರೆಡಿಯಾದೆವು. ಅದೇ ದಿನ ಸಂಜೆ ನಮ್ಮ ಅಮ್ಮ ಅಂದರೆ ಅತ್ತೆಯವರು ಸಿಹಿ ಹಂಚಿ ಸಂಭ್ರಮಿಸಿದರು. ದೇಹ ತಾಯ್ತನದ ಬದಲಾವಣೆಗೆ ಒಗ್ಗಿತು. ಮೂಡ್‌ ಸ್ವಿಂಗ್‌ ನಡುವೆಯೂ ಕಂದನ ಬಗ್ಗೆ ನಿರೀಕ್ಷೆ ಹೆಚ್ಚಿತು. ಆದರೆ, ಗರ್ಭಿಣಿಯಾದ ಸಂಭ್ರಮ ಬಹುಕಾಲ ಉಳಿಯಲಿಲ್ಲ.  ಮೂರು ತಿಂಗಳಿಗೆ ನಾನು ನನ್ನ ಕನಸನ್ನು ಕಳೆದು ಕೊಂಡಿದ್ದೆನು. ಹೀಗೆಯೇ ಸತತವಾಗಿ ಆರು ಬಾರಿ  ಹೊಟ್ಟೆಯೊಳಗಿದ್ದ ಭ್ರೂಣಗಳು ತಂತಾನೇ ಜಾರಿ ಹೊರಬಂದಿದ್ದವು. ಈಗಲೂ ಆ ಮಕ್ಕಳೆಲ್ಲ ಹುಟ್ಟಿದ್ದರೆ ನಾನು ಆರು ಮಕ್ಕಳ ತಾಯಿಯಾಗಿರುತ್ತಿದ್ದೆ..!

ಈ ಮಧ್ಯೆ ಎಷ್ಟೋ ಚಿಕಿತ್ಸೆಗಳು ನಡೆದವು. ಜೊತೆಗೆ ದೈವ ಬಲಕ್ಕಾಗಿ ಹರಕೆಯ ಮೊರೆ ಹೋದೆನು. ಪ್ರತಿ ಬಾರಿ 45 ನೇ ದಿನಕ್ಕೆ ಸರಿಯಾಗಿ ಮಗುವಿಗೆ ಹೃದಯಬಡಿತ ಗೋಚರಿಸುವಾಗ ಪಡುತ್ತಿದ್ದ ಸಂತಸ ಮೂರು ತಿಂಗಳ ಸ್ಕ್ಯಾನಿಂಗ್‌ನಲ್ಲಿ ಇಲ್ಲವಾಗುತ್ತಿತ್ತು..!

ಈ ನಡುವೆ  ಆತ್ಮೀಯಳೊಬ್ಬಳು ‘ಮಗು ಮಾಡಿ ಕೊಡ್ತೀನಿ ಕಣೇ. ನೀನೇ ಅದರ ಅಮ್ಮನಾಗು’ ಅಂತ ಹೇಳಿದಳು.  ನಮ್ಮವರದೇ ಅನ್ನೋ ಸಮಾಧಾನ ಇತ್ತು. ಆದರೆ, ಆ ಪ್ರಕ್ರಿಯೆ ಮುಂದುವರಿಯಲೇ ಇಲ್ಲ..!

ಹೀಗೆಯೇ ದೈಹಿಕ ಕಷ್ಟ, ಮಾನಸಿಕ ನೋವು, ಹಿಂಸೆ, ಜನರ ಪ್ರಶ್ನೆ ಎಲ್ಲದರ ಮಧ್ಯೆ ಒಂದು ಹೆಣ್ಣು ಮಗುವನ್ನೇ ದತ್ತು ತೆಗೆದುಕೊಳ್ಳಬೇಕೆಂದು ಗಟ್ಟಿ ನಿರ್ಧಾರ  ಮಾಡಿದೆವು.
ಈ ನಿರ್ಧಾರ ಮಾಡಿದಾಗ ನನಗೆ 26 ವರ್ಷ, ರಘುವಿಗೆ 30 ವರ್ಷ.  ಮದುವೆಯಾಗಿ 6 ವರ್ಷ ಸಂದಿತ್ತು. ಸುಮ್ಮನೇ ಕಾಲಹರಣ ಮಾಡಿ ಮುಂದೆಂದೋ ದತ್ತು ಪಡೆಯುವ ಬದಲು ಈಗಲೇ ದತ್ತು ತೆಗೆದುಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದೆವು..!

ಮತ್ತದೇ ಜನರ ಪ್ರಶ್ನೆಗಳು. ‘ಯಾಕೆ ಇಷ್ಟು ಬೇಗ ಈ ನಿರ್ಧಾರ. ಇನ್ನೂ ಕಾಯಬಹುದಿತ್ತು, ಡಾಕ್ಟರ್‌ ಬದಲಾಯಿಸಿ, ಈ ದೇವರಿಗೆ ಹರಕೆ ಹೊತ್ತ್ಕೊಳ್ಳಿ, ನಾಟಿ ಔಷಧದಿಂದ ಸರಿ ಹೋಗುತ್ತೆ, ಈ ಪಥ್ಯ ಮಾಡಿ, ಹೊಸ ತಂತ್ರಜ್ಞಾನದಿಂದ ಮಗು ಪಡೀಬಹುದು’ ಹೀಗೆಯೇ ಹೆಜ್ಜೆ ಹೆಜ್ಜೆಗೂ ಸಲಹೆ ಸಿಗುತ್ತಿತ್ತು..!

‘ಪ್ಲೀಸ್ ಸ್ಟಾಪ್ ಆಲ್ ದೀಸ್…’ ಅಂತ ಗಟ್ಟಿಯಾಗಿ ತಿರುಗಿ ಬಿದ್ದೆನು. ಅಲ್ಲಿಗೆ ಜನರ ಬಾಯಿ ಮುಚ್ಚಿ ಹೋಯಿತು. ಕುಟುಂಬದ ಪ್ರೋತ್ಸಾಹ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸಿತು..!

ದತ್ತು ಪಡೆಯುವ ಪ್ರಕಿಯೆಯೂ ನಡೆಯಿತು ಹೀಗೆಯೇ..!

ಕಾನೂನು ಪ್ರಕಾರ CARA ವೆಬ್‌ ಸೈಟ್‌ ಮೂಲಕ ದತ್ತು ಪ್ರಕ್ರಿಯೆ ನಡೆಸುವುದು ಸರಿಯಾದ ಕ್ರಮ. ನಾವು ಅದರ ಮೂಲಕವೇ ನೋಂದಣಿ ಮಾಡಿ ಮಗಳ ಬರುವಿಕೆಗೆ ಎರಡೂವರೆ ವರ್ಷ ಕಾದೆವು..!

‘ಲೀಗಲ್ ಅಡಾಪ್ಷನ್‘ ಎನ್ನುವುದು ಸುಲಭವಾದ ವಿಧಾನ; ಆದರೆ, ಅದು ಗೊತ್ತಿದ್ದವರಿಗೆ ಮಾತ್ರ. ಪಾಪ ನಿರಕ್ಷರರಿಗೆ ಇದು ಕಬ್ಬಿಣದ ಕಡಲೆಯಾಗಿದೆ..!

ನಿಯಮ ಏನು ಹೇಳುತ್ತೆ.!? —

ಎಲ್ಲರೂ ಹೇಳ್ತಾರೆ ‘ನೀವು ದತ್ತು ತೊಗಳಬೇಕಾದ್ರೆ ನಿಮ್ಮ ಆಸ್ತಿ ಆ ಮಗುವಿನ ಹೆಸರಿಗೆ ಆಗಬೇಕು’ ಅಂತ. ಆದರೆ, ದತ್ತು ಪ್ರಕ್ರಿಯೆಯಲ್ಲಿ ಈ ತರಹದ ನಿಯಮ ಇಲ್ಲ. ಆದರೆ, ತಂದೆಯ ವರಮಾನ ನೋಡುತ್ತಾರೆ. ಕಾರಣ, ಆ ಕುಟುಂಬಕ್ಕೆ, ಮಗುವಿನ ಪೋಷಣೆ ಮಾಡಲು ಶಕ್ತಿ ಇದೆಯಾ ಎಂದು ಖಚಿತಪಡಿಸಿ ಕೊಳ್ಳುವುದಕ್ಕಾಗಿ. ಈ ಮೊದಲೇ ಮಗು ಅನಾಥವಾಗಿ ಆಶ್ರಮ ಸೇರಿರುತ್ತದೆ. ಮತ್ತೊಮ್ಮೆ ಅದಕ್ಕೆ ತೊಂದರೆಯಾಗಬಾರದು ಎಂಬುದು ಈ ನಿಯಮದ ಹಿಂದಿನ ಉದ್ದೇಶವಾಗಿದೆ..!

ನೋಂದಣಿಯಾಗಿ ಎರಡೂವರೆ ವರ್ಷಗಳ ನಂತರ ಮಗು ಆಗಮನದ ಸಂದೇಶ ಬಂತು. ಮನೆಯವರ ಸಂತಸ ಹೇಳತೀರದು. ಇಂಥ ದಿನಗಣನೆಯ ಸಮಯದಲ್ಲಿಯೂ ಪರಿಚಯಸ್ಥರೊಬ್ಬರು ‘ಇನ್ನೂ ಸಮಯವಿದೆ ಯೋಚಿಸಿ. ಈ  ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡರೆ ನಿಮ್ಮದೇ ಮಗು ಪಡೆಯಬಹುದು’ ಎಂಬ ಆಲೋಚನೆ ಮುಂದಿಟ್ಟರು.
ನನ್ನ ಉತ್ತರ ಸ್ಪಷ್ಟವಾಗಿತ್ತು. ‘ಅದೇ ದೇವರ ಅನುಗ್ರಹದಿಂದ ನನ್ನ ಮಗಳು ನಾಲ್ಕಾರು ದಿನಗಳಲ್ಲಿ ಮನೆಗೆ ಬರುತ್ತಿದ್ದಾಳೆ’ ಎಂದು ಅವರಿಗೆ ಹೇಳಿದೆ..!

ಹೀಗೆಯೇ ಅಮ್ಮನಾದ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೊಂದು ಅಲೌಕಿಕತೆಯೂ, ಆಧ್ಯಾತ್ಮಿಕತೆಯೂ ಕಾಣುತ್ತಿದೆ. ನಮ್ಮ ಮಗು ಮೂರು ತಿಂಗಳ ಕಾಲ ಶ್ರೀಗಳೊಬ್ಬರ ಆಶ್ರಯ, ಆರೈಕೆಯಲ್ಲಿ ಬೆಳೆದಿತ್ತು. ನಂತರವೇ ನನ್ನ ಮಡಿಲ ಸೇರಿತು. ಮನೆಗೆ ಬಂದಾಗ ಅವಳನ್ನು ಅವಳ ಚಿಕ್ಕಪ್ಪ – ಚಿಕ್ಕಮ್ಮ, ಅಣ್ಣ ಬಹಳ ಅದ್ದೂರಿಯಾಗಿ ಬರಮಾಡಿಕೊಂಡಿದ್ದರು..!
ಈಗ ಅವಳಿಗೆ ಒಂದೂವರೆ ವರ್ಷ. ಅವಳು ಬಂದ ಮೇಲೆ ಪ್ರತಿ ದಿನವೂ ಸಡಗರವೇ..!

ಮಕ್ಕಳು ಪಡೆಯುವ ವಿಚಾರದಲ್ಲಿ ನನ್ನಂತೆ ಹಲವರಿಗೆ ಗೊಂದಲವಿದ್ದಿರಬಹುದು. ಹಲವು ಚಿಕಿತ್ಸೆಗೆ ಒಳಗಾಗಿ ಅದು ಫಲಪ್ರದವಾಗದೇ ನೋವು ಅನುಭವಿಸಿರಬಹುದು. ಜನರ ಕುಹುಕವನ್ನು ಪಕ್ಕಕ್ಕಿಟ್ಟು ದತ್ತು ಪ್ರಕ್ರಿಯೆಯತ್ತ ಮನಸ್ಸು ಮಾಡುವುದು ಒಳಿತಲ್ಲವೇ.!?

ಹೀಗೆಯೇ ಸಾಗುತ್ತದೆ ಪೂಜಾ ರಘುನಂದನ್ ಅವರ ಏಕವ್ಯಕ್ತಿ ನಾಟಕ ‘ಅವ್ವaನಾಗುದೆಂದರೆ’ಯ ಪ್ರದರ್ಶನವು..!


ಕೆ.ಶಿವು.ಲಕ್ಕಣ್ಣವರ

Leave a Reply

Back To Top