ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಭಾವಶರಧಿ ಕವನ ಸಂಕಲನ
ಕವಿ ಹರಿ ನರಸಿಂಹ ಉಪಾಧ್ಯಾಯ ಪ್ರಕಾಶಕರು ಎಚ್ಚೆಸ್ಸಾರ್ ಎ ಪಬ್ಲಿಕೇಶನ್ಸ್ ಬೆಂಗಳೂರು
ಪ್ರಥಮ ಮುದ್ರಣ ೨೦೨೦
ಬೆಲೆ : ರೂ. ೧೦೦/_
ಮಲ್ಲಿಗೆ ಕವಿ ಕೆ ಎಸ್ ನರಸಿಂಹಸ್ವಾಮಿಯವರು ತಮ್ಮ “ಏರಿಕೆ ಇಳಿಕೆ” ಕವನದಲ್ಲಿ ಹೀಗೆನ್ನುತ್ತಾರೆ
ಹಳಬರನು ಕೇಳದಿರಿ ನೀವೆಂದಿನವರೆಂದು
ಹೊಸಬರನು ಹೊಗಳದಿರಿ ನೀವಿಂದಿನವರೆಂದು
ಒಬ್ಬರ ವಿಳಾಸದಲಿ ಇನ್ನೊಬ್ಬರಿರಬಹುದು
ಒಟ್ಟಾರೆ ಮಾತು ಅನ್ಯಾಯ!
ಈ ಮಾತನ್ನು, ಮಾತಿನ ಜಾಡನ್ನೇ ಹಿಡಿದು ಹೋಗುವುದಾದರೆ ಬೇಂದ್ರೆ ಕುವೆಂಪು ಮೊದಲಾದ ಹಿರಿಯರ ಕಾವ್ಯಗಳನ್ನು ಓದುವಷ್ಟೇ ಆಸಕ್ತಿ ನನಗೆ ಇತ್ತೀಚಿನ ಕವಿಗಳ ಕವನಗಳನ್ನು ಓದುವುದರಲ್ಲಿಯೂ . ಅಂತಹ ಓದಿನ ದಾರಿಯಲ್ಲಿ ಭೇಟಿಯಾದ ಕವಿ ಹರಿ ನರಸಿಂಹ ಉಪಾಧ್ಯಾಯ ಅವರು. ಇದು ಅವರ ಪ್ರಥಮ ಕವನ ಸಂಕಲನ . ಎಸ್ ಕೆ ಎಫ್ ಸಂಸ್ಥೆಯಲ್ಲಿ ವೃತ್ತಿಯಲ್ಲಿರುವ ಇವರ ಹವ್ಯಾಸ ಕನ್ನಡ ಸಾಹಿತ್ಯ. .ಮುನ್ನುಡಿಯಲ್ಲಿ ಅವರೇ ಹೇಳುವಂತೆ “ಕೇವಲ ಓದುಗನಾಗಿದ್ದ ನನಗೆ ಕವನಗಳನ್ನು ಬರೆಯುವ ಆಸೆ ಸಮಯ ಸಿಕ್ಕಾಗ ಭಾವನೆಗಳನ್ನು ಹರಿಯಬಿಟ್ಟು ಲೇಖನಿಯೊಳಗೆ ಬಂಧಿಸಲು ಪ್ರಯತ್ನಪಟ್ಟಿದ್ದೆ. ಸುಮಾರು ಇಪ್ಪತ್ತು ವರ್ಷಗಳ ಸತತ ಕೃಷಿಯ ಫಲ ಈ ಚೊಚ್ಚಲ ಕವನ ಸಂಕಲನ .” ಮುಖಪುಟ ಸಾಹಿತ್ಯ ಬಳಗ ಸಾಹಿತ್ಯೋತ್ಸವದ ಪ್ರೋತ್ಸಾಹ ಹಾಗೂ ತಂಗಿ ಆಶಾ ಮಯ್ಯ ಮತ್ತು ಗೆಳೆಯ ಮಹೇಶ್ ಹೆಗಡೆ ಅವರ ಬೆಂಬಲ ಎಂದು ಸ್ಮರಿಸಿಕೊಳ್ಳುತ್ತಾರೆ . (ಸಾಹಿತ್ಯೋತ್ಸವ ಮುಖ ಹೊತ್ತಿಗೆ ಬಳಗದ ನಿರ್ವಾಹಕರಲ್ಲಿ ನಾನೂ ಒಬ್ಬಳು ಎಂಬ ಹೆಮ್ಮೆ .)
ಬೇಂದ್ರೆಯವರು ಹೇಳುತ್ತಾರೆ “ಕಾವ್ಯ ಅಂದರೆ ಓಂಕಾರದ ಶಂಖನಾದಕಿಂತ ಕಿಂಚಿದೂನ ಆನಂದ ನೀಡುವಂಥದ್ದು”.ವೈಚಾರಿಕ ಮಂಥನ, ಆಸ್ವಾದನದ ಸಂತಸ, ಸಾಮಾಜಿಕ ಕಾಳಜಿ ಕಳಕಳಿ, ಜವಾಬ್ದಾರಿಯ ಸಂದೇಶ ಒಂದು ಉತ್ತಮ ಕಾವ್ಯದ ಲಕ್ಷಣ.
ವಿವಿಧ ವಿಷಯ ವಸ್ತುಗಳನ್ನು ಹೊಂದಿರುವ ಎಪ್ಪತ್ತು ಕವನಗಳು ಇಲ್ಲಿದ್ದು ಬಗೆಬಗೆಯ ಬಣ್ಣಗಳ ಪರಿಮಳದ ಪುಷ್ಪಹಾರದಂತೆ ಭಾಸವಾಗುತ್ತದೆ . ಮೊಟ್ಟ ಮೊದಲಿಗೆ ಅಪ್ಪ ಅಮ್ಮನಿಗೆ ಗೌರವ ಸಲ್ಲಿಸಿ ನಾಂದಿ ಹಾಡುತ್ತಾರೆ . ಅಮ್ಮಾ ಕವನದ ಕೆಲವು ಸಾಲುಗಳು
ಜೀವವೊಂದು ಲೋಕದಲ್ಲಿ ಹುಟ್ಟಿ ಕಣ್ತೆರೆಯಲು
ಅಮ್ಮನೆಂಬ ಹೆಣ್ಣು ತಾನೆ ಮೂಲಚೇತನ
ಗರ್ಭದೊಳಗೆ ಹೊತ್ತು ನವಮಾಸ ಪರ್ಯಂತವು
ಸತ್ತು ಬದುಕಿ ಹೆತ್ತು ಪೊರೆದಳಾಕೆ ಕಂದನ
ದೇಶಭಕ್ತಿ ಭಾರತಾಂಬೆಯ ಬಗೆಗಿನ ಪ್ರೀತಿ ಇವುಗಳು “ಭರತಖಂಡ ವೈಭವ” “ಭಾರತಾಂಬೆಗೆ ಶರಣು” “ನೀ ವೀರಯೋಧನಾಗು” “ಮರೆಯಾದ ನಕ್ಷತ್ರಗಳು” ಈ ಕವನಗಳಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ .
ತಾಯಿ ಭಾರತಿಯೆ ಎಮ್ಮ ನೆಲಜಲ ಉಸಿರು
ಅವಳ ಸಮೃದ್ಧಿಯಲಿ ನಮ್ಮಬಾಳು ಹಸಿರು
ಮನಸ್ಸಿಗೆ ಚಂಚಲವು ವ್ಯಾಮೋಹ ವಿದೇಶದಿ
ತಿಳಿಯದು ಇನಿತೂ ಅವಳೇ ಅನರ್ಘ್ಯ ನಿಧಿ
ಈ ಸಾಲುಗಳಲ್ಲಿ ದೇಶದ ಬಗ್ಗೆ ಪ್ರೇಮದ ಜತೆಗೆ ವಿದೇಶಿ ವ್ಯಾಮೋಹದ ಬಗೆಗಿನ ವಿ ಷಾದವನ್ನು ಕಡೆದಿಟ್ಟಿದ್ದಾರೆ .
ಸಾಹಿತ್ಯವು ಸಮಾಜದ ಇತಿಹಾಸ ಹಾಗೂ ಬದುಕಿನ ರೀತಿಯನ್ನು ತಿಳಿಸಬೇಕು. ಈ ನಿಟ್ಟಿನಲ್ಲಿ ಮರೆಯಾದ ನಕ್ಷತ್ರಗಳು ಕವನದಲ್ಲಿ ದೇಶ ಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಹುತಾತ್ಮರ ಬಗೆಗಿನ ಸಾಲುಗಳು ಗಮನಾರ್ಹ
ಪರಕೀಯರ ಹಿಡಿತ ಬಿಡಿಸಲಿಲ್ಲಿ ಪ್ರಾಣತೆತ್ತರು
ದೇಶಭಕ್ತಿ ಮೆರೆದ ಅಮರ ವೀರಕಲಿಗಳು
ನೆನಪಿಸಬೇಕಿಲ್ಲಿ ಅವರ ಶೌರ್ಯ ಸಾಧನೆಗಳಾ
ಕಾಲದ ಸುಳಿಯಲಿ ಮರೆಯಾದ ನಕ್ಷತ್ರಗಳಾ
ಪ್ರಕೃತಿ ಸಹಜ ಬದಲಾವಣೆಗಳಾದ ಇರುಳು ಹಗಲುಗಳು ಋತುಗಳು ಉಂಟಾಗುವಂತೆ ಕಾವ್ಯಾಸಕ್ತಿ ಸಾಹಿತ್ಯಿಕ ಪ್ರೇರಣೆಗಳು ಮನುಜನ ಮೂಲ ಗುಣಗಳು . ಈ ಮನೋಭಾವದಿಂದಲೇ ಭಾವವಲಯ ವಿಸ್ತಾರಗೊಳ್ಳುವುದು . ಹೀಗಾಗಿ ಮನೋಪ್ರಪಂಚದ ಭಾವನೆಗಳು ಪದಗಳಾಗಿ ಮೂಡುತ್ತವೆ. ಇದು ಪ್ರತಿ ಕವಿಯ, ಕವಿತೆಯ ಸಹಜ ಧರ್ಮ . “ನನ್ನೊಳಗಿರುವ ನಾನು” “ಮೌನ” “ಕನ್ನಡಿಯ ಮುಂದೆ” “ಮನವೆಂಬ ಮರ್ಕಟ “ಇವೆಲ್ಲ ಈ ರೀತಿ ಮನೋ ವೃತ್ತಿಯ ವಿವಿಧ ಆಯಾಮಗಳನ್ನು ಸೆರೆಹಿಡಿಯುತ್ತವೆ . ಮನವೆಂಬ ಮರ್ಕಟ ದಲ್ಲಿ ಚಂಚಲ ಚಿತ್ತವಾದ ಮನಸ್ಸಿನ ಭಾವನೆಗಳು ವರ್ಣಿತವಾಗುವ ರೀತಿ ಇದು
ಮನವು ಹಿಡಿತದಲ್ಲಿಲ್ಲ ಆಸೆಗೆ ಮಿತಿಯಿಲ್ಲ
ಅನ್ಯರ ಸಂಪತ್ತು ತನ್ನ ಪ್ರತಿಷ್ಠೆಯ ಕೆಡಿಸಿತಲ್ಲ
ಆಗಸಕ್ಕೆ ಹಾರುವ ಕನಸು ಕಾಣುವ ಛಲದಿ
ತನ್ನೆಲ್ಲ ಬುದ್ದಿಯೂ ಮಂಕಾಗಿ ಹೋಯಿತಲ್ಲ
ಹಾಗೆಯೇ “ಮನದ ಕೈಯಲಿ ಹೃದಯ ನೀಡದಿರಿ ಎಂದೂ, ಹೃದಯದ ಹದ್ದಿನಲ್ಲಿ ಮನವು ಇರಲೆಂದೂ” ಎಂಬ ಸಂದೇಶವನ್ನು ನೀಡುತ್ತಾರೆ .
ನನ್ನ ಮನಸ್ಸು ಸೆಳೆದ ಮತ್ತೊಂದು ವಿಶಿಷ್ಟ ಕವನ “ಕುವೆಂಪುರವರ ರಾಮಾಯಣ ದರ್ಶನಂ ಕುರಿತಾಗಿ”
ಓದುವ ಮನಕ್ಕೆ ರಸಸ್ವಾದವ ನೀಡಲು
ಬರೆದರು ಕುವೆಂಪು ಒಮ್ಮನದಿ ರಾಮಾಯಣದರ್ಶನಂ ರಚಿಸಲು ಇಂದಿಗೆ
ಜ್ಞಾನಪೀಠ ಕೃತಿಯಾಯಿತು ಕನ್ನಡದಿ
ಎಂದು ಬಣ್ಣಿಸುತ್ತಾರೆ .
ಹಾಗೆಯೇ ವಿಶಿಷ್ಟವಾದ ಮತ್ತೊಂದು ಕವಿತೆ ಪತ್ರಿಕೆಗಳು . ಇದರ ಕೆಲ ಸಾಲುಗಳು
ಪತ್ರಿಕೆಗಳು ಬರಿಯ ಕಾಗದದ ತುಣುಕಲ್ಲ
ಮನಬಂದಂತೆ ಗೀಚುವ ಸಾಧನವು ಅಲ್ಲ
ಲೋಕದ ಆಗುಹೋಗುಗಳ ಯಥಾವತ್
ಜನರಿಗೆ ತಲುಪಿಸುವ ಮಾರ್ಗ ನಮಗೆಲ್ಲ
ಸುತ್ತಮುತ್ತಲಿನ ಸಾಮಾನ್ಯ ವಸ್ತುಗಳು ಕೈ ಕಣ್ಣಿನಲ್ಲಿ ಕವನದಲ್ಲಿ ಸ್ಥಾನ ಪಡೆದಿರುವುದು
“ತಂಗಳು ಪೆಟ್ಟಿಗೆ” ಕವನದಿಂದ ತಿಳಿಯುತ್ತದೆ.
ಹಾಸ್ಯವಾದರೂ ವಾಸ್ತವವಾದ ಈ ಸಾಲುಗಳನ್ನು ನೋಡಿ
ಎಲ್ಲವನಿಟ್ಟೆ ಮರೆತೇಬಿಟ್ಟೆ
ಕರೆಂಟು ಕೈಕೊಡೆ ಫಜೀತಿ ಪಟ್ಟೆ ಹೈವೋಲ್ಟೇಜ್ ಬಂದರೆ ನೀನು
ಕಣ್ಣನ್ನು ಮಿಟುಕಿಸಿ ಮಲಗುವೆಯೇನು
ಜೀವನದ ದಾರಿಯಲ್ಲಿ ಕೆಡುಕೆಂಬ ಮುಳ್ಳುಗಳು ತೊಡರಾಗುತ್ತವೆ. ಆದರೆ ನಯವಾಗಿ ಅವುಗಳನ್ನು ದೂರ ಸರಿಸಿ ಒಳಿತಿನ ಮಾರ್ಗದೊಂದಿಗೆ ಸಾಂಗತ್ಯವಾಗಿ ಚಲಿಸಿದರೆ ಮನುಷ್ಯನ ಬದುಕಿನ ಸಫಲತೆಯ ಗಮ್ಯ . ಇದಕ್ಕೆ ಉದಾಹರಣೆಯೆಂಬಂತೆ ಸಂಕಲನದ ಕಡೆಯ ಕಥನಕಾವ್ಯ “ಶಬರಿ” . 6 ಸಾಲುಗಳ ೨೨ ಚರಣಗಳುಳ್ಳ ದೀರ್ಘ ಕವನ. ಶಬರಿಯ ವೃತ್ತಾಂತವನ್ನು ಸಾದ್ಯಂತವಾಗಿ ವಿವರಿಸಿರುವ ರೀತಿ ಹೃದಯಂಗಮ. ಅದರ ಕಡೆಯ ಚರಣ ಹೀಗಿದೆ
ಪರಿಶುದ್ಧ ಭಕ್ತಿ ಹೊಂದಿರಲು
ಭಗವಂತನಲ್ಲಿ ಮನವಿರಲು
ಪ್ರಾಮಾಣಿಕರಾಗಿರಲು ಭಗವಂತನೊಲಿವನು ಜಾತಿ ಯಾವುದಾದರೇನು
ಆವ ಕುಲವಾದರೇನು
ಭಕ್ತಿಯಿರಲು ಶ್ರೀರಾಮ ಶಬರಿಗೊಲಿದನು.
ಜೀವನದ ಪ್ರತಿ ಘಟನೆಯೂ ಸಂಧರ್ಭವೂ ಮನಸ್ಸಿಗೆ ಹೃದಯಕ್ಕೆ ತಟ್ಟಿ ಕಾವ್ಯ ಹುಟ್ಟಲು ಪ್ರೇರಣೆ ಮತ್ತು ಸನ್ನಿವೇಶ ಸೃಷ್ಟಿಯಾಗುತ್ತದೆ.ಈ ಮೌಲಿಕ ಭಾವನೆಗಳಿಗೆ ಸ್ಪೂರ್ತಿ ತುಂಬಿ ಮನಸ್ಸಿನ ಹಿತಾನುಭವ ಗಳಿಗೆ ಪದಗಳ ಹೊಳಪು ಕೊಟ್ಟಾಗ ಕವಿತೆ ಜನಿಸುತ್ತದೆ. ಹಾಗೆಯೇ ಮನದ ನೋವು ಸಂಕಟ ಅನುಮಾನ ಅವಮಾನಗಳು ನಾನದನ್ನು ಶಬ್ದ ರೂಪ ತಳೆಯುತ್ತವೆ .ಇಂಥ ಕವಿತೆಗಳು ಪ್ರಬುದ್ಧ ಎನಿಸಿಕೊಳ್ಳಬೇಕಾದರೆ ಜೋಡಿಸುವ ಕ್ರಮ ಉಪಮೆ ಕಲ್ಪನಾ ಶಕ್ತಿ ಹಾಗೂ ಅನುರೂಪ ಪದಜೋಡನೆ ಬೇಕಾದ ಪರಿಕರಗಳು . ಇವೆಲ್ಲವೂ ಹದಮಿಳಿತ ರೀತಿಯಲ್ಲಿ ಹೊಂದಿ ಒಂದಕ್ಕೊಂದು ಸಂಬಂಧ ಕಲ್ಪಿಸುವಂತಹ ನೇಯ್ಗೆ ಹಾಗೂ ಕುಸುರಿ ಕೆಲಸ ನಡೆದಾಗ
ಉತ್ತಮ ಕವಿತೆಯೆಂಬ ಕಸೂತಿಯ ಚಿತ್ತಾರದ ಸಿದ್ಧವಾಗುತ್ತದೆ . ಈ ಕೆಲಸವನ್ನು ಕವಿ ಹರಿ ನರಸಿಂಹ ಅವರು ತಮ್ಮ ಕವಿತೆಗಳ ಪಾಕದಲ್ಲಿ ಸಿದ್ಧಪಡಿಸಿ ನಮಗೆ ಉಣ ಬಡಿಸಿದ್ದಾರೆ . ಇಲ್ಲಿ ಪ್ರಾಸ ಕವಿತೆಗಳ ಸಾಮಾನ್ಯ ಅಡಕವಾದರೂ ತ್ರಾಸಕ್ಕಾಗಿ ಅದನ್ನು ಎಳೆದು ತಂದಿಲ್ಲದಿರುವುದು ವಿಶೇಷ.
ಒಟ್ಟಿನಲ್ಲಿ ಒಂದು ಒಳ್ಳೆಯ ಓದಿನ ಅನುಭವ ಕೊಡುವ ಸುಂದರ ಅರ್ಥಪೂರ್ಣ ಕವಿತೆಗಳ ಹೂಗುಚ್ಛ ಇದು . ಈ ಸಂಕಲನದ ನಂತರ ಮತ್ತೊಂದು ಕವನ ಸಂಕಲನ ಹಾಗೂ ಮುಕ್ತಕಗಳ ಸಂಕಲನ ವನ್ನು ಹೊರತಂದಿರುವ ಕವಿಗಳ ಸಾಹಿತ್ಯ ಪಯಣ
ಯಶಸ್ವಿಯಾಗಿ ಮುಂದುವರಿಯಲಿ ಎಂಬ ಹಾರೈಕೆಗಳು.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು