ಕರ್ನಾಟಕ ರಾಜ್ಯೋತ್ಸವ ವಿಶೇಷ

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನ

ಡಾ ಕೊಳ್ಚಪ್ಪೆ ಗೋವಿಂದ ಭಟ್

 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನ

ಸರಕಾರಿ ಕನ್ನಡ ಶಾಲೆಗಳು ಉಸಿರಿಗಾಗಿ ಪರದಾಡುವ ಸ್ಥಿತಿಗೆ ಬಂದಿರುವುದು ಖೇದದ ಸಂಗತಿಯಾಗಿದೆ.  ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಕಾರ್ಯವೆಸಗುವುದರಲ್ಲಿ ಸರಕಾರಿ ಶಾಲೆಗಳು ವಿಫಲವಾಗಿರುವುದು ಒಂದು ಮುಖ್ಯ ಕಾರಣವಾದರೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಆಕರ್ಷಿಸಲು ವಿಫಲವಾದದ್ದು ಇನ್ನೊಂದು ವಸ್ತು ಸ್ಥಿತಿ. ಸರಕಾರಿ ಕನ್ನಡ ಶಾಲೆಗಳೆಂದರೆ ಆರ್ಥಿಕ ದುರ್ಬಲರಿಗೆ ಕಲಿಕೆಗಿರುವ ಸಾಮಾಜಿಕ ವ್ಯವಸ್ಥೆ ಎಂಬಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಹೊರಬಂದು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಇಂದಿನ ತುತ್ತಾಗಿದೆ. ಹಾಗಾಗಬೇಕಾದರೆ ಶಿಕ್ಷಕ ವೃತ್ತಿಗೆ ದಕ್ಷ ವೃತ್ತಿಪರರನ್ನು ಆಕರ್ಷಿಸುವುದು ಮೊದಲ ಆದ್ಯತೆ. ಬರೇ ಅರ್ಹತೆಯೇ ಮಾನದಂಡವಾದರೆ ಸಾಲದು. ವಿಶೇಷ ದಕ್ಷತೆ ಮತ್ತು ಪರಿಣಾಮ ಬೀರಬಲ್ಲ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ಕೊಡುವ ವ್ಯವಸ್ಥೆಯಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಬೆಳೆಸಿದರೆ ಮಾತ್ರ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸಿ ಉಳಿಸಿಕೊಳ್ಳಲು ಸಾಧ್ಯ. ನೇಮಕಾತಿಯಲ್ಲಿಯೇ ಭ್ರಷ್ಟಾಚಾರವಾಗುತ್ತಿದ್ದರೆ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಖಾಸಗಿ ವಲಯದಲ್ಲಿ ಫಲಿತಾಂಶ ಆಧಾರಿತ ಸಂಬಳವನ್ನು ಕೊಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ(performance based). ಸರಕಾರಿ ವಲಯದಲ್ಲಿ ಕೂಡ ಅದನ್ನು ಅಳವಡಿಸಲು ಸಾಧ್ಯವಿಲ್ಲವೇ? ಹಾಗೆ ಮಾಡಿದರೆ ಶಿಕ್ಷಕರಲ್ಲಿ ಬದ್ಧತೆ, ಸಹಭಾಗಿತ್ವದ ಜವಾಬ್ದಾರಿಗಳ ಮೂಲಕ ತಮ್ಮ ವೃತ್ತಿಯಲ್ಲಿ ಆಸಕ್ತಿ ಹೆಚ್ಚಿಸಲು ಸಾಧ್ಯವಿದೆ.  ಆ ಮೂಲಕ ಸರಕಾರಿ ಕನ್ನಡ ಶಾಲೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಪಡೆಯಬಹುದು; ದಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು.

ಇಂದು ಶಿಕ್ಷಣವೆಂದರೆ ಒಂದು ಹೂಡಿಕೆ ಎನ್ನುವ ಮಟ್ಟಿಗೆ ಮಕ್ಕಳ ಹೆತ್ತವರು ಮನಸ್ಸು ಮಾಡುತ್ತಿದ್ದಾರೆ. ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದ ಮೂಲಕ ಸ್ಪರ್ಧಾತ್ಮಕ ಗೊಳಿಸುವ ಕಾತರ ಎಲ್ಲಾ ಹೆತ್ತವರದ್ದು. ಆದ್ದರಿಂದ ಶಿಕ್ಷಣಕ್ಕಾಗಿ ಗುಣಮಟ್ಟದ ಶಾಲೆಗೆ ಕಳಿಸುವುದು ಸ್ವಾಭಾವಿಕ. ಇದನ್ನು ಮನಗಂಡು ಸರಕಾರಿ ಶಾಲೆಗಳು ಕೊಡುವ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಇಂದಿನ ತುರ್ತಾಗಿದೆ.

ತಮ್ಮ ಮಕ್ಕಳು ಉತ್ತಮ ಉದ್ಯೋಗ ಪಡೆಯಬೇಕಾದರೆ ಇಂಗ್ಲಿಷ್ ಭಾಷೆ ಅವಶ್ಯವೆಂಬ ಭಾವನೆ ಹೆತ್ತವರಲ್ಲಿ  ಬೇರೂರಿದೆ. ಆದ್ದರಿಂದ ಕನ್ನಡ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಕಲಿಕೆಗೆ ಪರ್ಯಾಪ್ತ ಪ್ರಧಾನತೆ ಮತ್ತು ಆದ್ಯತೆಯನ್ನು ಹರಿಸಬೇಕಾಗುತ್ತದೆ. ಅದಕ್ಕೆ ಇಂಗ್ಲೀಷ್ ಕಲಿಸುವ ಸಾಮರ್ಥ್ಯವನ್ನು ಶಿಕ್ಷಕರಲ್ಲಿ ವಿಶೇಷ ಪ್ರಯತ್ನದಿಂದ ಬೆಳೆಸಬೇಕು. ಅದು ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಕಾರ್ಯರೂಪಗೊಳಿಸಬೇಕು.

ಇದು ಕಾರ್ಯಗತಗೊಳಿಸಬೇಕಾದರೆ ಮುಖ್ಯವಾಗಿ ಸಂಪನ್ಮೂಲ ವ್ಯಕ್ತಿಗಳ ಕ್ಷಮತೆ ಮತ್ತು ಕೌಶಲ್ಯದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವುದು ಅನಿವಾರ್ಯ.

ಸರಕಾರಿ ಕನ್ನಡ ಶಾಲೆಗಳು ಇತರ ಶಾಲೆಗಳ ಸಮತಲದಲ್ಲಿ ಸ್ಪರ್ಧಿಸುಲು ನಿಬಂಧ ಜನ್ಯ ಅಡಚಣೆಗಳಿವೆ  ಎಂಬುದು ಗಮನಾರ್ಹವಾದ ವಿಚಾರ. ಸರಕಾರಿ ಕನ್ನಡ ಶಾಲೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಿದ್ದು ಖಾಸಗಿ ಶಾಲೆಗಳಲ್ಲಿ ಅದೇ ನಿಯಮ ಅಳವಡಿಸಿದರೆ ಮಾತ್ರ ಸಮತಲದ ಸ್ಪರ್ಧೆ ಸಾಧ್ಯ. ಈ ಅಸಮತಲ ಸ್ಪರ್ಧೆಯಲ್ಲಿ ಸರಕಾರಿ ಕನ್ನಡ ಶಾಲೆಗಳು ನಲುಗುತ್ತಿವೆ. ಇದನ್ನು ನಿವಾರಿಸಬೇಕಾದರೆ ಎಲ್ಲಾ ಶಾಲೆಗಳಲ್ಲಿ ಏಕರೂಪದ ಕಲಿಕಾ ನೀತಿಯನ್ನು ಸಾರ್ವತ್ರಿಕ ಗೊಳಿಸಬೇಕು.

ಸರಕಾರಿ ಕನ್ನಡ ಶಾಲೆಯಿಂದ ಶಿಕ್ಷಣ ಪಡೆದು ಹೊರಬರುವ ಮಕ್ಕಳು ಮುಖ್ಯವಾಗಿ ಭಾಷಾ ಕೌಶಲ್ಯದಲ್ಲಿ  ನಿಪುಣತೆ ಪಡೆಯಲು ಸಾಧ್ಯವಾಗದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಸರಕಾರಿ ಕನ್ನಡ ಶಾಲೆಗೆ ಬರುವ ವಿದ್ಯಾರ್ಥಿಗಳ ಸಾಮಾಜಿಕ,ಶೈಕ್ಷಣಿಕ ಮತ್ತು ಜೀವನ ಕ್ರಮ ವ್ಯತ್ಯಯವೇ ಕಾರಣ.  ಈ ನ್ಯೂನತೆಯಿಂದ ಹೊರ ಬರಬೇಕಾದರೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ಸಹಾಯದ ಮೂಲಕ ತಮ್ಮ ಹುಟ್ಟಿನಿಂದ ಬಂದ ಕೊರತೆಯನ್ನು ನಿವಾರಿಸುವತ್ತ ಗಮನಹರಿಸಬೇಕು.

ಮೇಲೆ ಹೇಳಿದ ಕಾರಣದಿಂದ ಆರ್ಥಿಕವಾಗಿ ಸಕ್ಷಮರಾದ ಶಿಕ್ಷಕರು ಮತ್ತು ಸರಕಾರಿ ನೌಕರರು ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಸೌಲಭ್ಯದ  ಆಯ್ಕೆಯನ್ನು ಮಾಡುವುದು ಸಹಜವೇ. ಸರಕಾರಿ ಕನ್ನಡ ಶಾಲೆಗಳಲ್ಲಿ ಕೂಡ ಗುಣಮಟ್ಟ ಏರಿಸಿದರೆ ಶಿಕ್ಷಕರು ಮತ್ತು ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಬಹುದೇನೋ!

ಆರ್ಥಿಕ ಅಸಮಾನತೆಯು ಜಾತಿ ಪದ್ಧತಿಯಂತೆ ಒಂದು ಪಿಡುಗು. ತಮ್ಮ ಆರ್ಥಿಕ ಮತ್ತು ಸಾಮಾಜಿಕ ಮಟ್ಟದ ಮಕ್ಕಳೇ ತಮ್ಮ ಮಕ್ಕಳ ಸಹಪಾಠಿಗಳಾಗಿರಬೇಕೆಂಬ ಅವ್ಯಕ್ತ ಹಂಬಲ ಎಲ್ಲಾ ಹೆತ್ತವರಲ್ಲಿ ಇನ್ನೂ ಉಳಿದಿರುವುದು ವಾಸ್ತವ. ಆ ಕಾರಣದಿಂದಾಗಿ ಆರ್ಥಿಕವಾಗಿ ಸಬಲರಾದ ಹೆತ್ತವರು ತಮ್ಮ ಮಕ್ಕಳನ್ನು ಸಮಾನ ಸ್ತರದ ಮಕ್ಕಳು ಬರುವ ಶಾಲೆಗಳಿಗೆ ಸೇರಿಸುವುದು ಸಾಮಾನ್ಯವಾಗಿದೆ. ಸರಕಾರಿ ಕನ್ನಡ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವುದರ ಮೂಲಕ ಮಾತ್ರ ಈ ಪಿಡುಗನ್ನು ನಿವಾರಿಸಬಹುದು.

ಶಿಕ್ಷಣ ಸಚಿವರು ಅಧಿಕಾರಿಗಳು ಸಾರ್ವಜನಿಕವಾಗಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಒತ್ತಾಯಿಸಬೇಕಾದರೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿ ಮಾದರಿಯಾಗಬೇಕು. ಇಲ್ಲದಿದ್ದರೆ ನೈತಿಕ ಧೈರ್ಯ ಎಲ್ಲಿಂದ ಬರುತ್ತದೆ?  ಶಾಲೆಗಳ ಸಾಮಾನ್ಯ ಗುಣಮಟ್ಟ ಹೆಚ್ಚಿಸುವುದರ ಮೂಲಕ ಮಾತ್ರ ಸಚಿವರು,  ಅಧಿಕಾರಿಗಳು ಈ ಕಡೆಗೆ ಮನಸು ಮಾಡಬಲ್ಲರು. ಆಗ ಸಾರ್ವಜನಿಕ ಸ್ವೀಕೃತಿ ಕೂಡ ಸಿಗಬಹುದು.

ಕನ್ನಡ  ಉಳಿಸಲು ಸರಕಾರ ಮತ್ತು ಸಾಹಿತ್ಯ ಪರಿಷತ್ತು ಹಲವು ವಿಧಗಳಲ್ಲಿ ಬಹಳಷ್ಟು ಸಹಯೋಗ ಕೊಡಲು ಸಾಧ್ಯವಿದೆ. ಮೊದಲನೆಯದಾಗಿ ಮೇಲೆ ಸೂಚಿಸಿದ ಸುಧಾರಣೆಗಳು ಸಮಯ ಬೇಡುವ ಪರಿಹಾರಗಳು. ಆದ್ದರಿಂದ ಸರಕಾರ ಆದ್ಯತೆಯ ಮೇರೆಗೆ ಏಕರೂಪದ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಇದರಿಂದ ಮೂಲ ನೆಲೆಯಲ್ಲಿ ಶಿಕ್ಷಣದ ಸ್ವರೂಪ ಏಕರೂಪವಾಗಿರುತ್ತದೆ ಮತ್ತು ಏಕ ನೆಲೆ( even ground)ಯನ್ನು ಹೊಂದುತ್ತದೆ. ತಕ್ಷಣ ಜಾರಿಗೆ ಬರುವಂತೆ ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಕಲಿಕೆ ಮಾಡಿದ ಮಕ್ಕಳಿಗೆ ಉದ್ಯೋಗದಲ್ಲಿ ರಾಜ್ಯಮಟ್ಟದಲ್ಲಾದರೂ ಸಾಕಷ್ಟು ಮೀಸಲಾತಿ ಮಾಡಿದರೆ ಕನಿಷ್ಠ ಕೆಳವರ್ಗದ ಮತ್ತು ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳತ್ತ ಮುಖ ಮಾಡಿಸಲು ಸಾಧ್ಯ. ಪರ್ಯಾಯವಾಗಿ ಕನ್ನಡೇತರ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಕಲಿಕೆಯನ್ನು ಕಡ್ಡಾಯ ಮಾಡಿದರೆ ಸರಕಾರಿ ಕನ್ನಡದ ಶಾಲೆಗಳತ್ತ ಹೆಚ್ಚಿನ ಒಲವನ್ನು ನಿರೀಕ್ಷಿಸಬಹುದು.

ಸಾಹಿತ್ಯ ಪರಿಷತ್ತು ಕನ್ನಡದ ಏಳಿಗೆಗಾಗಿ ಕಾರ್ಯವೆಸಗುವ ಸರಕಾರದ ಒಂದು ಅಂಗ ಸಂಸ್ಥೆ. ರಾಜ್ಯಭಾಷೆಗೆ ಪ್ರೋತ್ಸಾಹ ಮಾಡುವ ಜವಾಬ್ದಾರಿ ಪರಿಷತ್ತಿಗೆ ಇದೆ. ಉಚ್ಚ ಶಿಕ್ಷಣವನ್ನು ಕೂಡ ಕನ್ನಡದಲ್ಲಿ ನಡೆಸುವ ಕಾರ್ಯತಂತ್ರವನ್ನು ರೂಪಿಸಿದರೆ ವೃತ್ತಿಪರ ಕಲಿಕೆಗಳನ್ನು ಮಾತೃಭಾಷೆಯಲ್ಲಿ ಮುಂದುವರಿಸಲು ಸಾಧ್ಯ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಜಾರಿಯಾದ ಈ ನೀತಿ ಅನುಕರನೀಯ. ಹಾಗೆ ಮಾಡಿದರೆ ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಮಾತ್ರ ಕಲಿಯುವ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ದುರ್ಬಲತೆಯಿಂದ ಮುಂದಿನ ಶಿಕ್ಷಣದಲ್ಲಿ ಕೊರತೆಯಾಗದಂತೆ ವಿದ್ಯಾಭ್ಯಾಸ ನಡೆಸಲು ಸಾಧ್ಯ. ಅಂತಹ ಆಶ್ವಾಸನೆಯನ್ನು ಸರಕಾರ ಸಾಂ‌ಸ್ಥಿಕವಾಗಿ ಕೊಟ್ಟರೆ ವಿಷ ವರ್ತುಲದ ಭಾಷಾ ಗೊಂದಲದಿಂದ ಹೊರಬರಲು ಸಾಧ್ಯ.

ಒಂದು ರಾಜ್ಯದಲ್ಲಿ ಕೆಲಸ ಮಾಡುವ ನೌಕರರು ಸ್ಥಳೀಯ ಭಾಷೆಯನ್ನು ವ್ಯಾವಹಾರಿಕ ಮಟ್ಟಕ್ಕಾದರೂ ಕಲಿತಿರಬೇಕಾದದ್ದು ಸೇವೆಯನ್ನು ಗ್ರಾಹಕ ಸ್ನೇಹಿಯಾಗಿ ಮಾಡಲು ಅಗತ್ಯ. ಇದಕ್ಕೆ ಬೇಕಾದ ಕಲಿಕಾ ಸೌಕರ್ಯವನ್ನು ಒದಗಿಸುವುದು ಸರಕಾರ ಮತ್ತು ಅಂಗ ಸಂಸ್ಥೆಯ ಜವಾಬ್ದಾರಿಯಾಗಿದೆ.  ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಮುಖ್ಯ.

ಭಾಷಾ ಪ್ರದೇಶದ ಜನರಿಗೆ ಉದ್ಯೋಗಗಳಲ್ಲಿ ಆದ್ಯತೆ ನೀಡಿದರೆ  ಕನ್ನಡ ಶಾಲೆಗಳಿಗೆ ಸೇರಿಸಲು ಕೆಲವು ಮಂದಿಯಾದರೂ ಮುಂದೆ ಬರಬಹುದು.  ಈ ತರದ ಪೂರಕ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿ ಕನ್ನಡ ಮಾಧ್ಯಮದಲ್ಲಿ ಸರಕಾರಿ ಶಾಲೆಗಳಲ್ಲಿ ಓದಿದವರಿಗೆ ವಿಶೇಷ ಮೀಸಲಾತಿ ನೀಡಿದರೆ ಕನ್ನಡ ಶಾಲೆಗಳಿಗೆ ಮರು ಜೀವ ಬರಬಹುದು.  ಶಾಲೆಗಳು ಎಲ್ಲಾ ವರ್ಗಗಳನ್ನು ಆಕರ್ಷಿಸಲು ಸಾಧ್ಯ.

ಹೆಚ್ಚಿನ ಸರಕಾರಿ ಶಾಲೆಗಳು ಉತ್ತಮ ಸ್ಥಿರ ಆಸ್ತಿಗಳನ್ನು ಹೊಂದಿವೆ. ಆಟದ ಮೈದಾನ, ವಿಶಾಲವಾದ ಜಾಗ ಈಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಪಾಳು ಬಿದ್ದಿರುವುದು ಸ್ವಲ್ಪಮಟ್ಟಿಗೆ ನಿಜ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇರುವುದರಿಂದ ಶಿಕ್ಷಣ ಇಲಾಖೆ ಹೆಚ್ಚು ಶಿಕ್ಷಕರನ್ನು ಶಾಲೆಗಳಿಗೆ ನೇಮಕಾತಿ ಮಾಡಲು ಸಕಾರಣವಾಗಿಯೇ ಉಚಿತವಾಗಿಲ್ಲ. ಶಿಕ್ಷಣವೆಂಬುದು ಭವಿಷ್ಯವನ್ನು ರೂಪಿಸುವ ಸಾಧನವಾಗಿರುವುದರಿಂದ ಅದರ ಗುಣಮಟ್ಟವನ್ನು ಕಾಪಾಡುವುದು ಸಾಮಾಜಿಕ ನ್ಯಾಯವನ್ನು ಕೊಡುವ ಒಂದು ಮುಖ್ಯ ಪರ್ಯಾಯವಾಗಿದೆ. ಅದರತ್ತ ವಿಶೇಷ ಗಮನದ ತುರ್ತು ಇದೆ.

ಸರಕಾರವು ಶಿಕ್ಷಣವನ್ನು ಒಂದು ಸಾರ್ವಜನಿಕ ಸೇವೆ ಎಂಬ ನೆಲೆಯಲ್ಲಿ ನೋಡಿದರೆ ಪರಿಸ್ಥಿತಿ ಸುಧಾರಿಸದು. ಬದಲಾಗಿ ಅದೊಂದು ಭವಿಷ್ಯನ್ನು ರೂಪಿಸುವ ಸಂಸ್ಥೆ ಎಂಬ ನೆಲೆಯಲ್ಲಿ ನೋಡಿದರೆ ಮಾತ್ರ ಸರಕಾರಿ ಶಾಲೆಗಳು ಉಳಿಯಬಲ್ಲುವು.  ಶಾಲೆಗಳನ್ನು ವೃತ್ತಿ ಪರವಾಗಿ ನಡೆಸಿದರೆ ಮಾತ್ರ ನಿರೀಕ್ಷಿತ ಫಲಿತಾಂಶ ಸಾಧ್ಯ! ಆದ್ದರಿಂದ ಹೊಸ ದೂರ ದೃಷ್ಟಿ ಅಗತ್ಯ.


ಡಾ ಕೊಳ್ಚಪ್ಪೆ ಗೋವಿಂದ ಭಟ್

Leave a Reply

Back To Top