ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಒಲವ ನೀಡುವ ಪ್ರಕೃತಿಗೆ ಪೆಟ್ಟು ಕೊಡುವ ಮನುಜ.‌..

“ಪ್ರಾಣಿಗಳೇ ಗುಣದಲ್ಲಿ ಮೇಲು ಮನುಷ್ಯನು ಅದಕ್ಕಿಂತ ಕೀಳು, ಉಪಕಾರ ಮಾಡಲಾರ ಮಾಡಿದರೆ ಸಹಿಸಲಾರ..”

ಮೇಲಿನ ಜನಪ್ರಿಯ ಚಲನಚಿತ್ರ ಗೀತೆಯು ಮನುಷ್ಯನ ಮೂಲತಃ ಸ್ವಭಾವವನ್ನು ವ್ಯಕ್ತಪಡಿಸುತ್ತದೆ. ಮನುಷ್ಯ ತಾನಿರುವ ಪರಿಸರ ಮತ್ತು ಪರಿಸರದ ಸುತ್ತಲೂ ಒಳ್ಳೆಯದನ್ನು ಬಯಸುವ ಸ್ವಭಾವ ತುಂಬಾ ವಿರಳವಾಗಿದೆ.  ಮನುಷ್ಯ ಸಾಂಘಿಕವಾಗಿ ಆಲೋಚಿಸುವುದಕ್ಕಿಂತಲೂ ವ್ಯಕ್ತಿಗತವಾಗಿ ಆಲೋಚಿಸುವುದೇ ಹೆಚ್ಚು. ಮನುಷ್ಯನು ತನಗಾಗಿ ಎಲ್ಲವನ್ನು ಮಾಡಿಕೊಳ್ಳುತ್ತಾನೆ. ಎಲ್ಲವೂ ತನ್ನಿಂದಲೇ ಎನ್ನುವ ಸ್ವಾರ್ಥ ಮನೋಭಾವದಿಂದ ಸದಾ ಸಮಾಜದಲ್ಲಿ ಬದುಕುತ್ತಿರುತ್ತಾನೆ. ಎಲ್ಲವನ್ನು ನೀಡಿದ ಪ್ರಕೃತಿಯು ಇವನ ಸ್ವಭಾವವನ್ನು ಕಂಡು ಮರಗುತ್ತದೆ.

“ಅಯ್ಯೋ ಮುಠ್ಠಾಳ ಎಲ್ಲವೂ ನನ್ನಿಂದಲೇ ಎನ್ನುವ ನಿನ್ನ ಸಂಕುಚಿತ ಮನೋಭಾವವು ನಿನ್ನ ಸರ್ವನಾಶಕ್ಕೆ ನಾಂದಿಯಾಗುತ್ತದೆ”  ಎನ್ನುವ ಎಚ್ಚರಿಕೆಯ ಪಾಠವನ್ನು ಹಲವಾರು ಬಾರಿ ಪ್ರಕೃತಿವಿಕೋಪಗಳ ಮೂಲಕ ತೋರಿಸಿದೆ. ಇನ್ನೂ ಅವನಿಗೆ ಬುದ್ದಿ ಬರದಷ್ಟು ದಡ್ಡನಾಗಿದ್ದಾನೆ..!!

ಪ್ರಕೃತಿಯು ಮನುಷ್ಯನಿಗೆ ಎಲ್ಲವನ್ನೂ ಧಾರೆಯೆರೆಯುತ್ತದೆ. ಮನುಜ ಪರಾವಲಂಬಿ. ಗಾಳಿ, ಬೆಳಕು, ಅಹಾರ, ವಸತಿ ಎಲ್ಲವನ್ನು ಕೊಟ್ಟ ಪ್ರಕೃತಿಗೆ :  ಪ್ರಕೃತಿಯನ್ನೇ ನಾಶ ಮಾಡುವ ಕೆಟ್ಟ ಗುಣ ಅವನದು.  ಜೀವ ಅನಿಲವಾದ ಆಮ್ಲಜನಕವನ್ನು ಕೊಟ್ಟು ಪ್ರಕೃತಿಗೆ ಬೇಡವಾದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಂಡು ವಾತಾವರಣವನ್ನು ಶುದ್ಧಗೊಳಿಸುವ ಗುರುತುರವಾದ ಜವಾಬ್ದಾರಿಯನ್ನು ಸಸ್ಯಗಳು ನಿರ್ವಹಿಸುತ್ತವೆ. ಇಂತಹ ಅಪರೂಪ ಪರೋಪಕಾರದ ಸಸ್ಯಗಳು ನೆರಳು, ಗಾಳಿ, ಫಲ-ತಾಂಬೂಲ, ಎಲ್ಲವನ್ನು ಕೊಟ್ಟರೂ ಯಾವತ್ತೂ ಬಿಂಕವನ್ನು ಮಾಡಲು ಹೋಗುವುದಿಲ್ಲ. ಅಂತಹ ಪರೋಪಕಾರ ಮಾಡಿದ  ಸಸ್ಯಗಳನ್ನು ಕಡಿದು, ಕತ್ತರಿಸಿ ಕೇಕೆ ಹಾಕುವುದು ಮನುಷ್ಯನ ವಿಕೃತ ಮನಸ್ಸನ್ನು ತೋರಿಸುತ್ತದೆ.

ಇನ್ನು ತೊರೆತೊರೆಯಾಗಿ ಹರಿಯುವ ನದಿ, ಕಾಲುವೆ ಹಳ್ಳ, ಕೊಳ್ಳಗಳು ಮನುಷ್ಯನ ದಾಹವನ್ನು ತೀರಿಸುವುದರ ಜೊತೆಗೆ ದೈನಂದಿನ ಬದುಕಿಗೆ ಬೇಕಾದ ನೀರಿನ ಅವಶ್ಯಕತೆಯನ್ನು ಪೂರೈಸುತ್ತವೆ. ಇಂತಹ ಅಪರೂಪದ ನೀರನ್ನು ನಾವು ಗಂಗೆಯನ್ನು ಜಲದೇವತೆ ಎನ್ನುವ ಪವಿತ್ರವಾದ ಗೌರವವಾದ ಭಾವನೆಯನ್ನು ಹೊಂದಿರುತ್ತೇವೆ. ಕೇವಲ ಸಾಂಕೇತಿಕವಾಗಿ ಕರೆದು ಅದನ್ನು ಹೊಲಸು ಮಾಡುವ, ಕಾರ್ಖಾನೆಗಳ ರಾಸಾಯನಿಕವನ್ನು ಬಿಡುವ, ಉಪಯೋಗಿಸಿ ಬೀಸಾಕಿದ ಕಸ ಕಡ್ಡಿಯನ್ನು ಎಸೆಯುವ ಬೇಜವಾಬ್ದಾರಿ ವ್ಯಕ್ತಿತ್ವವನ್ನು ಮನುಷ್ಯ ಬೆಳೆಸಿಕೊಂಡಿರುವುದು ವಿಷಾದನೀವೆನಿಸುತ್ತದೆ.

ಮುನುಜ ಮತ್ತು ಪ್ರಾಣಿಗಳಿಗೆ ಎಲ್ಲಾ ಆಹಾರ ನೀಡುವ ಭೂಮಿ ತಾಯಿಯು ನಮ್ಮ ಅಗತ್ಯಗಳೆಲ್ಲವನ್ನು ಪೂರೈಸುತ್ತದೆ.

“ಭೂಮಿ ಮನುಷ್ಯನ ಆಸೆಗಳನ್ನು ಮಾತ್ರ ಈಡೇರಿಸುತ್ತದೆ ದುರಾಸೆಗಳನ್ನಲ್ಲ” ಎನ್ನುವ ಮಾತು ಸತ್ಯವಾದರೂ ಇತ್ತೀಚಿನ ದಿನಗಳಲ್ಲಿ ಮನುಷ್ಯನ ದುರಾಸೆಗಳು ಹೆಚ್ಚಾದಂತೆ ಅಲ್ಲಲ್ಲಿ ಭೂಕಂಪ ಆಗುವುದನ್ನು ನೋಡುತ್ತೇವೆ. ತನ್ನ ಸಾಮರ್ಥ್ಯವನ್ನು ಮೀರಿ ಭಾರವನ್ನು ಹೊತ್ತಾಗ  ಭೂಮಿಗೆ ಭಾರ ಹೆಚ್ಚಾದ ಕೂಡಲೇ ಏನು ಮಾಡಬಲ್ಲದು..? ಹೆಚ್ಚಾದ ಭಾರ ಕೆಳಗೆ ಇಳಿಸಲೇಬೇಕಲ್ಲವೇ..? ಹಾಗಾಗಿ ಅಲ್ಲಲ್ಲಿ ಭೂಮಿ ಕಂಪಿಸುವುದನ್ನು ಸಹಜವೆನ್ನುವಂತೆ ಇಂದು ನಾವು ನೋಡುತ್ತಿದ್ದೇವೆ. ಅಷ್ಟಾದರೂ ಮನುಜ ಇನ್ನೂ ಪಾಠ ಕಲಿತಿಲ್ಲ. ಮೂರು, ನಾಲ್ಕು, ಐದಾರಲ್ಲ ಹತ್ತತ್ತು ಅಂತಸ್ತುಗಳ ಅರಮನೆಯ ಮಹಡಿಗಳನ್ನು ಕಟ್ಟಿಕೊಂಡು ಕುಣಿಯುತಿರುವುದು ವಿಷಾದನೀಯ.

ಪ್ರಾಣಿಗಳು ಮತ್ತು ಮನುಷ್ಯನಿಗೆ ಪ್ರಕೃತಿ ಎಲ್ಲವನ್ನು ನೀಡಿದೆ. ಅದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡು ಪ್ರಕೃತಿಯನ್ನು ಉಳಿಸಿಕೊಂಡರೆ, ಮನುಜನ ಬದುಕು ಹಸನವಾದಿತು.

ಆದರೆ ಆಧುನಿಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಹಲವಾರು ಕಾರ್ಖಾನೆಗಳನ್ನು ಸ್ಥಾಪನೆ ಮಾಡುವುದರ ಮೂಲಕ ನದಿ ತೀರಕ್ಕೆ ಕಲುಷಿತ ನೀರನ್ನು ಬಿಟ್ಟು ಜಲಚರ ಜೀವಿಗಳಿಗೂ, ನೀರನ್ನು ಕುಡಿಯುವ ಪ್ರಾಣಿಗಳಿಗೂ, ಹಕ್ಕಿ ಪಕ್ಷಿಗಳಿಗೂ, ವಿಷವುಣಿಸುವುದು ಮನುಜನ ಹಿಂದಿನಿಂದಲೂ ಕೆಟ್ಟ ಅಭ್ಯಾಸವಾಗಿಬಿಟ್ಟಿದೆ.

ಇನ್ನೂ ಮನುಜ ಕಾಡುಗಳನ್ನು ಕಡಿಯುತ್ತಾ, ಊರುಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಾ, ಪರಿಸರವನ್ನು ನಾಶ ಮಾಡಿದ್ದಾನೆ. ಅರಣ್ಯದಲ್ಲಿ ವಾಸಿಸುವ ಪಕ್ಷಿಗಳು ಪ್ರಾಣಿಗಳಿಗೆ ಮತ್ತು ಅಲೆಮಾರಿ ಜನಾಂಗದ ಬದುಕನ್ನು ಅವನತಿಯತ್ತ ಕೊಂಡೊಯ್ಯುತ್ತಿರುವುದು ಪ್ರಕೃತಿ ಸಹಿಸುತ್ತಿಲ್ಲ.

ಮನುಷ್ಯರಾದ ಸಾವುಗಳ ಪ್ರಕೃತಿ ನಮಗಾಗಿ : ಪ್ರಕೃತಿಗಾಗಿ ನಾವು ಎಂಬ ಅಂಶವೇ  ಅಂತಿಮ ಸತ್ಯ. ಹಾಗಾಗಿ ನಾವೆಲ್ಲರೂ ಪ್ರಕೃತಿಯ ಒಲವಿಗೆ ಋಣಿಯಾಗಿರೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ 
ಕವನ ಲೇಖನಗಳ ಪ್ರಕಟ.

Leave a Reply

Back To Top