ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಅಭಿವ್ಯಕ್ತಿ

ಗೋನವಾರ ಕಿಶನ್ ರಾವ್ 

  

ಅಭಿವ್ಯಕ್ತಿ ಎಂಬ ಮುಕ್ತ ಪರಿಸರ, ಬರೇ ಮನುಷ್ಯ ಜೀವಿ ಮಾತ್ರ ಬಯಸುವುದಲ್ಲ ಜೀವ ಜಗತ್ತಿನ ಪ್ರತಿಯೊಂದು ಜೀವಿ ಕೂಡಾ ತನ್ನ ಬೇಡಿಕೆಗಳನ್ನು, ಭಾವನೆಗಳನ್ನು ಪ್ರಕಟ ಪಡಿಸಲು, ತನ್ನದೇ ವಿಧಾನವನ್ನು ಬಳಸಿಕೊಳ್ಳುತ್ತದೆ.

 ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದು ಬರುವದು ಸಹ  ಮನುಷ್ಯ ಮತ್ತು ಇತರ ಜೀವಿಗಳಿಗೂ ಇರುವ ವ್ಯತ್ಯಾಸವೆಂದರೆ ಮನುಷ್ಯನ ಅಭಿವ್ಯಕ್ತಿಯ ಒಳಗೆ ಸ್ವಾರ್ಥ, ಲಾಭ ನಷ್ಟಗಳ ಲೆಕ್ಕಾಚಾರಗಳೇ ತುಂಬಿಕೊಂಡಿರುತ್ತದೆ. ಆದರೆ ಮನುಷ್ಯನಲ್ಲದ ಜೀವ ಜಗತ್ತಿನ ಅಭಿವ್ಯಕ್ತಿಯ ಒಳಗೆ ಸಮುದಾಯದ ಕಾಳಜಿ ತುಂಬಿರುತ್ತದೆ. ಹಂಚಿ ತಿನ್ನುವ; ಸುಖಕಷ್ಟಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ; ಪರಿಸರವನ್ನು ಇನ್ನಷ್ಟು ಕೆಂಪಾಗಿಸುವ,ದಟ್ಟೈಸುವ, ತಂಪಾಗಿಸುವ ಸಹಜವಾದ ಧ್ವನಿ ಅಲ್ಲಿ ಪ್ರತಿಧ್ವನಿಸುತ್ತದೆ. ಅಭಿವ್ಯಕ್ತಿಯ ಮೌಲ್ಯವನ್ನು ನಾವು ಪ್ರಕೃತಿಯಿಂದಲೂ ಕಲಿಯಬೇಕಾಗಿದೆ. ಅಭಿವ್ಯಕ್ತಿ ಪ್ರಕಟಪಡಿಸುವಾಗ ಅದಕ್ಕೊಂದು ಸಂಸ್ಕಾರವಿದೆ. ಮನುಷ್ಯತ್ವದ ಲೇಪನವಿದೆ. ಅನ್ನುವುದನ್ನು ಅರ್ಥಮಾಡಿಕೊಳ್ಳದೇ ಇರುವುದು ದುರಂತವೇ ಸರಿ.

ಬಾಯಿ ಇದೆ ಎಂಬ ಒಂದೇ ಕಾರಣಕ್ಕಾಗಿ ಏನನ್ನಾದರೂ ಮಾತಾಡಬಹುದು; ಲೇಖನಿ ಕೈಯಲ್ಲಿದೆ ಎಂಬ ಕಾರಣಕ್ಕಾಗಿ ಏನನ್ನೂ ಬರೆಯಬಹುದು; ಬ್ರಷ್ ಇದೆ ಎಂದ ಮಾತ್ರಕ್ಕೆ ಯಾವ ಚಿತ್ರವನ್ನು ಬಿಡಿಸಬಹುದು ಎಂದು ತಿಳಿದಿರುವುದು ಇಂದಿನ ಅಭಿವ್ಯಕ್ತಿ ಸ್ವಾತಂತ್ರ್ಯ ದಿಕ್ಕು ತಪ್ಪುತ್ತಿರುವದಕ್ಕೆ ಇರುವ  ಕಾರಣಗಳಲ್ಲಿ  ಒಂದು ಇರಬಹುದೆ ?   ಇದೊಂದು ಚಿಂತೆಯ-ಚಿಂತನೆಯ ಸಂಗತಿಯೂ ಹೌದು.

ಲೇಖಕನನ್ನೇ ಕಾಡುವ, ಈ  ಅಭಿವ್ಯಕ್ತಿ ಪದದ ಬಗೆಗಿನ ಜಿಜ್ಞಾಸೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು,ಒಂದಷ್ಟು ಮಾಹಿತಿಯನ್ನು ನೀಡಬಹುದು. ಎನಿಸಿತು

ಭಾಷಾಶಾಸ್ತ್ರಜ್ಞರ ಅಭಿಪ್ರಾಯವನ್ನು ಸಂಕಲಿಸಿ ಹೇಳಬಹುದಾದಾರೆ, ಈ ಅಭಿವ್ಯಕ್ತಿ (Expression) ಎನ್ನುವುದಕ್ಕೆ,

ಮಾಧ್ಯಮ,(vehicle)

ಮಾತುಗಳಲ್ಲಿ,ಶಬ್ದ,ರಚನೆ

ಪ್ರಯೋಗ(Expressive ness)

ಸಂಕ್ಷಿಪ್ತ ಅಥವಾ, ಸಾಂಕೇತಿಕ ಅಭಿವ್ಯಕ್ತಿ (A brief or symbolic expression),

ಸೃಜನಾತ್ಮಕ ಅಭಿವ್ಯಕ್ತಿ (creative Expression),

ಶಾಬ್ದಿಕ ಅಭಿವ್ಯಕ್ತಿ(speach expresson).

ಎನ್ನುವ ಬಹುರೂಪೀ ಅರ್ಥ ಗಳಿರುವುದನ್ನು ಶಬ್ದಕೋಶಗಳು  ರುಜುವಾತು ಪಡಿಸಿವೆ.

ಚಾರ್ಲ್ಸ್ ಡಾರ್ವಿನ್ ನ  ಪ್ರಕಾರ, ಭಾವನೆಗಳ ಅಭಿವ್ಯಕ್ತಿಯನ್ನು ವಿವರಿಸುವ ನಿಯಮಗಳು, ನೈಸರ್ಗಿಕ ಆಯ್ಕೆಯ ತತ್ವದೊಂದಿಗೆ, ಸ್ಪರ್ಶ ಸಂಬಂಧವನ್ನು ಹೊಂದಿವೆ.ಅದು ಇಂದ್ರಿಯಮೂಲ,ಇಂದ್ರಿಯಾತೀತ, ಪ್ರತ್ಯಕ್ಷ, ಪರೋಕ್ಷ, ಹೀಗೆ ಏನಾದರೂ ಆಗಿರಬಹುದು ಎನ್ನತ್ತಾನೆ ಡಾರ್ವಿನ್. ಮತ್ತು ಅವನು ಅವುಗಳನ್ನು, ಈ ಕೆಳಗಿನಂತೆ  ಸೂಚಿಸಿದ್ದಾನೆ :

 ಸಂಯೋಜಿತ ಅಭ್ಯಾಸಗಳು :- ಆಸೆಗಳನ್ನು ತೃಪ್ತಿಪಡಿಸಲು, ಅಹಿತಕರ ಸಂವೇದನೆಗಳನ್ನು ತೆಗೆದು ಹಾಕಲು ಬೇಕಾಗುವ,  ಸಂಗತಿಗಳು.

ವಿರೋಧಾಭಾಸ:- ಈ ಸಂಗತಿಗಳನ್ನು,ಸಂಯೋಜಿಸಿಕೊಂಡರೆ, ಈ ನಡವಳಿಕೆಯ ಮಾದರಿಯನ್ನು ಸೃಷ್ಟಿಸುವ ಮನೋಭಾವಕ್ಕೆ ವಿರುದ್ಧ, ಮನಸ್ಸಿನ ಸ್ಥಿತಿ ಕಾಣಿಸಿಕೊಂಡಾಗ, ವಿರೋಧೀ,ಮನೋಭಾವ ಉತ್ಪತ್ತಿಯಾಗುತ್ತದೆ, ಆದರಿಂದ,ಯಾವ ಪ್ರಯೋಜನವೂ, ಇರುವದಿಲ್ಲ.

ನಮ್ಮ ವಿದುಳಿನ ವ್ಯವಸ್ತೆ:- ನರಗಳ ಶಕ್ತಿಯು,  ಉತ್ಸಾಹದಿಂದ, ತುಂಬಿದಾಗ, ಅದು  ಅಭಿವ್ಯಕ್ತಿಶೀಲ ಚಲನೆಗಳಿಗೆ ಕಾರಣವಾಗಬಹುದು. ನರಗಳು ಒಂದು, ನಿರ್ದಿಷ್ಟ, ಸ್ನಾಯುಗಳ ಮೇಲೆ ನೇರವಾಗಿ ಪರಿಣಾಮ ಬೀರಬಹುದು, ನರಕೋಶದ ಹೊರಸೂಸುವಿಕೆಯ ದಿಕ್ಕನ್ನು,  ನಮ್ಮ  ನರಮಂಡಲದ ರಚನೆಯಿಂದ ನಿರ್ಧರಿಸಲಾಗುತ್ತದೆ. ಈ ಕಲ್ಪನೆಯು ಅಭಿವ್ಯಕ್ತಿ ಸಿದ್ಧಾಂತಗಳ ಮನೋಭೂಮಿಕೆಯಾಗಿದೆ ಎಂದು ಹೇಳಲಾಗಿದೆ.  ಡಾರ್ವಿನ್ ಇದಕ್ಕಾಗಿ,

ಇಜಾರ್ಡ್

(International Journal of Academic Research and Development is indexed, refereed, peer reviewed, open access journal, publishing high quality papers on all aspects of education)

 ಮತ್ತು ಟಾಮ್ಕಿನ್ಸ್

(Mr Tompkins is the title character in a series of four popular science books by the physicist George Gamow.).  ಗಳನ್ನು ಆಧರಿಸಿ ವಿವರಿಸುತ್ತಾನೆ ಸಿದ್ಧಾಂತಗಳಲ್ಲಿ

ಪ್ರತಿಯೊಂದು ಮೂಲ ಭಾವನೆಗಳ ಅಭಿವ್ಯಕ್ತಿಗೆ ಸಹಜ  ಮತ್ತು ಹಂತ,ಹಂತ ಪ್ರಕ್ರಿಯೆಗಳಿವೆ.

ಭಾವನೆಗಳ ಅಭಿವ್ಯಕ್ತಿ ಇತರ ಪ್ರಾಣಿಗಳಲ್ಲಿರುವ ಕೆಲವು ಪ್ರತಿಕ್ರಿಯಾ ಮಾದರಿಗಳಿಂದ ಜೀವ ವಿಕಾಸ ಸಿದ್ಧಾಂತ ಒಂದು ಮೂರ್ತರೂಪ ಪಡೆದಿದೆ.ಜೊತೆಗೆ, ಅದು ಒಂದು ವಿಧವಾದ, ಕ್ರಿಯಾತ್ಮಕ ಮೌಲ್ಯವನ್ನು ಹೊಂದಿದೆ, ಜೊತೆಗೆ ಭಾವನಾತ್ಮಕ ಪ್ರತಿಕ್ರಿಯೆಗಳ ಪರಿಣಾಮಗಳನ್ನು ಎದುರು ಇರುವವ್ಯಕ್ತಿ/ ವ್ಯಕ್ತಿಗಳಿಗೆ ತಿಳಿಸುತ್ತದೆ.

 ಭಾಷಾ ಪ್ರಯೋಗ ದೃಷ್ಟಿಯಿಂದ ವಿವೇಚಿಸುವಾಗ,  ಅಭಿವ್ಯಕ್ತಿಗಳನ್ನು,ಜಾರಿಗೊಳಿಸುವ,  ಮೊದಲು ಅವುಗಳಿಗೆ, ಅಗತ್ಯವಾದ, ತರಬೇತಿಯ ಅಗತ್ಯವಿದೆ. ಇದು ಭಾವನಾತ್ಮಕ ಪ್ರತಿಕ್ರಿಯೆಯನ್ನು ನಿರ್ಧರಿಸುವ ನೇರ ವಿಷಯ.   ಕಲಿಕೆ ಇಲ್ಲದಿದ್ದರೆ  ಸಾಧ್ಯವಾಗುವುದಿಲ್ಲ. “ಸ್ಥಿರ ಅಭಿವ್ಯಕ್ತಿ” ಪದವನ್ನು, ಶಾಸ್ತ್ರಜ್ಞರು ಸೂಚಿಸುವ ಅರ್ಥಗಳು, ಅದರ ಅಂಗ ಪದಗಳ ಸರಳ ಅರ್ಥಕ್ಕಿಂತ ಭಿನ್ನವಾಗಿರುತ್ತದೆ ಈ ರಚನೆಗಳು ಅರ್ಥಮಾಡಿಕೊಳ್ಳಲು. ಈ ಪರಿಕಲ್ಪನೆಯನ್ನು ಉಲ್ಲೇಖಿಸಲು ಸಹ “ನುಡಿಗಟ್ಟಿನ”  ಪದಕ್ಕೆ ಸಮಾನಾರ್ಥಕ ಪದ,(ಪದಕೋಶದ ಮೂಲಕ ಈ ವಾಕ್ಯದ ಪದ- ಪದಗಳಿಗೆ ಅರ್ಥವನ್ನು ಹೊಂದಿಸಿ, ಅದರ ಒಟ್ಟಾರೆ ಅರ್ಥವನ್ನು ತಿಳಿಯಲು ಸಾಧ್ಯವಿಲ್ಲ.  ರಚನಾತ್ಮಕ ಪದ್ಧತಿಯೂ ಅಷ್ಟೇ. ಹೀಗೆ ನುಡಿಗಟ್ಟುಗಳು ವ್ಯಾಕರಣ ನಿಯಮದ ಕಟ್ಟಿಗೆ ಒಳಗಾಗದೆ, ಒಂದು ಭಾಷೆಯನ್ನಾಡುವ ಜನರ ಅನುಭವ, ಅಗತ್ಯ ಹಾಗೂ ಸಂದರ್ಭಕ್ಕೆ ಸರಿಯಾಗಿ, ರೂಪುಗೊಳ್ಳುತ್ತವೆ. ಆಕರ್ಷಕವಾಗಿ, ಸಶಕ್ತವಾಗಿದ್ದಲ್ಲಿ ಬಹುಕಾಲ ನೆಲೆ ನಿಲ್ಲುತ್ತವೆ. ಇಲ್ಲದಿದ್ದರೆ ಅಳಿಸಿ ಹೋಗುತ್ತ,ವೆ). 

 ವಿವರಣೆ,ಯಾಕೋ  ಮೇಲಿನ ಮಟ್ಟಕ್ಕೆ ಹೋಗುತ್ತಿದ್ದು, ವಿಷಯ  ನಿಯಂತ್ರಣ ಮೀರಿ ಹೋಗುತ್ತಿದೆ  ಎಂದಿನಿಸಿತೇ ?  ಹೌದು ನನಗೂ ಅನಿಸಿ  ಕಿರಿಕಿರಿ ಯಾಗತೊಡಗಿದೆ.  ಸರಳೀಕರಿಸಿ  ಹೇಳುವಾದಾರೆ,ಉಳಿದೆಲ್ಲ ತಾಂತ್ರಿಕಸಂಗತಿಗಳಿಗಿಂತ,

ಮಾತು,

ಶಬ್ದ,

ರಚನೆ,

ಸೃಜನಾತ್ಮಕ  ಗಳಂತಹ ಸಾಹಿತ್ಯಿಕ

ಸಂಗತಿಗಳ ಕಡೆಗೆ ಗಮನ ಕೊಡುವುದು ಸರಿ ಎಂದೆನಿಸುತ್ತದೆ.

ಕಾವ್ಯ,ಕಥೆ,ಕಾದಂಬರಿ,ನಾಟಕ ಇತ್ಯಾದಿ ರಚನೆಗಳಲ್ಲಿ, ಸೃಜನಾತ್ಮಕ ಅಭಿವ್ಯಕ್ತತೆಯನ್ನು,ಕಾಣಬಹುದು.ನಾವೆಲ್ಲ ಸಾಮಾನ್ಯವಾಗಿ, ಯಾವುದೋ ಕೃತಿಯನ್ನು ಓದುವಾಗ, ವಸ್ತು, ಪಾತ್ರ, ವಸ್ತ್ರ,-ವಿನ್ಯಾಸಗಳಿಗೆ,ಗಮನ ನೀಡುತ್ತೇವೆ.ಭಾಷೆಯ ಕಡೆಗೆ ಗಮನ  ನೀಡುವುದು, ಕಮ್ಮಿ.  ಭಾಷೆಯಿಂದ ಏನಾಗಬೇಕಿದೆ ಎನ್ನುವ ಉಡಾಪೆಯ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತವೆ.ನಾಯಕ- ನಾಯಕಿ ಸಂಸಾರ ಸುಖ ದುಃಖ ಗಳಂತಹ ಸಂಗತಿಗಳಲ್ಲಿ ಮುಖ್ಯ ವಾಗಿ ಭಾಷೆ ಗೌಣವಾಗುತ್ತದೆ. ಭಾವೋದ್ರೇಕ ಮುಂದಿನ ಸಾಲಿನಲ್ಲಿ ನಿಲ್ಲುತ್ತದೆ. ಅಲಂಕಾರ, ರಸ ವಿರಸ ಗಳು ಆಕರ್ಷಣೆಯ  ಸ್ಥಾನ ಸೇರುತ್ತವೆ.ಆದರೆ ಇವೆಲ್ಲವು ಗಳಿಗೂ ಕಾರಣೀಭೂತವಾದ ಭಾಷೆ ಹಿನ್ನಡೆ ಸಾಧಿಸುತ್ತದೆ.

ಮಾತಿಗೆ ಸಂಬಂಧಿಸಿದ, ಉದಾಹರಣೆಗಳನ್ನು ಸಾಕಷ್ಟು ಕೊಡ ಬಹುದು. ಒಳ್ಳೆಯ ಮಾತುಗಾರ ತನ್ನ ಮಾತಿನಿಂದಲೇ ಎಲ್ಲವನ್ನೂ ಗೆಲ್ಲುತ್ತಾನೆ.ರಸಿಕತನದ ಅವಶ್ಯಕತೆ ಇಲ್ಲಿ ಪ್ರಮುಖ ಸಂಗತಿ.

ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ ರಸಿಕತನವಿಲ್ಲದ ಬರಿ ಮಾತು ಕಿವಿಯೊಳಗೆ ಕೂರ್ದಸಿಯುಬಡಿದಂತೆ  – ಸರ್ವಜ್ಞ

 ಮಾತಿನಲ್ಲಿ ರಸಿಕತನವನ್ನು ತರುವುದೇ ಅಭವ್ಯಕ್ತತೆ ಎಂದು ಬೇರೆ ಹೇಳಬೇಕಾಗಿಲ್ಲ.ಕೆಲವರು ಮಾತನಾಡಿದರೆ ಮತ್ತ ಮತ್ತೆ ಕೇಳಬೇಕೆನಿಸುವುದು ಸಹಜ.ಉದಾಹರಣೆಗೆ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ.ಉಪನಿಷತ್ತು ವೇದಾಂತವನ್ನು ವ್ಯಕ್ತ ಗೊಳಿಸುವ ಕ್ರಿಯೆ,ಕೇಳುಗರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ.ಅಟಲ ಬಿಹಾರಿ ವಾಜಪೇಯಿಯವರ, ಲೋಕಸಭೆಯ ಭಾಷಣಗಳು ಸಹ, ಉತ್ತಮ ಅಭಿವ್ಯಕ್ತತೆಯ ಸಂಕೇತಗಳು. ಜಯಲಕ್ಷ್ಮಿ ಮಂಗಳಮೂರ್ತಿಯವರ ಹರಿದಾಸ ಸಾಹಿತ್ಯದ ಮೇಲಿನ ಉಪನ್ಯಾಸಗಳು ಸಹ ಅಭಿವ್ಯಕ್ತತೆಯ ಭರ್ಜರಿ ಔತಣ.

ಹೈದರಾಬಾದನವರೇ ಆಗಿದ್ದ.ಡಾ.ಎಚ್.ಎಲ್.ಎನ್ ಶಾಸ್ತ್ರಿಯವರ ಉಪನ್ಯಾಸ ಗಳನ್ನು ಬಹಳ ಜನ ಕೇಳಿಯೇ ಇರುತ್ತೀರಿ. ಅವರ ಸಾಹಿತ್ಯಿಕ ಉಪನ್ಯಾಸಗಳು ಅವರ ಅಭಿವ್ಯಕ್ತಿ ತನದ ಸಂಕೇತಗಳೇ ಹೌದು.ಶಾರದಾ ಕರ್ನಾಟಕ ಕನ್ಯಾ ಶಾಲೆಯಲ್ಲಿ, ಅವರು, ನಾಲ್ಕನೆಯ ತರಗತಿಯ ಮಕ್ಕಳಿಗೂ ಅಷ್ಟೇ ಆಕರ್ಷಕವಾಗಿ ಮತ್ತು ಮಕ್ಕಳ ಏಕಾಗ್ರತೆಯನ್ನು ಹಿಡಿದಿಡುವ ಕಲೆಯನ್ನು  ಪ್ರತ್ಯಕ್ಷವಾಗಿ,  ನೋಡಿದ್ದೇನೆ. ಇದನ್ನು ಅವರಿಂದಲೇ ಕಲಿತದ್ದು. ಅವರ ಅಭಿವ್ಯಕ್ತತೆಯ ಕಿಂಚಿತ್ ಪ್ರಭಾವ ನನ್ನ ಮೇಲೆ ಉಂಟಾಗಿದ್ದುದನ್ನು ಒಪ್ಪಿಕೊಳ್ಳಬೇಕು.

ಆದರೆ ಅವರಂತೆ ಬರೆಯುವ ನಿರರ್ಗಳತೆ ಒಲಿದು ಬರಲಿಲ್ಲವಲ್ಲ ಎಂದು ಆಗಾಗ ಅನಿಸಿದ್ದು ಇದೆ.ಹಳೆಯದಿನಗಳು ಅವು ‘ಪರಿಚಯ’ ಮಾಸಪತ್ರಿಕೆ ಯ ಸಂಪಾದಕನಾಗಿದ್ದೆ. ‘ಕೈಲಾಸಂ’ ಅವರ ಮೇಲೆ ಒಂದು ಲೇಖನ ಬೇಕಿತ್ತು ಒಂದು ಮಧ್ಯಾಹ್ನ ಅವರ ಮನೆಗೆ ಹೋದೆ.ಉಭಯ ಕುಶಲೋಪರಿಯ ನಂತರ ವಿಷಯ ಹೇಳಿದೆ.ಹೌದೇ ಎಂದ ಅವರು ಎದುರಿಗಿದ್ದ   ೪-೫ ಬಿಳಿ ಹಾಳೆ ತಗೆದು ಮುಂದಿರುವ ಟೇಬಲ್ಲಿಗೆ ಇರಿಸಿಕೊಂಡರು ” ಲೇ ಇವಳೆ ಒಂದೊಂದು ಲೋಟ ಕಾಫಿ ಕೊಡು ” ಕಾಫಿಬಂತು. ಕುಡಿದು  ಪೆನ್ನಿನ ಟೊಪ್ಪಿಗೆ ತೆಗೆದು ಬರೆಯಲಾರಂಭಿಸಿದರು ! ಒಂದೇ ಓಘ. ಲೇಖನ ಮುಗಿಸಿ, ಪೆನ್ನು ಕೆಳಗಿಟ್ಟರು.ಹಾಳೆಗಳನ್ನು ಕ್ರಮವಾಗಿ ಜೋಡಿಸಿ ತೆಗೆದುಕೊಳ್ಳಿ ಎಂದು ಕೊಟ್ಟರು !!

ಹಾಸ್ಯ ಬೆರೆಸಿ ಮಾತನಾಡುವವರ ಪಟ್ಟಿಯಲ್ಲಿ ಹಾಸ್ಯ ಚಕ್ರವರ್ತಿ ಬೀಚಿಯವರಿಗೆ ಪ್ರಥಮ ಸ್ಥಾನ. ಇತ್ತೀಚಿನ ದಿನಗಳಲ್ಲಿ, ಎಂ.ಎಸ್. ನರಸಿಂಹಮೂರ್ತಿಯವರ ಹೆಸರು ಮುಂಚೂಣಿಯಲ್ಲಿದೆ.ಸುಮಾರು ಐವತ್ತು ಪುಸ್ತಕ ಪ್ರಕಟಿಸಿರುವ,ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಅವರು ಅಭಿವ್ಯಕ್ತತೆಯ ಮಾತು ಬಂದಾಗ, ತುಂಬಾ ವಿರಳವಾದ ವ್ಯಕ್ತಿ.  ನಂತರ ಗಂಗಾವತಿ ಪ್ರಾಣೇಶ  ಎಂದುಕೊಳ್ಳುತ್ತೇನೆ.ನಮಗೂ ನಿಮಗೂ ತಿಳಿದೇ ಇರುವ ಸಾಮಾನ್ಯ ಸಂಗತಿಗಳು ಸಹ ಪ್ರಾಣೇಶನ ಮಾತಿನಲ್ಲಿ ರಸಮಯವಾಗುತ್ತವೆ. ಇತ್ತೀಚಿಗೆ ಹಾಸ್ಯ ಉಪನ್ಯಾಸಕರ ಒಂದು ತಂಡವೇ ತಯಾರಾಗಿರುವುದನ್ನು ಕಾಣುತ್ತೇವೆ.

 ಹಾಗೆ ನೋಡಿದರೆ, ಭೀಭತ್ಸ, ರೌದ್ರ,ಶೌರ್ಯ, ಕರುಣಾ ರಸಗಳು ಸಹ ಅಭಿವ್ಯಕ್ತಿ ಯ ಪ್ರಕಾರಗಳೇ !

ಸಾಹಿತ್ಯಿಕ ರಚನೆಗಳನ್ನು ನೋಡುವಾಗ, ಪಂಪನಿಂದ ಮೊದಲ್ಗೊಂಡು, ಕುಮಾರವ್ಯಾಸನ ವರೆಗೆ ಬಂದಿರುವ ಮಹಾಕಾವ್ಯ ಗಳ ಒಂದೊಂದು ಸಾಲುಗಳು Expressiveness ಎಂದು ಕರೆಯುವ ಪ್ರಯೋಗಳು.ಅವು ಎಷ್ಟರ ಮಟ್ಟಿಗೆ ನಮ್ಮ ಮನದಾಳದಲಿ ಹೂತು ಹೋಗಿವೆ ಎಂದರೆ, ಸಾಹಿತ್ಯವನ್ನು,ಅರ್ಚಿಸುವ,ಆರಾಧಿಸುವ ಪ್ರತಿ ಓದುಗನ ಸಂತಸದ ಕ್ಷಣಗಳೆಂದರೆ ಸಾಕು. ಪಂಪನಿಂದ  ಕುಮಾರವ್ಯಾಸ ನ ವರೆಗೆ ರಾಸಿ ರಾಸಿಯೇ ಇದೆ.ಹೀಗಾಗಿ ಆ ಹಿಮಾಲಯವನ್ನು ತಡವಿಕೊಳ್ಳುವ ಗೊಡವೆಗೆ ಹೋಗದೆ, ಎಲ್ಲರಿಗೂ ಪರಿಚಿತವಿರುವ, ಆಧುನಿಕ ಕನ್ನಡದ ಕವಿಗಳ ಕಾದಂಬರಿಕಾರರ ಮಾದರಿಗಳನ್ನೇ ಅಭಿವ್ಯಕ್ತಗೊಳಿಸಲು ಬಳಸಿದ್ದೇನೆ.

ಬೇಂದ್ರೆಯವರ ಈ ಸಾಲುಗಳನ್ನೇ ನೋಡಿ :-

ಹರಹರ ಶ್ರಾವಣಕ ಬಂದಿs ಶೃತಿ ತಂದಿss

ಹರಿಹರಿ ಶ್ರಾವಣಕ ಬಂದಿs ಕೃತಿ ತಂದಿss

ನೀವು ತಂದಿ-ತಾಯಿ ನಮಗs

ಕಂದನು ನಾನು ನಿಮಗs

ಸ್ಕಂದನ ಶಾಖೆ ನಮಗ | ನಾರದನ ಶಿಖೆ ನಮಗs

ಉದ್ದ ನಾಮ | ಮತ್ತs ಅಡ್ಡs ನಾಮಾ

ಯಾವಿವನs ಕಾಮಾ ಬಂದ | ಶಿವಶಕ್ತೀ ನಡುವs

ಬೇಂದ್ರೆ ಯವರನ್ನೇ ಆಯ್ಕೆಮಾಡಿರುವ ಕಾರಣ ಬೇಕೇ ?   ಅದು,ಪದ,ಪದ್ಯ,ಲಯ, ನಾದ,ಅಭಿವ್ಯಕ್ತಿ; ಏನು ಬೇಕಾದರೂ ಬೇಂದ್ರೆಯವರನ್ನು    ” ಕೇಳು – ಪಡೆ ” !

ತಿರುಮಲೇಶರ ತೀರ  ಇತ್ತೀಚಿನ ‘ಅವ್ಯಯ ಕಾವ್ಯ’ ಸಾಲುಗಳು:-

ಮತ್ತು ಆಗಲೇ ಕೈಕೊಟ್ಟ ವಿದ್ಯುತ್ತು

ಇನ್ನೇನು ಬೀದಿ ದೀಪಗಳು ಹಚ್ಚಿ ಹತ್ತು ನಿಮಿಷವೂ

ಆಗಿಲ್ಲ ಆಮೇಲೆ ಸಂಜೆಯ ಎಲ್ಲ ಬಣ್ಣಕ್ಕೆ

ಮಸಿ ಬಳಿಯಿತು ಕತ್ತಲು

ಭೂವ್ಯೋಮ ಒಂದೇ ಗೋಳಕಾರ ಸೃಷ್ಟಿಯ

ಆದಿಮ ಸ್ಥಿತಿಗೆ ಮರಳಿ ಬೀಸಿತು ಗಾಳಿ

ಸ್ವಲ್ಪ ಗುಡುಮಿಂಚುಗಳ ಧ್ವನಿಬೆಳಕ ಹಾಕಿ

ತೋರಿಸಿತು ಕುಳಿತವರ ನಿಂತವರ.

ಘನ ಘಂಭೀರ ! ಅರ್ಥದ ಆಳಕ್ಕೆ ಇಳಿದರಂತೂ ಉಂಟಾಗುವ ಭಾವ, ಅಭಿವ್ಯಕ್ತತೆಗೂ ದಕ್ಕಲಿಕ್ಕಿಲ್ಲ

ಗದ್ಯದ ಅಭಿವ್ಯಕ್ತಿತನಕ್ಕೆ ಅನಂತಮೂರ್ತಿಯವರ, ‘ಭವ’ ಕಾದಂಬರಿಯ ಈ ಸಾಲುಗಳು :

ಶಾಸ್ತ್ರಿಗಳು ಒಡ್ಡಿದ್ದು ಅವನಿಗೆ ನಿಧಾನವಾಗಿ ಗುರುತು ಹತ್ತಿರಬೇಕು.

ಕು….ಟ್ಟ….ವ…ಲ…ಕ್ಕಿ” ಗುಹೆಯಿಂದ ಬಂದಂತಿದ್ದ ಶಬ್ದದಿಂದ ಶಾಸ್ತ್ರಿಗಳು ರೋಮಾಂಚಿತರಾಗಿದ್ದರು….

” ಹಾಗಾದರೆ ಇದು ಏನು ಗೊತ್ತು ನಿಮಗೆ.ಗೊತ್ತೆಂದರೆ ಒಂದೋ ನೀವು ಕನ್ನಡಾ ಜಿಲ್ಲೆಯವರು, ಅಥವಾ ನನ್ನಂತೆ ಯಾರೋ ಕನ್ನಡಾ ಜಿಲ್ಲೆಯವರು ನಿಮಗೆ ಹಿಂದೆಂದಾರೂ ಗಂಟು ಬಿದ್ದಿರಬೇಕು.ನಾನು ಹರಿಕಥೆ ಮಾಡುತ್ತ ಹೇಳೋದಿದೆ . ಕುಚೇಲ ಕನ್ನಡ ಜಿಲ್ಲೆಯವನು.ಅವನು ತನ್ನ ಬಾಲ್ಯದ ಸ್ನೇಹಿತನಿಗೆ ಒಯ್ದದ್ದು ಕೇವಲ ಅವಲಕ್ಕಿಯಲ್ಲ – ಕುಟ್ಟವಲಕ್ಕಿ ಅಂತ” !!

ನಮ್ಮವರದೇ ನಾಲ್ಕು ಸಾಲುಗಳು :

ರಂಗ – ಭೂಮಿಯ ಮಣ್ಣು ತಿಂದ !

ಯಶೋದೆ ಗದರಿದಳು

ತರೆ ಬಾಯ – ಬಾಯಿ ತೆರೆ !

ರಂಗ –  ಬಾಯಿ ತರೆದಾಗ

ಒಳಗೆ ಬ್ರಹ್ಮಾಂಡ ನಾಟಕ

ಪಾತ್ರ-ಪಾತ್ರಗಳ ಆಟ !!

ಓಹ! ಅದೆಂತಹ ಪಂಚ್ !

                      ೦-೦-೦-೦

ಕೃತಜ್ಞತೆ:

ಔದುಂಬರ ಗಾಥೆ : ಸಂ.ವಾಮನ ಬೇಂದ್ರೆ

ಅವ್ಯಯ ಕಾವ್ಯ : ಡಾ.ಕೆ.ವಿ.ತಿರುಮಲೇಶ

ಭವ : ಯು.ಆರ್ ಅನಂತಮೂರ್ತಿ.

ರಾಘವೇಂದ್ರ ಮಾನ್ವಿ ಸರ್.

ಶ್ರೀ ಮತಿ ಸುಮತಿ ಮೇಡಂ.

ಅಂತರ್ಜಾಲ.


      ಗೋನವಾರ ಕಿಶನ್ ರಾವ್

ಗೋನವಾರ ಕಿಶನ್ ರಾವ್
ಮೈಸೂರಿನ ಮಾನಸ ಗಂಗೋತ್ರಿಯಿಂದ ಎಂ.ಎ.(ಕನ್ನಡ) ಪ್ರಥಮ ದರ್ಜೆ ಹೈದರಾಬಾದ ಉಸ್ಮಾನಿಯಾ ವಿ.ವಿ ದಿಂದ ಎಂ.ಫಿಲ್

ನಿವೃತ್ತ ಕನ್ನಡ ಉಪನ್ಯಾಸಕರು. ಹೈದರಾಬಾದಿನ ನೃಪತುಂಗ ಕನ್ನಡ ವಿದ್ಯಾಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ನಿವೃತ್ತಿ ನಂತರವೂ, ಎರಡು ವರ್ಷಗಳ‌ಕಾಲ ಸಂದರ್ಶಕ ಉಪನ್ಯಾಸರಾಗಿ ಉ.ವಿ.ದ ಕನ್ನಡ ವಿಭಾಗ ದಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಬೋಧನಾ ವೃತ್ತಿ
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಅಂಕಣ ಬರಹ, ಅನುವಾದ, ವಿಮರ್ಶೆ, ನಾಟಕ ರಚನೆಯಲ್ಲಿ ತೊಡಗಿದ್ದಾರೆ. ಕತೆಗಳು, ವಿಮರ್ಶಾ ಬರಹಗಳು ನಾಟಕಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟ.
ಸಾಗರದ ಅಕ್ಷರ ಪ್ರಕಾಶನದಿಂದ ಮಕ್ಕಳ‌ನಾಟಕ‌ ಝುಕ್ ಝುಕ್ ಭಯ್ಯಾ ತಾಲಮ್ ತಾಲ್ ಪ್ರಕಟ.
ತೆಲುಗು ವಿಪ್ಲವ ಸಾಹಿತಿ ಶ್ರೀ. ಶ್ರೀ ಯವರ ಮಹಾಪ್ರಸ್ತಾನ ಕವಿತೆಗಳ ಸಮಗ್ರ ಅನುವಾದ
ಕುಮಾತವ್ಯಾಸ ಅಧಾರಿತ ಅಂಕಣ ಬರಹಗಳು “ನುಡಿಕಾರಣ” ಶೀರ್ಷಿಕೆಯಡಿ ನಸುಕು‌.ಕಾಮ್ ನಲ್ಲಿ‌ ಪ್ರಕಟ.
ಹೈದರಾಬಾದ್ ನ ಕರ್ನಾಟಕ ಸಾಹಿತ್ಯ ಮಂದಿರಕ್ಕಾಗಿ ಎಂಟು ವರ್ಷಗಳ ಕಾಲ ‘ಪರಿಚಯ ‘ ಸಾಹಿತ್ಯ ಪತ್ರಿಕೆ ಸಂಪಾದಿಸಿ ಕೊಟ್ಟ ಹಿರಿಮೆ.


Leave a Reply

Back To Top