ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಅಂತರಾಷ್ಟ್ರೀಯ ಶಾಂತಿ ದಿನ
ಕುಸುಮ ಮಂಜುನಾಥ್
ಇತ್ತೀಚಿಗೆ ಅಂತರಾಷ್ಟ್ರೀಯ ಶಾಂತಿ ದಿನದ ಆಚರಣೆಯಾಯ್ತು .ಆದರೆ ಈ ಶಾಂತಿ ಎಲ್ಲರಿಗೂ ಸಿಕ್ಕಿದೆಯೇ ಎಂದು ಚಿಂತನೆ ಮಾಡಿದಾಗ ದೊರೆಯುವ ಉತ್ತರ ನಿರಾಶಾದಾಯಕ .ಮನುಷ್ಯರ ನಡುವೆ ದೇಶ ದೇಶಗಳ ನಡುವೆ ಇರಬೇಕಾದ ಸಾಮರಸ್ಯ ಸಹಬಾಳ್ವೆ ಕಾಣುತ್ತಿಲ್ಲ .ಪ್ರೀತಿ ವಿಶ್ವಾಸ ನಂಬಿಕೆಗಳ ಸೌಧ ಕಳಚಿ ಬಿದ್ದಿದೆ .ಸ್ವಾರ್ಥ ಲೋಭ ಅಧಿಕಾರಗಳ ದಾಹ ಇವುಗಳ ಮೇಲಾಟದಲ್ಲಿ ದೇಶಗಳ ನಡುವೆ ಯುದ್ಧಗಳು ನಡೆಯುತ್ತಿವೆ. ರಕ್ತದೋಕುಳಿ ಚೆಲ್ಲಿವೆ .ಮನೆಮಠಗಳನ್ನು ಕಳೆದುಕೊಂಡು ಜನ ಬೀದಿ ಪಾಲಾಗಿದ್ದಾರೆ, ದೇಶ ತೊರೆದು ನಿರಾಶ್ರಿತರ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅದೆಷ್ಟು ಮಕ್ಕಳು ತಂದೆ ಯಿಂದ ದೂರವಾಗಿ ತಾಯಿಯ ಮಡಿಲಲ್ಲಿ ಬೆಳೆಯುತ್ತಿದ್ದಾರೆ .ಜೀವಗಳ ಜೊತೆ ನಾಯಕರು ಚೆಲ್ಲಾಟವಾಡುತ್ತಿದ್ದಾರೆ . ನಾಯಕರು ಯುದ್ಧ ಗೆಲ್ಲುವುದನ್ನು ಪ್ರತಿಷ್ಠೆಯ ಸಂಗತಿಯನ್ನಾಗಿ ಮಾಡಿಕೊಂಡಿದ್ದಾರೆ.ಈ ದೇಶಗಳು ಅಶಾಂತಿಯ ಕೋಪ ವಾಗಿವೆ ಸ್ಮಶಾನಗಳಾಗಿವೆ .ಇದು ಒಂದೆಡೆಯಾದರೆ ಅಂತರ್ ಯುದ್ಧಗಳಿಂದ ಅದೆಷ್ಟೋ ದೇಶಗಳು ನೆಮ್ಮದಿಯ ನೆಲೆಗಳನ್ನು ಕಳೆದುಕೊಳ್ಳುತ್ತಿವೆ. ಶಾಂತಿ ಮಂತ್ರವನ್ನು ವಿಶ್ವಕ್ಕೆ ನೀಡಿದ ಭಾರತದಲ್ಲಿ ಇಂದು ಮನಸ್ಸುಗಳು ಕದಡಿ ಹೋಗಿವೆ .ಜಾತಿ ಮತಗಳ ಕೆಸರಾಟ ಸಾಗಿದೆ .ಒಂದೆಡೆ ದಮನಿ ತರ ಮೇಲೆ ನಿರಂತರ ದೌರ್ಜನ್ಯ ಸಾಗಿದೆ .ಮಹಿಳೆಯರ ಮೇಲೆ ಅತ್ಯಾಚಾರಗಳು ದಿನಾ ವರದಿಯಾಗುತ್ತಿವೆ . ಇಂದು ಹಿಜಾಬ್ ಲವ್ ಜಿಹಾದ್ ನಂತಹ ವಿಷಯಗಳು ಮನಸ್ಸುಗಳಲ್ಲಿ ವಿಷದ ಬೀಜಗಳನ್ನು ಬಿತ್ತುತ್ತಿವೆ. ಧರ್ಮಂಧತೆ ಹೆಚ್ಚಾಗಿ ಭಯೋತ್ಪಾದನೆಯ ಚಟುವಟಿಕೆಗಳು ಹೆಚ್ಚುತ್ತಿವೆ. ಧರ್ಮದ ಹೆಸರಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಕಿತ್ತಾಟಗಳು ಕೊಲೆಗಳು ನಡೆಯುತ್ತಿವೆ.
ನಿರುದ್ಯೋಗ ಸಮಸ್ಯೆಯಿಂದ ಯುವಜನರು ಅತೃಪ್ತರಾಗಿದ್ದಾರೆ .ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ .ಉಳ್ಳವರ ಇಲ್ಲದವರ ನಡುವಿನ ಅಂತರ ಆರ್ಥಿಕ ಅಸಮಾನತೆಯಿಂದಾಗಿ ಮತ್ತಷ್ಟು ಅಶಾಂತಿಯು ಹುಟ್ಟು ಹಾಕುತ್ತಿದೆ .ಇದಕ್ಕೆ ಸ್ಪಷ್ಟ ಉದಾಹರಣೆ, ಶ್ರೀಲಂಕ ದೇಶದಲ್ಲಿ ಎದ್ದಿರುವ ಬಂಡಾಯ .ಕೊರನಾದ ನಂತರ ಆರ್ಥಿಕ ಚಟುವಟಿಕೆಗಳ ಹಿಂಜರಿತದಿಂದಾಗಿ ಎಲ್ಲೆಲ್ಲೂ ಆರ್ಥಿಕ ಹೊಡೆತ ಬಿದ್ದಿದೆ .ಬಡತನ ಹೆಚ್ಚಾಗಿದೆ .ಇದು ಅಶಾಂತಿಗೆ ಅತೃಪ್ತಿಗೆ ಕಾರಣವಾಗಿದೆ .ಇಂತಹ ನಿರಾಶಾದಾಯಕ ಸ್ಥಿತಿಯಲ್ಲಿ ಆಗಬೇಕಾಗಿರುವುದು ಗಾಯಕ್ಕೆ ಮುಲಾಮು ಹಚ್ಚುವ ಕೆಲಸ .ಈಗ ಹಂಚಿ ಬಾಳುವ ಗುಣ ಬೆಳೆಯಬೇಕಿದೆ .ಸಹೋದರತ್ವದ ಭಾವ ಬೆಸೆಯಬೇಕಿದೆ .ಹಸಿದ ಹೊಟ್ಟೆಗಳು ತುಂಬ ಬೇಕಿದೆ .ಬೆಂದ ಮನಸ್ಸುಗಳನ್ನು ಸಾಂತ್ವಾನಗೊಳಿಸುವ ಕಿರಣಗಳು ಕಾಣಬೇಕಿದೆ.
ಈಗ ಮತ್ತೊಮ್ಮೆ ಶಾಂತಿಯ ಪ್ರತಿರೂಪಗಳಾದ ಬುದ್ದ ಗಾಂಧಿ ಬಸವ ತತ್ವಗಳು ಮುಂದೆ ಬರಬೇಕಾಗಿದೆ .ಪ್ರೀತಿ ಪ್ರೇಮ ವಾತ್ಸಲ್ಯಗಳ ಹಣತೆಗಳು ಮನೆಮನೆಗಳಲ್ಲಿ ಹೊತ್ತಿಕೊಳ್ಳಬೇಕಾಗಿದೆ .ಈ ಕಿಡಿಗಳನ್ನು ಹಚ್ಚಲು ನೆಲ್ಸನ್ ಮಂಡೇಲರಂತಹ ಮಾನವತಾವಾದಿಗಳು ಮರ ಹುಟ್ಟು ಪಡೆಯಬೇಕಿದೆ .ಕರುಣಾಮಯಿ ಮದರ್ ತೆರೇಸಾ ರಂತ ಮಾದರಿಗಳು ರೂಪಗೊಳ್ಳಬೇಕಾಗಿವೆ .ದ್ವೇಷದ ಉರಿ ತಣ್ಣಗಾಗಿ ಮಮತೆ ವಾತ್ಸಲ್ಯಗಳ ತಂಗಾಳಿ ಬೀಸುವಂತಾಗಲಿ .ವಿಶ್ವಶಾಂತಿಯಮರು ಸ್ಥಾಪನೆ ಆಗಲಿ ಎಂಬ ಆಶಯದಲ್ಲಿ
ಕುಸುಮ ಮಂಜುನಾಥ್