ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಹೊಸ ಪಾಠ ಕಲಿಸಿದ ಮಕ್ಕಳು..!!

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ತರಬೇತಿ ಅವಧಿಯಲ್ಲೇ ನನಗೆ ಹೊಸ ಪಾಠ ಕಲಿಸಿದ ಮಕ್ಕಳು..!!

“ಇಲ್ಲ ಕಣೆ, ಅವರು ನಮ್ಮ ಧರ್ಮದವರು”.

“ಇಲ್ಲ ಇಲ್ಲ ಅವರು ನಮ್ಮ ಜಾತಿಯವರು,  ನೋಡು ಅವರು ಕೊರಳಿಗೆ ರುದ್ರಾಕ್ಷಿ ಹಾಕಿದ್ದಾರೆ. ಅವರು ನಮ್ಮ ಧರ್ಮದವರೇ..”

 ಈ ರೀತಿ ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದ ಮಕ್ಕಳನ್ನು ದೂರದಿಂದಲೇ ನಾನು ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ಎಲ್ಲವನ್ನು ಆವಲೋಕಿಸುತಿದ್ದೆ. ಎಲ್ಲೋ ಒಂದು ಕಡೆ ಆ ಮಕ್ಕಳು ನನ್ನ ಕೆನ್ನೆಗೆ ಪಟಾರ್ ಎಂದು ಬಡಿದ ಅನುಭವವಾಯಿತು. ಆ ನೆನಪುಗಳು ಇವತ್ತಿಗೂ ನನ್ನನ್ನು ನನ್ನ ವೃತ್ತಿಯಲ್ಲಿ ಜಾಗೃತಗೊಳಿಸುತ್ತಿವೆ.

ಆಗ ಶಿಕ್ಷಕ ತರಬೇತಿಯ ದಿನಗಳು. ಹೊಸದರಲ್ಲಿ ಪಾಠ ಮಾಡಬೇಕೆನ್ನುವ, ಮಕ್ಕಳನ್ನು ಕಲಿಕೆಗೆ ಉರಿದುಂಬಿಸಬೇಕೆನ್ನುವ ಉತ್ಸಾಹ ಎಲ್ಲಿಲ್ಲದ ಸ್ಪೂರ್ತಿದಾಯಕ ಕಾರಂಜಿಯಂತಹ ಮನಸ್ಸು ಪ್ರಶಿಕ್ಷಣಾರ್ಥಿಯದು.

ಕೊಪ್ಪಳ ನಗರದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಎಲ್ಲಾ ಗೆಳೆಯರಂತೆ ನಾನು ತರಬೇತಿಗೆ ಸೇರಿದೆ. ತರಬೇತಿಯಲ್ಲಿ ಹೊಸ ಹೊಸ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ನಮ್ಮ ಗೆಳೆಯರು, ತರಗತಿಯಲ್ಲಿ ಇರುವ ಮಕ್ಕಳು ಅವರ ತುಂಟಾಟ, ಹಠಮಾರಿತನ, ಓದಿನಲ್ಲಿ ತೋರಿಸುತ್ತಿದ್ದ ಎಲ್ಲಿಲ್ಲದ ಉತ್ಸಾಹ, ಇನ್ನೂ ಕೆಲವು ಮಕ್ಕಳು ನಾವು ಮಾಡುವ ಪಾಠವನ್ನು ಅವರಿಗೆ ಸಂಬಂಧವಿಲ್ಲದಂತೆ ಕೇಳಿಸಿಕೊಳ್ಳದಂತೆ ವರ್ತಿಸುತ್ತಿದ್ದರು. ನಮಗೆ ಅದೊಂದು ಹೊಸ ಲೋಕವಾಗಿತ್ತು.

ವಿದ್ಯಾರ್ಥಿಗಳಾಗಿ ಶಾಲೆಯ ಮೆಟ್ಟಿಲನ್ನು ಹತ್ತಿದ್ದ ನಾವುಗಳು ಇನ್ನೊಂದು ಹೊಸ ಪಾತ್ರ ಅಂದರೆ  ಶಿಕ್ಷಕರಾಗಲು ಪೂರ್ವ ಸಿದ್ಧತೆಗಾಗಿ ತರಬೇತಿಗೆ ಹೋಗುತ್ತಿರುವುದು ಅತ್ಯಂತ ಸಂಭ್ರಮದ ಕ್ಷಣಗಳಾಗಿದ್ದವು. ಆ ಸಂಭ್ರಮದ ಕ್ಷಣಗಳನ್ನು ಮಕ್ಕಳು ಕೇಳುವ ವಿವಿಧ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ, ಅವರನ್ನು ಕಲಿಕೆಗೆ ಪ್ರೋತ್ಸಾಹಿಸುವ ವಾತಾವರಣ ಅಂದು ಸಾಮಾನ್ಯವಾಗಿತ್ತು.  ಈ ರೀತಿ ಕಲಿಕೆ ಮತ್ತು ಬೋಧನೆಯಲ್ಲಿ ತೊಡಗಿದಾಗ ಮಕ್ಕಳ ವಯಕ್ತಿಕ ಬದುಕನ್ನು ಕೂಡ ಕೆಲವು ಸಲ ನಮ್ಮ ಕಣ್ಣೆದುರು ತೆರೆಯುತ್ತದೆ.  ಮಕ್ಕಳು ಕೂಡ ಅಷ್ಟೇ ತರಬೇತಿ ಶಿಕ್ಷಕರನ್ನು ಮತ್ತು ಸೇವಾನಿರತ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆಯಾಗಿತ್ತು. ಮಕ್ಕಳು ಕೂಡ ನಮ್ಮ ವೈಯಕ್ತಿಕ ಜೀವನವನ್ನು ಅವರು ಗಮನಿಸುತ್ತಿದ್ದರು.

ಶಿಕ್ಷಕರಾದ ನಾವುಗಳು  ನಾವು ಹಾಕಿಕೊಳ್ಳುವ ಸಮವಸ್ತ್ರಗಳನ್ನು, ವಿವಿಧ ಸಂಕೇತಗಳನ್ನು,  ನಾವು ವರ್ತಿಸುವ ವರ್ತನೆಗಳನ್ನು, ಅಲ್ಲದೆ ನಮ್ಮ ನೋವು ನಲಿವುಗಳನ್ನು ಮಕ್ಕಳು ಸದಾ  ಗಮನಿಸುತ್ತಿರುತ್ತಾರೆ.

ನನ್ನ ತರಬೇತಿ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಯಾಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಸ್ಟೇಷನ್ ರೋಡ್ ಕೊಪ್ಪಳ ಇಲ್ಲಿ ತರಬೇತಿ ಬೋಧನೆಗೆ ಪಾಠ ಮಾಡಲು ಉಪನ್ಯಾಸಕರು ಕಳುಹಿಸಿದ್ದರು.  ಆ ಶಾಲೆ ಎಂದರೆ ನನಗೆ ಎಲ್ಲಿಲ್ಲದ ಸಂತೋಷ, ಖುಷಿ,  ಏಕೆಂದರೆ ಅದೇ ಶಾಲೆಯಲ್ಲಿ ಎಂಟತ್ತು ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದೇನು. ನಾನು ತರಬೇತಿಗೆ ಹೋದಾಗಲು ನಮಗೆ ಕಲಿಸಿದ ಗುರುಗಳು ಗುರುಮಾತೆಯರು ಇದ್ದರು. ಅವರು ನನ್ನನ್ನು ಅತ್ಯಂತ ಸಂಭ್ರಮ ಸಡಗರದಿಂದ  ಹಾರೈಸಿದ್ದರು.

6ನೇ ತರಗತಿಯ ‘ಬಿ’ ವಿಭಾಗದಲ್ಲಿ ನಾನು ಸಮಾಜ ಪಾಠವನ್ನು ಮಾಡಿ, ಮಕ್ಕಳ ಮನಸ್ಸನ್ನು ಅತ್ಯಂತ ಕುತೂಹಲ ಇರುವಂತೆ ನೋಡಿಕೊಂಡಿದ್ದೆ. ಆ ತರಗತಿಯ ಮಕ್ಕಳಿಗೆ ಘಟಕ ಪರೀಕ್ಷೆಯನ್ನು ಕೂಡ ಮಾಡಿದೆ. ಆ ಮಕ್ಕಳು ನನ್ನನ್ನು ಅತ್ಯಂತ ಪ್ರೀತಿಯಿಂದ ಹಚ್ಚಿಕೊಂಡಿದ್ದರು.

ಆದರೆ….ಒಂದು ದಿನ…ಅಲ್ಪವಿರಾಮದ ವೇಳೆಯಲ್ಲಿ ಮಕ್ಕಳು ಮೇಲಿನ ಮಾತಿನಂತೆ ಅವರು ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಇದು ನನಗೆ ತುಂಬಾ ಮುಜುಗರವಾಯಿತು. ನಾನು ಅದನ್ನು ದೂರದಿಂದಲೇ ನೋಡಿ ಕೇಳಿಸಿಕೊಂಡೆನು.

ಮಕ್ಕಳ ದೃಷ್ಟಿಯಲ್ಲಿ ಧರ್ಮದ ಸಂಕೇತಗಳನ್ನು, ಜಾತಿಯ ಸೂಚನೆಗಳ ಬಗ್ಗೆ ಅಷ್ಟಾಗಿ ಗಂಭೀರವಾಗಿ  ಪರಿಗಣಿಸದ ನಾನು ಅದ್ಯಾವ ಕಾರಣಕ್ಕೋ ಏನೋ ಮೊದಲಿನಿಂದಲೂ ರುದ್ರಾಕ್ಷಿಯನ್ನು  ಧರಿಸುತ್ತಿದ್ದೆ. ಆದರೆ ಮಕ್ಕಳು ನಮ್ಮನ್ನು ನೋಡುವ ದೃಷ್ಟಿಕೋನವೇ ಭಿನ್ನವಾಗಿರುತ್ತದೆಂದು  ಅವತ್ತೇ ನಾನು ದೊಡ್ಡ ಪಾಠವನ್ನು ಮಕ್ಕಳಿಂದ ಕಲಿತೆ..!!

 ಅಂದಿನಿಂದ ಶಿಕ್ಷಕರೆಂದರೆ ಧರ್ಮಾತೀತರಾಗಿರಬೇಕು. ಜಾತ್ಯತೀತರಾಗಿರಬೇಕು. ಅದು ನಮ್ಮ ನಡೆ-ನುಡಿ, ಉಡುಪುಗಳಲ್ಲಿಯೂ ಒಟ್ಟಾರೆ ಎಲ್ಲದರಲ್ಲಿಯೂ ಶಿಕ್ಷಕ ಸನ್ಯಾಸಿಯಂತೆ  ಒಳಗೊಂಡಿರಬೇಕು ಎನ್ನುವ ಬಹುದೊಡ್ಡ ಪಾಠವನ್ನು ಎಳೆಯ ಮಕ್ಕಳಿಂದ ಕಲಿತೆ.

ಆತ್ಮೀಯ ಶಿಕ್ಷಕ ಸ್ನೇಹಿತರೇ,  ಸಮಾಜದಿಂದ ಬರುವ ಪ್ರತಿಯೊಂದು ಮನೆಯ ಮಕ್ಕಳು ಕೂಡ ನಮ್ಮ ಮಕ್ಕಳೇ ಎಂಬ ಪ್ರಜ್ಞೆ ನಮ್ಮೊಳಗಿರಬೇಕು. ನಮ್ಮ ನಮ್ಮ ಅಡ್ಡ ಗೋಡೆಗಳನ್ನು ಕೆಡವಿ ಅವರನ್ನು ವಿಶಾಲವಾಗಿ ಬೆಳಸಬೇಕು. ಕವಿ ಕುವೆಂಪುರವರು, “ಓ ನನ್ನ ಚೇತನ, ಆಗು ನೀ ಅನಿಕೇತನ…” ಎನ್ನುವ ವಿಶ್ವ ಮಾನವತ್ವವನ್ನು ಮಕ್ಕಳಲ್ಲಿ ನಾವೆಲ್ಲರೂ ಬೆಳಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ


Leave a Reply

Back To Top