ಅಂಕಣ ಸಂಗಾತಿ

ಒಲವ ಧಾರೆ

ತಾಯಿ ಹೃದಯದಿಂದ ಮಮತೆಯನ್ನು

ಧಾರೆಯೆರೆವ ಮಡದಿಯೆಂಬ ರತ್ನ..

ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಯಾವುದೋ ಮನೆಯನ್ನು ಬೆಳಗುವ ಬಾಳಿನ ಜ್ಯೋತಿಯೆಂದರೇ ಅದು ಹೆಣ್ಣು ಮಕ್ಕಳು. ತವರು ಮನೆಯ ಕೀರ್ತಿಯನ್ನು ಬೆಳಗಬೇಕಾದ ಅನಿವಾರ್ಯತೆಯ ಬಲೆಯಲ್ಲಿ,ಬದುಕಿನ ತನ್ನ ನೋವನ್ನು ನುಂಗಿಕೊಂಡು ಸದಾ ತನ್ನ ಕುಟುಂಬಕ್ಕಾಗಿ ಜೀವ ತೇಯುವ ಕುಟುಂಬದ ಮತ್ತೊಂದು ಕೊಂಡಿಯಂದರೆ ಅದು ಮಡದಿ..!!

 ಗಂಡನ ಪಾಲಿಗೆ ಮಡದಿಯಾಗಿ, ಮಕ್ಕಳ ಪಾಲಿಗೆ ತಾಯಿಯಾಗಿ, ಅತ್ತೆ ಮಾವರ ಪಾಲಿಗೆ ಪ್ರೀತಿಯ ಸೊಸೆಯಾಗಿ, ಮೈದುನರಿಗೆ ವಾತ್ಸಲ್ಯದ ಅತ್ತಿಗೆಯಾಗಿ, ವಾರಿಗಿತ್ತಿಯರಿಗೆ ಪ್ರೀತಿಯ ಸಹೋದರಿಯಾಗಿ, ಮುಂಜಾನೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ದುಡಿಯಬೇಕು..! ಕುಟುಂಬದ ಮನೆಗೆಲಸ,  ಹೊಲದ ಕೃಷಿ ಕೆಲಸಗಳಲ್ಲಿ, ವೃತ್ತಿ, ವ್ಯಾಪಾರದ ಕರ್ತವ್ಯದಲ್ಲಿ  ತನ್ನನ್ನು ತಾನು ಕಳೆದುಕೊಂಡು ಶ್ರಮಿಸಲೇಬೇಕು. ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರಬೇಕೆನ್ನುವ ಒಂದೇ ಒಂದು ಸದಾಶಯಕ್ಕೆ ಸದಾ ಜೀವವನ್ನು ಸವೆಸುವ ಮಮಕಾರದ ಜೀವವೆಂದರೆ ಅದು ಮಡದಿಯ ಪಾತ್ರ..!!

 ಉಡಾಳನಾಗಿ ತಿರುಗುವ ಗಂಡು ಮಗುವಿಗೆ,‌

“ಇವನು ದಾರಿಗೆ ಬರ್ಬೇಕಂದ್ರೆ ಇವನಿಗೆ ಮದುವೆ ಮಾಡಬೇಕು” ಎನ್ನುವ ಮಾತುಗಳು ಅಶಿಸ್ತಿನ ಸ್ವರೂಪದಲ್ಲಿರುವ ಪುರುಷನ ಬದುಕಿನಲ್ಲಿ ಶಿಸ್ತು ಮೂಡಿಸುವ ಅವಳ ಮಹತ್ವ ಗೊತ್ತಾಗುತ್ತದೆ.   ಪ್ರತಿಯೊಬ್ಬ ಸ್ತ್ರೀ ಪುರುಷನಿಗೆ ಹೆಂಡತಿಯಾಗಿ  ತನ್ನ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸುತ್ತಾಳೆ.

ಅಣ್ಣ ತಮ್ಮಂದಿರರಿಗೆ ಕೀಟಲೆ ಮಾಡುತ್ತಾ, ತಂದೆ ತಾಯಿಯ ಮಡಿಲಲ್ಲಿ ಪ್ರೀತಿಯಿಂದ ಬೆಳೆಯುತ್ತಾ,  ಅತ್ಯಂತ ಸ್ವಚ್ಛಂದವಾಗಿ ಬೆಳೆದ ಹೆಣ್ಣು ಮಗು ವಯಸ್ಸಿಗೆ ಬಂದ ಕೂಡಲೇ ಇನ್ನೊಂದು ಮನೆಯನ್ನು ಬೆಳಗಲು ಸಿದ್ಧವಾಗಲೇಬೆಕು. ತಂದೆ -ತಾಯಿಗಳ, ಹಿರಿಯರ ಹತ್ತಾರು ಷರತ್ತುಗಳನ್ನು ತನ್ನೊಡಲಲ್ಲಿ ತುಂಬಿಕೊಂಡು ತಾನು ಬಂದ ಮನೆಗೆ ಸದಾ ಶ್ರೇಯಸ್ಸನ್ನು ಬಯಸುವ ಅವಳ ಅಪರಿಮಿತ ತ್ಯಾಗಕ್ಕೆ ಕೊನೆಯೇ ಇಲ್ಲ..! ಗಂಡನ ಮನೆಯವರು ಮೊದಲು ಯಾರು ಪರಿಚಿತರಲ್ಲ, ಎಲ್ಲರೂ ಅಪರಿಚಿತರೇ. ಒಬ್ಬೊಬ್ಬರ ಅಭಿರುಚಿ ವಿಭಿನ್ನ, ಪ್ರತಿಯೊಬ್ಬರ ಅಭಿರುಚಿಯನ್ನು ಮನಗಂಡು ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು.

ಕಾಟ ಕೊಡುವ ಅತ್ತೆ ಇರಲಿ, ಸದಾ ಬಯ್ಯುವ ಮಾವನೇ ಇರಲಿ, ಕುಡಿದು ಒಂದು ಒಂದೇ ಸಮನೆ ಪೀಡಿಸುವ ಗಂಡನಿರಲಿ, ಆಡಿಕೊಂಡು ನಗುವ ವಾರಿಗಿತ್ತಿಯರಿರಲಿ, ತನ್ನ ಗಂಡನ ಮನೆಯ ಸುತ್ತಮುತ್ತಲಿನ ಓಣಿಯವರ ಕೊಂಕು ಮಾತುಗಳಿರಲಿ ಅವೆಲ್ಲವನ್ನು ಮೌನವಾಗಿ ಸಹಿಸಲೇಬೇಕು..!! ಒಂದು ವೇಳೆ ಸಹಿಸದೆ ಏನಾದರೂ ವಾದ ಮಾಡಿದರೆ “ಇವಳು ತುಂಬಾ ಜಗಳಗಂಟಿ” ಎನ್ನುವ ಪಟ್ಟ ಕಟ್ಟಿಟ್ಟ ಬುತ್ತಿ. ಸುಮ್ಮನಿದ್ದರೂ ಮೌನವಾಗಿ ಅನುಭವಿಸಿದರೂ “ಅಯ್ಯೋ ಅವಳು ಮೂಕಿ, ಎನಂದರೂ ಮಾತಾಡೋದೆ ಇಲ್ಲ” ಎನ್ನುವ ತಾತ್ಸಾರದ ಮಾತುಗಳು ಬೇರೆ..!!

ಹಗಲೆಲ್ಲ ಹೊಲಗದ್ದೆಗಳಲ್ಲಿ ಕೆಲಸ ಮಾಡಿಯೋ ಅಥವಾ ತಾನು ಮಾಡುವ ವೃತ್ತಿಯ ಜಂಜಾಟದಲ್ಲಿಯೋ ಸದಾ ನೋವನ್ನು ಅನುಭವಿಸುತ್ತಾಳೆ. ಸಂಜೆಯಾದರೆ ಮಕ್ಕಳ ಬೇಕು ಬೇಡಗಳನ್ನು ಪೂರೈಸುತ್ತಲೇ ಎಲ್ಲರಿಗೂ ಅಡುಗೆ, ಕಸ ಮುಸುರೆ, ಮನೆಯಲ್ಲವನ್ನು ಒಪ್ಪ ಓರಣ ಮಾಡುತ್ತಾಳೆ. ರಾತ್ರಿ ಮಲಗುವಾಗ ಅದು 11 ಗಂಟೆ ಮೇಲೆಯೇ..!! 

ಆಗಲೂ ನೆಮ್ಮದಿಯ ನಿದ್ದೆ ಮಾಡುವಂತಿಲ್ಲ. ಕುಡಿದು ಬಂದ ಗಂಡನ ನೂರಾರು ಕೋಂಕುಮಾತುಗಳು, ಒದೆತ, ಬಡಿತವನ್ನು  ಮೂಕ ರೋಧನವಾಗಿ ಅನುಭವಿಸಲೇಬೇಕು. ಮತ್ತೆ ಮುಂಜಾನೆ ಅದೇ ದಿನಚರಿ ಕಸ- ಮುಸುರೆ, ಅಡುಗೆ ಸಿದ್ದ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಹೊಲಕ್ಕೆ ಹೋಗಲೋ ಇಲ್ಲವೇ ವೃತ್ತಿಗೆ ಹೋಗಲೋ ತಾನು ತಯಾರಾಗಲೇಬೇಕು..!!

 ತಾಯಿಯಂತಹ  ಪ್ರೀತಿ, ವಿಶ್ವಾಸ, ವಾತ್ಸಲ್ಯ ನೀಡುವವಳ ಬಗ್ಗೆ ಅತ್ತೆಯಾದವಳು, “ಅವಳು ತನ್ನ ಮಗಳಿದ್ದಂತೆ” ಎನ್ನುವ ಮಮಕಾರದ ಮಾತುಗಳಾಡಲು ಏನು ತೊಂದರೆ..? ಹಿಂದೆ ತಾನು ಈ ಮನೆಗೆ ಸೊಸೆಯಾಗಿಯೇ ಬಂದಿದ್ದೆ ಎನ್ನುವುದನ್ನು ಮರೆಯಬಾರದು. ಇನ್ನೂ ಮಾವನ ಪಾತ್ರವು ಅದನ್ನೇ ಬಯಸಬೇಕು. ಕುಟುಂಬದ ಸದಸ್ಯರು ಅವಳಿಗೆ ಒಂದು ಹಿಡಿ ಪ್ರೀತಿ ಕೊಟ್ಟರೆ, ಅವಳು ಕುಟುಂಬಕ್ಕಾಗಿ ತ್ಯಾಗ ಮಾಡಿದ ಸೇವೆ ಸಾರ್ಥಕವಾದೀತು.

ತನ್ನನ್ನು ನಂಬಿ ಬಂದ ಮಡದಿಗೆ ಮೋಸ ಮಾಡುವುದು ಸರಿಯೇ..? ಎಂಬ ಸಣ್ಣ ವಾತ್ಸಲ್ಯದ ಅಂತರಂಗದ ಮಾತಿಗೆ ಗಂಡನಾದವನು ಕಿವಿಗೊಡಬಾರದೇ..ಹೋದರೇ.. ‘ಮಡದಿ’ ಪಾತ್ರವು ಯಾರನ್ನು ನಂಬುವುದು.

ದಣಿದು ಬಂದ ಮಡದಿಯನ್ನು ರಾತ್ರಿ ಏಕಾಂತದಲ್ಲಿ ಗಂಡನಾದವನು ಹೇಗೆ ರಮೀಸಬೇಕೆಂದು ನಮ್ಮ ಜಾನಪದರು ಸೊಗಸಾಗಿ ಹೇಳಿದ್ದಾರೆ,

“ಹಾಸಿಗೆ ಹಾಸಂದ

ಮಲ್ಲಿಗೆಯ ಮುಡಿಯಂದ

ಬ್ಯಾಸತ್ತ ಮಡದಿಯ ಮಲಗೆಂದ/

ಪ್ರೀತಿಲಿ ತನ್ನ ತವರ ಮರೆಯೆಂದ”

ಎಂತಹ ಅದ್ಭುತವಾದ ಮಾತು. ‘ಮಡದಿ’ಯೆಂಬ ಪಾತ್ರವು ತಾಯಿಯಂತಹ ಮಮತೆಯನ್ನು ಧಾರೆಯೆರೆವ ರತ್ನಕ್ಕೆ ನಾವೆಲ್ಲರೂ ಗೌರವಿಸೋಣ.

———————————-

.

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

Leave a Reply

Back To Top