ಕಾವ್ಯಯಾನ

ಸಾಲಿನ ಜಾಡು ಹಿಡಿದು

ಡಾ.ಗೋವಿಂದ ಹೆಗಡೆ

“ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…”

ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು.

ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ.

ಬಹುಮಾನಿತ ಕವಿತೆ ಆಗಲೇ ಕಥೆಗಾರ್ತಿಯಾಗಿ ಹೆಸರು ಮಾಡಿದ್ದ ಶ್ರೀಮತಿ ಭಾಗೀರಥಿ ಹೆಗಡೆಯವರದು.
ಕವಿತೆಯ ಒಂದು ಸಾಲು, ಹೀಗೆ-

ಕತ್ತಲಿನ ಮುಖ ಮೀಸೆ ತಿದ್ದಿ ನೋಡುವ ತವಕ..’
ಓದಿ ರೋಮಾಂಚನಗೊಂಡಿದ್ದೆ.
ಆ ಸನ್ನಿವೇಶವನ್ನು ಎಷ್ಟೊಂದು ವಿನೂತನವಾಗಿ ವಿಶೇಷವಾಗಿ ಹೇಳುತ್ತದೆ ಈ ಸಾಲು!

೧೯೯೩ರಲ್ಲಿ ಶಿರಸಿಯಲ್ಲಿ ಭಾಗೀರಥಿ ಹೆಗಡೆಯವರ ಮೊದಲ ಭೇಟಿ, ಅವರ ಮನೆಯಲ್ಲಿ. ಮಾತಿನ ನಡುವೆ ಈ ಚಿತ್ರ ಕವನ ಸ್ಪರ್ಧೆಯಲ್ಲಿ ಬಹುಮಾನಿತವಾದ ಅವರ ಕವನವನ್ನು ನೆನಪಿಸಿ ಈ ಸಾಲನ್ನು ಉದ್ಧರಿಸಿ ‘ತುಂಬಾ ತುಂಬಾ ಇಷ್ಟವಾಯಿತು’ ಎಂದೆ.
ಭಾಗೀರಥಿಯವರ ಸಂತಸ, ಅದರಿಂದಾಗಿ ಹನಿದ ಕಣ್ಣೀರು ಇಂದಿಗೂ ಕಣ್ಣಿಗೆ ಕಟ್ಟಿದೆ.
ಅವರು ‘ಹೀಗೆ ನಾಲ್ಕಾರು ವರ್ಷಗಳ ನಂತರವೂ ಅಪರಿಚಿತ ಓದುಗನ ಮನದಲ್ಲಿ ಒಂದು ಸಾಲು ಉಳಿದಿದೆ ಎಂದರೆ ಬರೆದದ್ದು ಸಾರ್ಥಕವಾಯಿತು’ ಎಂದರು. ಅದರ ಶ್ರೇಯ ಅವರಿಗೆ, ಅವರ ಕವಿತೆಗೆ ಸಲ್ಲಬೇಕು. ನನಗಲ್ಲ.

ಈಗೇಕೆ ಇದನ್ನು ನೆನಪಿಸಿಕೊಂಡೆ ಎಂದರೆ ಮೊನ್ನೆ ಇನ್ನೊಂದು ವಿಶಿಷ್ಟ ಚಿತ್ರ( ಸಾಲು) ಮನಸ್ಸನ್ನು ಸೆಳೆಯಿತು.
ಶ್ರೀಮತಿ ಶೀಲಾ ಭಂಡಾರ್ಕರ್ ನನ್ನೊಂದಿಗೆ ಒಂದು ವಾಟ್ಸಾಪ್ ಗುಂಪಿನಲ್ಲಿ ಇದ್ದಾರೆ. ಅವರ ಇತ್ತೀಚಿನ ಒಂದು ಕವನದಲ್ಲಿ ಸಂಜೆಯನ್ನು ಅವರು ವರ್ಣಿಸುವುದು ಹೀಗೆ-
‘ರೆಪ್ಪೆಗಳ ತಂತಿಯ ಮೇಲೆ ಒಣಹಾಕಿದ್ದ ಸಾಯಂಕಾಲ…’
ಈ ಸಾಲಿನ ವಿವರಣೆಗೆ ನಾನು ಹೋಗುವುದಿಲ್ಲ.
ಮೌನದೊಳೊಲಿವುದೇ ಸಮ್ಮಾನ !

ಬೇಂದ್ರೆ ಕವನವನ್ನು ‘ಭುವನದ ಭಾಗ್ಯ’ ಎಂದರು ಹಿರಿಯ ವಿಮರ್ಶಕ ಡಾ. ಜಿಎಸ್ ಅಮೂರ ಅವರು.
ನಾವು-ನೀವು ಬೇಂದ್ರೆ ಅಲ್ಲದಿರಬಹುದು. ಆದರೆ ವಿಶಿಷ್ಟ ಹೊಳಹುಗಳನ್ನು ಪಡಿಮೂಡಿಸುವ ಪ್ರತಿಯೊಂದು ಸಾಲು ಬರೆದವರ ಭಾಗ್ಯ, ಓದಿದವರ ಭಾಗ್ಯವೂ ಹೌದು!
ಇಂದು ಬರೆಯುತ್ತಿರುವ ಹಿರಿಯ-ಕಿರಿಯ ಬರಹಗಾರರು ಇಂಥ ಸವಿಗಾಳುಗಳನ್ನು ಕನ್ನಡದ ಕಣಜಕ್ಕೆ ಸದಾ ತುಂಬುತ್ತಿರಲಿ.

***********

One thought on “ಕಾವ್ಯಯಾನ

  1. ಒಳ್ಳೆಯ ಬರಹ. ಹಿಂದೆ ಓದಿದ್ದಾಗಲೂ ಇಂದು ಓದಿದಾಗಲೂ ಅಷ್ಟೇ ಖುಷಿಯಾಯಿತು.

Leave a Reply

Back To Top