ಪ್ರಸ್ತುತ

ಕೇಂದ್ರದ ಬಜೆಟ್

Image result for images of central budget

ಗಣೇಶ್ ಭಟ್ ಶಿರಸಿ

ಕೇಂದ್ರ ಬಜೆಟ್ 2020


ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ.
ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಮಾತ್ರ ದೇಶದ ಆರ್ಥಿಕತೆಯ ಆರೋಗ್ಯದ ಕಲ್ಪನೆ ಬರುತ್ತದೆ. ಉದಾಹರಣೆಗಾಗಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲಾಗಿಡಲಾಗಿದೆಯೆಂದು ಹೊಗಳುವವರಿದ್ದಾರೆ. ಆದರೆ ಈ ಮೊತ್ತದಲ್ಲಿ ಶಿಕ್ಷಕರು, ಉಪನ್ಯಾಸಕರುಗಳಿಗೆ ನೀಡುವ ಸಂಬಳ ಪಿಂಚಣಿ, ಸವಲತ್ತುಗಳೇ ಹೆಚ್ಚಿನ ಭಾಗವನ್ನು ನುಂಗುತ್ತವೆಂಬುದು ವಿಷಾದನೀಯ ಅಂಶ. ಯು.ಜಿ.ಸಿ ಯೋಜನೆಯಡಿ ಸಂಬಳ ಪಡೆಯುವವರು ಮಾಸಿಕ ಒಂದುವರೆ ಲಕ್ಷಕ್ಕೂ ಹೆಚ್ಚಿಗೆ ವೇತನ ಪಡೆಯುತ್ತಾರೆ. ಅಂಥವರ ಪಿಂಚಣಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿಗಳಿಗೂ ಮಿಕ್ಕಿರುತ್ತದೆ.
ಸರ್ಕಾರದ ಖರ್ಚಿನ ದೊಡ್ಡ ಪಾಲನ್ನು ಪಡೆಯುವ ನೌಕರರ ಸಂಬಳ , ಸವಲತ್ತುಗಳು ಹಾಗೂ ಪಡೆದ ಸಾಲದ ಮೇಲೆ ನೀಡಬೇಕಾದ ಬಡ್ಡಿ. ಯಾವುದೋ ಸಮಯ, ಸಂದರ್ಭದಲ್ಲಿ ನಿಗದಿಯಾದ ನೌಕರರ ಸಂಬಳ ಸದಾ ಏರುತ್ತಲೇ ಇರಬೇಕೆಂದು ಬಯಸುತ್ತಾರೆ. ಸರ್ಕಾರವೂ ಇದನ್ನು ಅನುಮೋದಿಸುತ್ತದೆ. ಶೇಕಡಾ 4 ಕ್ಕಿಂತ ಕಡಿಮೆ ಇರುವ ಈ ವರ್ಗಕ್ಕೆ ನೀಡುವ ವೇತನ, ಸವಲತ್ತುಗಳು ಏರುತ್ತಿರುವಾಗ ಬಹುಸಂಖ್ಯಾತರಾದ, ಕೃಷಿಕರು, ಕಾರ್ಮಿಕರ ಆದಾಯವೂ ಹೆಚ್ಚುತ್ತಲೇ ಇರಬೇಕೆಂಬ ಕುರಿತು ಪ್ರಾಮಾಣಿಕ ಚಿಂತನೆ , ಪ್ರಯತ್ನಗಳು ನಡೆಯುತ್ತಿಲ್ಲ.
ಬಜೆಟ್‍ನಲ್ಲಿ ಘೋಷಣೆಯಾಗುವ ರಿಯಾಯಿತಿ, ಅನುದಾನಗಳ ಪ್ರಮಾಣವನ್ನು ಗಮನಿಸಿ, ಆ ಕ್ಷೇತ್ರ ಉದ್ಧಾರವಾಯಿತೆಂದು ಚಪ್ಪಾಳೆ ಬಾರಿಸುವವರು ಇಡೀ ಅರ್ಥವ್ಯವಸ್ಥೆಯ ಸಮಗ್ರತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ.
ಉದಾಹರಣೆಗಾಗಿ ಕೃಷಿ ಕ್ಷೇತ್ರಕ್ಕೆ ನೀಡಬೇಕಾದ ಸಾಲ, ಸಬ್ಸಿಡಿಗಳ ಮೊತ್ತವನ್ನು ಹೆಚ್ಚಿಸಿದಾಕ್ಷಣ, ಕೃಷಿಗೆ ಭಾರೀ ಬೆಂಬಲ ಎನ್ನುವ ಮಾತು ಕೇಳಿ ಬರುತ್ತದೆ. ಕೃಷಿ ರಗದ ಸಮಸ್ಯೆಗಳ ಉಳಿದ ಆಯಾಮಗಳನ್ನು , ಮೂಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಕಾರ್ಯಕ್ರಮಗಳಿವೆಯೇ ಎಂದು ಗಮನಿಸುವುದೇ ಇಲ್ಲ.
ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವುದು ಬರೀ ಘೋಷಣೆಗಳಿಂದ ಸಾಧ್ಯವಿಲ್ಲ. ಸಮಗ್ರ ಭೂ ಬಳಕೆ ನೀತಿ, ಅದಕ್ಕೆ ಪೂರಕವಾಗಿ ಬೇಡಿಕೆ ಆಧಾರಿತ ಬೆಳೆ ಸಂಯೋಜನೆ ಮಾರುಕಟ್ಟೆ ವ್ಯವಸ್ಥೆ ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗಬಲ್ಲದು. ಪ್ರಸ್ತುತ ಬಜೆಟ್ ಈ ದಿಸೆಯಲ್ಲಿ ಆಶಾದಾಯಕ ಹೆಜ್ಜೆಯನ್ನೇ ಹಾಕಿಲ್ಲ. ಒಂದು ಜಿಲ್ಲೆ- ಒಂದು ಬೆಳೆ ಮುಂತಾದ ಅತಾರ್ಕಿಕ, ಅವೈಜ್ಞಾನಿಕ ಘೋಷಣೆಗಳು ಅಂಧಾಭಿಮಾನಿಗಳ ಕರತಾಡನ ಗಿಟ್ಟಿಸಲಷ್ಟೇ ಯೋಗ್ಯ.
ಪ್ರಸಕ್ತ ಬಜೆಟ್ ಬಿಜೆಪಿ ಸರ್ಕಾರದ ಚಿಂತನೆಗಳ ಮುಂದುವರಿಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ತೊಂಬತ್ತರ ದಶಕದ ಪ್ರಾರಂಭದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಯನ್ನು ಆ ಪಕ್ಷವು ಸಣ್ಣ ಸಣ್ಣ ದೋಸ್‍ಗಳ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಆದರೆ ಬಿಜೆಪಿ, ಕಳೆದ ಆರು ವರ್ಷಗಳಿಂದಲೂ ಇವೇ ನೀತಿಗಳನ್ನು ರಾಜಾರೋಷಾಗಿ ವೈಭವೋಪೇತವಾಗಿ ಕಾಂಗ್ರೆಸ್ ನಾಚಿಕೊಳ್ಳುವ ರೀತಿಯಲ್ಲಿ ಅನುಷ್ಟಾನಗೊಳಿಸುತ್ತಿದೆ.
ಆರ್ಥಿಕವಾಗಿ ಲಾಭದಾಯಕವಾಗಿದ್ದ ಜೀವ ವಿಮಾ ನಿಗಮದ ಶೇರುಗಳ ಮಾರಾಟ ಮಾಡಲು ಮುಂದಾಗಿರುವುದು, ಬಿಜೆಪಿಯ ಖಾಸಗೀಕರಣದ ಪ್ರೇಮಕ್ಕೆ ಉದಾಹರಣೆ. ದೇಶದ ಜನರಿಗಾಗಿ ಜೀವವಿಮಾ ನಿಗಮದ ಶೇರುಗಳನ್ನು ಬಿಡುಗಡೆ ಮಾಡಲಾಗುತ್ತದೆಯೆಂಬುದು ಘೋಷಣೆ. ಆದರೆ ಈ ಶೇರುಗಳು ಸೇರುವುದು ಬೆರಳೆಣಿಕೆಯ ಶ್ರೀಮಂತರ ಕೈಗೆ. ಐವತ್ತು ಸಾವಿರ ಕೋಟಿಗೂ ಹೆಚ್ಚು ಆದಾಯ ಸಂಗ್ರಹಿಸುವ ಉದ್ದೇಶ ಹೊಂದಿರುವ ಈ ಪ್ರಸ್ತಾಪ, ಸಾಲ ತೀರುವಳಿಗಾಗಿ ತನ್ನ ಉತ್ಪನ್ನ ಬರುತ್ತಿರುವ ತೋಟದ ಒಂದೊಂದೇ ಭಾಗವನ್ನು ಮಾರಾಟ ಮಾಡುವ ರೀತಿಯಂತಿದೆ. ಎಲ್‍ಐಸಿಯ ನೌಕರರು, ಏಜೆಂಟರು ನೀಡುತ್ತಿರುವ ಸೇವೆಯಲ್ಲಿ ಸಾಕಷ್ಟು ಕುಂದುಗಳಿವೆ. ಆದರೂ ಎಲ್‍ಐಸಿಯೆಂಬ ಸಾರ್ವಜನಿಕ ವಲಯದ ಸಂಸ್ಥೆಯಿಂದಾಗಿಯೇ ಖಾಸಗಿ ವಿಮಾ ಸಂಸ್ಥೆಗಳು ಬಾಲ ಮುದುರಿಕೊಂಡು ವ್ಯವಹರಿಸುತ್ತಿವೆ. ಎಲ್‍ಐಸಿ ದುರ್ಬಲಗೊಳ್ಳತೊಡಗಿದಂತೆ ಖಾಸಗಿ ರಂಗದ ವಿಮಾ ಸಂಸ್ಥೆಗಳ ಶೋಷಣೆಯೂ ಹೆಚ್ಚಲಿದೆ.
ಕಳೆದೆರಡು ವರ್ಷಗಳಿಂದಲೂ ಎಲ್‍ಐಸಿಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ನಷ್ಟದಲ್ಲಿರುವ ಬ್ಯಾಂಕ್‍ಗಳ ಶರನ್ನು ಎಲ್‍ಐಸಿ ಖರೀದಿಸುವಂತೆ ಮಾಡಿರುವುದು ಒಂದು ಉದಾಹರಣೆ ಮಾತ್ರ. ಖಾಸಗಿ ರಂಗದ ಕೃಷಿ ವಿಮಾ ಸಂಸ್ಥೆಗಳು ರೈತರಿಗೆ ಮಾಡುತ್ತಿರುವ ವಂಚನೆಗಳನ್ನು ಗಮನಿಸಿದಾಗ ವಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀರಂಗಕ್ಕೆ ನೀಡಿದರೆ ಆಗುವ ಅಪಾಯಗಳನ್ನು ಊಹಿಸುವುದು ಸುಲಭ.
ವಿದೇಶೀ ಬಂಡವಾಳದ ನೇರ ಹೂಡಿಕೆಗೆ ಅವಕಾಶಗಳನ್ನು ಹೆಚ್ಚಿಸಿರುವುದು ಕೂಡಾ ಅಪಾಯಕಾರಿ ಕ್ರಮ. ಭಾರತದ ಅರ್ಥವ್ಯವಸ್ಥೆ ಬಂಡವಾಳದ ಕೊರತೆಯಿಂದ ಬಳಲುತ್ತಿಲ್ಲ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ದೇಶದ ಆರ್ಥಿಕ ಸ್ವಾಯತ್ತತೆಗೆ ಅಪಾಯವೊಡ್ಡುವ ಕ್ರಮಗಳ ಕುರಿತು ಕುರುಡು ನಂಬಿಕೆ ಹೊಂದಿರುವ ಬಂಡವಾಳವಾದಿ ಆರ್ಥಿಕ ತಜ್ಞರ ಸಲಹೆಗಳನ್ನು ಮಾನ್ಯ ಮಾಡುವ ಆಡಳಿತ ನಡೆಸುವವರು. ಜಾಗತಿಕ ಆರ್ಥಿಕ ವಿದ್ಯಮಾನಗಳನ್ನು ಸ್ವಾರ್ಥಕ್ಕಾಗಿ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆನ್ನುವುದು ಸ್ಪಷ್ಟ. ತನ್ನ ಆರ್ಥಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಯುರೋಪಿಯನ್ ಆರ್ಥಿಕ ಒಕ್ಕೂಟದಿಂದ ಬ್ರಿಟನ್ ಹೊರ ಬಂದಿರುವುದು ನಮಗೆ ಪಾಠವಾಗಬೇಕಿತ್ತು.
ಹೂಡಿಕೆದಾರರು ದೇಶೋದ್ಧಾರಕರು ಎಂದು ನಂಬುವವರು, ನಂಬಿಸುವವರನ್ನು ಸ್ವಾರ್ಥಿಗಳು ಮತ್ತು ಕಪಟಿಗಳು ಎನ್ನಲೇಬೇಕಾಗುತ್ತದೆ. ಯಾಕೆಂದರೆ ಹೂಡಿಕೆದಾರರಿಗೆ ತಮ್ಮ ಲಾಭ ಗಳಿಕೆಯೇ ಪ್ರಮುಖ ಗುರಿಯಾಗುತ್ತದೆಯೇ ಹೊರತು ಸಮುದಾಯದ ಉದ್ಧಾರವಲ್ಲ.
ಶಿಕ್ಷಣ ಕ್ಷೇತ್ರದಲ್ಲಿಯೂ ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಅತ್ಯಂತ ಅಪಾಯಕಾರಿ. ಭಾರತೀಯ ಚಿಂತನೆ ಆಧಾರಿತ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ನೀತಿಗೆ ತಿಲಾಂಜಲಿ ನೀಡಿ ಶತಮಾನಗಳೇ ಕಳೆದವು. ಬಂಡವಾಳಶಾಹಿಗಳ ಅಗತ್ಯಕ್ಕನುಗುಣವಾಗಿ ಗುಲಾಮರನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹಲವು ದಶಕಗಳಿಂದ ಅನುಷ್ಟಾನಗೊಳಿಸುತ್ತಾ, ಯಾವ ಜನತೆಯಲ್ಲಿ ಆತ್ಮವಿಶ್ವಾಸ ಬೆಳೆಯದಂತೆ ಮಾಡಿರುವ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹಣವಂತರ ಕೈಗೆ ನೀಡುವುದರಿಂದ ಆಗುವ ಸಾಂಸ್ಕøತಿಕ ಆಘಾತಗಳು, ಕುಂಠಿತಗೊಳ್ಳುವ ವ್ಯಕ್ತಿತ್ವ ನಿರ್ಮಾಣದ ಕುರಿತು ಸರ್ಕಾರ ಅಸಡ್ಡೆ ತೋರಿರುವುದು ಸ್ಪಷ್ಟ. ದೇಶಾಭಿಮಾನ, ಭಾರತೀಯತೆ ರಾಷ್ಟ್ರೀಯತೆ ಮುಂತಾದ ಇವರ ಘೋಷಣೆಗಳ ಟೊಳ್ಳುತನ ಇದರಿಂದಲೇ ಸ್ಪಷ್ಟವಾಗುತ್ತದೆ.
ಸಂಪತ್ತು ಸೃಷ್ಟಿಸುವವರನ್ನು ಗೌರವಿಸುವದಾಗಿ ಹೇಳಲಾಗಿದೆ. ಸಂಪತ್ತು ಸೃಷ್ಟಿಸುವವರು ಯಾರಿಗಾಗಿ ಆ ಕಾರ್ಯ ಮಾಡುತ್ತಾರೆಂಬುದನ್ನೂ ಸರ್ಕಾರದ ಅಂಕಿಅಂಶಗಳಿಂದಲೂ ಕಾಣಬಹುದು. ಬೆರಳೆಣಿಕೆಯ ಶ್ರೀಮಂತರ ಹಾಗೂ ಅವರ ಕಂಪನಿಗಳ ವಹಿವಾಟು ದೇಶದ ಬಜೆಟ್‍ನ್ನೂ ಮೀರಿದೆ ಎಂಬ ವಿಷಯವೇ, ದೇಶದ ಆಡಳಿತವನ್ನು ನಿಯಂತ್ರಿಸುತ್ತಿರುವವರು ಶ್ರೀಮಂತರೇ ಹೊರತು ರಾಜಕೀಯ ನೇತಾರರಲ್ಲ ಎಂಬುದನ್ನು ಎತ್ತಿ ಹೇಳುತ್ತದೆ. ಭಾರತದ 63 ಅತಿ ಶ್ರೀಮಂತರ ಸಂಪತ್ತು, ದೇಶದ ಮುಕ್ಕಾಲು ಪಾಲು ಜನರ ಸಂಪತ್ತಿಗೂ ಹೆಚ್ಚು ಎನ್ನುವ ವಿಷಯ ಅಧಿಕಾರಸ್ಥರ ಗಮನ ಸೆಳೆದಿಲ್ಲವೆಂಬುದು ಆಶ್ಚರ್ಯದ ಸಂಗತಿ.
ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟಿರುವ ಅತಿ ಶ್ರೀಮಂತರ ಸಂಪತ್ತು ಪ್ರತಿವರ್ಷವೂ ಹೆಚ್ಚುತ್ತಲೇ ಇದ್ದು, ದೇಶದ ಸಂಪತ್ತಿನ 58% ನಷ್ಟು ಇವರ ಹತೋಟಿಯಲ್ಲೇ ಇದೆ. ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಯಾವ ಪ್ರಸ್ತಾಪವೂ ಬಜೆಟ್‍ನಲ್ಲಿ ಇಲ್ಲ. ಬದಲಿಗೆ ಸಂಪತ್ತಿನ ಕೇಂದ್ರೀಕರಣಕ್ಕೆ ಇನ್ನಷ್ಟು ಒಲವು ತೋರಿಸುವ ಬಜೆಟ್ ಮಂಡಿಸಿರುವ ಸರ್ಕಾರ , ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದೆ.
ನಗರಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಹೆಚ್ಚಳ, ಹೈಸ್ಪೀಡ್ ರೈಲುಗಳನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸುತ್ತೇವೆಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಯಾವುದೋ ಒಂದು ನಗರದಲ್ಲಿ ಫುಡ್‍ಪಾರ್ಕ್ ಅಥವಾ ಇನ್ಯಾವುದೋ ಉದ್ಯಮ ಪ್ರಾರಂಭಿಸುವ ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಮತ್ತು ಕೃಷಿ ಪೂರಕ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕ್ರಮಗಳಿಂದ ಉದ್ಯೋಗ ಸೃಷ್ಟಿ, ನಗರಾಭಿಮುಖ ವಲಸೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಳ್ಳಿಗಳನ್ನು ಉದ್ಯೋಗ ಸೃಷ್ಟಿಯ ಕೇಂದ್ರಗಳನ್ನಾಗಿಸುವುದರಿಂದ ಕ್ಷಿಪ್ರ ಆರ್ಥಿಕ ಪ್ರಗತಿ ಸಾಧ್ಯ.
ಜನರ ಕೈಗೆ ಖರೀದಿ ಶಕ್ತಿ ನೀಡುವ ಕುರಿತು ಘೋಷಣೆ ಮಾತ್ರ ಇದೆಯೇ ಹೊರತು, ಅನುಷ್ಠಾನ ಯೋಗ್ಯ ಕ್ರಮಗಳ ಪ್ರಸ್ತಾಪವೇ ಇಲ್ಲ. ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ಸೂಕ್ತ ಪ್ರಸ್ತಾಪಗಳಲ್ಲದೇ ಬಳಲಿರುವ ಈ ವರ್ಷದ ಬಜೆಟ್‍ನಿಂದ ಧನಾತ್ಮಕ ಬದಲಾವಣೆಯ ನಿರೀಕ್ಷೆ ಮಾಡಲಾಗದು.
ದೇಶದ ಆರ್ಥಿಕ ಸ್ವಾಯತ್ತತೆಯನ್ನು ಹಾಳುಗೆಡವಿ, ಜನಸಾಮಾನ್ಯರಿಂದ ಆರ್ಥಿಕ ಸ್ವಾವಲಂಬನೆಯನ್ನು ಕಸಿಯುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಯಶಸ್ವಿಯಾಗುವುದು ನಿಶ್ಚಿತ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಪ್ರಕ್ರಿಯೆಯ ಮುಂದುವರಿಕೆಯ ಪರಿಣಾಮ ಬಹುಬೇಗ ಪ್ರಕಟಗೊಳ್ಳಲಿದೆ.
ಅರ್ಥವ್ಯವಸ್ಥೆಯ ಪುನಶ್ಚೇತನವಾಗಬೇಕೆಂದರೆ ಜನಸಾಮಾನ್ಯರಿಗೆ ಸರ್ಕಾರದ ರೀತಿ- ನೀತಿಗಳಲ್ಲಿ ನಂಬಿಕೆ, ವಿಶ್ವಾಸ ಮೂಡಬೇಕು. ಈ ದಿಸೆಯಲ್ಲಿ ಭರವಸೆ ಮೂಡಿಸಲು ಪ್ರಸ್ತುತ ಬಜೆಟ್ ವಿಫಲವಾಗಿದೆ.

Leave a Reply

Back To Top