ಅಂಕಣ ಸಂಗಾತಿ

ಒಲವ ಧಾರೆ

ತಾಯ್ತನದ ಪ್ರೀತಿಯನ್ನು ಧಾರೆಯೆರೆದು

ರಕ್ಷಿಸುವ ದಾದಿಯರಿಗೆ ಸಾವಿರಾರು ಸಲಾಂ…!!

ತಾಯ್ತನದ ಪ್ರೀತಿಯನ್ನು ಧಾರೆಯೆರೆದು ರಕ್ಷಿಸುವ ದಾದಿಯರಿಗೆ ಸಾವಿರಾರು ಸಲಾಂ…!!

ವ್ಯಕ್ತಿಯೊಬ್ಬ ಗಾಯದಿಂದ ಕೀವು ಸೋರಿ ನರಳುತ್ತಿದ್ದಾನೆ. ಮೈಯೆಲ್ಲಾ ಗಾಯವಾಗಿ ಚೀರುತಿದ್ದಾನೆ…

 ಇನ್ನೊಂದು ಕಡೆ ಹಾಸಿಗೆ ಮೇಲೆ ಮಲಗಿದ್ದ ವ್ಯಕ್ತಿಯೊರ್ವ ಈಗಲೋ  ಆಗಲೋ ಎನ್ನುವಂತೆ ಸಾವು ಬದುಕಿನ ಮಧ್ಯ ಸಾವಿನ ಕದ ತೊಟ್ಟುತ್ತಿದ್ದಾನೆ/ಳೆ…

 ಇವು ಆಸ್ಪತ್ರೆಯ ಒಳಂಗಾಣದಲ್ಲಿ ನಡೆಯುವ ಚಿತ್ರಣಗಳು..!!

ಇವರಿಬ್ಬರ ಅಕ್ಕಪಕ್ಕದಲ್ಲಿಯಾಗಲಿ, ಸುತ್ತಮುತ್ತಲಾಗಲಿ ಮನೆಯವರಾಗಲಿ.. ಉಹುಂ  ಯಾರು ಇಲ್ಲ..!!  ಆದರೆ ವೈಟ್ ಅಂಡ್ ವೈಫ್  (ಬಿಳಿ) ಸಮವಸ್ತ್ರವನ್ನ ಧರಿಸಿದ ವ್ಯಕ್ತಿಯೊಬ್ಬರು ಹತ್ತಿ ಬಟ್ಟೆಯನ್ನು ತೆಗೆದುಕೊಂಡು, ಆದ ಗಾಯವನ್ನು ನೆವರಿಸುತ್ತಾ, ರಕ್ತವನ್ನು ಒರೆಸುತ್ತಿದ್ದಾರೆ..!! “ಏನು ಆಗಲ್ಲ ಸುಮ್ಮನಿರಿ ಎರಡು ಮೂರು ದಿನದಲ್ಲಿ ಗಾಯವೆಲ್ಲ ವಾಸಿಯಾಗುತ್ತದೆ” ಎನ್ನುವ ಧೈರ್ಯದ ನುಡಿಗಳನಾಡುತ್ತಾ, ಬದುಕಿಗೆ ಮತ್ತೆ ಹುರಿದುಂಬಿಸುತ್ತಿದ್ದಾರೆ..!!  ಆಹಾರ, ನೀರು ಇಲ್ಲದೆ ಸಾವಿನ ಅಂಚಿನಲ್ಲಿರುವ ವ್ಯಕ್ತಿಗೆ ಬಾಯಿಯನ್ನು ಒರೆಸುತ್ತಾ,”ಏನು ಆಗಲ್ಲ ಮಲಗಿ, ನಾನು ನಿದ್ರೆ ಬರುವ ಮಾತ್ರೆಯನ್ನು ಕೊಟ್ಟಿದ್ದೇನೆ” ಎನ್ನುವ ಧೈರ್ಯ ಮಾತುಗಳನ್ನಾಡಿ ರೋಗಿಯ ಬೆಡ್ ಮೇಲಿನ ಬೆಡ್ ಶೀಟನ್ನು ಬದಲಾಯಿಸುತ್ತ ಹಾಸ್ಯದ   ಮಾತನಾಡುತ್ತಲೇ ಅವರ  ನೋವಿನಲ್ಲಿಯೂ ನಗಿಸುತ್ತಿರುವ ಏಕೈಕ ಜೀವವೆಂದರೇ ದಾದಿಯರು..!! ಅರ್ಥಾತ್ ನಸ್೯ಗಳು…!!

ರೋಗಿಯ ಆರೈಕೆಯನ್ನು ಮಾಡುವ  ದಾದಿಯರ ಬದುಕಿನಲ್ಲಿ ತಮ್ಮ ವೈಯಕ್ತಿಕ ಕುಟುಂಬವೇ ನೆನಪಾಗುವುದೇ ಇಲ್ಲ..!

ನರ್ಸಿಂಗ್ ಮಾಡುವುದು ಎಂದರೆ ತಮ್ಮನ್ನು ತಾವೇ ರೋಗಿಗಳ ಸೇವೆಗೆ ಅರ್ಪಿಸಿಕೊಂಡಂತೆ..! “ವೈದ್ಯ ನಾರಾಯಣೋ ದೇವೋಭವ” ಎಂದು ವೈದ್ಯರನ್ನು ನೆನಪಿಸಿಕೊಳ್ಳುವ ನಾವುಗಳು ಸಂಕಟದ  ಸಮಯದಲ್ಲಿ ದಾದಿಯರನ್ನು ನೆನಪಿಸದೆ ಹೋದರೆ ತಪ್ಪಾದೀತು..

ಗಾಯವಾದಾಗ, ರೋಗದಿಂದ ಬರಲಿದಾಗ, ರಸ್ತೆಯ ಮೇಲೆ ಭೀಕರವಾದ ಅಪಘಾತವಾದಾಗ, ಮನಸ್ಸು ವಿಚಲಿತಗೊಂಡು ಮಾನಸಿಕ ಸ್ಥೀಮಿತತೆ ಕಳೆದುಕೊಂಡಾಗ ವೈದ್ಯರನ್ನು ನಾವು ಸಹಜವಾಗಿ ಕಾಣುತ್ತೇವೆ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ, ಮಲ್ಟಿಪರ್ಪಸ್ ಆಸ್ಪತ್ರೆಗಳಲ್ಲಿ ದಾದಿಯರಿಗೆ ಹೆಚ್ಚು ಬೆಲೆ ಏಕೆಂದರೆ ವೈದ್ಯರು ಕೇವಲ ಬಂದು ಸೂಜಿಯನ್ನೋ, ಔಷಧವನ್ನೋ, ಬರೆದು ದಾದಿಯರಿಗೆ ಆರೈಕೆ ಮಾಡಲು ಹೇಳಿಬಿಡುತ್ತಾರೆ. ಇಡೀ ಹಗಲು-ರಾತ್ರಿ ನಿದ್ದಿಗೆಟ್ಟು ಸರದಿಯಂತೆ ರೋಗಿಯ ಸೇವೆಯನ್ನು ಮಾಡುವ ಏಕೈಕ ಜೀವವೆಂದರೆ ದಾದಿಯರು..! ಅರ್ಥಾರ್ಥ ನರ್ಸ್ಗಳು!! ಇತ್ತೀಚಿನ ದಿನಗಳಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಈ ನರ್ಸಿಂಗ್  ಸೇವೆ  ಸೀಮಿತವಾಗದೆ, ನರ್ಸಿಂಗ್ ಕೋರ್ಸ್‌ಗಳನ್ನು  ಪುರುಷರು ಕೂಡ ಮಾಡಬಹುದು. ಇದಕ್ಕಾಗಿ ಸರ್ಕಾರವು ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭ ಮಾಡಿದೆ. ಮಹಿಳೆಯರಷ್ಟೇ ಪುರುಷರು ಪ್ರೀತಿಯಿಂದಲೇ ರೋಗಿಗಳ ಆರೈಕೆಯನ್ನು ಮಾಡುತ್ತಾರೆ.

‘ನರ್ಸಿಂಗ್ ಕೋರ್ಸ್ ನ್ನು’ ಎಸೆಸೆಲ್ಸಿ ನಂತರ ನಾಲ್ಕು ವರ್ಷಗಳ ಅವಧಿಯಲ್ಲಿಯೂ ಮಾಡಬಹುದು. ಎಸ್ಸೆಸ್ಸೆಲ್ಸಿ ಮುಗಿದ ನಂತರ ನರ್ಸಿಂಗ್ ಮುಗಿಸಿ, ಡಿಪ್ಲೋಮಾ ಇನ್ ನರ್ಸಿಂಗ್ ಕೋರ್ಸನ್ನು (ಇಂಟರಶಿಪ್)  ಯಾವುದಾದರೂ ಖಾಸಿಗೆ ಇಲ್ಲವೇ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾರಂಭವಾಗುವದರೊಂದಿಗೆ ರೋಗಿಗಳ ಸೇವಾ ಬದುಕು ಪ್ರಾರಂಭವಾಗುತ್ತದೆ.

ಕೆಲವು ಸಲ ದಾದಿಯರ (ನಸ್೯ಗಳ) ಕೆಲಸದ ಒತ್ತಡಗಳು ಹೇಗಿರುತ್ತವೆಂದರೆ ರಾತ್ರಿಯೆಲ್ಲ ಡ್ಯೂಟಿ ಮಾಡಿದರೂ ವೈದ್ಯರ ಒತ್ತಾಯದ ಮೇರೆಗೆ ಹಗಲಿನಲ್ಲಿಯೂ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. “ಆಪರೇಷನ್”  (ಒಟಿ) ಸಮಯದಲ್ಲಂತೂ ಇವರ ಬದುಕು ಹೇಳುತ್ತಿರದು.. ಹಾಕಿಕೊಂಡಿರುವ ಗೌನು, ಮುಖದ ಮೇಲಿನ ಮಾಸ್ಕ್…

‘ಉಸಿರುಗಟ್ಟುವ ವಾತವರಣದಲ್ಲಿಯೂ ರೋಗಿಯ ಉಸಿರಾಟ ಉಳಿಸುವುದಕ್ಕಾಗಿ ಹಗಲಿರುಳು ಶ್ರಮಿಸುವ ಇವರ ಕಾಯಕ ಅವರ್ಣನೀಯ..’

  ಎಷ್ಟೇ ವಯಕ್ತಿಕ ತೊಂದರೆಗಳಿದ್ದರೂ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಲೇಬೇಕು..!!  ಕುಟುಂಬ, ಕುಟುಂಬದವರ ಬಗ್ಗೆ ಗಮನ ಕೊಡಲು ಆಗುವುದೇ ಇಲ್ಲ. ‘ಆಪರೇಷನ್ ಮುಗಿದರೆ ಸಾಕು’ ಎನ್ನುವಷ್ಟರಮಟ್ಟಿಗೆ ದಾದಿಯರ ಬದುಕಿನ ಒತ್ತಡಗಳು ಹೇಳತೀರದು..!!

ಡ್ರೀಪ್ ಹಾಕುವ, ಬ್ಯಾಂಡೇಜ್ ಕಟ್ಟುವ- ಬಿಚ್ಚುವ, ಸೂಜಿ ಹಾಕುವ, ಬೆಡ್ ಶೀಟುಗಳು ಬದಲಾಯಿಸುವ, ರಕ್ತ ಹಾಕುವ,ಗುಳಿಗೆಗಳನ್ನು, ಟಾಣಿಕ್ ಹಾಕುವ, ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುವ….ಒಂದೇ ಎರಡೇ…ಅಬ್ಬಾಬ್ಬ!!

ಖಾಸಗಿ ಆಸ್ಪತ್ರೆಯಲ್ಲಿ ಅವರು ಹೇಳುವ ಪ್ರಕಾರ ಡ್ಯೂಟಿ ಮಾಡಲೇಬೇಕು. ಕುಟುಂಬದ ಸದಸ್ಯರಿಗೆ ನೀಡುವ ಸಮಯಕ್ಕಿಂತ ಆಸ್ಪತ್ರೆಗೆ ಕೊಡುವ ಸಮಯವೇ ಹೆಚ್ಚು..!!  ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಹೇಳಿದಂತೆ ಕೇಳಲೇಬೇಕು..!!

ಕೆಲವು ಸಲ ತಮಗಿಷ್ಟವಲ್ಲದ ಕೆಲಸ ಮಾಡಲೇಬೇಕಾಗುತ್ತದೆ. ಇಲ್ಲವಾದರೆ ಯಾವುದೋ ರೂಪದಲ್ಲಿ  ಶಿಕ್ಷೆ ಕಟ್ಟಿಟ್ಟ ಬುತ್ತಿ..!!

ಸಾರ್ವಜನಿಕರಿಂದ ಮೂದಲಿಸಿಕೊಳ್ಳದಿದ್ದರೂ ವೃತ್ತಿಪರ ಅನೇಕ ಒತ್ತಡಗಳನ್ನು ಸಹಿಸಿಕೊಂಡು ಸೇವೆ ಮಾಡುವ ಇವರ ಕಾಯಕನಿಷ್ಠೆ, ರೋಗಿಗಳ ಬಗ್ಗೆ ಇರುವ ಒಲವು, ವಾತ್ಸಲ್ಯ ಭಾವನೆ, ಸ್ಪಂದಿಸುವ ರೀತಿ ಮೆಚ್ಚುವಂತಹದು. ಬದುಕಿನ ಅನಿವಾರ್ಯತೆಯಿಂದ ವೃತ್ತಿ ಮಾಡಿದರೂ ಸೇವಾ ಮನೋಭಾವ ಪ್ರಧಾನವಾಗಿರಬೇಕೆಂದು ತೋರಿಸುವ ಇವರ ಧಾರಾಳತನಕ್ಕೆ ನಮ್ಮದೊಂದು ಸಲಾಂ…!! ಎಲ್ಲರಿಗೂ ಮಿಡಿಯುವ ದಾದಿಯರ ಹೃದಯವಂತಿಕೆಗೆ ಅವರ ಬಾಳು ಹೂವಿನಂತೆ ಅರಳಲೆಂದು ಹಾರೈಸೋಣ..


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ : ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಎ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.


Leave a Reply

Back To Top