“ಸೂಪರ್ ಸಾಮಿಗೋಳು¡”

ಲೇಖನ ಸಂಗಾತಿ

“ಸೂಪರ್ ಸಾಮಿಗೋಳು¡”

ರೂಪ ಮಂಜುನಾಥ

 

ವಾದೋರ್ಸಾ, ನಮ್ ಗೌರವ್ವ ಗಣಪ್ಪ ಬರಾ ಸಮಯ್ದಾಗೆ ಕೊರೋನಾ ಮಾರಿಯವ್ವಾ ಲೋಕ್ದಾಗೆಲ್ಲಾ ಎಲ್ಲಾರ್ನೂವ ಅಟ್ಟಾಡುಸ್ಕೊಂಡು, ಬಡ್ದು ಬಾಯ್ಗಾಕ್ಕೊಳ್ತಿದ್ಳಲ್ಲಾ, ಅದ್ಕೆ,ಯಾರ್ ಮನೀಗೂವ ಯಾರೂ ಓಗಂಗಿಲ್ಲ ಬರಂಗಿಲ್ಲ. ಅಂಗಾರೆ ಗೌರಮ್ಮುನ್ ಪೂಜೆ ಈ ಕಿತ ಎಂಗ್ ಮಾಡದೂಂತ ಸಾನೇ ಯೋಚ್ನೆ ಆಗ್ಬಿಟ್ಟಿತ್ತು ಸೋಮಿ. ಅದ್ಕೆ,ಮೂರೊರ್ಸುದಿಂದ್ಲೂವಾ, ಮಾಡೀಮ್ಯಾಕಿರಾ ಕೋಣೆಯಾಗ್ ಕೂತ್ಕಂಡು ಬೆಳ್ಗಾನ ಟಪ್ಪೂ ಟಪ್ಪೂ ಅಂತ ಸದ್ ಮಾಡ್ತಾ ಕೂತಂಡು ದಿನ್ಕೆ ಮೂರ್ ಕಿತಾ ಉಣ್ಣಕ್ ಮಾತ್ರಾವಾ ಕೆಳುಕ್ ಬರಾ,

,”ವರ್ಕು ಪ್ರಮ್ ರೂಮು”, ಮಾಡ್ಕಂಡಿರಾ, ನನ್ ಕಿರೇ ಮಗ ಕೆಳಕ್ಕಿಳ್ದು ಬಂದಾಗ,”ಮಗಾ, ಈ ಕಿತ ಅಬ್ಬಾವ ಎಂಗಾಲಾ ಮಾಡಾದೂ? ಅಟ್ಟಿ ವಳಿಕ್ಕೆ ಯಾ ಸಾಮಿಗುಳ್ನ ಕರ್ಕಳಂಗಿಲ್ವಲ್ ಮಗಾ”ಅಂತ ನನ್ ಮನ್ಸಿನ್ ನೋವ್ನ ಅವುನ್ ಕೂಟೆ ತೋಡ್ಕೊಂಡೆ. ಅದ್ಕೆ, ನನ್ ಕಿರೇ ಮಗಾ,”ಮಾಮ್, ಅದ್ಯಾವ್  ದೊಡ್ ಇಶ್ಯೂ ಅಂತ ವರಿ ಮಾಡ್ತೀರಾ? ಚಿಲ್ ಮಾಮ್ ಚಿಲ್. ನೋಡಿ ಇಲ್ಲಿ, ನಿಮ್ ಯೂ ಟೂಬ್ ನಲ್ಲಿ ಲೈನಾಗಿ ಆನ್ಲೈನ್ ಸ್ವಾಮಿಗಳ್ ನೀವು ಕರೆಯೋದೇ ಕಾಯ್ತಾ ಇದಾರೇ. ಜಸ್ಟ್ ಟಚ್ ಮಾಡಿ,ಮಂತ್ರ ಸ್ಟಾರ್ಟ್ ಮಾಡೇ ಬಿಡ್ತಾರೆ”, ಅಂತ ಆನ್ಲೈನ್ ಸಾಮಿಗೋಳ್ನ ಪರ್ಚಯ ಮಾಡ್ಕೊಟ್ಟ ಕನ್ರಪ್ಪಾ!

ಸರಿ….

ಗೌರಿಹಬ್ಬದ ದಿನ.ಗೌರಮ್ಮನ್‌ ಪೂಜೆಗೆ ಸಾಮಿಗಳ್‌ನ ಕರ್‌ಯಾಕೇಂತ ಯೂಟೂಬ್ ಗುಡಿಗೆ ಬುದ್‌ವಾರ ಸಂಜೆ ಓದ್‌ನಾ¡

ಅಲ್ಲಿ ಐನೋರ್‌ನ ಕೇಳ್‌ದೆ,” ಐನೋರಾ,ನಾಳೆ ಒತ್ತಾರೇ ಗೌರಮ್ಮನ ಪೂಜೆಗೆ ಸಾಮಿಗುಳು ಬೇಕಲ್ಲಾ, ಯಾರಾನಾ ಸಿಗ್‌ತಾರಾ ಏಳೀ¿”ಅಂದೆ.ಅದ್‌ಕೆ, ಯು ಟೂಬ್‌ ಗುಡಿ ಐನೋರು ಏಟ್ ಮಂದೀನ ಕಳುಸ್ಲಿ, ಏಳವ್ವಾ”, ಅಂದ್ರು.ಬಲ್‌ ಆಶ್ಚರ್ಯ ಆತು. “ಏಟಾದ್ರೂ ಸಾಮಿಗುಳ್‌ ಯಾಕ್‌ ಸಾಮಿ, ಒಬ್‌ರೇ ಸಾಕು”,ಅಂತ ನಾನಂದೆ..ಅದ್ಕೆ” ಅಸ್ತೂ”, ಅಂತ ಅಸೂರೆನ್ಸು ಕೊಟ್ರು ಗುಡಿ ಸಾಮ್ಗಳು.” ಸರಿ,ಪುರೋಹಿತುರ್‌ನ ಏಟೊತ್‌ಗೆ ಕಳುಸ್‌ತೀರಾ.”ಅಂತ ಕೇಳ್‌ದೆ.ಸಾಮಿಗುಳು ಯೇಳುದ್ರು,” ನೀವ್‌ ಏಟೊತ್ತಿಗೇಳುದ್ರೆ,ಆಟೊತ್ಗೇ ಕಳಿಸಿಕೊಡ್‌ತೀನಿ ತಾಯಿ”” ಅಂದ್ರ¡ ಬೋ ಕುಸಿ ಆತು. “ ಸಾಮಿ, ನನ್ಗೆ ತೆಲುಗ್‌ನಾಗೆ ಪೂಜೆ ಮಾಡಿಸೋರ ಕಳುಸ್ ಕೊಡೀ”, ಅಂದೆ. “ ಅಂಗೇ ಆಗ್‌ಲಿ ಕಣವ್ವಾ”, ಅಂದ್ರಾ, ಅರೆರೆ, ಬೋ ಸಂತೋಸ ಆತು,ಸಾಮಿಗುಳ್ ಏಳಿದ್ದುಕ್ಕೆಲ್ಲಾ ಅಸ್ತೂ ಅಸ್ತೂ ಅಂತಿದ್ರೆ, ಎಂತ ಸುಬಿಕ್ಸ್ ಕಾಲ ಬಂದೈತಲ್ಲಪ್ಪಾ ದ್ಯಾವ್ರೇ, ಅಂತ ಆ ಸಿವಪ್ಪುಂಗೆ ಅಂಗೆ  ಸರ್‌ಣು ಸರ್ಣು ನಮ್ ಅಪ್ನೆ ಅಂದೆ.ಆಮೇಕೆ, “ಸಾಮಿ ವರ್ಸುಕೊಂದಪಾ ಗೌರಮ್ಮನ್ ಪೂಜೆ, ಸಾಸ್ತ್ರ ಒಂದು ತಪ್‌ದೆ  ಸಾಂಗ್ವಾಗಿ ಮಾಡುಸ್ಬೇಕು, ಸಹಸ್ರನಾಮಾನೂ ಏಳೋರ್‌ಬೇಕು.ಅಂತೋರ್ನ ಕಳ್ಸಿ”, ಅಂದೆ, ಅದ್‌ಕೆ, ಸಾಮ್ಗೋಳು,” ನಿಮ್ಗೆ ಎಂಗ್ ಬೇಕೋ ಅಂಗೇ ಪೂಜೆ ಮಾಡಿಸೋರ್‌ನ ಕಳುಸ್‌ತೀನಿ ತಾಯಿ¡”ಅಂದ್ರ,” ದ್ಯಾವ್ರೇ, ಇದೇನ್ ಕನ್‌ಸೋ, ದಿಟ್‌ವೋ?”,ಅಂತ ಗಾಬರಿ ಆಗೋಯ್ತು. ಗಿಂಟ್ಕೊಂಡು ನೋಡ್ದೆ ಕಣವ್ವಾ, ಯವ್ವೀ ಯವ್ವೀ…..ದಿಟ್ವೇ!!!

ಅಬ್ಬ¡ ಎಂತಾ  ಒಳ್ಳೆ ಕಾಲ ಬಂತೂಂತ ಶಾನೇ ಶಾನೇ ಕುಸಿ ಆತು.

       ಅಬ್ಬುದ್ ದಿನ, ಸಮ್‌ಯಕ್‌ ಸರ್‌ಯಾಗಿ, ಯೂಟೂಬ್‌ ಸಾಮಿಗುಳ್‌ಗೆ ಏಳ್‌ದೆ,ಕಳಸ,ಹೂವು ಹಣ್ಣಿನ್ ಅರ್ವಾಣ, ನೈವೇದ್ಯಕ್ಕೆ ಚಿತ್ರಾನ್ನ, ಹೋಳ್ಗೆ,ಪಾಯ್‌ಸ, ತೊವ್ವೆ ಎಲ್ಲಾ ಮಾಡಿಟ್ಟಿವ್ನಿ ಸೋಮಿ, ಅಂದಿದ್‌ಕೆ,ಪೂಜೆ ಮಾಡಕ್ಕೆ ಸೋಮಿಗೋಳ್‌ನ ಆ ಕ್ಷಣ್‌ಕೇ ಕಳುಸೇಬಿಟ್ರು.ಪೂಜೆ ಸುರು ಮಾಡುದ್ರಾ.ಒಸೀನೂ ಗಾಬ್ರಿ ಮಾಡ್‌ಕೊಳ್‌ದೆ, ನಿದಾನುಕ್ಕೆ ನನಗ್ಯಾವಾಗ ಬೇಕೋ ಆವಾಗೆಲ್ಲಾ ಏಸೊತ್‌ ಆದ್ರೂ ಸರ್‌ಯೆ,”ನಿಲ್ಸಿ ಸೋಮಿ “ಅಂತ ಮುಟ್ ಏಳುದ್ರೆ ಮಂತ್ರಾವ ಅಲ್ಗೇಯಾ  ನಿಲ್‌ಸೋರು, ಸುರು ಮಾಡಿ ಸೋಮಿ ಅಂತ ಮುಟ್ಟುದ್ರೆ ಅಂಗೇ ಅಲ್ಲಿಂದ್ಲೇಯಾ ಸುರುಮಾಡೋರು.ಒಂದ್ ಏನಪ್ಪಾಂದ್ರೆ, ನಮ್ ಟ್ಯಾಬ್ ಸೋಮಿಗುಳ್ ಲೈವ್ ಸೋಮಿಗುಳಂಗೆ ಮಡಿ ಇಲ್ಕಣ್ರೀ.ಈಗಿನ್ ಜಮಾನ್ದ ಸಾಮ್ಗುಳು, ಮುಟ್ದೊರ್ತು ಕಮಕ್ ಕಿಮಕ್ ಇಂತ ಕೆಮ್ಮಾಕೂ ಇಲ್ಲ.ಮುಟ್ಟೋ, ಸವರೋ, ನಯ್ವಾಗಿ  ತಲೆ ತಗ್ಸಿ, ಯೋಳುದ್ರೆ ನಾವೇನೇ ಏಳ್ಲಿ ಗೋಣಾಡ್ಸಿ,ದೂಸ್ರ ಮಾತಾಡ್ದೆ ಯೋಳಿದ್ದೆಲ್ಲಾ ಮಾಡ್ತರೇಂತೀವ್ನೀ…..

ಒಂದೀಟಾದ್ರೂವಾ ಬ್ಯಾಸ್ರ ಮಾಡ್‌ಕೊಳ‌ಲ್ಲಾಂತೀನೀ ಸಾವದಾನವಾಗಿ ಪೂಜೆ ಮಾಡ್ ರೂಪವ್ವಾ, ಏಟೊತ್ತಾದ್ರೂವೆ ಚಿಂತಿ ಇಲ್ಲ,ನಿಮ್ಮನೆಯಾಗೇ ಇರ್ತೀನಿ ಅಂದು, ಪ್ರತಿಯೊಂದೂವಾ ಸಾಂಗವಾಗಿ ಬೋ ಚೆನ್ನಾಗಿ ಮಾಡ್‌ಸಿಕೊಟ್ರು.ನಾನು ಕೂಡಾ,ಐನೋರಾ ಅಂಗಂದ್ ಮ್ಯಾಕೆ ಯಾಕೆ ಅವ್‌ಸ್ರ ಮಾಡ್ಕಳ್ಳೇಳಿ.ನಿದಾನ್ವಾಗೇ ಆ ನಮ್ಮವ್ವ ಗೌರವ್ವುನ್ನ ಬಕ್ತಿಯಿಂದ ಬೇಡ್ಕೊಳ್ತಾ ಪೂಜೆ ಮಾಡ್ಕೊಂಡೆ ಕಣ್ರೀ

ಗೌರಮ್ಮಂಗೆ ಆರ್‌ತಿ ಎತ್‌ವಾಗ್‌ಲೂ, ನೀವೇನ್ ನಿಮ್ ಪಸಂದಾದ್ ದನಿ ತೆಗೀಬ್ಯಾಡಿ ತಾಯಿ,ವೈನಾಗಿ ಹಾಡೋರ ತಾವ ಪದ ಆಡುಸ್‌ತೀನಿ ಅಂದ್ರಾ, ಬ್ಯಾಸ್ರ ಆದ್ರೂವಾ, ಇನ್ನೇನ್ ಮಾಡಕ್ಕಾಯ್ತದೇ,ಅಂಗೇ ಮಾಡಿ ಸೋಮಿ ಅಂದೆ,ಇಬ್‌ರು  ದಿವ್ನಾ..ಗ್ ಪದ ಆಡ ಮುತ್ತೈದೆಯರಿಂದ ಚಂದಾಗಿರ  ಗೌರಮ್ಮುನ್ ಆರ್ತಿ ಪದಾವ ಆಡುಸುದ್ರು.ನಂಗಂತೂ ಏಳಕ್‌ ಆಗ್‌ದೋಷ್ಟು ಕುಸಿ ಆತು.

“ಸಾಮಿ, ಸ್ವಲ್ಪ ಆಲೋ, ಕಾಪಿಯೋ  ಕುಡೀರಿ ಸೋಮಿ “ಅಂದಿದ್‌ಕೆ, “ಸುತಾರಾಂ ಬ್ಯಾಡಕೇ ಬ್ಯಾಡಾಂ”ತ ಅಂದ್‌ಬುಟ್ರು.

“ಸರಿ ಸೋಮಿ, ತಾಂಬಲ ದಕ್ಷಿಣೆ ಕೊಡ್‌ತೀನೀಂ”ತ ಎದ್‌ನಾ¿”ಅಮ್ಮ ,ಅದೆಲ್ಲಾ ನನಗಾಗಕಿಲ್ಲ ಬುಡಿ, ಬೇಡ.ಬದುಲ್ಗೆ, ನನಗೆ ಒಸಿ  ವತ್ತು ಆ ಫ್ಲಗ್ಗಿಗಾಕಿ  ಚಾರ್ಜು ಮಾಡಿ ಪುಣ್ಯಕಟ್‌ಕಳಿ. ಆಟು ಮಾಡಿ ,ನಿಮ್ಮ ಕುಟುಂಬ ತಣ್‌ಗಿರ್ಲಿ¡” ಅಂತ ಆಸ್ರೀವಾದ ಮಾಡೇಬುಟ್ಟ್ರು.ಒಂದ್‌ಕಾಲ್‌ದಾಗೆ ಈಟೆಲ್ಲಾ ಅನ್‌ಕೂಲ ಆಯ್‌ತದೇಂತ , ಕನ್‌ಸು, ಮನ್ಸಲ್ಲೂ ಅನುಕೊಂಡಿರಲಿಲ್ಲ ಕಣ್ರೀ!ಈ ಟ್ಯಾಬ್ ಸಾಮಿಗುಳ್‌ದು ಒಂದೂ ಡಿಮಾಂಡ್ ಇಲ್ಲಕೇ ಇಲ್ಲರೀ¡ಬಾಳಾ ಪ್ಲೆಕ್ಸಿಬಲ್ಲೂ¡ಅಸ್ಟೇ ಸಿಂಪಲ್ಲು¡ ನನಗೆ ಶಾನೆ ಇಷ್ಟ ಆಗೋದ್ರು.ಕೇಡ್‌ಗಾಲ್‌ದಲ್ಲೂ,ಎಂತ ಒಳ್ಳೆ ಟೇಮು ಬಂದದಲ್ಲಾಂತ ಸಕ್‌ರೆ ತಿಂದಷ್ಟು  ಕುಸಿ ಆಗೋತು.

ಅಲಾ, ಈಟೆಲ್ಲಾ ನಮ್ ಅಟ್ಟಿ ತಾಕೇ ಎಲ್ಲ ಅನ್ಕೂಲ ಬಂದಾಗ, ಕೇಡ್ಲಾಲಾನಾರಾ ಎಂಗಾದಾತೂ ನೀವೇ ವಸಿ ಯೋಳಿ.ತಿಳಿವಳ್ಕಿಲ್ದಿರ ಜನಾ, ಏನೇನೋ ಮಾತಾಡ್ತವೇ! ಅಲ್ಲುವ್ರಾ?

        ಹಬ್ಬಹರಿದಿನಗಳು ಬಂತೂಂದ್ರೆ, ಲೈವ್ ಸಾಮಿಗಳದು ಆದಾವ ಪಾಟಿ ಡಿಮಾಂಡಪ್ಪೋ¿ ದ್ಯಾವ್ರೆ¡ಆ ದಿನ ಅವರು ಶಾನೇ ಬಿಜಿ. ಏಳು ಗಂಟೆಗೆ ಬರ್ತೀನಿ ಅನ್ನೋರು ಹತ್ತು ಗಂಟೆ ಆದ್ರೂವಾ ಬರಕಿಲ್ಲ.  ಆ ದಿನದ ಪೂಜಾ  ಚಾರ್ಜ್ ಶೀಟು ತಯಾರುಸಿ ದಕ್ಷಿಣೆ ಈಟೀಟುಕ್ಕೆ ಈಟೀಟೂ ಅಂತ ಮೊದಲೇ ಪಿಕ್ಸಾ ಮಾಡಿಬಿಡ್‌ತಾರೆ. ಶಾರ್ಟ್ ಕಟ್‌ ವ್ರತಕ್ಕಿಷ್ಟು, ಫ಼ುಲ್ ವ್ರತಕ್ಕಿಷ್ಟು,ಅಷ್ಟೋತ್ತರ ಹೇಳುದ್ರೆ ಇಷ್ಟು, ಸಹಸ್ರನಾಮ ಹೇಳುದ್ರೆ ಇಷ್ಟು, ಪುನಃ ಪೂಜೆ ಮಾಡಿಸಿದರಿಷ್ಟು ಹೀಗೆ…..ಆಮೇಲೆ, ಅದೆಷ್ಟು ಗಾಬರಿ ಮಾಡ್‌ತಾರೋ!!ಮನೆಯೊಳಗೆ ಬರ್ತಾನೇ ಗಳಗಳಗಳಾಂತ ಗಂಟೆ ಅಲ್ಲಾಡಿಸಿಕೊಂಡು ಬಂದುಬಿಡ್‌ತಾರೆ ಕಣ್ರೀ.”ಧೂಪಾರತಿ ಚೇಯಂಡಮ್ಮ”, ಅಂತಾರೋ, ಬತ್ತಿ ಹಚ್ಚಿಕೊಳ್ಳೋದ್ರಲೇ, ಮಂತ್ರ ಮುಗ್ಸಿ, ಮುಂದುಕ್ಕೆ ಓಡೋಗಿರ್ತಾರೆ.” ನೈವೇದ್ಯಮು ಚೇಯಂಡಮ್ಮ” ಅಂತಾರೆ,ಹಣ್ಣು ಚಿವುಟೋಕೆ ಮುಂತೇಲೇ ಸಮರ್ಪಯಾಮಿ ಅಂದ್‌ಬಿಡ್‌ತಾರೆ.ಸಹಸ್ರನಾಮದಲ್ಲಿ, ಒಂದ್ ನಾಮವೂ ಅರ್ಥವಾಗದಂತೆ, ಎಲ್ಲಾ ನಾಮಕ್ಕು ಪಂಗನಾಮ ಹಾಕಿ,ಗಂಟಲಲ್ಲೇ ಗಂಟೆ ಅಲ್ಲಾಡಿಸಿ,ನಾಲಗೆ ಹೊರಳ್‌ಸಿ,ತಿರುಗಿಸಿ,ಮುರುಗ್ಸಿ,”ಸಂಪೂರ್ಣಂ¡”ಅಂದೇಬಿಡ್‌ತಾರೀ¡ನಿಮ್ಗೂ ಈ ಅನುಭವ ಆಗಿರಬೇಕಲ್ಲ್ವೇ¡ ಕೊನೆಗೆ ಅವ್ರಿಗೆ ಫೀಜೂ ತಾಂಬೂಲ್ವಾ ಕೊಟ್ಟು, ಮುಂದಿನ ಮನೆಗೆ ಲಗ್ಗೇಜು ಸಮೇತ ಡ್ರಾಪ್ ಮಾಡಿ ಬರಬೇಕು.ಇದೆಲ್ಲಾ ಅರ್ಧ ಗಂಟೇಲೇ ಮುಗಿದೇ ಹೋಗ್ತದೆ.ಸೂಪರ್ ಸ್ಪೀಡು ನಮ್ ಲೈವ್ ಸಾಮಿಗುಳು.

      ಹೌದು, ಅಕ್ಕೋರೇ ಅಣ್ಣೋರೇ,     ನಿಮ್‌ ಮನೆೇಗೇ ಈ ವರ್ಸಾ ಗೌರವ್ವ ಗಣಪ್ಪುನ ಪೂಜೆಗ್‌ ಬರೋರು  ಯಾರು¿ ಪೋನು ಸಾಮಿಗುಳೋ¿ ಟ್ಯಾಬ್ ಸಾಮಿಗುಳೋ, ಲಾಪ್ ಟಾಪ್ ಸಾಮಿಗುಳೋ, ಲೈವ್ ಸಾಮಿಗುಳೋಲ್ಲ


2 thoughts on ““ಸೂಪರ್ ಸಾಮಿಗೋಳು¡”

  1. ಸೂಪರ್ ಸಾಮಿಗೋಳ ಸೂಪರ್ ಲೇಖನಕ್ಕಾಗಿ ಸೂಪರ್ ಥ್ಯಾಂಕ್ಸ್ ಮೇಡಂ.

Leave a Reply

Back To Top