ಅಂಕಣ ಸಂಗಾತಿ

ಸಕಾಲ

ದಾಂಪತ್ಯದ ಬಿರುಕಿಗೆ ಯಾರು ಹೊಣೆ?

ಇಂದೇಕೆ ದಾಂಪತ್ಯ ಸುಲಭದಿಂದ ಕಠಿಣತೆಯತ್ತ ಸಾಗುತ್ತಿದೆಯೆಂಬ ಪ್ರಶ್ನೆ? ಅದು ಸಕಾರಾತ್ಮಕ ಹಾಗೂ ನಕಾರಾತ್ಮಕ ಚಿಂತನೆಗಳತ್ತ ತನ್ನದೆ ಆದ ಹೆಗ್ಗುರತನ್ನು ಒತ್ತುತ್ತಿರುವುದು ಶುಭವೋ ಅಥವಾ ಅಶುಭದ‌ ಸಂಕೇತವೋ ಅರ್ಥೈಸಲು ಅಸಾಧ್ಯ! ಗಂಡಹೆಂಡಿರ ಜಗಳ ಉಂಡು ಮಲಗೋ ತನಕ ಎಂದು ಹಿರಿಯರು ಹೇಳಿದ ಮಾತು ಸರ್ವಕಾಲಿಕ ಸತ್ಯವಾಗದೇ ಅಕಾಲಿಕ ಮಳೆಯಾಗಿ ಸುರಿಯುತ್ತಿರುವುದು ದಾಂಪತ್ಯ ಬಿರುಕು ಬೀಳಲು ಇಷ್ಟು ಸಾಕು.ಯಾರು ತಾನೆ ತನ್ನೊಳಗಿನ ಅಸಮಾಧಾನಕ್ಕೆ ತಂಪೆರೆಯುವವರು? ವಯೋಸಹಜ ಮನೋಭಿಲಾಷೆಗಳು ಕಾಲಕ್ರಮೇಣ ಮಣ್ಣೊಳಗೆ ಹೂತು ಹೋಗುವ ಸಮಯಕ್ಕೆ ಚಿಗುರುವ ಸಾಧ್ಯತೆ, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ…

ಮದುವೆ ಪೂರ್ವಜನ್ಮದ ಸುಕೃತಫಲವೆಂದು ಹಾಗೂ ಮೊದಲೇ ನಿರ್ಧರಿತ ಫಲಕ್ಕೆ ಜಗದ ಬಂಧನದೊಳಗೆ ಲೀನವಾಗುವ ಕ್ಷಣಕೆಲ್ಲ ನಾವುಗಳು ಸಾಕ್ಷಿ ಕೇವಲ ನೆಪಮಾತ್ರ.ಜಾತಿ,ಧರ್ಮ ಎಲ್ಲೆಯನ್ನು ಮೀರಿ ಒಂದಾಗುವ ಜೋಡಿಗಳು ಭಗವಂತನ ಕೃಪಾಕಟಾಕ್ಷೆಗೆ ಒಳಗಾಗಿರುವುದೆಂಬ ದೃಢವಾದ ನಂಬಿಕೆ.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು …..ಎಂಬ ಗೀತೆ ಎದೆಯೊಳಗೆ ಸಂಚಲನ ಮೂಡಿಸದೆ .ಬಂಧು ಬಾಂಧವ್ಯ ‌ಬಳಗ ದಾಂಪತ್ಯದ ಶುಭ ಕಾರ್ಯಕೆ ಹಾರೈಸದೆ ಇರರು.

ಹಿಂದೆಲ್ಲ ಗುರು ಹಿರಿಯರು ಒಪ್ಪಿದರೆ ಮುಗಿಯಿತು. ಹುಡುಗ,ಹುಡುಗಿ ನೋಡೋ ಶಾಸ್ತ್ರಕ್ಕೆ ಯಾರು ಅಲ್ಲಗಳೆಯುವಂತಿಲ್ಲ.ಮದುವೆಯ ದಿನವೇ ಪರಸ್ಪರ ಸಂಬಂಧ ಬೆಸೆಯುವ ಹೊಣೆಗಾರಿಕೆ.ಕಷ್ಟವಾದರೂ ಇಷ್ಟದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕು ಕಳೆದು ಜೀವನ ಸಾಗಿಸಿದ‌ ಕುಟುಂಬಗಳು ಸಾಕಷ್ಟಿದೆ. ಇಂದು ಆ ಪರಿಸ್ಥಿತಿ ಇಲ್ಲ.ಮದುವೆ ಪರಸ್ಪರ ಒಪ್ಪಿಗೆಯ ಮೇಲೆ ಹೊರತು ಕೂಡ ಇಂದು ಗಟ್ಟಿಯಾಗಿ ಸಂಬಂಧಗಳು ನೆಲೆನಿಲ್ಲಲು ಒದ್ದಾಡುತ್ತಿವೆ.ಎಲ್ಲ ಇದ್ದರು ಸುಖ ಸಂತೋಷದಿಂದ  ಬಾಳಿ ಬದುಕುವಲ್ಲಿ ಉತ್ಸಾಹ ಕಳೆದುಕೊಳ್ಳುತ್ತಿರುವುದು ಯಾವುದರ ಸಂಕೇತವೆಂದು ಭಾವಿಸುವುದು ದುತ್ಸರ ಸಂಗತಿಯಾಗಿದೆ.ದಾಂಪತ್ಯದ ಬಿರುಕಿಗೆ ಯಾರು ಹೊಣೆ?

ಆದ್ರೂ ಏಳು ಬೀಳಿನ ನಡುವೆ ಕಷ್ಟ ಕಾರ್ಪಣ್ಯದ ನಡುವೆ ಸಂಸಾರ ಹಳಿತಪ್ಪಿದಂತಾದರೆ ಫಲವೇನು?ಎಂಬೆಲ್ಲ ಪ್ರಶ್ನೋತ್ತರಗಳು ಗಾಳಿಯಲ್ಲಿ ಹರಿದಾಡಿದ ಆಮ್ಲಜನಕದಂತೆ.ಕೈಕಾಲು ರೂಪಗೊಳ್ಳಲು ತಡಕಾಡಿ ದಂತೆಲ್ಲ,ವೈಮನಸ್ಸುಗಳು,ಅಹಂಗಳು,ಅತಿಯಾದ ಭಾವಪರವಶತೆಗಳು,ನಂಬಿಕೆ,ವಿಶ್ವಾಸಗಳೆಲ್ಲವೂ ತಕ್ಕಡಿಯಲ್ಲಿ ಕೂಡಿಟ್ಟ ಕಪ್ಪೆಯಂತೆ.ಹಾಗಿದ್ದಾಗ ೭೦,೮೦ ವಯಸ್ಸಿನ ದಂಪತಿಗಳಲ್ಲಿಯ ಅನ್ಯೋನ್ಯತೆ ಈಗಿನ ಕಾಲದಲ್ಲಿ ಇಲ್ಲವಂತಲ್ಲ,ಅವುಗಳ ಪ್ರಮಾಣ ಕಡಿಮೆ.ಹೀಗಾದಾಗ ಬುದ್ಧಿವಾದ ಹಿತವಚನಗಳು ಎಂದಿಗೂ ಕಹಿಯಾದ ಮನಸ ಅಷ್ಟು ಸುಲಭವಾಗಿ ಬದಲಿಸಲು‌ ಸಾಧ್ಯವಿಲ್ಲ.

ಮದುವೆಯಾಗುವಾಗ ತನ್ನ ಕೈ ಹಿಡಿವವರ ಮುಂದೆ ಏನೇ ಇದ್ದರೂ ನೇರವಾಗಿ ಮನಬಿಚ್ಚಿ ಹೇಳುವಾಗ ಮುಚ್ಚುಮರೆ ಇರಬಾರದು, ಇಲ್ಲದಿದ್ದರೆ ಮುಂದಿನ ಜೀವನ ಕಷ್ಟವಾಗುವುದು. ಏನೋ ಮೆಚ್ಚಿಸುವ ಭರದಲ್ಲಿ ಉಹಾಪೂಹಗಳಿಗೆ ಒಳಗಾಗಿ ಬಾಯಿಗೆ ಬಂದದ್ದನ್ನು ಹೇಳಿದರೆ ಅದರಿಂದಲೂ ಸಮಸ್ಯೆಗಳು ಉದ್ಭವಿಸುತ್ತದೆ. ನೀವು ಮಾತನಾಡುವ ಶೈಲಿ ನೋಡಿಯೇ ನಿಮ್ಮ‌ ಲೆಕ್ಕಾಚಾರ ಮಾಡಬಹುದು. ಇನ್ನು ಮದುವೆಯಾದ ಬಳಿಕ ಕೂಡ ಕೆಲವೊಂದು ಅಹಿತಕರ ಮಾತುಗಳನ್ನಾಡದಿದ್ದರೆ ಸಂಬಂಧ ಚೆನ್ನಾಗಿರುತ್ತದೆ.

ಬಹಳಷ್ಟು ಸಂಬಂಧಗಳು ಒಳ್ಳೆಯ ನೆಲೆಗಟ್ಟಿನಲ್ಲಿ ನಿಂತರೂ ಕೆಲವೊಂದು ಸಂದರ್ಭಗಳಲ್ಲಿ ಒಳ್ಳೆಯ ಮನೋಭಾವ ಹೊಂದಿದ್ದ ಕೆಲಸಗಳು ಮುಂದೊಂದು ದಿನ‌ ಅವರ ಬದುಕಿಗೆ ಉರುಳಾದ ಕ್ಷಣಕೆ ನಿಂದಿಸುವುದು ಅಥವಾ ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ದೂರುವುದು, ನಿನ್ನಿಂದ ಹೀಗಾಯ್ತು ಎಂದೆಲ್ಲಾ ಯಾರಾದರೂ ನೆಗೆಟಿವ್‌ ಟೋನ್‌ನಲ್ಲಿ ಹೇಳುತ್ತಿದ್ದರೆ ತುಂಬಾನೇ ಕೋಪ ಬರುವುದು, ಬೇಸರ,ಸಣ್ಣ-ಪುಟ್ಟ ತಪ್ಪುಗಳಾದಾಗ ಅಥವಾ ಏನಾದರೂ ಸಮಸ್ಯೆ ಬಂದಾಗ ಈ ರೀತಿಯೆಲ್ಲಾ ಆದದ್ದು ನಿನ್ನಿಂದ ಅಂತ ಹೇಳಿದರೆ ಸಂಬಂಧ ಹಾಳಾಗುವುದು.ಅದರ ಬದಲಿಗೆ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಿ.ತಪ್ಪಾದ ಸಮಯಕ್ಕೆ ಜೀವನವ ಬಲಿಕೊಟ್ಟರೆ ಹುತಾತ್ಮರೆಂಬ ಪದವಿ ಲಭಿಸುವುದೇ ಯೋಚಿಸಿ ಮುನ್ನಡೆಯುವ ಮನಸ್ಸು ಮಾಡಿದರೆ ಬಿಗಡಾಯಿಸುವ ಸ್ಥಿತಿ ಸುಧಾರಿಸಬಹುದು.

ದಾಂಪತ್ಯ ಬಿರುಕಿನಿಂದ ಶುರುವಾಗಿ ಕೊನೆಗೆ ನಿಂತುಕೊಳ್ಳುವುದು” ವಿಚ್ಚೇದನ “ವೆಂಬ ಕಟಕಟೆಯಲಿ.ಇದರ ಪರಿಣಾಮ ಮಕ್ಕಳ ಮೇಲೆ ಹೇಗೆ ಉಂಟಾಗುವುದೆಂಬ ಸೂಕ್ಷ್ಮ ಅರಿವು ಆ ಕ್ಷಣದಲ್ಲಿ ಹೊಳೆಯದು.ಅವಮಾನ ಮಾಡುವುದು,ಅದರಿಂದ ಯಾವ ಲಾಭವಿದೆ? ಯಾವುದೋ ವಿಷಯಕ್ಕೆ ನಿಮ್ಮಿಬ್ಬರ ನಡುವೆ ಜಗಳ ಬಂದಾಗ ಹಳೆಯ ಸಂಬಂಧದ ಬಗ್ಗೆ ಹೇಳುವುದು ಅಥವಾ ಮುಗಿದು ಹೋದ ಸಂಬಂಧದ ಬಗ್ಗೆ ಹೇಳಿ ಜಗಳ ಮಾಡುವುದು ಇವೆಲ್ಲಾ ಮುಗಿದು ಹೋದ ಸಂಬಂಧ, ಈಗ ಇರುವ ಸಂಬಂಧದ ಕಡೆ ಮಾತ್ರ ಗಮನ ನೀಡಿದಷ್ಟು ಒಳಿತು.

ಹೇಳಿದಷ್ಟು ಸುಲಭವಾ? ಪ್ರಶ್ನೆ ಮೂಡಬಹುದು.ನಿಜ ಸಾಧ್ಯವಿಲ್ಲ.ಕಹಿ ಬೇವು ದೇಹ ಸೇರಿದಷ್ಟು ಮೈಯೊಳಗಿನ ನಂಜು ಮರೆಯಾಗಬಹುದು.ಅಷ್ಟು ಸುಲಭವಾಗಿ ಸಂಬಂಧಗಳು ಕಂಡವರ ಪಾಲಾಗುವಂತಿದ್ದರೆ ದಾಂಪತ್ಯವೆಂಬ ಪವಿತ್ರ ಬಂಧನವನ್ನು ಹಿರಿಯರು ಗೌರವಿಸುತ್ತಿರಲಿಲ್ಲ. ಅದಕೊಂದು ಬೆಲೆ,ನೆಲೆ ನಿಂತಿರುವುದು ನಮ್ಮಗಳ ಪವಿತ್ರ ಭಾವದಿಂದ.

ಮದುವೆಯಾದ ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯವನ್ನು ಮರೆಯಬಾರದು.ಪತಿಗೆ ಪತ್ನಿ,ಪತ್ನಿಗೆ ಪತಿ ನಂಬಿಕೆ ದ್ರೋಹ ಮಾಡುವತಂಹ ಸಂದರ್ಭಗಳು ಎದುರಾಗದಂತೆ ಪ್ರಾಮಾಣಿಕತೆಯ ಬಂಧನದಲ್ಲಿ ಭದ್ರ ಕೋಟೆಯಂತೆ ಬಲವಾಗಿರಬೇಕು.ಮನುಷ್ಯನ ನಿಯತ್ತು ಹಾಳಾಗುವುದು ಹಲವಾರು ಕಾರಣದಿಂದ ದುಡ್ಡು,ಅತಿಯಾದ ಒಳ್ಳೆಯತನದಿಂದ.ಸ್ವಾರ್ಥ,

ಬೇರೆಯರ ಜೊತೆ ಫ್ಲರ್ಟ್ ಮಾಡುವುದು.ನಾನೇನು ತಪ್ಪು ಮಾಡುತ್ತಿಲ್ಲ, ಬರೀ ಚಾಟ್‌ ಮಾಡತಿನಿ, ಆಗೊಮ್ಮೆ ಈಗೊಮ್ಮೆ ಮಾತಾಡತಿನಿ,ಇಂಥಾ ವಿಷಯ ಯಾಕೆ ಹೇಳಬೇಕು? ಅವರಿಗೆ ಸಂಬಂಧ ಇಲ್ಲ,ನನ್ನಿಷ್ಟ ಎಂದರೂ ತಪ್ಪು-ತಪ್ಪೇ, ನಿಮ್ಮ ಸಂಗಾತಿಗೆ ನೀವು ಮೋಸ ಮಾಡುತ್ತಿದ್ದೀರಿ ಎಂದು ತಿಳಿದಷ್ಟು ಆತಂಕ ಕಟ್ಟಿಟ್ಟ ಬುತ್ತಿ. ಅವರು ನಿಮ್ಮಿಂದ ದೂರಾಗಬಹುದು ಅಥವಾ ಸದಾ ನಿಮ್ಮನ್ನು ಸಂಶಯ ಕಣ್ಣಿನಿಂದಲೇ ನೋಡಬಹುದು. ತಮ್ಮಹಾವ ಭಾವದಿಂದಲೇ ಕಂಟ್ರೋಲ್‌ ಮಾಡುವುದು,ಕೋಪಗೊಳ್ಳುವುದು ಅಥವಾ ಹೊಡೆಯುವುದು, ಮನೆ ಬಿಟ್ಟು ಹೋಗುವುದು ಈ ರೀತಿಯೆಲ್ಲಾ ಮಾಡಿ ಸಂಗಾತಿ ಮನಸ್ಸಿನಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಆದರೆ ಹೀಗೆಲ್ಲಾ ಮಾಡಿದರೆ ಸಂಗಾತಿಯ ಪ್ರೀತಿ ದೊರೆಯಲು ಸಾಧ್ಯವಿಲ್ಲ ಎಂಬುವುದನ್ನು ಮರೆಯಬಾರದು.ನಿಮ್ಮ ಸಂಗಾತಿಯನ್ನು ಯಾವುದೇ ಕಾರಣಕ್ಕೆ ಬೇರೆಯವರ ಜೊತೆ ಹೋಲಿಕೆ ಮಾಡಿದಷ್ಟು, ನಿಮ್ಮೊಳಗಿನ ಕಪಟ ಮನಸ್ಸಿನ ಅನಾವರಣವಾದಂತೆ. ಒಬ್ಬರು ಮತ್ತೊಬ್ಬರಂತೆ ಇರಲು ಸಾಧ್ಯವಿಲ್ಲ. ಇನ್ನು ಸಂಸಾರದಲ್ಲಂತೂ ಈ ಹೋಲಿಕೆ ಮಾಡುವ ಬುದ್ಧಿಯೇ ಬರಬಾರದು. ಬೇರೆಯವರ ಜೊತೆ ತಮ್ಮ ಜೀವನ ಹೋಲಿಕೆ ಮಾಡುವವರು ಸದಾ ಕೊರಗುತ್ತಲೇ ಇರುತ್ತಾರೆ.

ಸತಿ-ಪತಿ ಅಂದ್ರೆ ಒಂದೇ ನಾಣ್ಯದ ಎರಡು ಮುಖಗಳಿ ದ್ದಂತೆ.ಅದಕೆ ಕಲಬೆರಕೆ ಸಲ್ಲ. ಪ್ರಾಮಾಣಿಕತೆ ಇದ್ದುದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು.ಸಂಸಾರ ಹಳಿತಪ್ಪದಂತೆ ಕೂಡಿಬೆರೆತ ಜೀವನ ಹಾಲುಜೇನಿನಂತೆ

ಸಾಗಿದರೆ ಮಾತ್ರ ದಾಂಪತ್ಯಕ್ಕೊಂದು ಬೆಲೆ…. ಆಡಂಬರಕೆ,ಐಷಾರಾಮಿಗೆ,ಆಸೆ ಬಿದ್ದು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಬದುಕುವ ಜೀವನಕ್ಕಿಂತ ಸಾತ್ವಿಕ ಹಾಗೂ ಸಾಧ್ವಿಕ ಮನಸ್ಥಿತಿಯನ್ನು ಹೊಂದಿದ ದಾಂಪತ್ಯಕ್ಕೆ ಸಮಾಜ ಮಾನ್ಯತೆ ಕೊಡುತ್ತದೆ.ಅಂತಹ ದಾಂಪತ್ಯ ಇತರರಿಗೆ ಮಾದರಿಯಾಗಲು ಸಾಧ್ಯ! ಇದು ಹೇಳಿದಷ್ಟು ಸುಲಭವಾ? ಎಂಬ ಪ್ರಶ್ನೆಗೆ ಉತ್ತರ ಪರಸ್ಪರ ಕೂತು ಉತ್ತರ ಹುಡುಕುವ ತಾಳ್ಮೆ ಉಳಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡಷ್ಟು ಒಳಿತು…


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

3 thoughts on “

  1. ಇಂದಿನ ಈ ಪರಿಸ್ಥಿತಿಗೆ ಅವಿಭಕ್ತ ಕುಟುಂಬ ಪದ್ಧತಿ ಹೋಗಿ ವಿಭಕ್ತ ಕುಟುಂಬ ಬಂದಿರುವುದು ಒಂದು ಮೂಲ ಕಾರಣ ಎನ್ನಬಹುದು, ಇನ್ನೊಂದು ಕಾರಣವೆಂದರೆ ಪತಿ -ಪತ್ನಿ ಇಬ್ಬರು ದುಡಿಯುತ್ತಿರುವುದು, ನಾನೇನು ಕಡಿಮೆ ಅನ್ನೋ ಅಹಮಿಕೆ ಇಬ್ಬರಲ್ಲೂ ಇರುವುದು, ಇಬ್ಬರೂ ಬೇರೆ ಬೇರೆ ಕಡೆಗೆ ದುಡಿಯಲು ಹೋಗುತ್ತಿರುವುದರಿಂದ ಪರಸ್ಪರ ಅಪನಂಬಿಕೆ,

    ಅತ್ಯುತ್ತಮವಾಗಿ ನಿರೂಪಿಸಿದ್ದೀರಿ, ನಿಜಕ್ಕೂ ಪತಿ ಪತ್ನಿಯರ ಕಣ್ಣು ತೆರೆಸುವ ಬರಹ, ಓದಿ ಅರ್ಥ ಮಾಡಿಕೊಂಡರೆ ಬದುಕು ಸುಂದರ

    Nagraj Achari Kundapur

  2. ಅತ್ಯುತ್ತಮವಾಗಿದೆ ಬರವಣಿಗೆ, ತಿಳಿದು ನಡೆದರೆ ಜೀವನ ಸುಂದರ ಹೂ ಬನ.

  3. ಅತ್ಯುತ್ತಮ ಬರವಣಿಗೆ, ಜೀವನ ಸರಳವಾಗಿ ಹೇಗೆ ಉತ್ತಮ ರೀತಿಯಲ್ಲಿ ಬದುಕು ಸಾಗಿಸ ಬಹುದು ಹಾಗೂ ಹೊಂದಾಣಿಕೆಯು ಮುಖ್ಯ.ಇದನು ಅಳವಡಿಸಿ ಕೊಂಡರೆ ಜೀವನ ಉತ್ತಮ ರೀತಿಯಲ್ಲಿ ಸಾಗಿಸ ಬಹುದು ಎನ್ನುವುದು ಬರವಣಿಗೆಯಲ್ಲಿ ಇದೆ.

Leave a Reply

Back To Top