ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ
ಭಾರತದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಅರ್ಥಗರ್ಭಿತ ಸಂದೇಶ
(ಸಿಂಹ ಹೃದಯಿಗಳಿಗೆ ಸಿಂಹದ ರಾಷ್ಟ್ರ ಮುದ್ರೆ)
ಡಾ. ಎಸ್.ಬಿ. ಬಸೆಟ್ಟಿ
ಅಶೋಕ ಚಕ್ರವು ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು, ಭಾರತದ ರಾಷ್ಟ್ರಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಶೋಕಚಕ್ರದಲ್ಲಿ ವೃತ್ತಾಕಾರದ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ, ಚಕ್ರದಲ್ಲಿನ ೨೪ ಕಂಬಗಳು ಬೌದ್ದಧರ್ಮದ ಆಚರಣೆಯನ್ನು ಸೂಚಿಸುತ್ತದೆ. ಪ್ರಾಚ್ಯ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ದವಾಗಿರುವ ಈ ಚಕ್ರ ಅಶೋಕ ಮಹಾರಾಜನಿಂದ ಸಾರಾನಾಥದಲ್ಲಿ ನಿರ್ಮಾಣವಾದ ಸ್ಮಾರಕಸ್ತಂಭದ ಸಿಂಹಶೀರ್ಷಿಕೆಯಲ್ಲಿದೆ.
ಸಾರಾನಾಥ ಸ್ಮಾರಕದ ಶಿಲಾಶಿಲ್ಪದಲ್ಲಿರುವ ಧರ್ಮಚಕ್ರವನ್ನು ಭಾರತದ ರಾಷ್ಟ್ರೀಯ ಬಾವುಟಕ್ಕೆ ಅಳವಡಿಸಿಕೊಳ್ಳಲಾಗಿದೆ. ಪಂಡಿತ್ ಜವಹರಲಾಲ್ ನೆಹರವರು ಭಾರತ ಸಂವಿಧಾನ ರಚನಾ(ರಾಜಾಂಗ) ಸಭೆಯಲ್ಲಿ ಧ್ವಜ ವಿಚಾರವನ್ನು ಮಂಡಿಸುತ್ತ ಭಾರತದ ರಾಷ್ಟ್ರಧ್ವಜ ಅಡ್ಡಗಲವಾಗಿದ್ದು, ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ್ದು, ನಡುವಿನ ಬಿಳಿ ಪಟ್ಟಿಯ ಮಧ್ಯ ಭಾಗದಲ್ಲಿ ಚರಕದ ಪ್ರತಿನಿಧಿಯಾಗಿ ಒಂದು ಚಕ್ರ ಸಾಗರನೀಲವರ್ಣದಲ್ಲಿ ಇರತಕ್ಕದು; ಈ ಚಕ್ರದ ರಚನೆ ಸಾರಾನಾಥದ ಆಶೋಕ ಸ್ತಂಭದ ಸಿಂಹಶೀರ್ಷದ ಪೀಠದಲ್ಲಿ ಕಾಣುವ ಚಕ್ರದ ಮಾದರಿಯಾಗಿರತಕ್ಕದು; ಚಕ್ರದ ಅಡ್ಡಳತೆ ಬಿಳಿಪಟ್ಟಿಯ ಅಗಲದಷ್ಟಿರತಕ್ಕದು; ಬಾವುಟದ ಅಗಲಕ್ಕೂ ಉದ್ದಕ್ಕೂ ೨:೩ ಪ್ರಮಾಣ ಇರತಕ್ಕದು ಎಂಬುದಾಗಿ ೧೯೪೭ರ ಜುಲೈ, ೨೨ರಂದು ಘೋಷಿಸಿದರು.
ಅಶೋಕ ಚಕ್ರದ ೨೪ ಕಡ್ಡಿಗಳ ಸಾರಾಂಶ ಮತ್ತು ಅರ್ಥ:
ಅಶೋಕ ಚಕ್ರದ ೨೪ ಕಡ್ಡಿಗಳ ಸಾರಾಂಶ:
೧. ಪ್ರೀತಿ ೨. ಧೈರ್ಯ ೩. ತಾಳ್ಮೆ ೪. ಶಾಂತಿ ೫. ದೊಡ್ಡತನ ೬. ಒಳ್ಳೆತನ ೭. ನಂಬಿಕೆ ೮. ಸೌಮ್ಯತೆ ೯. ನಿಸ್ವಾರ್ಥ
೧೦. ಸ್ವನಿಯಂತ್ರಣ ೧೧. ಸಯಂ ತ್ಯಾಗ ೧೨. ಸತ್ಯಾಸತ್ಯತೆ ೧೩. ಸದಾಚಾರ ೧೪. ನ್ಯಾಯ ೧೫. ದಯೆ ೧೬. ಆಕರ್ಷಕತೆ
೧೭. ನಮ್ರತೆ ೧೮. ನಿಷ್ಠೆ ೧೯. ಸಹಾನುಭೂತಿ ೨೦. ಆಧ್ಯಾತ್ಮಿಕ ಜ್ಞಾನ ೨೧. ಕ್ಷಮೆ ೨೨. ಪ್ರಾಮಾಣಿಕತೆ ೨೩. ಶಾಶ್ವತತೆ
೨೪. ಭರವಸೆ
ಅಶೋಕ ಚಕ್ರದ ೨೪ ಕಡ್ಡಿಗಳ ಅರ್ಥ:
ಅಶೋಕ ಚಕ್ರದ ೨೪ ಕಡ್ಡಿಗಳು ಪ್ರತಿ ಭಾರತೀಯರನ್ನು ೨೪ ಗಂಟೆಗಳ ಕಾಲ ಅಜಾಗರುಕತೆಯಿಂದ ಕೆಲಸ ಮಾಡಲು ಪ್ರೇರೆಪಿಸುತ್ತದೆ. ಅಶೋಕ ಚಕ್ರವು ಕರ್ತವ್ಯದ ಚಕ್ರ ಎಂದೂ ಕರೆಯಲ್ಪಡುತ್ತದೆ. ಈ ೨೪ ವಕ್ರರು ವ್ಯಕ್ತಿಯ ೨೪ ಗುಣಗಳನ್ನು ಪ್ರತಿನಿಧಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವದಾದರೆ, ಮಾನವರಲ್ಲಿ ೨೪ ಧಾರ್ಮಿಕ ಪಥಗಳನ್ನು ಕೂಡಾ ಹೇಳಬಹುದು. ಅಶೋಕ ಚಕ್ರದಲ್ಲಿ ಉಲ್ಲೇಖಿಸಲ್ಪಟ್ಟಿರುವ ಎಲ್ಲಾ ಮಾರ್ಗಗಳು ಪ್ರಗತಿ ಪಥದಲ್ಲಿ ಯಾವುದೇ ದೇಶವನ್ನು ಮುನ್ನಡೆಸುತ್ತವೆ. ಇದು ಬಹುಶಃ ನಮ್ಮ ರಾಷ್ಟ್ರೀಯ ಧ್ವಜದ ವಿನ್ಯಾಸಕಾರರು ಅದರಿಂದ ಚರಕವನ್ನು ತೆಗೆದುಹಾಕಿ ಮತ್ತು ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ಹಾಕುವದಕ್ಕೆ ಕಾರಣವಾಗಿದೆ. ಅಶೋಕ ಚಕ್ರದ ೨೪ ಕಡ್ಡಿಗಳ ಅರ್ಥ ಈ ಕೆಳಗಿನಂತಿವೆ-
೧. ಪರಿಶುದ್ದತೆ(ಸರಳ ಜೀವನವನ್ನು ಪ್ರೇರೆಪಿಸುತ್ತದೆ) ೨. ಆರೋಗ್ಯ(ದೇಹ ಮತ್ತು ಮನಸ್ಸಿನಿಂದ ಆರೋಗ್ಯಕರವಾಗಿರಲು ಸ್ಪೂರ್ತಿ) ೩. ಶಾಂತಿ(ದೇಶದ್ಯಂತ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು) ೪. ತ್ಯಾಗ(ದೇಶದ ಮತ್ತು ಸಮಾಜದ ಸಲುವಾಗಿ ಯಾವುದೇ ತ್ಯಾಗಕ್ಕೆ ಸಿದ್ದವಾಗಿರಬೇಕಿದೆ) ೫. ನೈತಿಕತೆ(ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ನೈತಿಕತೆ ೬. ಸೇವೆ(ಅಗತ್ಯವಿದಾಗ ದೇಶದ ಮತ್ತು ಸಮಾಜವನ್ನು ಪೂರೈಸಲು ಸಿದ್ದ) ೭. ಕ್ಷಮೆ(ಮಾನವರು ಮತ್ತು ಇತರ ಜೀವಿಗಳ ಕಡೆಗೆ ಕ್ಷಮೆಯ ಭಾವನೆ) ೮. ಪ್ರೀತಿ(ಪ್ರೀತಿಯ ಭಾವನೆ ದೇಶದ ಕಡೆಗೆ ಮತ್ತು ದೇವರ ಎಲ್ಲಾ ಜೀವಿಗಳು) ೯. ಸ್ನೇಹ(ಎಲ್ಲಾ ಪ್ರಜೆಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಲು) ೧೦. ಭ್ರಾತೃತ್ವ(ದೇಶದಲ್ಲಿ ಸಹೋದರತ್ವವನ್ನು ಬೆಳೆಸುವಲು) ೧೧. ಸಂಸ್ಥೆ(ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸುವುದು) ೧೨. ಕಲ್ಯಾಣ(ರಾಷ್ಟ್ರ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಲ್ಯಾಣ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ) ೧೩. ಸಮೃದ್ದಿ(ಸಕ್ರಿಯವಾಗಿ ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳುವದು) ೧೪. ಕೈಗಾರಿಕೆ(ಅದರ ಕೈಗಾರಿಕೆ ಪ್ರಗತಿಯಲ್ಲಿ ದೇಶದ ಸಹಾಯ ಮಾಡಲು) ೧೫. ಸುರಕ್ಷತೆ(ದೇಶದ ರಕ್ಷಣೆಗಾಗಿ ಯಾವಾಗಲೂ ಸಿದ್ದವಾಗಿರಬೇಕು) ೧೬. ಜಾಗೃತಿ(ಸತ್ಯದ ಬಗ್ಗೆ ತಿಳಿದಿರಲಿ ಮತ್ತು ವದಂತಿಗಳನ್ನು ನಂಬುವಿದಿಲ್ಲ) ೧೭. ಸಮಾನತೆ(ಸಮಾನತೆಯ ಆಧಾರದ ಮೇಲೆ ಸಮಾಜವನ್ನು ಸ್ಥಾಪಿಸುವುದು) ೧೮. ಆರ್ಥಾ(ಹಣದ ಅತ್ಯುತ್ತಮ ಬಳಕೆ) ೧೯. ನೀತಿ(ದೇಶದ ನೀತಿಯಲ್ಲಿ ನಂಬಿಕೆ) ೨೦. ನ್ಯಾಯಮೂರ್ತಿ(ಎಲ್ಲಾ ನ್ಯಾಯದ ಬಗ್ಗೆ ಮಾತನಾಡುತ್ತಾ ಇರು) ೨೧. ಸಹಕಾರ(ಒಟ್ಟಿಗೆ ಕೆಲಸ) ೨೨. ಕರ್ತವ್ಯಗಳು(ನಿಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಅನುಸರಿಸುವದು) ೨೩. ಹಕ್ಕುಗಳು (ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ ೨೪. ಬುದ್ದಿವಂತಿಕೆ(ಪುಸ್ತಕಗಳನ್ನು ಮೀರಿ ಜ್ಞಾನವನ್ನು ಹೊಂದು)
ಅಶೋಕ ಚಕ್ರದ ಎಲ್ಲಾ ಕಡ್ಡಿಗಳು ದೇಶದ ಸಮಗ್ರ ಅಭಿವೃದ್ದಿ ಬಗ್ಗೆ ಮಾತನಾಡುತ್ತವೆ. ಈ ಕಡ್ಡಿಗಳು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಎಲ್ಲಾ ದೇಶದವರಿಗೆ ಸ್ಪಷ್ಟವಾಗಿ ಸಂದೇಶವನ್ನು ನೀಡುತ್ತವೆ. ಈ ಕಡ್ಡಿಗಳು ೨೪ ತತ್ವಗಳನ್ನು ಹೋಲುತ್ತವೆ, ಇದರಿಂದ ಜಾತಿ, ಧರ್ಮ, ಭಾಷೆ ಮತ್ತು ಉಡುಪುಗಳ ವ್ಯತ್ಯಾಸಗಳು ಕಡಿಮೆಯಾಗಬಹುದು.
ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಅರ್ಥಗರ್ಭಿತ ವಿಷಯದ ಕುರಿತು ‘ಸಾಧ್ವಿ’ ಸ್ವಾತಂತ್ರ್ಯ ದಿನದ ಸಂಚಿಕೆ ಪತ್ರಿಕೆಯಲ್ಲಿ ಸಂಪುಟ-೬, ಸಂಚಿಕೆ-೨೨, ಗುರುವಾರ ೧೪ನೇ ಆಗಷ್ಟ್ ೧೯೪೭ರಂದು ಹೀಗೆ ಪ್ರಕಟವಾಗಿದೆ.
‘ಭಾರತದ ರಾಷ್ಟçಧ್ವಜ ಮತ್ತು ರಾಷ್ಟ್ರಮುದ್ರೆಯ ಸ್ವರೂಪವನ್ನು ನಿರ್ಧರಿಸುವಾಗ ರಚನಾ ಸಮಿತಿಯು ಸಾಮ್ರಾಟ್ ಅಶೋಕನ ಕಾಲದ ಸಾಂಚಿ ಸ್ತೂಪದಿಂದ ಸ್ಫೂರ್ತಿಯನ್ನು ಪಡೆದಿದೆ. ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಅಂದಿನ ತ್ರಿವರ್ಣ ಧ್ವಜದಲ್ಲಿ ಇದ್ದಂತೆಯೇ ಉಳಿದು ಅದರ ಮೇಲೆ ರಾಟೆಯ ಬದಲು ಸಾಂಚೀ ಸ್ತೂಪದ ಮೇಲೆ ಅಂದವಾಗಿ ಕೆತ್ತಲ್ಪಟ್ಟ ಚಕ್ರವು ದಟ್ಟ ನೀಲಿ ಬಣ್ಣದಲ್ಲಿ ಕಂಗೊಳಿಸುವುದು. ರಾಟಿಯು ಧ್ವಜದ ಎರಡೂ ಕಡೆಗಳು ಒಂದೇ ರೂಪದಲ್ಲಿಯು ಕಂಡುಬರುವದಿಲ್ಲವೆಂದು ಈ ಬದಲಾವಣೆಯನ್ನು ಮಾಡಲಾಗಿದೆ.
ರಾಷ್ಟ್ರಧ್ವಜದಲ್ಲಿ ಚಕ್ರವಿರುವುದರಿಂದ ಸಮಾಧಾನ ಹೊಂದಿದ ಮಹಾತ್ಮಾ ಗಾಂಧಿಯವರು ಇದಕ್ಕೆ ಮಾನ್ಯತೆಯನ್ನಿತ್ತಿದ್ದಾರೆ. ಈ ಚಕ್ರವೆಂದರೆ ರಾಟೆಯ ಚಕ್ರವಾಗಬಹುದು ಕುಂಬಾರನ ಚಕ್ರವಾಗಬಹುದು. ಜೀವನ ಭವಿತವ್ಯಗಳ ಗತ ಪ್ರಗತಿಗಳ ಚಕ್ರವೂ ಆಗಬಲ್ಲದು. ಕ್ರಿ.ಶ. ಪೂರ್ವ ಮೂರನೆಯ ಶತಮಾನದಲ್ಲಿದ್ದ ಅಶೋಕನ ಕಲಿಂಗದ ಘನಘೋರ ಸಂಗ್ರಾಮದ ನಂತರ ಅಹಿಂಸಾವಾದಿಯಾಗಿ ದೇವನಾಂಪ್ರಿಯನೆಂಬ ಹೆಸರಿನಲ್ಲಿ ಇಡೀ ಭಾರತದಲ್ಲಿ ಶಾಂತಿ ಸ್ಥಾಪನಾರ್ಥವಾಗಿ ಕಟ್ಟಿಸಿದ ಸ್ತಂಭಗಳ ಮೇಲೆ ಕೆತ್ತಿಸಲು ಸ್ವಯಂ ಸ್ಫೂರ್ತಿಯಿಂದ ಈ ಚಕ್ರವನ್ನು ಕಂಡು ಹಿಡಿದನೆಂಬುದರಲ್ಲಿ ಸಂದೇಹವಿಲ್ಲ. ಚಕ್ರವೆಂದರೆ ಧರ್ಮವೆಂದು ಬೌದ್ಧ ಧರ್ಮದ ಸಂಕೇತ. ರಾಷ್ಟçಧ್ವಜದ ಮೇಲೆ ಈ ಧರ್ಮದ ಸಂಕೇತವಿರುವುದು ಭಾರತೀಯರ ಪ್ರಾಮಾಣಿಕತೆ ಕರ್ತವ್ಯ, ಸಂಸ್ಕೃತಿಯ ಅಖಂಡ ಪ್ರವಾಸದ ದ್ಯೋತಕವಾಗಿದೆ.
ಚಕ್ರವೆಂದರೆ ಯಾಂತ್ರಿಕ ಮತ್ತು ಔದ್ಯೋಗಿಕ ಅಭಿವೃದ್ಧಿ ಎಂದು ಆಧುನಿಕ ಸಂಕೇತ ಇದು ಮನುಷ್ಯನೇ ಕಾಲ ಮತ್ತು ಅಂತರಗಳನ್ನು ಜಯಿಸಲು ಎಂಜಿನ್ ಮೋಟಾರ್ ವಿಮಾನಗಳನ್ನು ಕಂಡು ಹಿಡಿದ ಸಾಹಸದ ದ್ಯೋತಕವಾಗಿದೆ. ಚಕ್ರದ ಈ ಸರ್ವ ಸಂಕೇತವನ್ನು ಗಮನಿಸಿದರೆ ರಾಷ್ಟ್ರಧ್ವಜದ ಚಕ್ರವಿರಬೇಕು ಎಂದು ಸೂಚಿಸಿದವರ ಆಸ್ಥಾನತೆಯನ್ನು ಕೊಂಡಾಡದಿರಲಾಗದು.
ಈ ಚಕ್ರದ ಹಲ್ಲುಗಳು ಆಕಾರದಲ್ಲಿ ಸೂರ‍್ಯನನ್ನು ಹೋಲುತ್ತವೆ. ಈ ಸೂರ‍್ಯನನ್ನು ಆಹಾರರಾರೋಗ್ಯ, ಬೆಳೆ, ಬೆಳಕು ಮತ್ತು ಸರ್ವ ಸತ್ತುಗಳ ಪ್ರಭಾತನೆಂದು ಶತಮಾನಗಳಿಂದಲೂ ಆರಾಧಿಸುತ್ತಿದೆ. ಪ್ರಾಣಿಜೀವನ ಹಾಗೆಯೇ ಸಸ್ಯಜೀವಿಗಳಿಗೆ ಸರ‍್ಯ ಕಿರಣಗಳ ಅವಶ್ಯಕತೆಯೆನಿಸಿದೆ ಎಂಬುದನ್ನು ಆಧುನಿಕ ವಿಜ್ಞಾನವು ಜಗತ್ತಿಗೆ ಸಾರಿ ಹೇಳಿದೆ. ಚಕ್ರ ಪರಿವೇಷ್ಟಿತ ಸರ‍್ಯನೆಂದರೆ ಆಜೇಯನೆಂದು ಹೇಳಬೇಕು.
ಇದಕ್ಕಿಂತ ಉತ್ತಮವಾದ ಚಿಹ್ನೆಯೂ ಯಾವ ರಾಷ್ಟ್ರಧ್ವಜದಲ್ಲಿಯೂ ಇಲ್ಲವೆಂದು ಹೇಳಬಹುದು. ಭಾರತೀಯರ ಈ ಧ್ವಜದ ಮಹತ್ವವನ್ನರಿತು ಅದರ ಗೌರವಕ್ಕೆ ತಕ್ಕಂತೆ ಬಾಳಬೇಕು. ಈ ರಾಷ್ಟ್ರಧ್ವಜದಲ್ಲಿಯ ಬಣ್ಣಗಳ, ಚಕ್ರದ ಸರ‍್ಯನ ಸಂಕೇತಗಳನ್ನು ಮನಗಂಡು ಭಾರತೀಯರು ನಮ್ಮ ರಾಷ್ಟ್ರವು ಈ ಎಲ್ಲ ಸಂಕೇತಗಳಿಗೆ ಅನ್ವರ್ಥಕವಾಗಿ ಮೆರೆಯುವಂತೆ ಪ್ರಯತ್ನಿಸಬೇಕು. ನಮ್ಮ ಕೃತಿಗಳಿಂದಲೇ ನಾವು ನಮ್ಮ ರಾಷ್ಟ್ರಧ್ವಜವನ್ನು ಇಡೀ ಜಗತ್ತು ಗೌರವಿಸುವಂತೆ ಮಾಡಬೇಕು.’
ಈ ತ್ರಿವರ್ಣ ಧ್ವಜವನ್ನು, ರಾಷ್ಟçಧ್ವಜವೆಂದು ಮಾನ್ಯ ಮಾಡಿದ ಮೇಲೆ, ಅಸೆಂಬ್ಲಿಯ ಸಚಿವಾಲಯಕ್ಕೆ ಅಂಗೀಕರಿಸಲ್ಪಟ್ಟ ಧ್ವಜ ವಿನ್ಯಾಸದ ಮಾದರಿ ನೀಡುವಂತೆ ಬೇಡಿಕೆಗಳು ಬಂದವು. ಆದ್ದರಿಂದ ಸಚಿವಾಲಯ ಒಂದು ಅಧಿಕೃತ ವಿನ್ಯಾಸ ಪ್ರಕಾಶನಪಡಿಸಿತು. ಒಂದು ಸಂಸ್ಥೆ ಇದರ ಲಾಭ ಪಡೆಯಿತು. ೧೦ನೇ ಆಗಸ್ಟ್ ೧೯೪೭ರ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಒಂದು ಜಾಹೀರಾತು ಇತ್ತು:
“ರಾಷ್ಟ್ರಧ್ವಜ ಎರಡೂವರೆ ಆಣೆಗಳಿಗೆ ನಿಮಗೆ ಖಾದಿ ಹತ್ತಿ ಅಥವಾ ರೇಷ್ಮೆಯಿಂದ ಮಾಡಿದ ಸ್ವತಂತ್ರ ಭಾರತದ ರಾಷ್ಟ್ರಧ್ವಜ ಬೇಕಾಗಿದ್ದರೆ ನಿಮ್ಮ ಬೇಡಿಕೆಗಳನ್ನು ನಮ್ಮಲ್ಲಿ ಬುಕ್ ಮಾಡಿರಿ:
ಫ್ರೀ ಇಂಡಿಯಾ ಫ್ಲಾಗ್ ಮ್ಯಾನುಫಾಕ್ಚರಿಂಗ್ ಕಂಪನಿ ಕಟ್ರಾನೀಲ್, ದೆಹಲಿ.”
ಹಿಂದೂಸ್ತಾನ್ ಟೈಮ್ಸ್, ೨೮ನೇ ಜುಲೈ ೧೯೪೭ರ ಸಂಚಿಕೆಯೊಂದಿಗೆ ತನ್ನ ಓದುಗರಿಗೆ ಉಚಿತವಾಗಿ, ಒಂದು ಪೇಪರ್ ಧ್ವಜದ ಕೊಡುಗೆ ನೀಡಿತು.
೧೪-೧೫ನೇ ಆಗಸ್ಟ್ ೧೯೪೭ರ ಮಧ್ಯ ರಾತ್ರಿ ಅಸೆಂಬ್ಲಿ ಅಧಿಕಾರ ವಹಿಸಿಕೊಂಡ ನಂತರ ಶ್ರೀಮತಿ ಹಂಸ ಮೆಹ್ತಾ ಅವರು, ರಾಷ್ಟ್ರಪತಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರಿಗೆ ಹೊಸ ರಾಷ್ಟ್ರಧ್ವಜವನ್ನು ಅರ್ಪಿಸಿದರು. ಹಾಗೆ ಮಾಡುವಾಗ ಅವರು ನುಡಿದರು, “ಈ ಸದನದ ಮೇಲೆ ಹಾರಲಿರುವ ಪ್ರಥಮ ರಾಷ್ಟ್ರಧ್ವಜವನ್ನು ಭಾರತದ ಮಹಿಳೆಯರು ಕೊಡುಗೆಯಾಗಿ ನೀಡುವುದು ಸೂಕ್ತವಾಗಿದೆ.”
ಅಶೋಕನ ಕಾಲದಲ್ಲಿ ಭಾರತದಲ್ಲಿ ಮೂಡಿದ್ದ ಐಕ್ಯ ಶಾಂತಿ, ಸಮೃದಿ-ಇವುಗಳು ಅವನ ಆಳ್ವಿಕೆಯ ವೊದಲಾಗಲೀ ಅನಂತವಾಗಲೀ ನಮ್ಮ ನಾಡಿನಲ್ಲಿ ಕಾಣಬಂದಿಲ್ಲ. ಸಕಲ ಜೀವಿಗಳ ಕಲ್ಯಾಣವೇ ತನ್ನ ಕರ್ತವ್ಯವೆಂದು ಬಗೆದಿದ್ದವನೆಂದರೆ ಪ್ರಾಚೀನ ಭಾರತದ ಯುಗಪುರುಷ ಅಶೋಕ. ಆಧುನಿಕ ಯುಗದ ಅಹಿಂಸಾ ಅಧ್ವರ್ಯು ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆದ ಭಾರದ ಅಶೋಕ ಚಕ್ರವನ್ನು ತನ್ನ ಧ್ವಜಚಿಹ್ನೆಯನ್ನಾಗಿ ಆರಿಸಿಕೊಂಡಿರುವುದು ಅತ್ಯಂತ ಉಚಿತವಾಗಿದೆಯಲ್ಲದೆ ಭಾರತದ ಧ್ಯೇಯ ಸದ್ಧರ್ಮಸ್ಥಾಪನೆ ಎಂಬುದನ್ನು ಈ ಚಿಹ್ನೆ ಸೂಚಿಸುತ್ತದೆ.