ಕಾವ್ಯ ಸಂಗಾತಿ
ಹೊಸ ಹಾಡು
ನಿಂಗಮ್ಮ ಭಾವಿಕಟ್ಟಿ
ಮೊಳೆಯುವುದ ಅರಳುವುದ
ಹಬ್ಬುವುದ ಸೆಳೆಯುವುದ ಓದಿ
ಸಾಕಾಗಿದೆ ಅಲ್ಲಲ್ಲ ಭಯವಾಗಿದೆ
ಏನೋ ಓದಿ ಅದರೊಂದಿಗೆ ಹೋಗಿ
ಮರಳಿ ಬರಬಲ್ಲೆನೆ ಎನಿಸಿ
ಹಾರುವುದ ಹರಿಯುವುದು
ಜರಿಯುವುದ ಕರೆಯುವುದ ಓದಿ
ಪರಕಾಯ ಪ್ರವೇಶವಾಗಿ
ಅದೇನೋ ವರ್ಚುವಲ್ ಅಂತಾರಲ್ಲ
ಹಾಗೆ ಅಲ್ಲೆಲ್ಲೋ ಹೊಸ ಪರಪಂಚದ
ಪರಿಚಯ ವಿಸ್ಮಯವಾಗಿದೆ.
ಬೆಳಕಾದರೆ ರವಿಯ ಹಾಡು
ಸಂಜೆಗೆ ಶಶಿಯದು
ನಡುವಿನ ಬದುಕಿದು
ಹಾಡುಗಳ ರಾಶಿಗೆ ಕೈ ಆಡಿಸುತ್ತಾ
ಹಾಡು ನಿಂತರೂ ಅದೇ ಗುಂಗು
ಭಾಷೆಯಿರದ ರಾಗರಹಿತ ಸಾಹಿತ್ಯದ ಈ ಪ್ರಕಾರಗಳಿಗೆ
ದನಿಗೂಡದೆ ಹೇಗಿರಲಿ ಹೇಳಿ
ಮಾತು ಹಾಡಾಗಿ ನೋಟ ಪಾಠವಾಗಿ
ನಾನೆಂಬ ನಾನು ಏನಾದೆ
ಓದಿನ ಸುಖಕ್ಕೆ ಸೋದೆನಾದರೂ
ಹೆಚ್ಚು ಓದಿ ಹುಚ್ಚರಾದರಂತೆ
ಚಿಕ್ಕವರಿದ್ದಾಗ ಯಾರೋ ಅಂದಿದ್ದು ನೆನಪಾಗಿ ಭಯವಾಗಿದೆ.
ನಿಜವೇ?
ನಿಂಗಮ್ಮ ಭಾವಿಕಟ್ಟಿ