ದೇವರ ಪೂಜೆಯೆಂಬ ನಂಬಿಕೆ ಪ್ರಶ್ನೆ

ಲೇಖನ

ದೇವರ ಪೂಜೆಯೆಂಬ ನಂಬಿಕೆ ಪ್ರಶ್ನೆ

ಲಕ್ಷ್ಮಿ ದೇವಿ ಪತ್ತಾರ

ಹಿಂದಿನಿಂದ ಇಲ್ಲಿಯವರಿಗೂ ಮನುಷ್ಯ ಹಲವಾರು ಆಚರಣೆ-ನಂಬಿಕೆಗಳನ್ನು ಗಟ್ಟಿಯಾಗಿ ನಂಬಿಕೊಂಡು ಪಾಲಿಸುತ್ತಾ ಬಂದಿದ್ದಾನೆ.ಅವು ಅವನಿಗೆ ಅನಿವಾರ್ಯವೂ ಹೌದು. ಇದರಿಂದ ಅವನಿಗೆ ಸಂತೋಷವೂ ಇದೆ ಅಸಮಾಧಾನವೂ ಇದೆ.ಇಂತಹ ಹಲವು ನಂಬಿಕೆಗಳಲ್ಲಿ ಮನೆಯಲ್ಲಿ ಮಾಡುವ ಪೂಜೆಯೂ ಒಂದು.ಬೆಳಿಗ್ಗಿನ ಹೊತ್ತು ಸ್ನಾನ ಮಾಡಿ ಜಗಲಿ ಮೇಲಿನ ದೇವರನ್ನು ತೊಳೆದು ಗಂಧ ಹಚ್ಚಿ, ಹೂವು ಏರಿಸಿ,ಧೂಪ, ದೀಪ ಬೆಳಗಿಸಿ ಪೂಜೆ ಮಾಡಿದರೆ ಆ ಮನೆಯ ಲಕ್ಷಣವೇ ಬೇರೆ.ಆ ಮನೆಯಲ್ಲಿ ಶಾಂತಿ, ನೆಮ್ಮದಿ ವಾತಾವರಣ ನೆಲೆಯೂರುತ್ತದೆ.

           ಆದರೆ ಬಹಳಷ್ಟು ಮನೆಗಳಲ್ಲಿ ಶಾಂತಿ ನೆಮ್ಮದಿಗೆ ಕಾರಣವಾಗಬೇಕಾದ ಈ ಪೂಜೆ ಜಗಳ ಚೀರಾಟಕ್ಕೆ ಕಾರಣವಾಗುತ್ತದೆ ಎಂದರೆ ನಂಬುತ್ತೀರಾ ಅಲ್ಲವೆ?.ಇದು ನಿಮ್ಮ ಅನುಭವಕ್ಕೂ ಬಂದಿರಬೇಕು.ಬೆಳಗೆದ್ದು ಚಹಾ ಕುಡಿಯುವವರಿಗೆ ತಣ್ಣಗಿರುವ ಮನೆ ,ಪೂಜೆ ಮಾಡುವುದು ಬಂದ ತಕ್ಷಣ ನೀ ಮಾಡು, ನೀ ಮಾಡು ಎನ್ನುವ ರಂಪಾಟ ಶುರು. ಈ ಕಿತ್ತಾಟಕ್ಕೆ ಕಾರಣ ಗೊತ್ತಿದ್ದದ್ದೇ.ಪೂಜೆ ಮಾಡಲು ಶ್ರದ್ಧೆ ,ತಾಳ್ಮೆ ಇರಬೇಕು.ಅದು ಈಗಿನ ಕಾಲದ ಮಂದಿಗೆ ತುಸು ಕಡಿಮೆಯೇ. ಇಂದು ಎಲ್ಲದಕ್ಕೂ ಅವಸರ. ಹೀಗಾಗಿ ಪೂಜೆ ಮಾಡುವುದೆಂದರೆ ಎಲ್ಲರಿಗೂ ಬೇಸರ.

  ಈಗೆಲ್ಲಿ ಪೂಜೆ ಬಿಡ್ರಿ.ಈಗೀನ ಕಾಲದ ಮಂದಿಗೆ ಪೂಜೆ ಬೇಡ ಪುನಸ್ಕಾರ ಬೇಡ.ಎನ್ನುವ ಆಕ್ಷೇಪ ಹಿರಿಯರಿಂದ ಕೇಳಿ ಬರುತ್ತಿದೆ. ಅದು ದಿಟವೇ.ಆದರೆ ಅದು  ಅರ್ಧಸತ್ಯ. ಈಗಲೂ  ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡುವವರು ಇರುವುದು ಅಷ್ಟೇ ಸತ್ಯ.ಹಿರಿಯರು ಇರುವ ,ಸಂಪ್ರದಾಯ ಕುಟುಂಬಗಳಲ್ಲಿ ದಿನ ನಿತ್ಯ ಪೂಜೆ ಆಗಲೇ ಬೇಕು.

    ನಮ್ಮ ಮನೆಯ ಪೂಜೆ ವಿಷಯಕ್ಕೆ ಬಂದರೆ ,ನಮ್ಮ ಮನೆಯಲ್ಲಿ ಏನಿಲ್ಲ ಅಂದರೂ ನಲವತ್ತರಿಂದ ಐವತ್ತು ದೇವರ ಮೂರ್ತಿ ,ಫೋಟೋಗಳಿವೆ. ಹಳೆ ತಲೆಮಾರಿನ ವರಿಂದ ಹಿಡಿದು ಇಂದಿನವರೆಗೆ ಇರುವ ದೇವರುಗಳು ಅವು. ತಿರುಪತಿ ಹೋದಾಗ ತಂದ ವೆಂಕಟರಮಣನ ಮೂರ್ತಿ, ಪಂಡರಾಪುರದ ಪಾಂಡುರಂಗನ ಮೂರ್ತಿ, ತಿಂಥಣಿ ಮೌನೇಶ್ವರ ಫೋಟೋ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮೂರ್ತಿ, ಕೊಲ್ಲೂರು ಮೂಕಾಂಬಿಕೆ ಮೂರ್ತಿ , ಶಿರಸಂಗಿ ಕಾಳಮ್ಮನ ಮೂರ್ತಿ,ಮೈಸೂರಿನ ಚಾಮುಂಡಿ ದೇವಿಯ ಫೋಟೋ, ರಾಮೇಶ್ವರದ ಈಶ್ವರಲಿಂಗು , ಕೆಲವೆಡೆಯ ಸಾಲಿಗ್ರಾಮ, ರುದ್ರಾಕ್ಷಿ ಹೀಗೆ ತೀರ್ಥಕ್ಷೇತ್ರಕ್ಕೂ, ಪ್ರವಾಸಕ್ಕೂ ಅಂತ ಹೋಗಿ ಹೋದ ಕಡೆಯ ದೇವಾಲಯದಿಂದ ಮನೆಯಿಂದ ಹೋದವರೆಲ್ಲ ತಂದ ಒಂದೊಂದು ಫೋಟೋ ಇಲ್ಲವೆ ಮೂರ್ತಿಗಳು ಸೇರಿ ಲೆಕ್ಕವಿಲ್ಲದಷ್ಟು ದೇವರ ಜಗಲಿಯನ್ನು, ಗೋಡೆಗಳನ್ನು ಅಲಂಕರಿಸಿ ಬಿಟ್ಟಿವೆ. ತರುವಾಗ ಇರುವ ಖುಷಿ ಪೂಜೆ ಮಾಡುವಾಗ ಮಾಯವಾಗಿ ಬಿಡುವುದು. ಯಾಕೆಂದರೆ ಅಷ್ಟು ದೇವರನ್ನು ತೊಳೆದು, ಗಂಧ ತೇದು, ಹಚ್ಚಿ ಹೂವು ಮೂಡಿಸುವಷ್ಟರಲ್ಲಿ ನಡ ಬಿದ್ದು ಹೋಗುತ್ತದೆ.

     ಬೆಳಿಗ್ಗೆ ಒಬ್ಬೊಬ್ಬರಿಗೆ ಒಂದೊಂದು ಕೆಲಸ ಮಕ್ಕಳು ಶಾಲೆಗೆ ಹೋಗುವ ಅವಸರದಲ್ಲಿ ಅಷ್ಟು ದೇವರನ್ನು ಪೂಜೆ ಮಾಡೋದು ಕಷ್ಟ ಅಂತ ಒಂದಿಷ್ಟು ತೆಗೆದು ಬಿಡೋಣ ಅಂದರೆ ನಮ್ಮ ಅಜ್ಜ ತಂದಿದ್ದು ,ನಮ್ಮಪ್ಪ ತಂದಿದ್ದು ತಂದಿದ್ದು , ನಾನು ತಂದಿದ್ದು, ನೀನು ತಂದಿದ್ದು, ಅಪರೂಪದ ಮೂರ್ತಿಗಳು, ಶಕ್ತಿಶಾಲಿ ದೇವರು ಎನ್ನುವ ಸೆಂಟಿಮೆಂಟ್ ಬೇರೆ.

      ಈಗಂತೂ ನನಗೂ, ನನ್ನ ಗಂಡನಿಗೂ ತಾಳ್ಮೆ ಪುರುಸೊತ್ತು ಇಲ್ಲದೆ ಪೂಜೆಯ ಉಸಾಬರಿಯೇ ಬೇಡ ಅಂತ ಮಕ್ಕಳಿಗೆ ವಹಿಸಿ ಬಿಟ್ಟಿದ್ದೇವೆ. ಅದಕ್ಕಾಗಿ ಮಗ ಇಲ್ಲವೆ ಮಗಳನ್ನು ಬೇಗ ಎಬ್ಬಿಸಿ ಹುರಿದುಂಬಿಸಿ ಸ್ನಾನ ಮಾಡಿಸಿ ಪೂಜೆಗೆ ಕೂಡಿಸುತ್ತಿದ್ದೇವೆ. ಪೂಜೆ ಮಾಡುವವರಿಗೆ ವಿಶೇಷ ಕಾಳಜಿ ಗೌರವ ಇಂದು ನಮ್ಮ ಮನೆಯಲ್ಲಿ.

   ಅವರೇನಾದರೂ ಬೇಸರಿಸಿಕೊಂಡರೆ ನಮಗೆ ಬಿಡದ ಕರ್ಮ. ನನ್ನ ಪಾಲಿಗೆ ಏನಾದರೂ ಬಂದರೆ ಬರೋಬ್ಬರಿ ಒಂದರಿಂದ ಎರಡು ತಾಸು ಬೇಕು. ಆ ದಿನ ಜಿಗುಟಾದ ಜಗಲಿ ಯನ್ನು ಶುಭ್ರವಾಗಿ ತೊಳೆದು ಒರೆಸಿ ದೇವರ ಫೋಟೋಗಳನ್ನು ಶುಭ್ರಗೊಳಿಸಿ ಗಂಧ ಹೂ ಮುಡಿಸಿ ಅಗರಬತ್ತಿ ಬೆಳಗಿ, ಮಂತ್ರಗಳನ್ನು ಪಠಿಸಿದ ಮುಗಿಸುವಷ್ಟರಲ್ಲೇ ಬಹಳ ಸಮಯ ಹಿಡಿಯುತ್ತದೆ. ಅದಕ್ಕಾಗಿಯೇ ನಾನು “ನನಗೆ ಮುಂಜಾನೆ ಬೇಕಾದಷ್ಟು ಕೆಲಸ ಇರುತ್ತೆ .ಅಡುಗೆ ಮಾಡುವುದು, ಬಾಕ್ಸ್ ಕಟ್ಟುವುದು ಶಾಲೆಗೆ ಹೋಗಲು ರೆಡಿಯಾಗುವುದು .ಅದಕ್ಕಾಗಿ ನೀವು ಇಲ್ಲವೆ ಮಕ್ಕಳು ಮಾಡಿರೆಂದು” ನನ್ನ ಪತಿಯೊಂದಿಗೆ ಜಗಳ ಮಾಡುವುದು ಉಂಟು. ನನ್ನ ಪತಿಯೊ” ಬೆಳಗಿನಿಂದ ಸಾಯಂಕಾಲದವರೆಗೆ ಒಂದೇಸವನೆ ಕೆಲಸ. ಬೆಳಗಿನ ಹೊತ್ತು ಸ್ವಲ್ಪ ತಣ್ಣಗಿರಲು ಬಿಡು.ಇಂದು ನೀನು ಅಡುಗೆ ಮಾಡುವುದೇ ಬೇಡ ಬೇಕೆಂದರೆ ಹೊರಗಿನಿಂದ ತರುತ್ತೇನೆ” ಎನ್ನುವ ಜವಾಬು ಬೇರೆ.

      ನಾನು ಮದುವೆಯಾದ ಹೊಸತರಲ್ಲಿ ನಮ್ಮ ಮೈದುನ ಮಾಡುವ ಪೂಜೆ ನೆನೆಸಿಕೊಂಡರೆ ಇಂದಿಗೂ ನಗು ಉಕ್ಕಿ ಬರುತ್ತದೆ. ಆಗ ಪೂಜೆ ಮಾಡುವ ಜವಾಬ್ದಾರಿಯ ಅವನದೇ ಆಗಿತ್ತು ಹೋಗುವುದರೊಳಗೆ ಪೂಜೆ ಮಾಡುವ ಒತ್ತಡ ಅವನಿಗೆ. ಅವನು ಸ್ನಾನಕ್ಕೆ ಹೋಗುವ ಮೊದಲೇ ಲಗುಬಗೆಯಿಂದ ಎಲ್ಲಾ ದೇವರನ್ನು ಬುಟ್ಟಿಯಲ್ಲಿ ಹಾಕಿ ಎಲ್ಲವನ್ನೂ ಒಮ್ಮೆಲೇ ಬೊಗಸೆ ತುಂಬಾ ಎದ್ದಿ ತೆಗೆದು ಜಗಲಿ ಮೇಲಿಟ್ಟು, ಸೀದಾ ಅದವು ಅಥವಾ ಉಲ್ಟಾ ಅದವು ಎಂದು ನೋಡದೆ ಅಂಗೈಯಲ್ಲಿ ಕುಂಕುಮ ನೀರು ಹಾಕಿ ಕಲಿಸಿ ದೇವರಿಗೆ ನಾಮ ಬಳೆಯುತ್ತಿದ್ದ. ಕುಂಕುಮದ ನೀರಿನ ಸ್ನಾನವೇ ದೇವರಿಗೆ ಆಗುತ್ತಿತ್ತು!. ನಂತರ ಸ್ನಾನ ಮಾಡಿಬಂದು ದೀಪ ಹಚ್ಚಿ ಊದಿನಕಡ್ಡಿ ಬೆಳಗಿದರೆ ಅವನ ಪೂಜೆ ಮುಗೀತು.

    ಇದು ನಮ್ಮ ಮನೆಯ ದೇವರ ಪೂಜೆ ವಿಷಯ ಆಯ್ತು. ನಮ್ಮ ಪರಿಚಿತರೊಬ್ಬರು ಮಾಡುವ ಪೂಜೆ ವಿಧಾನವೇ ಈಗೀಗ ಬೇರೆ ಆಗಿದೆಯಂತೆ. ಅವರು ಹೇಳುವರು “ಇಂದು ಆವಾಗಿನಂತೆ ಪೂಜೆ ಮಾಡಿ ಶ್ಲೋಕ ಹೇಳಲು ಸಮಯವೂ ಇಲ್ಲ ತಾಳ್ಮೆ ಇಲ್ಲ. ಅದಕ್ಕೆ ಎಲ್ಲಾ ದೇವರನ್ನು ಒಂದು ಕಟ್ಟಿಗೆ ಪೆಟ್ಟಿಗೆಯಲ್ಲಿ ಹಾಕಿ ಹೊರಗಿನಿಂದಲೇ ಪೂಜೆ ಮಾಡಿ ಬಿಡುತ್ತೇವೆ. ದೊಡ್ಡ ದೊಡ್ಡ ಹಬ್ಬದಲಸ್ಟೇ ಹೊರತೆಗೆದು ಶಾಸ್ತ್ರೋಕ್ತ ಪೂಜೆ ಮಾಡುತ್ತೇವೆ” ಎಂದರು.

      ಹೀಗೆ ಇಂದು ಪೂಜೆ ಮಾಡಲು ಒಬ್ಬೊಬ್ಬರೂ ಒಂದೊಂದು ಸರಳ ದಾರಿ ಕಂಡುಕೊಂಡಿದ್ದಾರೆ. ಹೇಗಾದರೂ ಆಗಲಿ ಮನೆಯಲ್ಲಿ ಪೂಜೆಯನ್ನು ಮಾಡಬೇಕು. ಪೂಜೆ ಮಾಡದೆ ಹೋದರೆ ಮನೆಯಲ್ಲಿ ಶಾಂತಿ ಸಮಾಧಾನವಿರುವುದಿಲ್ಲ. . ಆದರೆ ಯಾವುದೇ ಕಾರ್ಯ ಕಷ್ಟ ಅನಿಸದೆ ಇಷ್ಟವಾಗಬೇಕಾದರೆ ಸರಳ ಸುಂದರವಾಗಿ ಹಿತಮಿತವಾಗಿ ನಮ್ಮ ಮನಸ್ಸಿಗೆ ಸಮಾಧಾನ ಆಗುವಂತೆ ಆಗಬೇಕು. ಅದು ಪೂಜೆ ವಿಷಯದಲ್ಲೂ ಅಷ್ಟೇ. ಹೋದ ಕಡೆಯಲ್ಲೆಲ್ಲ ದೇವರ ಫೋಟೋ ಮೂರ್ತಿ ತಂದು ಜಗಲಿ ತುಂಬಿಸಿ ಪೇಚಾಡುತ್ತಾ ಪೂಜೆ ಮಾಡುವ ಬದಲು ಎಷ್ಟು ಬೇಕೊ ಅಷ್ಟನ್ನು ಇಟ್ಟು ಪ್ರೀತಿಯಿಂದ ಭಕ್ತಿಯಿಂದ ಮನಸಾರೆ ದೇವರು ಮೆಚ್ಚುವಂತೆ ಪೂಜೆ ಆಗಬೇಕು.ಪೂಜೆ ಶಿಕ್ಷೆ ಆಗದೆ ಮನಸ್ಸಿಗೆ ಶಾಂತಿ ನೀಡುವಂತಿರಬೇಕು. ಆಗ ಮಾತ್ರ ನಾವು ಮಾಡಿದ ಪೂಜೆ ದೇವರಿಗೆ ಮುಟ್ಟುತ್ತದೆ. ದೇವರನ್ನು ಬಹಳಷ್ಟು  ಇಟ್ಟು ಕಷ್ಟಪಟ್ಟು ಪೂಜೆ ಮಾಡು ಎಂದು ಎಲ್ಲಿ ಹೇಳಿಲ್ಲ. ಇದು ನಮ್ಮ ನಮ್ಮ ನಂಬಿಕೆ ,ಶ್ರದ್ಧೆ ಅಷ್ಟೇ. ಭಕ್ತಿಯಿಂದ ಪ್ರೀತಿಯಿಂದ ಒಂದೇರಡು ಇ಼ಷ್ಟದ ದೇವರನ್ನು ಇಟ್ಟು ಒಂದು ದಳ ತುಳಸಿನೋ ಅಥವಾ ಹೂವನ್ನು ಏರಿಸಿ ಧ್ಯಾನಿಸಿ ಪೂಜಿಸಿದರೆ ಅದೇ ಶ್ರೇಷ್ಠ ಎಂಬುದು ನನ್ನ ಅಭಿಪ್ರಾಯ.ನೀವೇನಂತಿರಾ?


2 thoughts on “ದೇವರ ಪೂಜೆಯೆಂಬ ನಂಬಿಕೆ ಪ್ರಶ್ನೆ

  1. ಲೇಖನ ಉತ್ತಮವಾಗಿದೆ. ಅಭಿನಂದನೆಗಳು ಮೇಡಂ

Leave a Reply

Back To Top