ಮಹದ್ದರ್ಶನ- ಜಿ.ಎಮ್. ಹರಪನಹಳ್ಳಿ

ಲೇಖನ

ಮಹದ್ದರ್ಶನ- ಜಿ.ಎಮ್. ಹರಪನಹಳ್ಳಿ

ವಿ.ಗಣೇಶ್ ಸಾಗರ

ನನಗೆ ಕಾದಂಬರಿಕಾರ ಹರಪನ ಹಳ್ಳಿಯವರ ಪರಿಚಯ ಇತ್ತೀಚಿಗೆ ನಾಲ್ಕು ವರ್ಷಗಳಿಂದ ಆಗಿರುತ್ತದೆ. ಆದರೂ ನಮ್ಮಿಬ್ಬರ ನಡುವಿನ ಆತ್ಮೀಯತೆ ಈಗಾಗಲೇ ತುಂಬಾ ಗಾಡವಾಗಿ ಬೆಳೆದಿದೆ. ನಾನು ನನ್ನ ಪುಸ್ತಕಗಳನ್ನು ಅವರಿಗೆ ಕಳಿಸುತ್ತಿರುತ್ತೇನೆ ಅವರು ತಮ್ಮ ಕೃತಿಗಳನ್ನು ನನಗೆ ಕಳಿಸುತ್ತಿರುತ್ತಾರೆ.

        ಇತ್ತೀಚೆಗ ಅವರಿಂದ  ಕೋವಿಡ್-9 ಮತ್ತು ಮಹದ್ದರ್ಶನ ಎಂಬ ಎರಡು ಕೃತಿಗಳು ಬಂದು ತಲುಪಿದವು. ಕೋವಿಡ್- 9 ಕೃತಿಯನ್ನು ಒಂದೇ ದಿನದಲ್ಲಿ ಓದಿ ಮುಗಿಸಿದೆ.  ಓದಿದೆ ಎನ್ನುವುದಕ್ಕೆ ಬದಲಾಗಿ ಅದು ನನ್ನನ್ನು ಓದಿಸಿಕೊಂಡು ಹೋಯಿತು ಎನ್ನಬಹುದು. ಆದರೆ ಈ “ಮಹ ದ್ದರ್ಶನ” ಕಾದಂಬರಿಯನ್ನು ಓದಲು ಮಾತ್ರಾ ನಾನು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳ ಬೇಕಾಯಿತು.

        “ಮಹದ್ದರ್ಶನ” ಹರಪನಹಳ್ಳಿಯವರ ಮೂರನೇ ಕಾದಂಬರಿ. ಐತಿಹಾಸಿಕ ಪರಂಪರೆಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಹಿಂದಿನ “ಮಹಾ ಪತನ” ಮತ್ತು “ಪಾಪಿ ದೇವಾಲಯ” ಕಾದಂಬರಿಗಳಂತೆ ಈ ಕಾದಂಬರಿಯೂ ಕೂಡ  ಐತಿಹಾಸಿಕ ಕಥೆಯನ್ನು ನೀಡುತ್ತದೆ. ಈ ಕೃತಿಯಲ್ಲಿ ಲೇಖಕರು ವಿಶ್ವಾಮಿತ್ರ ಮಹರ್ಷಿಯ ಮೇಲೆ ಆಳವಾದ ಅಧ್ಯಯನವನ್ನು ಮಾಡಿರುತ್ತಾರೆ.

        ಒಬ್ಬ ಕ್ಷತ್ರಿಯ ರಾಜನಾದ ಕೌಶಿಕನು ಬ್ರಹ್ಮರ್ಶಿ ವಶಿಷ್ಠರೊಡನೆ ಸಂಘರ್ಷಕ್ಕೆ  ಇಳಿದು ತನ್ನ ರಾಜ್ಯ ಭೂಮಿಗಳನ್ನು ತೊರೆದು ಹೇಗೆ ಮಹರ್ಶಿಯಾಗುತ್ತಾನೆ ಎಂಬ ತಿಳಿದ ವಿಚಾರವನ್ನು ಲೇಖಕರು ಸೂಕ್ಷ್ಮವಾಗಿ ಪರಿಚಯಿಸುತ್ತಾರೆ..

         ಕಾದಂಬರಿ ಪ್ರಾರಂಭವಾದಾಗ ವಿಶ್ವಾಮಿತ್ರ ಮಹರ್ಷಿಗಳು ಗಂಗಾ ನದಿ ತೀರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಮ್ಮ ಶಿಷ್ಯರಿಗೆ ತರಬೇತಿ ನೀಡುತ್ತಿರುತ್ತಾರೆ. ಬದುಕಿನಲ್ಲಿ ಏನೋ ಮಹತ್ತರವಾದ ಸಾಧನೆಯನ್ನು ಮಾಡಿ ತೋರಿಸಬೇಕೆಂಬ ಧ್ಯೇಯ ಅವರಲ್ಲಿ ಕಾಣಿಸುತ್ತಿತ್ತು. ಅದಕ್ಕೆ ಸರಿಯಾಗಿ ಅವರ ಗುರು ವಾಮದೇವರು ಆವರಿಗೆ ಎಲ್ಲ ವಿಧವಾದ ಸಲಹೆ ಸಹಕಾರಗಳನ್ನು ಕೊಡುತ್ತಾ ಬಂದಿದ್ದರು.

         ಆಯೋಧ್ಯೆಗೆ ದಶರಥ ಮಹಾರಾಜನ ಮಕ್ಕಳಿಗೆ ವಿದ್ಯಾ ಗುರುಗಳಾಗಿ ಆಗಮಿಸುವ ವಿಶ್ವಾಮಿತ್ರರು ರಾಮನ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತಾರೆ. ಆತನಿಗೆ ಸೀತಾಮಾತೆಯೊಂದಿಗೆ ಕಲ್ಯಾಣವನ್ನು ಅವರೇ ಮುಂದೆ ನಿಂತು ಮಾಡಿಸುತ್ತಾರೆ. ಆದರೆ ಕಥೆಯ ಮುಂದಿನ ಬೆಳವಣಿಗೆ ವಿಶ್ರಾಮಿತ್ರರೇ ಕಾರಣ ಎನ್ನುವಂತೆ ಲೇಖಕರು ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ.

        ವಿಶ್ವಾಮಿತ್ರರು ಕೈಕೇಯೀಯ ಸೇವಕಿ ಮಂಥರೆಯನ್ನು ಕರೆದು ದೇವತೆಗಳ ಇಷ್ಟಾರ್ಥವನ್ನು ತಿಳಿಸುತ್ತಾ , ಕೈಕೇಯಿಯ ಬಳಿ  ತಾನು ದಶರಥನಿಂದ ಹಿಂದೆ ಪಡೆದಿದ್ದ ವರಗಳನ್ನು ನೆನಪಿಸಿ,  ಅದರ ಮೂಲಕ ರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಹೋಗಬೇಕೆಂದೂ, ಅದಕ್ಕೆ ಬದಲಾಗಿ ಭರತನಿಗೆ ಪಟ್ಟಾಭಿಷೇಕ ಮಾಡುವಂತೆ ಕೇಳುವಂತೆ ಮಾಡಬೇಕೆಂದು ತಿಳಿಸುತ್ತಾರೆ. ಆದರೆ ಭರತನಷ್ಟೇ ರಾಮನನ್ನು ಪ್ರೀತಿಸುತ್ತಿದ್ದ ಕೈಕೇಯೀಯ ಮನಸ್ಸನ್ನು ಅರಿತಿದ್ದ ಮಂಥರೆಯು ವಿಶ್ವಾಮಿತ್ರರ ಸಲಹೆಗೆ ಹಿಂದೇಟು ಹಾಕುತ್ತಾಳೆ. ಆಗ ವಿಶ್ವಾಮಿತ್ರರು,

         “ಮಂಥರೆ, ದು:ಖಿಸಬೇಡ ನಿನ್ನಂತೆ ನನಗೂ ಸಹ ಈ ಕೃತ್ಯದ ಪರಿಣಾಮ ಏನಾಗಬಹುದು ಎಂಬುದು ತಿಳಿಯದಾಗಿದೆ. ನನ್ನ ಪ್ರೀತಿಯ ರಾಮ ಅಡವಿಗೆ ತೆರಳುವುದು ನುಂಗಲಾರದ ತುತ್ತಾಗಿದೆ ಆದರೆ ನೀನಾಗಲಿ ನಾನಾಗಲಿ ಇಬ್ಬರೂ ದೇವತೆಗಳ ಕೈಲಾಡುವ ಗೊಂಬೆಗಳು. ಇಲ್ಲಿ ನಮ್ಮ ನಿರ್ಣಯಕ್ಕಾಗಲಿ, ಪರಿಣಾಮಕ್ಕಾಗಲಿ ಅವಕಾಶವೇ ಇಲ್ಲ”ಎನ್ನುತ್ತಾ ಅವಳನ್ನು ಒಪ್ಪಿಸುತ್ತಾರೆ. ಅಷ್ಟೇ ಅಲ್ಲದೆ,

         “ನಿನ್ನ ಕರ್ತವ್ಯದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಘೋರ ಶಾಪವು ನಿನಗಾಗಿ ಕಾದಿದೆ ಅದಕ್ಕೆ ಅವಕಾಶ ಕೊಡಬೇಡ.ನಿನಗೆ ದೇವತೆಗಳೇ ಮಾರ್ಗದರ್ಶನ ಮಾಡುತ್ತಾರೆ”ಎಂದು ಧೈರ್ಯ ಕೊಡುತ್ತಾರೆ. ರಾಮನು ಸೀತಾ ಲಕ್ಷ್ಮಣ ಸಮೇತನಾಗಿ ವನವಾಸಕ್ಕೆ ಹೊರಟು, ವಿಶ್ವಾಮಿತ್ರನರಿಗೆ ಬಂದು ನಮಸ್ಕರಿಸಿದಾಗ,

         “ರಾಮ, ಎಲ್ಲ ವಿಷಯಗಳು ನನಗೆ ವಿಧಿತವಾಗಿವೆ, ದೈವ ಸಂಕಲ್ಪ,ಏನೂ ಮಾಡಲಾಗದು ನೀವೆಲ್ಲ ಎಲ್ಲಿಯೇ ಇದ್ದರೂ ತುಂಬಾ ಸಂತೋಷವಾಗಿ ಇರುತ್ತೀರಿ, ಅವಧಿ ಮುಗಿದ ನಂತರ ನೀನು ಮರಳಿ ಬಂದು ರಾಜ್ಯ ಪರಿಪಾಲನೆ ಮಾಡಬೇಕು, ಇದು ಸಹ ದೈವ ಸಂಕಲ್ಪವೇ ಆಗಿದೆ”

       ಎನ್ನುತ್ತಾ  ಎಲ್ಲವೂ ದೈವ ಸಂಕಲ್ಪದಿಂದ ನಡೆದ ಕ್ರಿಯೆಗಳು, ತನಗೆ ಆ ಬಗ್ಗೆ ಎಲ್ಲಾ ತಿಳಿದಿದೆ, ಎಂಬ ಮುನ್ಸೂಚನೆಯನ್ನು ಕೊಡುತ್ತಾರೆ. “ದಶರಥನಿಗೆ ಪುತ್ರಯೋಗವಾಗಬೇಕು, ಶ್ರವಣಕುಮಾರನ ಪಿತೃವಿನ ಶಾಪ ನಿಜವಾಗಬೇಕು ಹಾಗೂ ಶ್ರೀಹರಿಯ ಉದ್ದೇಶ ಈಡೇರಬೇಕು” ಇವೆಲ್ಲ ವಿಧಿತ ಲಿಖಿತವೇ ಆದುದರಿಂದ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬ ಅರಿವು ವಿಶ್ವಾಮಿತ್ರ ರಿಗಿರುತ್ತದೆ.

       ಕಥೆಯ ಕೊನೆಯ ಭಾಗದಲ್ಲಿ ಆಧ್ಯಾತ್ಮಿಕ ಮಹತ್ಸಾಧನೆಯ ನಿರೂಪಣೆಗೆ ತೊಡಗುವುದರಿಂದ ಗಂಭೀರವಾಗಿದ್ದರು ಆಸಕ್ತಿದಾಯಕವಾಗಿಯೇ ಮುಂದುವರೆಯುತ್ತದೆ. ಬ್ರಹ್ಮಾಂಡದ ದೃಶ್ಯವನ್ನು ಬಗೆದು ಮತ್ತೆ ವರ್ತಮಾನಕ್ಕೆ ಬರುವುದು, ಮೋಕ್ಷಾತ್ಮನನ್ನು ಕಂಡು ಅಲ್ಲಿಂದ ಮರಳಿ ಬಂದು ಆ ಸತ್ಯದರ್ಶನವನ್ನು ಜನಸಾಮಾನ್ಯರಿಗೆ ವಿವರಿಸುವುದು ತಮ್ಮ ಉದ್ದೇಶ ಎಂದು ವಿಶ್ವಾಮಿತ್ರರು ವಾಮದೇವರಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ. ಆದರೆ ವಾಮದೇವರೇ ಅದಕ್ಕೆ ಹಿಂದೇಟು ಹಾಕಿ ಅಂತಹ ಪ್ರಯತ್ನ ಮಾಡುವುದು ಸರಿಯಲ್ಲವೇನು ಎಂದು ಅನುಮಾನಿಸುತ್ತಾರೆ. ಆದರೆ ತನ್ನ ತೀರ್ಮಾನವನ್ನು ಬದಲಿಸಿದ ವಿಶ್ರಾಮಿತ್ರರು ಆ ದಿಸೆಯಲ್ಲಿ ಮುನ್ನುಗಿದಾಗ, ವಾಮದೇವ ಮತ್ತು ಅವರ ಅನುಯಾಯಿಗಳು ವಿಶ್ವಾಮಿತ್ರರಿಗೆ ಎಲ್ಲ ರೀತಿಯ ಸಹಕಾರವನ್ನು ಕೊಡಲು ತೀರ್ಮಾನ ತೆಗೆದುಕೊಳ್ಳುತ್ತಾರೆ.

           ಈ ದಿಸೆಯಲ್ಲಿ ವಿಶ್ವಾಮಿತ್ರರು ಹೇಗೆ ಮುಂದುವರಿದರು, ಅವರು ಎದುರಿಸಿದ ಕಷ್ಟ ಕಾರ್ಪಣ್ಯಗಳೇನು, ಅದಕ್ಕೆ ದೇವಾದಿ ದೇವತೆಗಳ ಸಹಕಾರ ಹೇಗೆ ಒದಗಿ ಬಂದಿತು ಮುಂತಾದ ಪ್ರಕ್ರಿಯೆಗಳನ್ನು ಪ್ರೊ ರವೀಂದ್ರ ಕೊಪ್ಪರ್ ಅವರು “ಧಾರ್ಮಿಕ ನಂಬಿಕೆ ‘ಹೀಗಾಗದೀತು’ಎಂದೆನಿಸುವಂತೆ ಮಾಡಿದರೆ ವಿಜ್ಞಾನವನ್ನು ನಂಬುವರಿಗೆ ಇದೆಲ್ಲವೂ ಕೌತುಕ ಮಯಮದ ವೈಜ್ಞಾನಿಕ ಕಥೆ ಎನಿಸುವುದು” ಎಂದು ಬರೆಯುತ್ತಾರೆ.

           ವಿಶ್ವಾಮಿತರು ತಮ್ಮ ಕಾರ್ಯದಲ್ಲಿ ಹೇಗೆ ಜಯಶೀಲರಾದರು, ಜಯಶೀಲರಾಗಿ ಬಂದಮೇಲೆ ಹೇಗೆ ಕಂಗೊಳಿಸುತ್ತಿದ್ದರು ಎಂಬುದನ್ನು ಓದುಗರು ಓದಿಯೇ ಅನುಭವಿಸಬೇಕು.  ಆ ಬಗ್ಗೆ ನಾನು ಏನು ಹೆಚ್ಚಿಗೆ ಹೇಳಲು ಹೋಗಿಲ್ಲ. ಕೃತಿಯ ಕೊನೆಯಲ್ಲಿ ಲೇಖಕರು ವಿಶ್ವಾಮಿತ್ರರ ಸಾಧನೆಯನ್ನು ಈ ರೀತಿಯಲ್ಲಿ ಶ್ಲಾಘಿಸುತ್ತಾ ಕಾದಂಬರಿಯನ್ನು ಹೀಗೆ ಮುಗಿಸುತ್ತಾರೆ

       “ಅವರ ಶರೀರವು ಸ್ವರ್ಣ ರೂಪದಿಂದ ಕಂಗೊಳಿಸುತ್ತಿತ್ತು. ಮಿತ್ರರು ಮಹಾ ವಿಷ್ಣು ವನ್ನು ಕಂಡು ಬಂದು ಪುನೀತರಾಗಿಬಿಟ್ಟಿದ್ದರು ದೇವಾದಿ ದೇವತೆಗಳು ವಿಶ್ವಾಮಿತ್ರರಲ್ಲಿಯೇ ಶ್ರೀಹರಿಯನ್ನು ಕಂಡು ಕೈಮುಗಿದು, ಧನ್ಯರಾದರು. ವಶಿಷ್ಠ, ವಾಮದೇವರ ಸಂತಸವು ಮೇರೆ ಮೀರಿತ್ತು. ತಮ್ಮ ಶಿಷ್ಯನ ಸಾಧನೆಯನ್ನು ಕಂಡು ಸಂಭ್ರಮಿಸಿದರು”

      ಒಟ್ಟಿನಲ್ಲಿ ವ್ಯಕ್ತಿತ್ವದ ವಿಸ್ತರಣೆ ಲೋಕ ಕಲ್ಯಾಣಕ್ಕಾಗಿ ಸೀಮಿತವಾಗದೆ ವ್ಯಕ್ತಿ ಆಧ್ಯಾತ್ಮಿಕವಾಗಿ ಬೆಳೆದು ಮಹಾತ್ಮನಾಗುತ್ತಾನೆ ಎಂಬುದು ಈ ಕಥೆಯ ಮುಖ್ಯ ಸಾರಾಂಶ ಎಂದು ಹೇಳಬಹುದು. ಪೌರಾಣಿಕ ಹಾಗೂ ಧಾರ್ಮಿಕ ಗ್ರಂಥಗಳನ್ನು ಸಾಕಷ್ಟು ಅಧ್ಯಯನ ಮಾಡಿದ ಶ್ರೀಯುತ ಹರಪನಹಳ್ಳಿ ಅವರು ಈ ಕೃತಿಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇದು ಪ್ರತಿಯೊಬ್ಬರೂ ಓದಲೇ ಬೇಕಾದ ಗ್ರಂಥವೆಂದರೆ ಉತ್ಪ್ರೇಕ್ಷೆಯ ಮಾತಾಗಲಾರದು.

      ಈ ಕೃತಿಯು  ಗಿರ್ವಾಣಿ ಪ್ರಕಾಶನ ಮುಳುಗುಂದ-582117, ಗದಗ ಇವರಿಂದ ಪ್ರಕಟಿಸಲ್ಪಟ್ಟಿದ್ದು 134 ಪುಟಗಳನ್ನು ಹೊಂದಿರುತ್ತದೆ ಇದರ ಬೆಲೆ 150 ರೂಗಳಾಗಿರುತ್ತದೆ. ಆಸಕ್ತರು ಕೃತಿಗಳನ್ನು ಪ್ರಕಾಶಕರಿಂದ ಅಥವಾ ಬಿ.ಎಂ. ಹರಪನಹಳ್ಳಿ,  ಮುಳಗುಂದ-582117, ಗದಗ ಜಿಲ್ಲೆ, ದೂರ.ಸಂಖ್ಯೆ9945135718 ರಿಂದ ಪಡೆಯಬಹುದು.


.ವಿ.ಗಣೇಶ್ ಸಾಗರ

Leave a Reply

Back To Top