ಕಾವ್ಯ ಸಂಗಾತಿ
ಗಜಲ್ ಜುಗಲ್- ಬಂದಿ
ಸ್ಮಿತಾ ಭಟ್ ಮತ್ತು ರೇಖಾ ಭಟ್
ಮೊನಚು ಮಾತಿಗೆ ಮ್ಲಾನತೆ ಉಳಿಯುವುದಿಲ್ಲ
ಸಹಿಸುವ ಭಾವಕ್ಕೆ ಸಹಜತೆ ಉಳಿಯುವುದಿಲ್ಲ
ಕೇಳಿಯೂ ಕೇಳದಂತಿರುವುದು ಕಿವುಡನಿಗೆ ಮಾತ್ರ ಸಾಧ್ಯ
ಕಣ್ಣಿದ್ದೂ ಕುರುಡಾದಾಗ ಅಸ್ಮಿತೆ ಉಳಿಯುವುದಿಲ್ಲ
ಸಂತೆ ಬೀದಿಯಲಿ ನಿಂತು ಏಕಾಂತವ ಹುಡುಕುವುದು ಹೇಗೆ
ಕೆಸರ ಜೊತೆಗಿನ ಆಟದಲಿ ಸ್ವಚ್ಚತೆ ಉಳಿಯುವುದಿಲ್ಲ
ಅರ್ಥ ವಿಲ್ಲದ ವ್ಯರ್ಥ ಮಾತುಗಳ ಅದೆಷ್ಟು ಸಾಧಿಸಿದರೇನು
ಸಾಕಿಕೊಂಡ ಅಹಮಿನಲಿ ಶಾಂತತೆ ಉಳಿಯುವುದಿಲ್ಲ.
ಇರಲು ಬಂದವರೆಲ್ಲ ಇರಿದು ಸಾಗಿದ್ದಾರೆ ಮಾಧವಾ
ಎದೆ ಬಯಲಿಗಿನ್ನು ಆದ್ಯತೆ ಉಳಿಯುವುದಿಲ್ಲ
****
ಸ್ಮಿತಾ ಭಟ್
ಬೇರು ಒಣಗಿದ ಮೇಲೆ ಚಿಗುರುಗಳು ಉಳಿಯುವುದಿಲ್ಲ
ಅಸೆ ಕಮರಿದ ಮೇಲೆ ಕನಸುಗಳು ಉಳಿಯುವುದಿಲ್ಲ
ಬೆಳಕಿರುವೆಡೆಗೆ ಹಣಕಿ ನೋಡುವ ಕಂಗಳು ಸಹಜವಿಲ್ಲಿ
ದೀಪವಾರಿದ ಮೇಲೆ ಸುತ್ತುವ ಹುಳುಗಳು ಉಳಿಯುವುದಿಲ್ಲ
ಅಳೆದು ತೂಗಿ ನೀಡುವವರ ಮುಂದೆ ಭಿಕ್ಷೆ ಬೇಡಿದರೇನು
ಲೆಕ್ಕಾಚಾರದ ಹೆಜ್ಜೆಗಳಲ್ಲಿ ಸವಿನೆನಪುಗಳು ಉಳಿಯುವುದಿಲ್ಲ
ಹೊಂದಿ ನಡೆದರೆ ಬಲು ಸೊಗಸು ಎಲ್ಲರೊಳಗೊಂದಾಗಿ
ಬದುಕ ನೆಚ್ಚಿಕೊಳ್ಳದೆ ಧನ್ಯ ಕ್ಷಣಗಳು ಉಳಿಯುವುದಿಲ್ಲ
ನೆಮ್ಮದಿಯ ತಾಣಕ್ಕೆ ಅದೆಷ್ಟೋ ದಾರಿಗಳಿವೆಯಂತೆ ರೇಖೆ
ನಿನ್ನ ಹಾದಿ ನಿನಗೆ ಹಿತವಿರಲು ಆಯ್ಕೆಗಳು ಉಳಿಯುವುದಿಲ್ಲ
ರೇಖಾ ಭಟ್
Wah