ಅಂಕಣ ಸಂಗಾತಿ

ಒಲವ ಧಾರೆ

ಬೆವರಿನೊಡೆಯನ ಒಡಲಾಳದ

ಸಂಕಟಗಳ ಸಂಭ್ರಮಗಳು…!!

ಅವನು ಹಗಲು ರಾತ್ರಿ ದುಡಿಯುತ್ತಲೇ ಬೆವರು ಹರಿಸುತ್ತಾ… ಏನೇನೋ ಆಲೋಚನೆ ಮಾಡುತ್ತಾನೆ. ಮುಂದಿನ ಬದುಕಿಗೆ ಆಶಾದಾಯಕ ಭಾವನೆಯನ್ನು ಇಟ್ಟುಕೊಂಡಿದ್ದ ಆದರೆ ಪದೇಪದೇ ಬ್ಯಾಂಕಿನವರ ಕಾಟಕ್ಕೆ ನಿನ್ನೆ ನೇಣು ಹಾಕಿಕೊಂಡ ಅಯ್ಯೋ ಪಾಪ ಹೀಗಾಗಬಾರದಿತ್ತು…!!

ಎಲ್ಲರಿಗೂ ಒಳ್ಳೆಯ ವ್ಯಕ್ತಿಯಾಗಿ ಯಾರೊಂದಿಗೂ ತನ್ನ ಕಷ್ಟವನ್ನು ಹೇಳಿಕೊಂಡವನಲ್ಲ ಆ ವ್ಯಕ್ತಿ ಬೇರಾರು..ಅಲ್ಲ ಕೃಷಿಯನ್ನೇ ನಂಬಿದ ಈ ನೆಲದ ಜೀವ ರೈತ..!!

   ಹೌದು ಇದ್ದ ಎರಡು –  ಮೂರು ಎಕರೆ ಜಮೀನಿನಲ್ಲಿ ಹದವಾಗಿ ಉಳುಮೆ ಮಾಡಿ, ನೇಗಿಲು ರಂಟೆ ಕುಂಟೆಯನ್ನು ಹೊಡೆದು ಭೂಮಿಯನ್ನು ಬಿಸಿಲಿಗೆ ಬಿಟ್ಟು, ಭೂಮಿಯನ್ನು ಹದಗೊಳಿಸುವ ಕಾಯಕದಲ್ಲಿ ನಿರತನಾದ ಆತನಿಗೆ ಬಿಸಿಲಿನ ಪರಿವೇ ಇರುವುದಿಲ್ಲ.  ಭೂಮಿಯ ಹದವಾದರೆ ಸಾಕು “ಭೂಮಿ ತಾಯಿ ಮನಸ್ಸು ಮಾಡಿದರೆ ಒಂದು ವರ್ಷ ಕುಳಿತುಕೊಂಡು ತಿನ್ನುವಷ್ಟು ಅನ್ನವನ್ನು ಹಾಕುತ್ತಾಳೆ” ಎಂದೇ ನಂಬಿಕೊಂಡು ಈ ಜಗತ್ತಿನಲ್ಲಿ ಸದಾ ಬೆವರು ಸುರಿಸುತ್ತಾ ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತ ರೈತ.

“ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ” ಎನ್ನುವ ಗಾದೆ ಮಾತಿನಂತೆ ಮಳೆಯನ್ನೇ ನಂಬಿ ಕೃಷಿ ಮಾಡುವವರು ಒಣಬೇಸಾಯದ ಬದುಕಿನಲ್ಲಿ ಮಳೆಯನ್ನೇ ನಿರೀಕ್ಷಿಸುತ್ತಾರೆ.  ಮಳೆ ಬಂದ ತಕ್ಷಣ ಬ್ಯಾಂಕಿನಲ್ಲಿಯೋ ಊರ ಸಾಹುಕಾರನಲ್ಲಿಯೋ  ರಸಗೊಬ್ಬರದ ಅಂಗಡಿಯ ಮಾಲೀಕ ನಲ್ಲಿಯೋ  ಸಾಲ ಸೋಲ ಮಾಡಿ ಬೀಜ ಗೊಬ್ಬರವನ್ನು ತಂದು ಭೂಮಿ ತಾಯಿಯ ಎದೆಗೆ ಬಿತ್ತುತ್ತಾನೆ. ಬಿತ್ತುವ ಆತನ ಸಂಭ್ರಮ ವರ್ಣನಾತೀತ..!!

ಹದಗೊಳಿಸಿದ ಹೊಲಕ್ಕೆ ಎತ್ತುಗಳೊಡನೆ ರಂಟೆ ಕುಂಟೆಗಳನ್ನು ಹೊಡೆದುಕೊಂಡು ಆತ,  ಬಿತ್ತುವ ಕೂರಿಗೆಯನ್ನು ಬೀಜ ಹಾಕುವ ಮಹಿಳೆಯರೊಂದಿಗೆ ಹೊಲಕ್ಕೆ ಹೋಗಿ, ಭೂಮತಾಯಿಗೆ ಪೂಜೆ ಸಲ್ಲಿಸುವುದರ ಮೂಲಕ “ಚಳಂಬ್ರಿಗೋ  ಹುಲಿಗ್ಗೋ..” ಎಂದು ಭೂಮಿತಾಯಿಗೆ ಪೂಜಿಸುತ್ತಾ ಚರಗ ಒಯ್ಯುತ್ತಾನೆ. ರೈತನು ಬಿತ್ತನೆ ಕಾರ್ಯವನ್ನು ಮಾಡುತ್ತಾನೆ. ಬಿತ್ತಿ ಬಂದನಂತರ ಸಕಾಲಕ್ಕೆ ಮಳೆಯಾದರೆ ಆತನ ಬದುಕು ಹಸನಾಗುತ್ತದೆ.  ಒಂದು ವೇಳೆ ಮಳೆ ಕೈಕೊಟ್ಟರೆ ಬಿತ್ತಿದ ಬೀಜ ಗೊಬ್ಬರ, ಕುಂಟೆ ರಂಟೆಗಳ ಬಾಡಿಗೆ, ಬೀಜ ಹಾಕುವ ಮಹಿಳೆಯರ ಕೂಲಿ, ಎಲ್ಲವೂ ಹೋಮ ಮಾಡಿದಂತಾಗುತ್ತದೆ. ಮತ್ತೆ ಮತ್ತೆ ಚಿಂತೆಗೊಳಗಾಗುತ್ತಾರೆ ರೈತರು.. ಮಳೆಯನ್ನೇ ಆಶ್ರಯಿಸಿದ ರೈತನ ಬದುಕು ಹೇಳತೀರದು. ಮತ್ತೆ ಸಾಲ ಮಾಡಬೇಕು “ಮುರಿದು ಬಿತ್ತಬೇಕು” ಮತ್ತೆ ಆಶಾದಾಯಕ ಭಾವ..!!  ಒಂದು ವೇಳೆ ಗಂಗಾಮಾತೆಯ ಆಶ್ರಯ ಇದ್ದರೆ ಅಂದರೆ ನೀರಾವರಿಯಾದರೆ ಭೂಮಿಯಲ್ಲಿರುವ ಕಸ ಕಡ್ಡಿಯನ್ನು ಆರಿಸಿ ಸ್ವಚ್ಛಗೊಳಿಸಿ, ಸುತ್ತಲಿನ ಬದುವನ್ನು ಸಿದ್ಧತೆಗೊಳಿಸಿ, ಭೂಮಿಯನ್ನು ಹದಗೊಳಿಸುತ್ತಾರೆ. ಈತನು ಸಾಲ ಸೋಲ ಮಾಡಿ ಬೇಕಾದ ಬೀಜ ಗೊಬ್ಬರವನ್ನು ತಂದು ಮತ್ತೆ ಬಿತ್ತುತ್ತಾನೆ.  ಸರಿಯಾಗಿ ಕಾಲ ಕಾಲಕ್ಕೆ ವಿದ್ಯುತ್ ವ್ಯವಸ್ಥೆ ಇದ್ದರೆ, ನೀರನ್ನು ಕಟ್ಟುತ್ತಾ ತನ್ನ ಸ್ವಂತ ಮಕ್ಕಳಂತೆ ಬೆಳೆಯನ್ನು ಜೋಪಾನ ಮಾಡುತ್ತಾನೆ. ಹೀಗೆ ಕಣ್ಣು ಮುಂದೆ ಇರುವ ಬೆಳೆಗಳು ಚೆನ್ನಾಗಿ ಬೆಳೆದರೆ ಆತನಿಗೆ ಎಲ್ಲಿಲ್ಲದ ಖುಷಿ.  ಆದರೆ ಕಾಲಕಾಲಕ್ಕೆ ಸಾಲವನ್ನು ಮಾಡುತ್ತಲೇ ರಸಗೊಬ್ಬರ, ಕ್ರಿಮಿನಾಶಕ, ಕಳೆನಾಶಕ, ಕಳೆ ತೆಗೆಸುವಿಕೆ ಅಲ್ಲದೆ ಬೇರೆ ಬೇರೆ ರೀತಿಯ ಕೃಷಿಯ ಚಟುವಟಿಕೆಗಳಲ್ಲಿ ಆತ ತೊಡಗಿಕೊಳ್ಳಲೇಬೇಕು. ಒಂದು ವೇಳೆ  ನಂಬಿದ ಬೆಳೆ ಕೈ ಹಿಡಿದರೆ ಆತನಿಗೆ ಸುಗ್ಗಿಯೋ ಸುಗ್ಗಿಯ ಹಬ್ಬ..!! ಎಲ್ಲಾ ಸಮಯದಲ್ಲಿ ಈ ರೀತಿಯ ಸಂಭ್ರಮ ಆತನಿಗೆ ದಕ್ಕುವುದೇ ಇಲ್ಲ. ಹೆಸರಿಗೆ ಮಾತ್ರ ರೈತ.

i

 ‘ರೈತ ದೇಶದ ಬೆನ್ನೆಲುಬು’  ಆದರೆ ಆಳುವ ವರ್ಗವಿರಲಿ, ಅಧಿಕಾರ ವರ್ಗವಿರಲಿ ಆತನ ಬಗ್ಗೆ ಒಂದು ತುಸು ಚಿಂತನೆ ಮಾಡಿದರೆ ಈಗಾಗಲೇ ಆತನ ಬದುಕು ಬದಲಾಗುತ್ತಿತ್ತು. ಆದರೆ ಆತನ ಬದುಕು ಋಣಾತ್ಮಕ ಮಾರ್ಗದಲ್ಲಿಯೇ ಇವತ್ತಿಗೂ ಇರುವುದು ದುರಂತವೆಂದೇ ಹೇಳಬಹುದು.

ತಂದ ಸಾಲ ದಿನೇ ದಿನೇ ಬಡ್ಡಿ ಸಮೇತ ಹೆಚ್ಚಾಗುತ್ತಲೇ ಹೋಗುತ್ತದೆ. ಇತ್ತ ಭೂಮಿಯಲ್ಲಿರುವ ಬೆಳೆಯು ಚೆನ್ನಾಗಿ ಬೆಳೆದರೆ ತಂದ ಬಡ್ಡಿ ಸಾಲಕ್ಕೆ ಸರಿ ಹೋಗುತ್ತದೆ. ಮತ್ತೆ ಮುಂದಿನ ಬೆಳೆಗೆ ಸಾಲ ಮಾಡಬೇಕಾದ ಅನಿವಾರ್ಯತೆ ಇರುತ್ತದೆ.  ಆದರೆ ಇನ್ನು ಕೆಲವು ಪ್ರಗತಿಪರ ರೈತರು ನೀರಾವರಿಯಲ್ಲಿ ಹೊಸ ಹೊಸ ಬೆಳೆಗಳನ್ನು ಬೆಳೆಯಲು  ವಿಶಿಷ್ಟವಾದ ಮಾರ್ಗ ಅನುಸರಿಸುತ್ತಾರೆ. ತೋಟಗಾರಿಕೆಯ,  ನೀರಾವರಿಯ ಬೆಳೆಗಳನ್ನು ಬೆಳೆಯಲು ಲಕ್ಷ ಲಕ್ಷಗಟ್ಟಲೆ ಸಾಲ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಯಾಕೆಂದರೆ  ಬೆಳೆಯುವ ಬೆಳೆ ಹುಲುಸಾಗಿ ಬೆಳೆ ಬಂದಾಗ ರೈತನಿಗೆ ಸಿಗಬೇಕಾದ ನ್ಯಾಯಯುತ ಬೆಲೆ ಸಿಗುವುದೇ ಇಲ್ಲ…!! “ಮಾರುಕಟ್ಟೆ” ಎಂಬ ಮಾಯಾಜಾಲದಲ್ಲಿ ರೈತರು ಸಿಕ್ಕು ವಿಲವಿಲನೆ ಒದ್ದಾಡುತ್ತಿದ್ದಾರೆ. ಇಲ್ಲಿ ಬೆಳೆದ ರೈತನಿಗಾಗಲಿ, ಕೊಂಡುಕೊಳ್ಳುವ ಗ್ರಾಹಕರಿಗಾಗಲಿ ಯಾವುದೇ ಲಾಭ ಇರುವುದೇ ಇಲ್ಲ..!! ಇವರಿಬ್ಬರ ನಡುವಿನ ಮೂರನೆಯ ವ್ಯಕ್ತಿಯ ಆಟವೇ ಮಾರುಕಟ್ಟೆಯ ಮಾಯಾಜಾಲದಲ್ಲಿ ಪ್ರಧಾನವಾಗುತ್ತದೆ. ಆ  ವ್ಯಕ್ತಿಯೇ ದಲ್ಲಾಳಿ, ಕಮಿಷನ್ ಏಜೆಂಟ್..!  ದುಡ್ಡು ಇರುವ ಶ್ರೀಮಂತ ವ್ಯಕ್ತಿಗಳು ಈ ರೀತಿಯ ರೈತರಿಂದ ನೇರವಾಗಿ ಬೆಳೆಯನ್ನು ಕಡಿಮೆ ಬೆಲೆಗೆ ಕೊಂಡುಕೊಂಡು ಸಂಗ್ರಹಿಸಿ ನಂತರ ಮಾರುಕಟ್ಟೆಯಲ್ಲಿ ಅಭಾವವನ್ನು ಸೃಷ್ಟಿಸಿ ನಂತರ ಒಂದು ರೇಟಿಗೆ ಮೂರುಪಟ್ಟು ಲಾಭಕ್ಕೆ ಮಾರಿಕೊಳ್ಳುತ್ತಾರೆ.

ಹೀಗೆ ದಲ್ಲಾಳಿಗಳ ಕಪಿಮುಷ್ಟಿಯಲ್ಲಿ ರೈತ ಮತ್ತು ಗ್ರಾಹಕ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾನೆ.

ಇತ್ತ ಕುಟುಂಬದ ಸದಸ್ಯರ ಆಗುಹೋಗುಗಳನ್ನು ನೋಡಿಕೊಳ್ಳುತ್ತಲೇ ಅವರ ಬಯಕೆಗಳನ್ನು ಕೂಡ ಪೂರೈಸಬೇಕು. ನಿಗದಿತ ಸಮಯದೊಳಗೆ ಬರುವ ಬೆಳೆಗಳು ಸರಿಯಾದ ಧಾರಣೆ ಇಲ್ಲದೆ ಹಾಕಿದ ಬೀಜ ಗೊಬ್ಬರದ ಖರ್ಚು ಕೂಡ ಬರದೆ  ಸಾಲದ ಸುಳಿಯಲ್ಲಿ ಸಿಲುಕಿ ಬಿಡುತ್ತಾನೆ.  ಸಹುಕಾರರ ಸಾಲವೋ..ಸಹಕಾರ ಸಂಘಗಳ ಸಾಲವೋ.. ಬ್ಯಾಂಕಿನ ಸಾಲವೋ.. ಅಲ್ಲದೆ ರಸಗೊಬ್ಬರ ಕ್ರಿಮಿನಾಶಕಗಳ ಅಂಗಡಿಯ ಮಾಲೀಕರ ಸಾಲವೋ ಬಡ್ಡಿಯೊಂದಿಗೆ ದಿನದಿನ ಬೆಳೆಯುತ್ತಲೇ ಹೋಗುತ್ತದೆ. ಇತ್ತ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಮಸ್ಯೆಗಳ  ಸುಳಿಯಲ್ಲಿ ಸಿಲುಕಿ ರೈತ ಒದ್ದಾಡುತ್ತಾನೆ. ದಿಕ್ಕುತೋಚದಂತಾಗಿ ಏನು ಮಾಡಿದಂತಾಗುತ್ತದೆ. ಮನೆಯ ಖರ್ಚು ನಿಭಾಯಿಸಲೂ ಆಗದೆ ಗದ್ದೆ ಹೊಲದ ಖರ್ಚು ಸರಿದೂಗಿಸಲು ಆಗದೆ ನೋವಿನಲ್ಲಿಯೇ ನರಳುತ್ತಾನೆ. ರೈತ ದೇಶಕ್ಕೆ ಅನ್ನ ನೀಡುತ್ತಲೆ ತಾನು ‘ಸಾಲ’ವೆಂಬ ಹಸಿವಿನ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಾನೆ..!! ಕೊನೆಗೆ ಏನೂ ತೋಚದಾಗಿ ಸರ್ಕಾರಗಳ ಮುಂದೆ ಕೈಯೊಡ್ಡಿ ಬೇಡುವ ಪರಿಸ್ಥಿತಿ ಬಂದರೂ ರೈತಪರ ಇರಬೇಕಾದ ಸರ್ಕಾರಗಳು ‘ಬೆಂಬಲ ಬೆಲೆ’ ಎನ್ನುವ ದೊಡ್ಡ ‘ಪರೋಪಕಾರ’ ಮಾಡಿದೆವೆಂಬ ಬೀಗುವ ಸರ್ಕಾರಗಳು..!!  ಎಲ್ಲಾ ಮುಗಿದ ಮೇಲೆ ರೈತನಿಗೆ ಹಣ ನೀಡಿದರೆ ರೈತ ಸಂಕಟದ ಮನಸ್ಥಿತಿಯಿಂದ ಹೊರ ಹೋಗದೆ  ವಿಷದ ಬಾಟಲಿಗೋ ನೇಣಿನ ಹಗ್ಗಕ್ಕೋ ಕೊರಳು ಕೊಡುತ್ತಾನೆ..!!  ‘ಬದುಕು ಅಂತಿಮ’ ವೆಂದು ನಿಶ್ಚಯಿಸಿಕೊಂಡು ಬಿಡುತ್ತಾನೆ.  ಒಂದು ಅಂಕಿ ಸಂಖ್ಯೆಯ ಪ್ರಕಾರ ಶೇಕಡಾ ಐದರಷ್ಟು ರೈತರ ಸಾವಿನ ಸರಣಿ ಮುಂದುವರೆಯುತ್ತಲೇ ಇದೆ. ಅದು ಅತಿವೃಷ್ಟಿಯಿಂದಲೋ ಅನಾವೃಷ್ಟಿಯಿಂದಲೋ ಅಥವಾ ದಲ್ಲಾಳಿಗಳ ಜೂಜಾಟದಿಂದಲೋ ಒಟ್ಟಿನಲ್ಲಿ ರೈತ  ಸಾವಿಗೆ ಶರಣಾಗುತ್ತಿದ್ದಾನೆ.

Indian Farmer Images – Browse 34,439 Stock Photos, Vectors, and Video |  Adobe Stock

ರೈತ ಈ ದೇಶದ ಬುನಾದಿಯೆಂದು, ಬೆನ್ನೆಲುಬೆಂದು ಬರಿಮಾತಿನಲ್ಲಿ ಬೀಗುವ ನಾವುಗಳು ಆತನ ಸಾವುಗಳನ್ನು ಕಂಡರೂ ಮೂಕರಾಗಿದ್ದೇವೆ.ಇವತ್ತು ಇದ್ದುದ್ದರಲ್ಲಿಯೇ ರೈತ ಶ್ರೀಮಂತನಾಗಿದ್ದಾನೆ. ಅಲ್ಲಿ ಎಲ್ಲೋ ಬಂಪರ್ ಬೆಳೆಗೆ ಲಕ್ಷ ಲಕ್ಷ ರೂಪಾಯಿಗಳ ಆದಾಯ ರೈತನಿಗೆ ಬಂದಿದೆ ಎಂದರೆ ಹಿಂದಿನ ಹಾಗೂ ಇಂದಿನ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು, ರೈತಪರ, ಜನಪರ ಅಭಿಯಂತರರ (ಇಂಜಿನಿಯರರ)  ನೀರಾವರಿಯ ಯೋಜನೆಗಳು ಸಹಾಯವಾಗಿವೆ ಎಂದರೇ ತಪ್ಪಲ್ಲ. ಹೊಸ ಹೊಸ ತಳಿಯ ಬೀಜಗಳು, ಗೊಬ್ಬರಗಳು, ಕೀಟನಾಶಕಗಳು ಬೆಳೆಯುವ ರೈತನಿಗೆ ಸಹಕಾರಿಯಾಗಿವೆ. ನೂತನ ಸಂಶೋಧನೆಯ ಜೊತೆ ಜೊತೆಗೆ ಹಿಂದಿನ ಸಾವಯವ ಕೃಷಿ ಪದ್ದತಿಯನ್ನು ಮುಂದುವರೆಯಿಸುವ ಅಗತ್ಯವೂ ಇದೆ ಎಂಬುವುದನ್ನು ರೈತರು ಕೂಡ ಮನಗಾಣಬೇಕು.

ಎಷ್ಟೇ ಕಷ್ಟಗಳು ಬಂದರೂ ಎದೆಯೊಳಗೆ ಅವುಗಳನ್ನು ತುಂಬಿಕೊಂಡು ಕುಟುಂಬದವರೊಡನೆ ನಗುವನಗುತ ಸಂತೋಷವನ್ನು ಹಂಚುವ ಸಾಕಷ್ಟು ರೈತರನ್ನು ನಾವು ಕಾಣುತ್ತೇವೆ.  ಆದರೆ ಬದುಕಿಗೆ ವಾತ್ಸಲ್ಯ ಹಂಚುವ ಕರುಣಾಮಯಿಗಳು. ಹಗಲು ರಾತ್ರಿ ದುಡಿಯುವ ಬೆವರಿನೊಡೆಯರ ಒಡಲಾಳಗಳಲ್ಲಿ ನೂರಾರು ಸಂಕಟಗಳು ಇದ್ದರೂ ಅವರು ಸದಾ ಸಂಭ್ರಮದಿಂದ ಅವುಗಳನ್ನು ಸ್ವೀಕರಿಸುತ್ತಾರೆ..!! ಇನ್ನಾದರೂ ಪ್ರಜಾಪ್ರಭುತ್ವದ ಸರಕಾರಗಳು ರೈತರ ಸರ್ಕಾರಗಳಾಗಲಿ, ಕಾಲ ಕಾಲಕ್ಕೆ ಬೆಳೆವಿಮೆ, ಬೆಂಬಲ ಬೆಲೆ, ಕಡ್ಡಾಯ ಗ್ರಾಹಕ ಸೂಚ್ಯಂಕಕ್ಕನೂಗುಣವಾಗಿ ಬೆಳೆಗಳ ಬೆಲೆಗಳನ್ನು ಸರ್ಕಾರ ನಿಗಧಿಪಡಿಸಬೇಕು ಆ ಮೂಲಕ ರೈತರಿಂದ ಬೆಳೆಗಳನ್ನು ಖರೀದಿಸುವ ನೂತನ ವ್ಯವಸ್ಥೆಯಾದರೆ ರೈತನ ಮೊಗದಲ್ಲಿ ಸಂಭ್ರಮದ ನಗೆ ಮೂಡಿತು.  ‘ರೈತ ನಕ್ಕರೆ ಜಗವೆಲ್ಲ ಸಕ್ಕರೆ’ , ‘ ರೈತ ಬಿಕ್ಕಿದರೆ ಜಗವೂ ಬಿಕ್ಕುವುದು’ ಕೃಷಿ ಪ್ರಧಾನವಾದ ಈ ದೇಶದಲ್ಲಿ ರೈತಪರ ಯೋಜನೆಗಳು,  ರೈತಪರ ಕಾರ್ಯಕ್ರಮಗಳು, ರೈತರ ಒಳಿತಿಗಾಗಿ ದುಡಿಯುವ ಸರ್ಕಾರಗಳು ಬರಲಿ, ಎಲ್ಲರ ಬದುಕಿನಂತೆ ಅವರ ಬದುಕಿನಲ್ಲಿಯೂ ಸಂಕಟಗಳು ಮಾಯವಾಗಿ ಸಂಭ್ರಮಗಳು ಹರಡಲಿ. ಅನ್ನ ನೀಡುವ ಜೀವಗಳು ಸದಾ ನಗುತ್ತಿರಲಿ ಎಂದು ಆಶಿಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ :   ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ,  ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

 (ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.


One thought on “

  1. ಮಣ್ಣಿನ ಮಗನ ಕುರಿತು ಉತ್ತಮ ಲೇಖನ. ಅಭಿನಂದನೆಗಳು

Leave a Reply

Back To Top