ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು
ಬಿದಲೋಟಿ ರಂಗನಾಥ್
ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು
ಅದು ಎಂಬತ್ತರ ದಶಕ ಬಂದ ಫಸಲನ್ನು ಕೂಡಿಟ್ಟು ಮನೆಗೊಯ್ದು ಅವರೆ ಸೊಗಡನು ಬಿಡಿಸುವ ಕಾಲ, ಇನ್ನೂ ಕ್ಯಾಮೇನಹಳ್ಳಿ ಜಾತ್ರೆ ತಿಂಗಳಿರುವಾಗಲೇ , ಕೂಲಿ ನಾಲಿ ಮಾಡಿ ಬಂದ ಸಣ್ಣ ಕಾಸಿನಲ್ಲೇ ಮಕ್ಕಳಿಗೆ ಬಟ್ಟೆ ತರುವ ಅಪ್ಪನ ಇರಾದೆ. ವಾರದ ಮುಂಚೆಯೇ ಸಂತೆ ಬಟ್ಟೆ ತಂದು ಪೆಟಾರಿಯಲ್ಲಿ ಬಚ್ಚಿಡುವ ಪ್ರೀತಿ.ಅದರಲ್ಲು ಮೂವರು ಮಕ್ಕಳಿಗೂ ಒಂದೆ ತರಹದ ಬಣ್ಣ ಬಣ್ಣದ ಚಡ್ಡಿ ನಿಕ್ಕರುಗಳು.ಇದ್ಯಾಲ್ಲ ಒಂದು ರೀತಿಯಾದರೆ,ತಾತ ಅಜ್ಜ ಜಾತ್ರೆಗೆ ಬರುತ್ತಾರೆ ಐದೋ ಹತ್ತೋ ರೂಪಾಯಿ ಕೊಡುತ್ತಾರೆ ಎಂಬ ಖುಷಿ ಮನದೊಳಗೆ ಖುಷಿಯನ್ನು ಇಮ್ಮಡಿ ಮಾಡುತಿತ್ತು.
ಬೊಮ್ಮಲ ದೇವಿಪುರದಿಂದ ನಡೆದೇ ಕ್ಯಾಮೆನಹಳ್ಳಿ ಜಾತ್ರೆ ತಲುಪುತ್ತಿದ್ದೆವು.ಆಗ ಬಲಿಷ್ಠರು ಮಾತ್ರ ಎತ್ತಿನ ಗಾಡಿಕಟ್ಟಿಕೊಂಡು ಹೋಗುತ್ತಿದ್ದರು.ನಮಗೆ ನಟರಾಜ ಎಕ್ಸ್ ಪ್ರೆಸ್ಸೇ ಗತಿ.ಎಲ್ಲರೂ ಕಣ್ಣಿಗೆ ಬೇಕಾದ್ದು ತಿಂದು ಖರೀದಿಸಿದರೆ,ಅಪ್ಪ ಕೊಟ್ಟಿದ್ದ ತಲಾ ಎರಡು ರುಪಾಯಿ ಕೇವಲ ಕನ್ನಡಕ್ಕೇ ಸರಿ ಹೋಗುತ್ತಿತ್ತು.ಊರಿನಿಂದ ತಾತ ಅಜ್ಜಿ ಬರುವವರೆಗೂ ನಾವು ಮಿಕ ಮಿಕ ಕಣ್ಣು ಬಿಡುತ್ತ ಗುಟುಕು ನೀರು ಕುಡಿಯುತ್ತಾ ಅವರಿವರನ್ನು ನೋಡುತ್ತಾ ಅಲ್ಲೊಂದು ಮರದಡಿ ನಿಂತಿರುತ್ತಿದ್ದೆವು.
ಯಾರೋ ಒಬ್ಬರು ಮೊಳ ಹೂ ಖರೀದಿಸಿ ಇಷ್ಟಿಷ್ಟೇ ಎಲ್ಲರ ತಲೆಗೂ ಮುಡಿಸುತ್ತಿದ್ದರು. ಅದೆಂತಹ ಐಕ್ಯತಾ ಭಾವ.
ತಾತ ಅಜ್ಜಿಯನ್ನು ಕಾದು ಕಾದು ಕಣ್ಣುಗಳು ಸೋತೆ ಹೋಗುತ್ತಿದ್ದವು.ಅಮ್ಮನ ಮುಖವಂತೂ ನೋಡಲಿಕ್ಕೇ ಆಗದ ಭಾವವೊಂದು ಸುಳಿದಾಡುತ್ತಿತ್ತು.ಅಪ್ಪನಿಗೆ ಹೇಗೂ ತೇರು ಹರಿವಾಗಲೇ ಬಂದ್ವಿ ನಡಿರಿ ಹೋಗೋನ.ದನ ಕರ ಮಂತಾಗೆ ಅವೆ.ಅಂತ ಪದೆ ಪದೇ ಅವಲತ್ತುಕೊಳ್ಳುತ್ತಾ ಮುಖ ಗಂಟಿಕ್ಕಿ ಕೊಳ್ಳುತ್ತಿದ್ದ ದೃಶ್ಯ ಇರಸು ಮುರಸಾಗುತ್ತಿತ್ತು.ಅಮ್ಮಳ ಕಣ್ಣುಗಳ ನೀರು ಕೆನ್ನೆ ಮೇಲೆ ಸೋರುವ ಹೊತ್ತಿಗೆ ತಾತ ಅಜ್ಜಿ ಕಾಣಿಸಿಕೊಳ್ಳುತ್ತಿದ್ದರು.ನಮಗಂತೂ ಖುಷಿಗೆ ಪಾರವೇ ಇರಲಿಲ್ಲ.ಬಂದು ಅಜ್ಜಿ ತಾತ ತಲಾ ಐದು ರೂಪಾಯಿ ಕೊಟ್ಟು.ಅಮ್ಮನಿಗೆ ಬಳೆ ತೊಡಿಸಿ ,ತಲೆಗೆ ಹೂ ಮುಡಿಸಿದ ಮೇಲೆಯೇ ಅಮ್ಮನ ಮುಖದಲ್ಲಿ ತವರಿನ ಕಳೆ ನವಿಲಾಗಿ ಗರಿಬಿಚ್ಚಿ ನಾಟ್ಯವಾಡುತ್ತಿತ್ತು.ಐದು ರೂಪಾಯಿಯಲ್ಲಿ ಕೈಗೊಂದು ವಾಚು ಪೀಪಿ ತಗೊಂಡು ಊರಿನ ದಾರಿ ಹಿಡಿಯುತ್ತಿದ್ದೆವು.ಕಲರ್ ಕನ್ನಡಕದಲ್ಲಿ ನಡೆದು ಹೋಗುತ್ತಿದ್ದರೇ ದಾರಿಯ ಮೇಲಿನ ಗುದ್ದರಗಳು ಲೆಕ್ಕಕ್ಕೇ ಇರಲಿಲ್ಲ.ಇಡೀ ವಿಶ್ವವೇ ಕಲರ್ಸ್ ಕನ್ನಡಕದ ಅಡಿಯಲ್ಲಿ ಕಾಣುತ್ತಾ ದಾರಿ ಸಾಗುವುದೇ ಗೊತ್ತಾಗುತ್ತಿರಲಿಲ್ಲ.
ಅಂತಹ ಜಾತ್ರೆ ಸಂಭ್ರಮ ಇತ್ತಿಚೆಗೆ ನಾನು ಕಾಣಲೇ ಇಲ್ಲ.ತಾತ ಅಜ್ಜಿಯೂ ಇಲ್ಲ.!
*******