ಅಂಕಣ ಸಂಗಾತಿ

ನೆನಪಿನದೋಣಿಯಲಿ

ಜೂನ್ ಒಂದನೇ ತಾರೀಕು 

ಜೂನ್ ಒಂದನೇ ತಾರೀಕು ಎಂದರೆ ಏನು ನೆನಪಿಗೆ ಬರುತ್ತೆ ಹೇಳಿ?  ಈಗಿನವರಿಗಲ್ಲದಿದ್ದರೂ ನಲ್ವತ್ತು ವರ್ಷಗಳ ಹಿಂದೆ ಶಾಲೆಗೆ ಹೋಗುತ್ತಿದ್ದ ನಮ್ಮ ತಲೆಮಾರಿನವರಿಗಂತೂ ಇಂದು ಶಾಲೆ ಪುನರಾರಂಭದ ದಿನ ಅನ್ನೋದು ಖಂಡಿತ 

ಸ್ಮರಣೆಯಲ್ಲಿ ಇರುತ್ತದೆ . ಬೇಸಿಗೆ ರಜೆ ಮುಗಿಸಿ ಕೆಲ ಶಾಲೆಗಳು ಮೇ ಇಪ್ಪತ್ತೆರಡನೇ ತಾರೀಖಿಗೆ ಆರಂಭವಾಗುತ್ತಿದ್ದು ಅಧಿಕೃತ ಹಾಜರಾತಿ, ಪೂರ್ತಿ ದಿನದ ಶಾಲೆ ಒಂದನೆಯ ತಾರೀಕಿನಿಂದಲೇ . ಇದಕ್ಕೆ ಮುಂಚೆ ಅರ್ಧ ದಿನ ಮಾತ್ರ ಶಾಲೆ.  ಆ ಸಮಯದಲ್ಲೇ ಕೊಳ್ಳಬೇಕಾದ ಪಠ್ಯ ಹಾಗೂ ನೋಟು ಪುಸ್ತಕಗಳ ಪಟ್ಟಿ ಶಾಲೆಯ ಟೈಂಟೇಬಲ್ ಎಲ್ಲಾ ಕೊಡುತ್ತಿದ್ದುದು.  1 ಮತ್ತು ಎರಡನೇ ತರಗತಿ ಅಷ್ಟು ನೆನಪಿಲ್ಲ . ಅಲ್ಲದೆ ಬರಿ 1 ನೋಟುಬುಕ್ಕಿನಲ್ಲಿ ಎಲ್ಲಾ ಮುಗೀತಿತ್ತು.  ಮೂರನೆಯ ತರಗತಿಗೆ ಸೆಂಟ್ ಥಾಮಸ್ ಶಾಲೆಗೆ ಸೇರಿದ ಮೇಲೆ ನೋಡಿ! ಆಹಾ! ಎಂಥಾ ಬದಲಾವಣೆ ಎಲ್ಲಾ 6 ವಿಷಯಗಳಿಗೆ ಪಠ್ಯಪುಸ್ತಕ ಪ್ರತಿ ವಿಷಯಕ್ಕೂ ಇನ್ನೂರು ಪೇಜಿನ ನೀಟ್ ಪುಸ್ತಕ, ನೂರು ಪೇಜಿನ ಮನೆಕೆಲಸದ ಪುಸ್ತಕ ಮತ್ತೆ ನೂರು ಪೇಜಿನ ಟೆಸ್ಟ್ ಪುಸ್ತಕ .ಇವುಗಳನ್ನು ನೋಡುವುದೇ 1 ಖುಷಿ.  ಅದರಲ್ಲೂ ಗಣಿತದ ಪುಸ್ತಕಗಳು ರೂಲ್ ಇಲ್ಲದಂತವು . ಅವುಗಳೊಂದಿಗೆ ದೊಡ್ಡ ಡ್ರಾಯಿಂಗ್ ಪುಸ್ತಕ ಮತ್ತು ಬಣ್ಣದ ಪೆನ್ಸಿಲ್ ಗಳು.  ಅಷ್ಟೈಶ್ವರ್ಯ ಸಿಕ್ಕಿದ ಅನುಭವ.  

Durga Ramdas Kateel 🇮🇳 on Twitter: "How many of you remember this notebook  during your school days? #childhoodmemories https://t.co/LmHwaUUpYk" /  Twitter

ಶಾಲೆ ಮೇ ಇಪ್ಪತ್ತೆರಡಕ್ಕೆ ಆರಂಭ ಅಂದೆನಲ್ಲ ಆಗಲೇ ಪಟ್ಟಿ ಕೊಡುತ್ತಿದ್ದರು.  ಅದರ ನಂತರದ ಶನಿವಾರ ಮಧ್ಯಾಹ್ನ ಅಣ್ಣನಿಗೆ ರಜೆ ಇರುತ್ತಿತ್ತು. ನಾವು ಮೂವರು ಮಕ್ಕಳು ಅಣ್ಣ ಅಮ್ಮ ದೊಡ್ಡ ಮಾರುಕಟ್ಟೆಗೆ ಅಲ್ಲಿ ಶಿವರಾಂಪೇಟೆಯಲ್ಲಿ ಹೋಲ್ ಸೇಲ್ ಅಂಗಡಿಗೆ ಭೇಟಿ ಕೊಡುತ್ತಿದ್ದೆವು. ಸಿಟಿ ಬಸ್ಸಿನಲ್ಲಿ ಹೋಗಿ ದೊಡ್ಡ ಬಸ್ ಸ್ಟಾಂಡಿನಲ್ಲಿ ಇಳಿದರೆ ಅಲ್ಲಿಂದ ನಡೆಯುವಷ್ಟು ದೂರ.  ಅದಕ್ಕೆ ಮೊದಲು ಮೂವರಿಗೆ ಎಷ್ಟೆಷ್ಟು ಪುಸ್ತಕ ಎಷ್ಟೇಷ್ಟು ಪೇಜಿನದು ಎಂಬ ಪಟ್ಟಿ ಮಾಡುವ ಕೆಲಸ ಹಿರಿಯಳಾದ ನನಗೆ . ಆ ಸಂಖ್ಯೆಗೆ ಇನ್ನೂ ಸ್ವಲ್ಪ ಸೇರಿಸಿ ಇಡೀ ವರ್ಷಕ್ಕೆ ಮುಂದಾಲೋಚನೆಯಿಂದ ಖರೀದಿ .ಅವಕ್ಕೆ ರಟ್ಟು ಹಾಕಲು ಬ್ರೌನ್ ಕಾಗದ,  ಅಂಟಿಸಲು ಬಣ್ಣ ಬಣ್ಣದ ಲೇಬಲ್ ಆಹಾ ಖರೀದಿಯೇ ಎಷ್ಟು ಸಂಭ್ರಮ ಗೊತ್ತಾ? ಎಲ್ಲಾ ಖರೀದಿ ಮುಗಿದ ನಂತರ ಮಧುನಿವಾಸ್ ಹೋಟೆಲ್ ಗೆ  ಅಣ್ಣ ತಪ್ಪದೆ ಕರೆದೊಯ್ಯುತ್ತಿದ್ದರು.  ಜಾಮೂನು ಮಸಾಲದೋಸೆ ಅಣ್ಣಾ  ಅಮ್ಮನಿಗೆ ಕಾಫಿ ನಮಗೆ ಫ್ರೂಟ್ ಸಾಲಡ್ . ಡಬಲ್ ಧಮಾಕಾ ಹೊಸ ಪುಸ್ತಕ ಹಾಗೂ ಹೋಟೆಲ್ ತಿಂಡಿ! ಇಂದಿಗೂ ಯಾವುದೇ ಫೈವ್  ಸ್ಟಾರ್ ಹೋಟೆಲ್ ಗೆ ಹೋದರೂ ಅಣ್ಣಾ ಕೊಡಿಸುತ್ತಿದ್ದ ಆ ಮಸಾಲೆ ದೋಸೆಯ ರುಚಿ ಸಿಕ್ಕೇ ಇಲ್ಲ .

ಮಾರನೆಯ ದಿನ ಭಾನುವಾರ ಎಲ್ಲಾ ಕುಳಿತು ಅದಕ್ಕೆ ರಟ್ಟು ಹಾಕುವುದು, ಲೇಬಲ್ ಅಂಟಿಸುವುದು .ಅಮ್ಮ ಮೈದಾಹಿಟ್ಟಿನಲ್ಲಿ ಗೋಂದು ರೆಡಿ ಮಾಡಿ ಕೊಡುತ್ತಿದ್ದರು. ಆನಂತರ ನಮ್ಮ ಪುಸ್ತಕದ ಬೀರುವಿನಲ್ಲಿ ಜೋಡಿಸಿಕೊಳ್ಳುವುದು,  ಟೈಮ್ ಟೇಬಲ್ ನೋಡಿಕೊಂಡು ಹೊಸ ಬ್ಯಾಗಿನಲ್ಲೋ ಅಥವಾ ಮೆಟಲ್ ಬುಕ್ ಟ್ರಂಕಿನಲ್ಲೋ ಅವುಗಳನ್ನು ಜೋಡಿಸುವುದು.  ಹೊಸ ಯೂನಿಫಾರಂ ಹೊಸ ಶೂ ಎಲ್ಲಾ “ಅಗಸ ಹೊಸದರಲ್ಲಿ ಗೋಣಿ ಎತ್ತಿ ಎತ್ತಿ ಒಗೆದ”  ಎಂಬಂತೆ ಜೋಡಿಸಿಟ್ಟುಕೊಳ್ಳುವ ಆಟ. ಇನ್ನು ಟೈಮ್ ಟೇಬಲ್ ಗಳನ್ನು ದೊಡ್ಡ ಕ್ಯಾಲೆಂಡರ್ ಹಿಂಭಾಗದ ಹಾಳೆಯಲ್ಲಿ ಬರೆದು ಪುಸ್ತಕದ ಅಲೆಮಾರಿಯ ಬಾಗಿಲಿನ ಒಳ ಭಾಗಕ್ಕೆ ಅಂಟಿಸಿಕೊಳ್ಳುವುದು .ಪುಸ್ತಕದ ಬೀರುವಿನ ವಿಷಯ ಹೇಳಿದರೆ ಅದೊಂದು ದೊಡ್ಡ ಕಥೆ .ನಾವಿದ್ದ ಮನೆಯ ಹಜಾರದಲ್ಲಿ ಗೋಡೆ ಕಪಾಟು 3 ಹಂತದ್ದು.  ನೆಲದಿಂದ 2ಅಡಿ  ಮೇಲೆ ಶುರುವಾಗ್ತಿತ್ತು. ಕೆಳಗಿನದರಲ್ಲಿ ನನ್ನ ತಂಗಿಯರ ಪುಸ್ತಕಗಳು 2 ನೆಯದರಲ್ಲಿ ನನ್ನದು ಮತ್ತು ಹೆಚ್ಚಿಗೆ ಉಳಿದಿರುವ ಪುಸ್ತಕಗಳು.  ಮೇಲಿನ ಹಂತದಲ್ಲಿ ಅಣ್ಣಾ ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು . ನಮ್ಮ ಕೈಗೆ ಸಿಗದ ಹಾಗೆ ಏನೇ ಇಡಬೇಕಿದ್ದರೂ ಆ ಮೇಲಿನದರಲ್ಲಿ . ಅವರಿಲ್ಲದಾಗ ಚೇರ್ ಹಾಕಿಕೊಂಡು ನಿಂತು ಅದನ್ನು ಸರ್ವೇ ಮಾಡ್ತಿದ್ದ ಕಪಿಗಳು ನಾವು.  ಹಾಗೆ ಮಾಡುವಾಗ ಇಂಕ್ ಬಾಟಲ್ ಬೀಳಿಸಿ ಹೊಡೆತ ತಿಂದದ್ದೂ ಮರೆಯದ ನೆನಪು.  

ಇಷ್ಟೆಲ್ಲಾ ಸಿದ್ಧ ಮಾಡಿಕೊಂಡ ಮೇಲೆ ಜೂನ್ 1 ಯಾವಾಗ ಬರುತ್ತೋ ಇದೆಲ್ಲವನ್ನು ಗೆಳತಿಯರಿಗೆ ಯಾವಾಗ ತೋರಿಸುತ್ತೇನೋ ಅಂತ ತುದಿಗಾಲಲ್ಲಿ ಕಾಯುವುದು.  ಆಗೆಲ್ಲಾ  ವಿಸ್ಡಂ ಮತ್ತು ಲೇಖಕ್ ಮಾತ್ರ ನೋಟ್ ಬುಕ್ ಗಳು.  ಬೆಲೆ ಕಡಿಮೆ ಅಂತನೋ ಏನೋ ಲೇಖಕ್ ಪುಸ್ತಕಾನೇ ಕೊಡಿಸೋರು. ತಿಳಿಹಸಿರು, ತಿಳಿನೀಲಿ, ತಿಳಿ ಕೇಸರಿ ಬಣ್ಣದ ಗೆರೆಗಳಿರುತ್ತಿದ್ದ ಪುಸ್ತಕ.  ಚಿಕ್ಕ ಮಕ್ಕಳಿಗೆ ಪೆನ್ಸಿಲ್ ದೊಡ್ಡವರಿಗೆ ಇಂಕ್ ಪೆನ್ (ಕ್ಯಾಮ್ಲಿನ್ ಅಂತ ನೆನಪು) ಅದಕ್ಕೆ ನೀಲಿ ಬಣ್ಣದ ಥ್ರಿಲ್ ಇಂಕ್ ಬಾಟಲ್ ತುಂಬಿಸಲು ಕೊಳವೆ ಆಹಾ! ನಿಜಕ್ಕೂ ನೆನೆಸಿಕೊಂಡರೆ ಈಗಲೂ ಖುಷಿಯ ಅನುಭವ. 

Indian kids playing at school ground, Kids group, Kids enjoying, Kids  playing football, School friends stock photo  84068b16-1a0f-49b4-a52b-3aebc02f554f

ಉಂಡುಡಲು ಸಮಸ್ಯೆಗಳಿರದ ಮಧ್ಯಮ ವರ್ಗದ ಕುಟುಂಬಗಳಾದರೂ ಜೂನ್ ನ ಪುಸ್ತಕದ ಖರ್ಚು ಅದರಲ್ಲೂ ಮೂರರಿಂದ 5 ಅಥವಾ 6ಮಕ್ಕಳಿರುವ ಮನೆಗಳು ಹೇಗೆ ನಿಭಾಯಿಸುತ್ತಿದ್ದರು ಅಂತ ಈಗಲೂ ಆಶ್ಚರ್ಯವಾಗುತ್ತೆ.  ಜಾಮಿಟ್ರಿ ಬಾಕ್ಸ್ ಗಳು ಬೇರೆ ಪ್ರತಿಯೊಬ್ಬರಿಗೂ ಒದಗಿಸಬೇಕಿತ್ತು.  ಕೆಲವು ಸ್ನೇಹಿತರ ಮನೆಯಲ್ಲಿ ಎಲ್ಲ ಅಕ್ಕ ತಂಗಿಯರು  ಒಂದೇ ಬಾಕ್ಸಿನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳುತ್ತಿದ್ದರು. 

ಅಂತೂ ಪೂರ್ಣಪ್ರಮಾಣದ ಶಾಲೆ ಆರಂಭವಾದ ಮೇಲೆ ಯಾರ್ಯಾರು ಶಾಲೆ ಬಿಟ್ಟಿದ್ದಾರೆ ಯಾರು ಹೊಸಬರು ಸೇರಿಕೊಂಡಿದ್ದಾರೆ ತಿಳಿಯುತ್ತಿತ್ತು.   ನಾವು ಕುಳಿತುಕೊಳ್ಳಬೇಕಾದ ಬೆಂಚು ಅಲಾಟ್ ಆಗುತ್ತಿದ್ದುದು ಅಂದೇ.  ನಮ್ಮ ಪಕ್ಕ ನಮ್ಮ ಮೆಚ್ಚಿನ ಗೆಳತಿಯರೇ ಬರಲಪ್ಪ ಅಂತ ಬೆಳಿಗ್ಗೆ ದೇವರಿಗೆ ನಮಸ್ಕಾರ ಹಾಕುವಾಗ ಕೇಳಿಕೊಳ್ಳುತ್ತಿದ್ದುದು ನೆನಪಿಗೆ ಬಂದರೆ ಈಗಲೂ ನಗೆ ಚಿಮ್ಮುತ್ತದೆ. 

ಬಾಲ್ಯ ಅಂದರೆ ಅದು ಸುವರ್ಣಯುಗ ಅಂದಿನ ನೆನಪುಗಳೆಲ್ಲ ಈಗಲೂ ಅಮರ ಒಂದೊಂದೇ ನೆನಪಿಸಿಕೊಂಡು ಮೆಲುಕು ಹಾಕುತ್ತಿದ್ದರೆ ಇಂದಿನ ಬೇಸರ ಜಂಜಡ ಎಲ್ಲಾ ಮರೆತು ಕೆಲಕಾಲ ಆ ದಿನಗಳಿಗೆ ಮರಳಿ ಹೋಗುವಂತೆ ಅನ್ನಿಸುತ್ತದೆ ನೆನಪುಗಳ ಗಣಿಯ ಉತ್ಖನನದಲ್ಲಿ ಸಿಗುವುದೆಲ್ಲ ಬರೀ ಚಿನ್ನದ ಗಟ್ಟಿಗಳು ಕೆಲವು ದಿನಗಳ ದಿನಾಂಕಗಳ ನೆನಪೇ ಹಾಗೆ ಈಗ 2ವರ್ಷದಿಂದ ಕೊರೊನಾ ಗಂಡುಮಕ್ಕಳ ಜೂ ನನ್ನಲ್ಲಿನ ಶಾಲೆ ಪುನರಾರಂಭ ಆಗಿಲ್ಲ . ಎಷ್ಟು ಮಿಸ್ ಮಾಡ್ಕೋತಾ ಇದ್ದಾರೋ ಮತ್ತೆ ಮೊದಲಿನ ತರಹ ಮಾಮೂಲಿ ಶಾಲೆಯ ದಿನಗಳು ಎಂದಿಗೆ ಮರಳಿ ಬಂದು ಜೀವನ ಮತ್ತೆ ಮಾಮೂಲಿ ಗೆ ಮರಳುತ್ತದೋ? 

ಇಂದು ಜೂನ್ ಒಂದರ ಬೆಳಿಗ್ಗೆ ಏಳುವಾಗ ಒಂಥರಾ ಖುಷಿಯಾಯಿತು. ಆಗಿನ ಹಾಗೆ ಹಳೆಯದೆಲ್ಲದರ ಲೆಕ್ಕ ಚುಕ್ತಾ ಆಗಿ ಇಂದಿನಿಂದ ಹೊಸದೊಂದು  ಅಧ್ಯಾಯ ಶುರುವಾಗಬಾರದೆ ಅನ್ನಿಸಿತು.  ಅದು ಸಾಧ್ಯವೇ? 


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top