ನಾ ಬದುಕಬೇಕೆಂಬ ಸಾವು

ಕಾವ್ಯ ಸಂಗಾತಿ

ನಾ ಬದುಕಬೇಕೆಂಬ ಸಾವು

ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ

Focus2move| How Is Death Portrayed in Art?

ಮುಖದ ನಗು ಕಸಿದವನ
ಹುಸಿ ನಗೆಯ ಬೆಗೆಯಲಿ
ಕರುಳ ಬಳ್ಳಿಗೆ ಬಿದ್ದಿದೆ
ಕಡು ಜಾಲಿ ಬೇಲಿ……

ಉರಿದು ಹೊಗಲಿ ಬೀಡು
ಎದೆಯ ಬತ್ತಿಯ ದೀಪ
ಬೆಳಕಿನ ಹಂಗಿಲ್ಲ ಜೀವಕೆ
ಕಣ್ಣೀರ ತೈಲವು ಬತ್ತಲಿ…..

ಜೀವಕಂಜದ ಸಾವಿಗೆ
ಬದುಕ ಹೊಸೆವ ಭೀತಿಗೆ
ಉಸಿರ ಲೆಕ್ಕವಿಲ್ಲದ ಒಲವಿಗೆ
ಎದೆಯ ಕಂದಕದ ಕತ್ತಲೆಗೆ…..

ಬಗೆದ ಎದೆಯಾಳದ ಲೆಕ್ಕ
ಕೂರಿಗೆಗೂ ದಕ್ಕಿಲ್ಲ
ಗುಳೆ ಹೊರಟ ಕನಸುಗಳ
ಕಸವು ನಿಷ್ಕ್ರಿಯ ….

ಸಾವಿನ ಜೋಳಿಗೆಯಲಿ,
ನಗುವನರಸುವ ಪರಿ,
ಹಸಿದ ಕೂಗು ಕೇಳಲರಿಯದ
ತಾಯುಂಟೆ ಲೋಕದಲಿ?….

ಹಾಯಿದೋಣಿಗೆ ಮಾತ್ರ
ರಾಜಮಾರ್ಗದ ಹಂಗು
ಹರಗೋಲೆ ಹರಿದಂತೆ
ತೆಪ್ಪವಿಲ್ಲದ ಬಾಳು…

ಮುರಿದು ಬಿದ್ದ ಸೌಧದಲಿ
ಬೆಲೆ ಕಳೆದುಕೊಂಡ ಗಾರೆಗೆ
ಬಯಲು ಸೀಮೆಯ
ಋಣ ಮಾತ್ರ ಭಾರವೇಕೋ?…

ಬಣ್ಣ ಕಳೆದುಕೊಂಡ,
ನವಿಲು ಗರಿಯ ಪುಚ್ಚ,
ಸಾವಿರ ಕಣ್ಣುಗಳ ಸಾವಿಗೆ
ಬರೆದಂತೆ ಶಾಸನ…

ಬಂಡೆಗಲ್ಲಿನ ಮೇಲೆ
ನೀರೆಂದು ನಿಂತಿಲ್ಲ
ಮಳೆ ಬಿದ್ದ ಕಾಲಕೂ
ಬರಡು ಕೊರಡು ಮಾತ್ರ

ತನ್ನಿರುವ ತಿಳಿಯದವನು
ಅನ್ಯರ ಸಲಹುವನೆ
ಸಾಂತ್ವನದ ಹುಸಿ ಮಾತಿಗೆ
ಅರ್ಥವಿದೆಯಾ ?…

ಲೋಕಸತ್ಯದ ಹಾದಿಗೆ
ಅರ್ಧಸತ್ಯದ ಕಂದೀಲು
ಕನ್ನಡಿಯ ಬೆಳಕಿನಲಿ
ಬೆಲೆಕಟ್ಟ ಬೇಕಿಲ್ಲ
ನಾನು ಮಾತ್ರ ಬದುಕ ಬೇಕೆಂಬ ಸಾವಿಗೆ…


3 thoughts on “ನಾ ಬದುಕಬೇಕೆಂಬ ಸಾವು

  1. ಪ್ರೀತಿಯ ನಿರೀಕ್ಷೆಗೆ ,ವ್ಯಕ್ತಿತ್ವದ ಸಾಣೆ ಹಿಡಿದು ಶಾರ್ಪ್ ಮಾಡಿಕೊಳ್ಳುವ ವೇದನೆಯ ಮಜಲುಗಳು ಜೀವನದ ತಿವಿತದ ಅವಮಾನಗಳು,ಕವಿತೆಯಲ್ಲಿ ಹುಡುಕಾಟವಾಗಿದೆ.ಡಾ.ಮೈತ್ರೇಯಿಣಿ ಸಹೋದರಿಯ
    ಚೆನ್ನಾಗಿದೆ ಕವಿತೆ.

  2. ಬಹಳ ಸೊಗಸಾಗಿದೆ…. ಎಷ್ಟು ಚೆಂದವಾಗಿ ಹೇಳಿಬಿಟ್ಟಿರಿ ಮೇಡಂ…. ತುಂಬಾ ಇಷ್ಟ ಆಯ್ತು….

Leave a Reply

Back To Top