ಸಮಾಜಾರ್ಥಿಕ ಘಟಕಗಳು

ಪ್ರಗತಿಗಾಗಿ ಸ್ವಯಂ ಸ್ವಾವಲಂಬಿ ಸಮಾಜಾರ್ಥಿಕ ಘಟಕಗಳು

Image result for photos of socio economic conditions

ಗಣೇಶಭಟ್ ಶಿರಸಿ


ಭಾರತದ ಆರ್ಥಿಕ ಸ್ಥಿತಿ ಆತಂಕಕಾರಿಯಾಗಿದೆಯೆಂಬುದನ್ನು ಸರ್ಕಾರ ಮತ್ತು ಅದರ ಹಿಂಬಾಲಕರು ಒಪ್ಪಲು ಸಿದ್ಧರಿಲ್ಲ.ಆದರೆ, ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಕ್ಷೀಣಿಸುತ್ತಿರುವ ಖರೀದಿ ಶಕ್ತಿ, ಜನರನ್ನುಕಾಡುತ್ತಿರುವ ಅಭದ್ರತಾಭಾವ,ಏರುತ್ತಿರುವ ಬೆಲೆಗಳು, ಎಗ್ಗಿಲ್ಲದೇ ನಡೆಯುತ್ತಿರುವ ಬ್ಯಾಂಕ್ ವಂಚನೆಗಳು, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳಿಂದ ದೇಶ ಬಾಧಿತವಾಗಿರುವುದನ್ನು ದೇಶ, ವಿದೇಶಗಳ ಸಾಮಾಜಿಕ-ಆರ್ಥಿಕ ತಜ್ಞರು ಗಮನಿಸುತ್ತಿದ್ದಾರೆ.ರಾಜಕಾರಣಿಗಳ ಪೊಳ್ಳು ಭರವಸೆಗಳನ್ನೇ ನಂಬಿರುವ ದೇಶದ ನಾಗರಿಕರು ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ.
ಇಂದಿನ ಸಮಸ್ಯೆಗಳಿಗೆ ರಾಜಕೀಯ ಪಕ್ಷಗಳ ಬಳಿ ಯಾವುದೇ ಪರಿಹಾರವಿಲ್ಲ. ಪರಸ್ಪರರನ್ನು ದೂಷಿಸುವುದೇ ಸಮಸ್ಯೆಗೆ ಪರಿಹಾರವಲ್ಲವೆಂಬುದು ರಾಜಕೀಯ ಪಕ್ಷಗಳ ಧುರೀಣರಿಗೆ ತಿಳಿಯದ ವಿಷಯವಲ್ಲ; ಆದರೆ ಜನರಿಗೆ ಮಂಕುಬೂದಿ ಎರಚಲು ಇತರರನ್ನು ದೂರುವುದೇ ಅವರ ಬಳಿ ಇರುವ ಅಸ್ತ್ರ. ದೇಶದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಮತ್ತು ಚಿಂತನೆಗಳು ಬಿಜೆಪಿಯ ಬಳಿ ಇಲ್ಲವೆಂಬುದನ್ನು ಆ ಪಕ್ಷದ ನಡೆಯೇ ಸಿದ್ಧಪಡಿಸುತ್ತದೆ. ಆರ್ಥಿಕ ಸಮಸ್ಯೆಗಳ ಕುರಿತು ಚರ್ಚಿಸುವ, ಸಲಹೆ ಪಡೆಯುವ ಬದಲಿಗೆ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವ ಬಿಜೆಪಿಯ ನಡೆ, ಅವರ ಚಿಂತನೆಗಳ ಮಿತಿಯನ್ನು ಹಾಗೂ ಸಮಸ್ಯೆಯನ್ನು ಎದುರಿಸಲಾಗದೇ ಓಡಿ ಹೋಗುವ ಮನಃಸ್ಥಿತಿಯನ್ನು ಪ್ರದರ್ಶಿಸುತ್ತಿದ್ದೆ.
ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತೊಂಬತ್ತರ ದಶಕದಲ್ಲಿ ಕಾಂಗ್ರೆಸ್ ಬಿತ್ತಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳೆಂಬ ವಿಷ ಬೀಜಗಳು ಇಂದು ಬಲಿತು, ಇಡೀ ಸಮಾಜವನ್ನೇ ಕಾಡಿಸುತ್ತಿವೆ. ಪ್ರತಿಯೊಂದು ಸಮಸ್ಯೆಗೂ ಕಾಂಗ್ರೆಸ್‍ನ್ನೇ ದೂಷಿಸುವ ಬಿಜೆಪಿ ಕಾಂಗ್ರೆಸ್ ಬಿತ್ತಿದ ವಿಷ ಬೀಜಗಳನ್ನೇ ನೀರು, ಗೊಬ್ಬರ ನೀಡಿ ಬೆಳೆಸುತ್ತಿದೆ. ಇವು ಕೇವಲ ಭಾರತಕ್ಕೆ ಮಾತ್ರವಲ್ಲ; ಇಡೀ ಜಗತ್ತಿನ ಆರ್ಥಿಕ ಪ್ರಗತಿಗೆ ಮಾರಕವಾಗಿವೆ.
ಜಗತ್ತಿನಲ್ಲಿ ಆರ್ಥಿಕ ತಜ್ಞರಿಗೆ ಕೊರತೆಯಿಲ್ಲ. ಆದರೂ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿರಲಿಲ್ಲವೇಕೆ ಎಂಬುದೇ ಯಕ್ಷಪ್ರಶ್ನೆ. ಇದರ ಉತ್ತರ ತುಂಬಾ ಸರಳವಾದರೂ ಒಪ್ಪುವ ಮನಃಸ್ಥಿತಿಯನ್ನು ನಾವಿಂದು ಹೊಂದಿಲ್ಲ. ಕೆಲವೇ ವ್ಯಕ್ತಿ ಮತ್ತು ಸಂಸ್ಥೆಗಳ ಕೈಯಲ್ಲಿಯೇ ಸಂಪನ್ಮೂಗಳ ಹತೋಟಿ ಇರುವುದರಿಂದಲೇ ಸಂಪತ್ತಿನ ಕೇಂದ್ರೀಕರಣವಾಗುತ್ತಿದೆ ಹಾಗೂ ಅದರಿಂದಲೇ ಆರ್ಥಿಕ ಸಮಸ್ಯೆಗಳು ಪಾರಂಭವಾಗಿ ಮುಂದುವರಿಯುತ್ತದೆಯೆಂದು ಬಂಡವಾಳವಾದಿ ಚಿಂತಕರು ಒಪುತ್ತಿಲ್ಲ.
ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಹಾಗೂ ಬಂಡವಾಳವನ್ನು ಬಳಸಿ ಉದ್ಯಮಿಗಳು ನಡೆಸುವ ಆರ್ಥಿಕ ಚಟುವಟಿಕೆಗಳಿಂದಾಗಿ ಆರ್ಥಿಕ ಪ್ರಗತಿಯಾಗುತ್ತದೆ ಎಂಬುದು ಬಂಡವಾಳವಾದಿ ಚಿಂತನೆ. ಸಂಪನ್ಮೂಲಗಳನ್ನು ಬಳಸುವ ಸಾಮಥ್ರ್ಯ ಎಲ್ಲರಿಗೂ ಇರುವುದಿಲ್ಲ, ಅದು ಕೆಲವರಿಗೆ ಮಾತ್ರ ಇರುತ್ತದೆಂದು ನಂಬಲಾಗುತ್ತದೆ. ಆದ್ದರಿಂದ ಸಂಪನ್ಮೂಲಗಳ ನಿಯಂತ್ರಣ ಮತ್ತು ಬಳಸುವ ಹಕ್ಕನ್ನು ಕೆಲವರಿಗೆ ಮಾತ್ರ ಮೀಸಲಿಡಲಾಗುತ್ತದೆ. ಇದರ ಪರಿಣಾಮವೆಂದರೆ ಲಾಭ ಗಳಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಉದ್ಯಮಿಗಳು, ಕೇಂದೀಕೃತÀ ಉತ್ಪಾದನೆಗೆ ಪ್ರಾಶಸ್ತ್ಯ ನೀಡಿ, ಉತ್ಪಾದನಾ ವೆಚ್ಚ ತಗ್ಗಿಸಲು ಬಯಸುತ್ತಾರೆ.. ಇಂತಹ ಸನ್ನಿವೇಶಗಳಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆ ಮೂಲೆಗುಂಪಾಗಿ , ಕಚ್ಚಾವಸ್ತುಗಳೇ ಸಾವಿರಾರು ಕಿ.ಮೀಟರ್ ಪ್ರಯಾಣಿಸುವ ಪ್ರಸಂಗ ಎದುರಾಗುತ್ತದೆ.
ಜಗತ್ತಿನ ಎಲ್ಲೆಡೆಯೂ ಸಂಪನ್ಮೂಲಗಳಿವೆ. ಅವುಗಳನ್ನು ಬಳಸುವ ಸಾಮಥ್ರ್ಯವು ಮಾನವರಿಗಿದೆ ಎಂದು ಬಂಡವಾಳವಾದಿ ಚಿಂತನೆ ನಂಬುವುದಿಲ್ಲ. ಇದರ ಪರಿಣಾಮವೆಂದರೆ ಕಚ್ಚಾ ವಸ್ತುಗಳನ್ನು, ಗುರ್ತಿಸುವಲ್ಲಿನ ವೈಫಲ್ಯ ಹಾಗೂ ಗುರ್ತಿಸಿದ ಸಂಪನ್ಮೂಲಗಳ ಅತಿಯಾದ ಬಳಕೆ. ಇಂತಹ ಸನ್ನಿವೇಶದ ಪರಿಣಾಮವೇ ಕೇಂದ್ರೀಕೃತ ಅರ್ಥವ್ಯವಸ್ಥೆ. ಮೇಲ್ಮಟ್ಟದಲ್ಲಿ ರೂಪುಗೊಂಡ ಯೋಜನೆಗಳು ತಳಮಟ್ಟಕ್ಕೆ ಹೇರಲ್ಪಡುತ್ತವೆ.
ಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ ಲಾಭ ಗಳಿಕೆಯ ಹೆಚ್ಚಳವೇ ಪ್ರಮುಖ ಉದ್ದೇಶವಾಗಿರುವದರಿಂದ,ಉತ್ಪಾದನೆಯೂ ಕೇಂದ್ರೀಕೃತಗೊಳ್ಳುತ್ತದೆ. ಇದರಿಂದಾಗಿ ನಗರೀಕರಣದ ಸಮಸ್ಯೆಗಳು, ಪರಿಸರ ಮಾಲಿನ್ಯ, ಸಾಮಾಜಿಕ ಸಂಘರ್ಷ, ಸಂಪನ್ಮೂಲಲಗಳ ಶೋಷಣೆ, ದುರುಪಯೋಗ ನಿರಂತರವಾಗಿ ನಡೆಯುತ್ತದೆ. ಇದಕ್ಕೆ ಆರ್ಥಿಕ ವಿಕೇಂದ್ರೀಕರಣವೇ ಪರಿಹಾರ.
ಆರ್ಥಿಕ ಅಸಮಾನತೆಯ ವಿಷಯದಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಮೊದಲ ಸ್ಥಾನ ರಷಿಯಾಕ್ಕೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕದ ಆಳ ಮತ್ತು ಅಗಲ ಹೆಚ್ಚಾಗುತ್ತಲೇ ಇದೆ. ಇದು ಬಂಡವಾಳವಾದಿ ವ್ಯವಸ್ಥೆಯ ಪ್ರಮುಖ ದೋಷವೂ ಹೌದು. ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯೊಂದಿಗೆ ಹಲವು ಭಿನ್ನ ಆಯಾಮಗಳ ಅಸಮಾನತೆಯೂ ಜೋಡಣೆಯಾಗಿ ಸಾಮಾಜಿಕ ಸಂಘರ್ಷ, ಅಶಾಂತಿಗೆ ಕಾರಣವಾಗುತ್ತದೆ.
ಯಾವುದೇ ದೇಶ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದರೆ, ದೇಶದ ಮೂಲೆ, ಮೂಲೆಯಲ್ಲೂ ಪ್ರಯೋಜನಕಾರಿ ಆರ್ಥಿಕ ಚಟುವಟಿಕೆ ಗರಿಗೆದರಬೇಕು. ಅಂದರೆ ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ ಕೃಷಿ, ಉದ್ಯಮ, ಸೇವಾಕ್ಷೇತ್ರಗಳು ರೂಪುಗೊಳ್ಳಬೇಕು. ಜಗತ್ತಿನ ಪ್ರತಿಯೊಂದು ಪ್ರದೇಶವೂ ಒಂದಿಲ್ಲೊಂದು ವಿಧದ ಸಂಪನ್ಮೂಲವನ್ನು ಹೊಂದಿದೆ. ಅದನ್ನು ಗುರ್ತಿಸುವ ಸಾಮಥ್ರ್ಯ ಮಾನವನಿಗಿದೆ. ಸಮರ್ಪಕವಾಗಿ ಬಳಸುವ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.
ಆರ್ಥಿಕವಾಗಿ ಭಾರತ ಸ್ವಾವಲಂಬಿಯಾಗಿರಬೇಕೆಂದು ಎಲ್ಲಾ ದೇಶಾಭಿಮಾನಿಗಳೂ ಬಯಸುತ್ತಾರೆ. ಘೋಷಣೆಗಳಿಂದ ಪಕ್ಕದ ದೇಶಗಳ ಕುರಿತು ದ್ವೇಷ ಬಿತ್ತನೆಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುವುದಿಲ್ಲ. ಅದು ಕಾರ್ಯಸಾಧ್ಯವಾಗಲು ವ್ಯವಹಾರಿಕ ಯೋಜನೆಗಳು ಬೇಕು. ಹಲವು ವೈವಿದ್ಯತೆಗಳನ್ನು ಹೊಂದಿರುವ ಭಾರತದಲ್ಲಿ ಏಕರೂಪದ ಯೋಜನೆಯಿಂದ ಅಭಿವೃದ್ಧಿ ಮತ್ತು ಸ್ವಾವಲಂಬನೆ ಎರಡೂ ಸಾಧ್ಯವಿಲ್ಲ. ಪ್ರಾದೇಶಿಕ ಭಿನ್ನತೆ , ಪ್ರಾಕೃತಿಕ , ಭೌಗೋಳಿಕ ವೈಶಿಷ್ಟ್ಯತೆಗಳು ಹಾಗೂ ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲ ಸಮಾಜಾರ್ಥಿಕ ಘಟಕಗಳನ್ನು ಗುರುತಿಸುವುದು ಅನಿವಾರ್ಯ.
ಆರ್ಥಿಕ ಸ್ವಾವಲಂಬನೆ ಎಂದರೆ, ಯಾವುದೇ ಒಂದು ಪ್ರದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ಆ ಪ್ರದೇಶದಲ್ಲಿ ವಾಸಿಸುವ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವುದು. ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷದೋಪಚಾರ ಪಡೆಯುವ ಸಾಮಥ್ರ್ಯ ಇರುವಂತಾಗುವುದು ಹಾಗೂ ಜನರ ಜೀವನಮಟ್ಟ ನಿರಂತರವಾಗಿ ಏರುತ್ತಿರುವುದು. ಆ ಪ್ರದೇಶದ ಜನರ ದೈನಂದಿನ ಅವಶ್ಯಕತೆಗಳ ಪೂರೈಕೆ ಅಲ್ಲಿಯ ಸಂಪನ್ಮೂಲಗಳ ಬಳಕೆಯಿಂದಾಗಿಯೇ ಆಗಬೇಕಾದ ಸ್ಥಿತಿ.
ಕೆಲವರು ಸ್ವಾವಲಂಬಿ ಗ್ರಾಮಗಳ ವ್ಯವಸ್ಥೆಯ ಕುರಿತು ಹೇಳುತ್ತಾರೆ. ಆದರೆ ಆಧುನಿಕ ಬದುಕಿನ ಅಗತ್ಯತೆಗಳನ್ನು ಹಾಗೂ ಗ್ರಾಮ ಮಟ್ಟದಲ್ಲಿ ಲಭ್ಯವಾಗುವ ಸಂಪನ್ಮೂಲಗಳ ಸೀಮಿತತೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಸಾಧ್ಯವಿಲ್ಲ. ಲಭ್ಯ ಇರುವಷ್ಟನ್ನೇ ಉಂಡು, ಸಿಕ್ಕಿದ್ದನ್ನೇ ತೊಟ್ಟು, ಹೇಗಾದರೂ ಬದುಕುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ.
ಗ್ರಾಮಗಳ ಮುಂದಿನ ಹಂತವೆಂದರೆ ತಾಲೂಕುಗಳು. ಇಂದು ಅಸ್ತಿತ್ವದಲ್ಲಿರುವ ತಾಲೂಕುಗಳು ರಾಜಕೀಯ ಘಟಕಗಳು. ಹೆಚ್ಚಿನ ತಾಲೂಕುಗಳÀಲ್ಲಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಸಾಮ್ಯತೆ ಇಲ್ಲ. ಆರ್ಥಿಕ ಸಮಸ್ಯೆಗಳು ಮತ್ತು ಅವಕಾಶಗಳಲ್ಲಿ ಏಕರೂಪತೆ ಇಲ್ಲದಿರುವುದರಿಂದ ವೈಜ್ಞಾನಿಕವಾಗಿ ಯೋಜನಾ ನಿರೂಪಣೆ ಸಾಧ್ಯವಾಗದು. ಇದಕ್ಕಾಗಿ ಇಂದಿನ ತಾಲೂಕುಗಳನ್ನು ಯೋಜನಾ ಬ್ಲಾಕ್‍ಗಳಾಗಿ ಮರುರೂಪಿಸುವ ಅಗತ್ಯವಿದೆ. ಭೌಗೋಳಿಕ ಅಂಶಗಳು, ಸಂಪನ್ಮೂಲಗಳ ಲಭ್ಯತೆ, ನದಿ, ಹಳ್ಳ, ಕೊಳ್ಳ , ಕೆರೆ, ಸಮಾನ ಆರ್ಥಿಕ ಸಮಸ್ಯೆಗಳು ಅವಕಾಶಗಳು ಮತ್ತು ಸಾಧ್ಯತೆಗಳನ್ನು ಆಧರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದಾಗ, ಪ್ರತಿ ಬ್ಲಾಕ್‍ನ ಶೇಕಡಾ 80 ರಷ್ಟು ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಬಹುದಾಗಿದೆ.
ಜಿಲ್ಲಾ ಮಟ್ಟದಲ್ಲಿ ಕೂಡಾ ಇದೇ ರೀತಿಯ ಸಮಸ್ಯೆಗಳು ಇರುವುದರಿಂದ, ಅವು ಕೂಡಾ 100% ಸ್ವಾವಲಂಬಿ ಆರ್ಥಿಕ ಘಟಕಗಳಾಗಲಾರವು. ಆದರೆ, ವಿವಿಧ ಬ್ಲಾಕ್‍ಗಳ ನಡುವೆ ಸಮನ್ವಯತೆ ಸಾಧಿಸಲು ಜಿಲ್ಲಾಮಟ್ಟದಲ್ಲಿ ಯೋಜನೆಗಳು ಕ್ರೋಢೀಕೃತಗೊಳ್ಳಲೇಬೇಕು.
ನಮ್ಮ ದೇಶದ ರಾಜ್ಯಗಳು ಭಾಷೆ ಮತ್ತು ರಾಜಕೀಯ ಅಂಶಗಳ ಆಧಾರದ ಮೇಲೆ ರೂಪುಗೊಂಡ ಆಡಳಿತ ಘಟಕಗಳು.ಕೆಲವೊಂದು ರಾಜ್ಯಗಳು ಬಹಳಷ್ಟು ದೊಡ್ಡದಾಗಿಯೂ , ವೈವಿದ್ಯಮಯವಾಗಿಯೂ ಇರುವುದರಿಂದ ಅಲ್ಲಿ ಕೂಡಾ ಆರ್ಥಿಕ ಸ್ವಾವಲಂಬನೆ ಸಾಧಿಸಲು ತೊಡಕುಗಳು ಬರುತ್ತವೆ.
ಆಳವಾದ ಅಭ್ಯಾಸ, ಅಧ್ಯಯನ ಹಾಗೂ ವಿಶ್ಲೇಷಣೆಗಳಿಂದ ಭಾರತದಲ್ಲಿ 44 ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲ ಪ್ರದೇಶಗಳನ್ನು ಅಂದರೆ ಸಮಾಜಾರ್ಥಿಕ ಘಟಕಗಳನ್ನು ಅರ್ಥಶಾಸ್ತ್ರಜ್ಞ ಶ್ರೀ ಪ್ರಭಾತ್ ರಂಜನ್ ಸರ್ಕಾರರು ಗುರ್ತಿಸಿದ್ದಾರೆ. ಇವುಗಳ ಕ್ಷೇತ್ರ ವ್ಯಾಪ್ತಿ ಕೆಲವೊಮ್ಮೆ ತೀರಾ ಚಿಕ್ಕದು ಅಥವಾ ದೊಡ್ಡದೂ ಆಗಿರಬಹುದು. ಕೆಲವು ಘಟಕಗಳು ಇಂದಿನ ರಾಜ್ಯದ ವ್ಯಾಪ್ತಿಯನ್ನು ಮೀರಿ ಪಕ್ಕದ ರಾಜ್ಯಕ್ಕೂ, ವಿಸ್ತರಿಸಿದರೆ ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಅಂತಹ ಘಟಕಗಳಿವೆ.
ಉದಾಹರಣೆಗಾಗಿಕರ್ನಾಟಕದಲ್ಲಿ ಮೂರು ಸಮಾಜಾರ್ಥಿಕ ಘಟಕಗಳನ್ನು ಗುರ್ತಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಯ ಹೆಚ್ಚಿನ ಭಾಗ ಮತ್ತು ಪಕ್ಕದ ಕೊಡಗು ಜಿಲ್ಲೆಗಳನ್ನು ಸೇರಿಸಿ, ಸೂಕ್ತವಾದ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿದಾಗ, ಇಷ್ಟೊಂದು ಚಿಕ್ಕ ಕ್ಷೇತ್ರ ( ಅದನ್ನು ತುಳುನಾಡು ಎನ್ನೋಣ) ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಲು ಸಾಧ್ಯವಿದೆ. ಉತ್ತರ ಕನ್ನಡದ ಕರಾವಳಿ ತಾಲೂಕುಗಳು , ಇಡೀ ಗೋವಾ ರಾಜ್ಯ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಿಗಾಗಿ ಒಂದೇ ವಿಧದ ಅಭಿವೃದ್ಧಿ ಯೋಜನೆಯನ್ನು ರೂಪಿಸಿದರೆ, ಆ ಪ್ರದೇಶವೂ ಸ್ವಯಂ ಸ್ವಾವಲಂಬಿ ಆರ್ಥಿಕ ಘಟಕವಾಗಿ ರೂಪುಗೊಳ್ಳಬಲ್ಲದು. ಉಳಿದಂತೆ ಇಡೀ ಕರ್ನಾಟಕ ಸ್ವಯಂ-ಸ್ವಾವಲಂಬಿ ಸಮಾಜಾರ್ಥಿಕ ಘಟಕವಾಗುವ ಸಾಮಥ್ರ್ಯ ಹೊಂದಿದೆ.
ಸಮಾಜಾರ್ಥಿಕಘಟಕಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದೆಂದರೆ ರಾಜ್ಯಗಳ ಪುನರ್ವಿಂಗಡಣೆ ಮಾಡುವುದು ಅಥವಾ ಪ್ರತ್ಯೇಕತಾವಾದವನ್ನು ಪ್ರೇರೇಪಿಸುವುದು ಎಂಬುದಲ್ಲ; ಬದಲಿಗೆ ಇರುವ ವ್ಯವಸ್ಥೆಯಲ್ಲೇ ಪ್ರಾದೇಶಿಕ ವೈಶಿಷ್ಟ್ಯ ಆಧಾರಿತ ಯೋಜನಾ ನಿರೂಪಣಾ ವಿಧಾನವನ್ನು ಅಳವಡಿಸುವುದು.
ಈಗ ಅನುಸರಿಸುತ್ತಿರುವ ಯೋಜನೆಗಳು ಕೇಂದ್ರೀಕೃತ ಮಾದರಿಯವು. ದೇಶ ಅಥವಾ ರಾಜ್ಯಮಟ್ಟದಲ್ಲಿ ರೂಪುಗೊಂಡು ಗ್ರಾಮಮಟ್ಟಕ್ಕೆ ಇಳಿದು ಬರುವಂತಹವು. ಶತಪ್ರತಿಶತ (100%) ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆಯಾಗಲೀ, ಸ್ಥಳೀಯ ಸಂಪನ್ಮೂಲಗಳ ಬಳಕೆಯಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಚಿಂತನೆಗಳಿಗಾಗಲೀ ಇಲ್ಲಿ ಆಸ್ಪದÀವೇ ಇಲ್ಲ.
ತಳಮಟ್ಟದಲ್ಲಿ ಅಂದರೆ ಬ್ಲಾಕ್ ಮಟ್ಟದಲ್ಲಿ ರೂಪುಗೊಂಡು ಜಿಲ್ಲಾ ಮತ್ತು ಸಮಾಜಾರ್ಥಿಕ ಮಟ್ಟದಲ್ಲಿ ಕ್ರೋಢೀಕೃತಗೊಳ್ಳುವ ವಿಕೇಂದ್ರೀಕೃತ ಯೋಜನಾ ನಿರೂಪಣಾ ವಿಧಾನವನ್ನು ಅಳವಡಿಸಿದಾಗ ಆರ್ಥಿಕ ಪ್ರಗತಿಯ ವೇಗ ಹೆಚ್ಚುವುದು ಮಾತ್ರವಲ್ಲ, ಅದು ಎಲ್ಲರನ್ನೂ ಒಳಗೊಳ್ಳುತ್ತದೆ.
ಸಮಾಜಾರ್ಥಿಕ ಘಟಕಗಳ ಸೀಮೆಯು ಶಾಶ್ವತವಲ್ಲ. ಅಕ್ಕಪಕ್ಕದ ಘಟಕಗಳು ಸ್ವಯಂ ಸ್ವಾವಲಂಬಿಗಳಾದ ನಂತರ ಅವು ಪರಸ್ಪರ ವಿಲೀನವಾಗಿ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬಹುದು.ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸ್ವಾವಲಂಬಿ, ಸದೃಢವಾದಾಗ ಇಡೀ ಗ್ರಾಮ ಆರ್ಥಿಕವಾಗಿ ಪ್ರಗತಿ ಹೊಂದುವಂತೆ, ದೇಶದ ಎಲ್ಲಾ ಸಮಾಜಾರ್ಥಿಕ ಘಟಕಗಳೂ ಸ್ವಯಂಸ್ವಾವಲಂಬಿಯಾದಾಗÀ ಇಡೀ ದೇಶ ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಬಲಿಷ್ಠವಾಗುತ್ತದೆ.
ಲಾಭ ಗಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸುವ ಇಂದಿನ ಪದ್ಧತಿಗೆ ವಿದಾಯ ಹೇಳಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳಿಯರೆಲ್ಲರಿಗೆ (100%) ಉದ್ಯೋಗ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾಗಿದೆ.
ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶದಲ್ಲಿ ವಾಸಿಸುವವರನ್ನು ಸ್ಥಳೀಯರೆಂದು ಗುರ್ತಿಸಬೇಕು. ಉದಾಹರಣೆಗಾಗಿ ತುಳುನಾಡು, ಕನ್ನಡ ನಾಡು, ಆಂದ್ರಪ್ರದೇಶದ ರಾಯಲಸೀಮಾ ಪ್ರದೇಶ, ಮಹಾರಾಷ್ಟ್ರದ ವಿದರ್ಭ ಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸ್ವಯಂ ಸ್ವಾವಲಂಬಿ ಆರ್ಥಿಕ ಘಟಕವಾಗುವ ಸಾಮಥ್ರ್ಯವಿದೆ.
ಕೃಷಿ, ಉದ್ದಿಮೆ, ವಿವಿಧ ಸೇವಾ ಕ್ಷೇತ್ರಗಳ ಮೇಲೆ ಅವಲಂಬಿತರಾಗಿರಬೇಕಾದ ಜನಸಂಖ್ಯೆಯ ಸ್ಥೂಲ ಪ್ರಮಾಣವನ್ನು ನಿರ್ಧರಿಸಿ, ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾÀಗೊಳಿಸಿದಾಗ ಆರ್ಥಿಕ ಪ್ರಗತಿ ನಿಶ್ಚಿತ.
ಪ್ರಾದೇಶಿಕ ಭಿನ್ನತೆಯನ್ನು ಗುರ್ತಿಸಿ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ವಿಕೇಂದ್ರೀಕೃತ ಯೋಜನಾ ನಿರೂಪಣೆಯಿಂದಲೇ ಇಂದಿನ ಸಮಸ್ಯೆಗಳ ಪರಿಹಾರ ಸಾಧ್ಯ. ಟಾಂಗಾ ಕುದುರೆಯ ಕಣ್ಣಿಗೆ ಕಟ್ಟುವ ಅಡ್ಡಪಟ್ಟಿಯ ರೀತಿಯಲ್ಲೇ ಇಂದಿನ ಆರ್ಥಿಕ ತಜ್ಞರು, ತಮ್ಮ ಚಿಂತನೆಗಳನ್ನು ಬಂಡವಾಳವಾದದ ಚೌಕಟ್ಟಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಈ ಸಂಕುಚಿತತೆಯನ್ನು ಮೀರಿ ಯೋಚಿಸಿದಾಗ, ಇಂದಿನ ಗಂಭೀರ ಸಮಸ್ಯೆಗೆ ಅತಿ ಸರಳ ಪರಿಹಾರವಾದ ‘ವಿಶ್ವೈಕ್ಯ ದೃಷ್ಟಿಕೋನದ ಪ್ರಾದೇಶಿಕ ಅನ್ವಯಿಕತೆ’ ಅರ್ಥಾತ್ ‘ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿಕಾರ್ಯನಿರ್ವಹಿಸುವ ವಿಧಾನಗಳು ಗೋಚರಿಸುತ್ತವೆ.
ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆಗಾಗಿ ಭಾಷೆ, ಸಂಸ್ಕøತಿ ಆಧಾರಿತ ಪ್ರಾದೇಶಿಕ ರಾಷ್ಟ್ರೀಯವಾದವೇ ಈ ಮಿಥ್ಯಾ ರಾಷ್ಟ್ರೀಯತೆಯನ್ನು ಹಿಮ್ಮೆಟ್ಟಿಸುವ ವಿಧಾನ. ಶಿಸ್ತುಬದ್ಧವಲ್ಲದ, ಗೊತ್ತುಗುರಿಯಿಲ್ಲದ ರೀತಿಯಲ್ಲಿ ಬಲಿಯುತ್ತಿರುವ ಪ್ರಾದೇಶಿಕತೆಯ ಭಾವವನ್ನು ಸ್ವಯಂ ಸಮೃದ್ಧ ಸಾಮಾಜಾರ್ಥಿಕ ಘಟಕಗಳನ್ನಾಗಿ ರೂಪಿಸುವಂತೆ ಪರಿವರ್ತಿಸುವುದೇ ಇಂದಿನ ಸಮಸ್ಯೆಗಳಿಗೆ ಪರಿಹಾರ. ಇದು ಅನಿವಾರ್ಯ ಕೂಡಾ.

*******

Leave a Reply

Back To Top