ಇನ್ನೇನು ಬೇಕಿದೆ.
ಪ್ರಮಿಳಾ ಎಸ್.ಪಿ.
ಇನ್ನೇನು ಬೇಕಿದೆ.
ಒಡೆದ ಹಿಮ್ಮಡಿಯೂರಿ ನಿಂತು
ಎನ್ನ ಹೆಗಲಮೇಲಿರಿಸಿ
ತಾನು ಕಾಣದ ಪರಪಂಚವ
ನನಗೆ ತೋರಿಸಿದವ ನನ್ನಪ್ಪ.
ಕುದಿಯುವ ಸಾರಿನೊಂದಿಗೆ
ಕುಳಿತ ಹೆಂಡತಿಯನು
ತಣ್ಣೀರಿನೊಂದಿಗಾಡುವ ಮಕ್ಕಳನು
ಮುದ್ದಾಡಿ ಬೆಳೆಸಿದ್ದ ನನ್ನಪ್ಪ.
ಮಕ್ಕಳನು ಓದಿಸಲೇಬೇಕೆಂದು
ಹಠಹಿಡಿದವಳು ….ನಾವು
ಓದಿಕೊಂಡದ್ದು ಏನೆಂದು
ತಿಳಿಯದವಳು ನನ್ನವ್ವ.
ಕವಿತೆ ಬರೆಯಲು ಬಾರದವಳು
ಮಕ್ಕಳ ಬದುಕನ್ನೇ ಸುಂದರ
ಕವಿತೆಯಾಗಿಸಲು
ಭಾವವಾದವಳು ನನ್ನವ್ವ.
ಹೀಗೆಲ್ಲಾ ಹೊಗಳಿ ಬರೆದ
ನನ್ನ ಪ್ರಾಸವಿರದ ಕವಿತೆಗಳು
ಬೇಕಿಲ್ಲಾ ಈಗ ಅವರಿಗೆ…!
ಪಿಂಚಣಿ ಬಂದಿತೆ
ಮಧುಮೇಹ ಮರೆಯಾಯಿತೆ
ರಕ್ತದೊತ್ತಡ ಹೇಗಿದೆ ಎಂದೆಲ್ಲಾ
ಜಂಗಮ ಗಂಟೆ ಭಾರಿಸುವದು
ಬೇಕಿಲ್ಲ ಅವರಿಗೆ…!
ಇಳಿ ವಯಸ್ಸಿನವರ ಸನಿಹ
ಕುಳಿತು ಒಡಲಾಳದ ಮಾತನಾಡಿ
ಮೊಮ್ಮಕ್ಕಳ ನಗುವಿಗೆ ನಗುವ ಬೆರೆಸಲು
ನನ್ನುಪಸ್ಥಿತಿ ಬೇಕಿದೆ ಅವರಿಗೆ.
ಕಾಣಬೇಕಿದೆ ನಾನು
ಅವರಿಗೆ ಬೇಕಾಗಿದ್ದಾದರೂ ಇನ್ನೇನು!?
********