ಆಕೆ

ಕಾವ್ಯಸಂಗಾತಿ

ಮಧು ಕಾರಗಿ

ಆಕೆ

ನೋವನ್ನು ನೋವಲ್ಲದ ರೀತಿಯಲ್ಲಿ
ಹೊರಹಾಕುವುದು ಹೇಗೆಂದು
ಅವಳನ್ನು ಕೇಳಿ ನೋಡಿ
ಮಾತನಾಡದೆ ಎದ್ದು ಹೋಗಿ
ನೀರುಳ್ಳಿ ಹೆಚ್ಚತೊಡಗುತ್ತಾಳೆ

ಸಂವಹನ ಕ್ಷೇತ್ರದಲ್ಲಿ
ವಿಜ್ಞಾನ ಎಷ್ಟೇ ಮುಂದುವರೆದರೂ
ತನ್ನೆದೆಯ ನೋವು
ಹಂಚಿಕೆಯಾಗದ ಖಾಸಗಿ ಆಸ್ತಿಯಂಬ
ಪುರಾತನ ಭ್ರಮೆಯಲ್ಲಿದ್ದಾಳೆ !

ಹೊಟ್ಟೆತುಂಬಾ ಸಂಕಟಗಳನ್ನೇ
ಉಂಡು ಮಲಗುವ ಅವಳು
ಮನೆಮಂದಿಗೆ ಉಪವಾಸದ
ನೆಪ ಹೇಳುವ ಕ್ಷಣಕೆ
ಜಗುಲಿ ಮೇಲಿನ ದೇವರು ನಕ್ಕಿರಬಹುದು !

ಕಟ್ಟಿಕೊಂಡ ಬದುಕು
ಎಂಥದೇ ಇದ್ದರೂ
ಹುಟ್ಟಿದೂರಿನ ಗಾಳಿಗೆ
ಸದಾ ಹಂಬಲಿಸುತ್ತಲೇ ಇರುತ್ತಾಳೆ
ಪ್ರತಿಸಲದ ಹೊಸತಿನಂತೆ !

ತನ್ನ ದೃಷ್ಟಿ ಮಂಜಾದರೂ
ಕಾಸಿಗೆ ಕಾಸು ಕೂಡಿಟ್ಟು
ಮೊಮ್ಮಗಳಿಗೆ ಚಿನ್ನದೆಳೆ
ಮಾಡಿಸಿ ತೊಡಿಸುವ ಉತ್ಸಾಹದಲ್ಲಿದ್ದಾಳೆ
ಅವಳ ಕನಸುಗಳಿಗೆ
ಮೇರೆಗಳಿವೆಯೆಂದವರಾರು ?

ಆಕೆ ಅಕ್ಷರಕ್ಕೆ ನಿಲುಕದ ಕಾವ್ಯ
ಆದರೂ
ನನ್ನ ಲೇಖನಿಯದು
ಸ್ತ್ರೀ ಕುಲದ ಮನಸುಗಳ ಒಳತೋಟಿಗಳನು
ಮತ್ತೆ ಮತ್ತೆ ಸಂದರ್ಶಿಸುವ
ವ್ಯರ್ಥ ಪ್ರಯತ್ನ ಚಾಲ್ತಿಯಲ್ಲಿದೆ !


One thought on “ಆಕೆ

  1. ವಾವ್! ಎಷ್ಟು ಸುಂದರ ಸಾಲುಗಳು ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಪ್ರಕೃತಿ,ಭೂಮಿ,ಹೆಣ್ಣು ಈ ಮೂವ್ವರನ್ನು ಕುರಿತು ಬರೆಯುವದೇ ಚೆಂದ ಅದರಲ್ಲೂ ನಿಮ್ಮಂತೆ ಬರೆಯುವವರ ಬರಹಗಳನ್ನು ಓದಿ ಅನುಭವಿಸುವುದು ಇನ್ನೂ ಚೆಂದ!

Leave a Reply

Back To Top