ಡಾ.ಬಸು ಬೇವಿನಗಿಡದ ಅವರ ” ನೆರಳಿಲ್ಲದ ಮರ”

ಪುಸ್ತಕ ಸಂಗಾತಿ

ಡಾ.ಬಸು ಬೇವಿನಗಿಡದ ಅವರ ” ನೆರಳಿಲ್ಲದ ಮರ”

     ಈಚೆಗೆ ತಮ್ಮ‌ಮಕ್ಕಳ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ ಪಡೆದ ಡಾ.ಬಸು ಬೇವಿನಗಿಡದ ಅವರು ಕನ್ನಡದ ಪ್ರಮುಖ‌ ಕಥೆಗಾರರೂ ಹೌದು.’ ತಾಯವ್ವ’,ಬಾಳೆಯ ಕಂಬ’,,’ಹೊಡಿ ಚಕ್ಕಡಿ’ ‘ಉಗುಳು ಬುಟ್ಟಿ’ ಎಂಬ ನಾಲ್ಕು ಕಥಾ ಸಂಕಲನಗಳು ಬಂದ ಮೇಲೆ ಈಗ ಅವರ ಐದನೆಯ ಕಥಾ ಸಂಕಲನ ‘ನೆರಳಿಲ್ಲದ ಮರ ‘ಬಂದಿದೆ.ಇದು ೮ ಸಶಕ್ತ ಕಥೆಗಳ ಸಂಕಲನವಿದು.ಕನ್ನಡ ಕಥಾ ಲೋಕ ಕಂಡುಕೊಂಡ ಅನೇಕ  ಹೊಸ ರೀತಿಯ  ಹೊಳಹುಗಳನ್ನು ಈ ಕಥೆಗಳ ಮೂಲಕ ಕಥೆಗಾರ ಬಸು ಅವರು ಜೋಡಿಸಿದ್ದಾರೆ.

ಕಥೆಗೆ ಒಂದು ನಿಶ್ಚಿತ ಆರಂಭ,  ಒಂದು ಬೆಳವಣಿಗೆ ,ಒಂದು ತಾರ್ಕಿಕ ಮುಕ್ತಾಯ ಎನ್ನುವ ಸಾಂಪ್ರದಾಯಿಕ ಕಥಾ ನಿರೂಪಣೆಯ ದಾರಿಯನ್ನು ಈ ಸಂಕಲನದಲ್ಲಿ ಕಥೆಗಾರ ಬಸು ಅವರು ಬೇಕೆಂತಲೇ ಮುರಿದಿದ್ದಾರೆ .ಕಥೆ ಎನ್ನುವದು ಕಥೆಗಾರ ಹೇಳುವ ನಿಶ್ಚಿತ ಅಂತ್ಯದಲ್ಲಿ ಮುಕ್ತಾಯವಾಗಬಾರದು ಅದು ಓದುಗರ ಅನೂಹ್ಯ  ಸಾಧ್ಯತೆಗಳಲ್ಲಿ ಸಂಪನ್ನ ಗೊಳ್ಳಬೇಕು ಎನ್ನುವದರಲ್ಲಿಯೇ ಕಥೆಗಾರರಿಗೆ ವಿಶ್ವಾಸವಿದೆ.ಸಂಕಲನದ ಮೊದಲ‌ ಮತ್ತು ಈಚೆಗೆ ಬಂದ ಅತ್ಯತ್ತಮ ಕಥೆಗಳಲ್ಲಿ ಒಂದಾದ ‘ನೆರಳಿಲ್ಲದ ಮರ’ ಕಥೆಯನ್ನೇ ತೆಗೆದುಕೊಳ್ಳಿ. ತನ್ನ ಹಳ್ಳಿಯ ,ತಾನು ಈವರೆಗೆ ತನ್ನವರೆಂದು ನಂಬಿದ್ದ ಸಂಬಂದಿಕರಿಂದಲೇ ಮೋಸಕ್ಕೊಳಗಾಗುವ ನಾಗರಾಜ  ಊರಿನಲ್ಲಿ ಬಜಾರಿಯಂದು ಹೆಸರಾಗಿದ್ದ ತನ್ನ ಕುಟುಂಬದಿಂದ ತಿರಸ್ಕೃತಳಾಗಿದ್ದ ಸುಶಿಲಾಳ ಸಹಾಯ ಪಡೆದುಕೊಳ್ಳಲೆಂದು ಆಹ್ವಾನ ಪಡೆದುಕೊಳ್ಳುತ್ತಾನೆ.ಅವಳೊಂದಿಗೆ ತೆರಳಬೇಕೇ? ಬೇಡವೇ? .ಬಾಲ್ಯದಿಂದಲೂ ಅವನನ್ನು ಅವನ ಮುಗ್ಧತೆಗಾಗಿ ಮೆಚ್ಚುತಲೇ ಬಂದ ನಿರ್ಬಿಡೆಯ ವ್ಯಕ್ತಿತ್ವದ ಸುಸೀಲಾ ಅವನನ್ನು ಯಾವ ರೀತಿ  ನೋಡಿಕೊಂಡಳು?.ಯಾವತ್ತೂ ನೇರವಾಗಿ ನಡೆದುಕೊಳ್ಳದ ನಾಗರಾಜ ಅವಳ ಮೂಲಕ ತನ್ನ ಆಸ್ತಿ‌ ಪಡೆದುಕೊಳ್ಳುವ ಸಮಸ್ಯೆಗೆ ಉತ್ತರ ಕಂಡುಕೊಂಡನೇ? ಸುಶಿಲಾ – ನಾಗರಾಜರ ಸ್ನೇಹ ಎಂಥದು,,?  ,ಅವರು ಒಂದೆಡೆ ಹೋದರೆ? ಇಂಥದು ಯಾವುದು ಕಥೆಗಾರರಿಗೆ ಮುಖ್ಯ ವಾಗುವ ದಿಲ್ಲ.ನಾವು ನಂಬಿದ ನಮ್ಮವರೇ ಈ ಬದುಕಿಗೆ ಆಸರೆಯಾಗಬೇಕಾಗಿಲ್ಲ.ಯಾರನ್ನು ಸಮಾಜ ನೆರಳಿಲ್ಲದ ಮರ ಎಂದು ತಿಳಿದಿತ್ತೊ ಅಂತಹ ಸುಶೀಲಳೇ ನಾಗರಾಜನಿಗೆ  ಆದರೆ ಹಾಗು ವರು ಎನ್ನುವದನ್ನು ಕಥೆ ಹೇಳುವದು ಕಥೆಯ ಮುಖ್ಯ ಸೂಚನೆಯಾಗಿದೆ.”ಅವಳು ಮಾವನೊಂದಿಗೆ ಸವಾಲು ಹಾಕುವವಳಂತೆ ಕಂಡಳು.ನಾಗರಾಜನಿಗೆ ಖುಷಿ ಎನ್ನಿಸಿತು ಆದರೆ ಮರುಕ್ಷಣ ನಾಗರಾಜ ಸಪ್ಪಗಾದ.ಏನು ಮಾಡುವದು? ಸುಶೀಲಾಳ ಜೊತೆ ಮರಳಿ ಹಳ್ಳಿಗೆ ಹೋಗಲೇ? ಇಲ್ಲ ನನ್ನಷ್ಟಕ್ಕೆ ನಾನು ಬೆಂಗಳೂರಿನ ಬಸ್ಸು ಹತ್ತಲೇ,?  ಹೀಗೆ ದ್ವಂದ್ವಕ್ಕೊಳಗಾಗುತ್ತಾನೆ. ಆ ದ್ವಂದ್ವವೇ ಕಥೆಯ‌ ಮುಖ್ಯ ಸಂಗತಿ.

ಎರಡನೆಯ‌ ಕಥೆ ತುಂಬಿ ತುಳುಕಿತ್ತ ಕಥೆಯ ಅಂತ್ಯವೂ ಕುತೂಹಲದಲ್ಲಿಯೇ ಮುಗಿದು ಹೋಗುತ್ತದೆ.ನಿಜಕ್ಕೂ ಜೀವನೋತ್ಸಾಹದ ಕಣಿಯಾಗಿದ್ದ  ದಾರವಾಡದ ರೀಗಲ್ ಟಾಕಿಸ್ ಬದಿಯಿದ್ದ ಒಂದು ಚಿಕ್ಕ ಅಂಗಡಿಯ ಟೇಲರ್ ಮಾದೇವನ ಕಥೆಯನ್ನು ಹೇಳುತ್ತಾ  ಹೋಗುತ್ತಾರೆ ನಿರೂಪಕ.ಆದರೆ ನಗರ ಜೀವನದ ಅತ್ಯಾಧುನಿಕ ಸಂಗತಿಗಳು ಮಾದೇವನಂಥವನನ್ನು ಕಂಗೆಡಿಸುತ್ತವೆ‌.ಮೊದಲನೆಯದಾಗಿ ದುಡಿಯುವ ವಯಸ್ಸಿನ ಮಗ ಅರಿವೆ ಅಂಗಡಿ ಹಾಕಿಕೊಂಡು ಪ್ರತ್ಯೇಕವಾಗುತ್ತಾನೆ‌.ಎರಡನೆಯದಾಗಿ ಅವನ ಜೀವದ ಭಾಗವೇ ಆಗಿದ್ದ ಆ ಟೇಲರ ಅಂಗಡಿಯ ಜಾಗೆಯನ್ನು ತೆರವು ಗೊಳಿಸುವ ತೀರ್ಮಾಣ ಸರಕಾರ ತಗೆದುಕೊಂಡದ್ದು ಅವನನ್ನು ಘಾಸಿಗೊಳಿಸಿದೆ‌.ಕಾರಣ ಎಲ್ಲದರಿಂದ ಪರಿತ್ಯಕ್ತನಾದ ಮಾದೇವ  ಗುಡಿಯೊಳಗ ಬಜನಾ ಮಾಡುತ್ತಾ ಕೂಡ್ರುತ್ತಾನೆ.ಒಂದು ವ್ಯವಸ್ಥೆಯನ್ನು‌,ಮೌಲ್ಯಗಳನ್ನು ನಂಬಿದ ಜೀವಗಳ ಮೇಲೆ ನಗರೀಕರಣ ಮಾಡಿರುವ ಅನ್ಯಾಯವನ್ನು ದಾಖಲಿಸುವ ಸಂಕೇತವಾಗಿ ಈ ಕಥೆ ಕಾಣಿಸುತ್ತದೆ.ಅವನ ಭೇಟಿಗಾಗಿ ನಿರೂಪಕ ಅವನು ಗುಡಿಯಿಂದ ಭಜನಾ ಬಿಟ್ಟು ಬರುವದನ್ನು‌ ಕಾಯುತ್ತಾ ನಿಲ್ಕುತ್ತಾರೆ.ಇಲ್ಲಿ ಆಧುನಿಕತೆಯ ನಗರದೊಡನೆ ಹಳ್ಳಿಯ‌ ಮುಗ್ಧತೆ  ಮುಖಾಮುಖಿಯಾಗುವದಾದರೂ ಯಾವದೂ ಸೋಲದ ಯಾವದೂ ಗೆಲ್ಲದ ಸೂಚನೆ ಇದೆ. ತುಂಬಿ ತುಳುಕಿತ್ತ ಶೀರ್ಷಿಕೆಯೂ ತನ್ನ ಉದ್ದೇಶ ಸಾಧಿಸುವಲ್ಲಿ ಸಫಲವಾಗಿದೆ

‘ಚೂರಾದ ಚಂದ್ರ‌’ಕಥೆಯ ದುರಂತ ಇನ್ನೂ ಆಳದ್ದು ಕೆಮ್ಮಿನಿಂದ ಇನ್ನೇನು ಸಾಯುತ್ತಾಳೆನ್ನುವ ಮುದುಕಿ ಇನ್ನೂ ಬದುಕನ್ನು ಗಟ್ಟಿ ಹಿಡಿದುಕೊಳ್ಳಬೇಕೆನ್ನುತ್ತಾಳೆ.ಅವಳು ಅಣ್ಣನ‌ ಮಗಳು ನೀಲವ್ವಳನ್ನು (ಅವಳು ಮೂಗಿಯಾಗಿರುವದು ಒಂದು ಸಂಕೇತವೇ) ತಂದು ಮಗ ಚೆನ್ನಪ್ಪ ನಿಗೆ ಮದುವೆ ಮಾಡಿಸುತ್ತಾಳೆ.ಆದರೆ ಆತ ಅನ್ಯಾಯ ಮಾಡಿ ಕೊಲೆ ಕೇಸೊಂದರಲ್ಲಿ ಓಡಿ ಹೋಗಿದ್ದಾನೆ.ಇರುವಾಗ ಆತ ಹೆಂಡತಿಗೆ ನೀಡಿರುವ ಹಿಂಸೆ ಚಿಕ್ಕದೇನಲ್ಲ. .ಎಂದೆಂದೂ ತನ್ನ ಗಂಡನನ್ನು ನೀಲವ್ವ  ಕ್ಷಮಿಸಲು ಸಿದ್ಧಳಿಲ್ಲ.ಆದರೆ ತಾಯಿ ಗೆ ಮಗ ತಿರುಗಿ ಬಂದಾನೆಂದು ದೂರದ ಆಸೆ.ತನ್ನ ಹಿರಿಯ ಮಗ ಗಿರೆಪ್ಪನಾದರೂ ತಮ್ಮಚೆನ್ನಪ್ಪನನ್ನು ಹುಡುಕಿಸಲು ಪ್ರಾಮಾಣಿಕ ಪ್ರಯತ್ನ‌ಮಾಡುತ್ತಿಲ್ಲ ಎಂಬ ಕೋಪವೂ ಇದೆ.ಆದರೆ ತನ್ನಣ್ಣನ ವಿರುದ್ದವೇ ಚುನಾವಣೆ ಪ್ರಚಾರ ಮಾಡಿದ್ದ ತಮ್ಮನನ್ನು ಅಣ್ಣ ಹುಡುಕುವ ಪ್ರಯತ್ನಕ್ಜೆ ಸ ಹೋಗುತ್ತಿಲ್ಲ.ಏಕೆಂದರೆ ಆತ ಊರಿನ ಮಾಸ್ತರರ‌ ಕೊಲೆಯಲ್ಲಿ ಅಪರಾಧಿಯೂ ಆಗಿರುವದು ಅವನನ್ನು ಹುಡುಕಿಸದಿರಲು‌ ಕಾರಣ ಎಂದವನು ಸಮರ್ಥಿಸಿಕೊಳ್ಳುತ್ರಾನೆ. ಕಥೆಯಲ್ಲಿ  ಮಾಸ್ತರರ ಹೆಂಡತಿಯ ಪಾತ್ರದ ಒಳ್ಳೆಯತನ, ನೀಲವ್ವನ‌ ಮೂಕತನ‌ ಕಾಡುತ್ತವೆ.ಒಂದು ಹಂತದಲ್ಲಿ ರುದ್ರವ್ವಳಿಗೆ ಜೇಲಿನಲ್ಲಿದ್ದವರೆಲ್ಲ  ತನ್ನ ಮಕ್ಕಳೇ ಎನ್ನಿಸಿ ಬಿಡುತ್ತಾರೆ.

ಕಥೆ ನೀಲವ್ವ ರುದ್ರವ್ವ ಇವರ ಬಾಂಧವ್ಯದಲ್ಲಿ‌ ಮುಳುಗಿ ಹೋಗುತ್ತದೆ.ಯಾರ ಬದುಕಿಗೆ ಯಾರು ಹೊಣೆ? ಇಲ್ಲಿ ಕೊಲೆ ದುರಂತ ನಡೆಯುತ್ತಲೇ‌ ಇರುತ್ತವೆ.ಆದರೆ ನೀಲವ್ವಳಂಥವರ, ತಾಯಿ ರುದ್ರವ್ವನಂಥವರ ಅಳು, ದುಃಖ  ನಿರಂತರ ಎನ್ನುವದನ್ನು ಕಥೆ ಧ್ವನಿಸುತ್ತಾ ಹೋಗುತ್ತದೆ.

ಕಲೆಯ ಶಾಸ್ವತತೆಯನ್ನು ಸಾರುವದು ರುಮಾಲು ಕಥೆಯ ಉದ್ದೇಶ.ಇಲ್ಲಿ ಶಾಲು ಮತ್ತು ಕತೆಯ ನಾಯಕ ಶಿವಲಿಂಗಪ್ಪ ಇಬ್ಬರೂ ಸಮಾನರೂಪಕಗಳೇ.ಕಥೆಗಾರ ಆಧುನಿಕ ಜಗತ್ತು ಹೇಗೆ ಕಲೆಯನ್ನು ನಿರುಪಯುಕ್ತ ಎಂದೂ ಭಾವಿಸುತ್ತದೆ ಎನ್ನುವದಕ್ಕೆ ಶಿವಲಿಂಗಪ್ಪನ‌ ಮಕ್ಕಳ ವರ್ತನೆಯನ್ನು‌ಉದಾಹರಣೆಯಾಗಿ  ತರುತ್ತಾರೆ. ಅವರಿಗೆ ತಂದೆ ಆಡುವ ಆಟದ ( ನಾಟಕ ಕಲೆ) ಬಗೆಗೆ ಗೌರವವಿಲ್ಲ ಮಾತ್ರವಲ್ಲ.ಆ ಆಟದ ಕಾರಣಕ್ಕೆ ತಮ್ಮಪ್ಪ ಹೊಲ ಕಳೆದ,ನಾವು ಎಚ್ಚತ್ತು‌ಕೊಳ್ಳದಿದ್ದರೆ ನಾವು ಬೀದಿಗೆ ಬರುತ್ತೇವೆ ಎಂದು ನಿರ್ಧರಿಸಿ ತಂದೆಯನ್ನು‌ ಮನೆಯಿಂದ ಹೊರ ಹಾಕುತ್ತಾರೆ.ತೀರಾ ಅನಾಥನಂತೆ ಮನೆ ಬಿಟ್ಟು ಬೀದಿ‌ಪಾಲಾದ ಅವನಿಗೆ ಊರವರೇ ನಾಟಕ‌ಮನೆ ಬಿಟ್ಟು ಕೊಡುವದು,  ಸರಕಾರ ನಾಟಕಶಾಲೆಯೊಂದನ್ನು ತೆರೆದು ಅವನನ್ನು  ಅದಕ್ಕೆ ತರಬೇತಿದಾರರನನ್ನು ಮಾಡುವದು ಇಲ್ಲಿ ಇನ್ನೂ ಕಲೆಗೆ ಬೆಲೆ ಇದೆ ಎನ್ನುವದರ ಸೂಚನೆಯಾಗಿದೆ.ಇನ್ನೂ ವಿಶೇಷವೆಂದರೆ ಕಥೆಯ ಕಡೆಯ ಭಾಗದಲ್ಲಿ ಊರಲ್ಲಿನ ತೀರ ಚಿಕ್ಕ ಹುಡುಗರು ಮಾಸ್ತರರ ಆಟದ ಪ್ರಾಕ್ಟೀಸನ್ನು ಕುತೂಹಲದಿಂದ ಏಕಚಿತ್ತದಿಂದ ಧ್ಯಾನಿಸುವ ಚಿತ್ರವಿದ್ದು ಅದು ಭವಿಷ್ಯತ್ತಿನ ಧನಾತ್ಮಕ ಸೂಚನೆಯಂತೆ ಕಾಣಿಸುತ್ತದೆ.ಇಡೀ ಕಥೆಯಲ್ಲಿ ಅಚ್ಚರಿ‌ಮೂಡಿಸುವಂತೆ ಕಾಣಿಸುವ ಪಾತ್ರ ಕಲಾವಿದ ಶಿವಲಿಂಗಪ್ಪನ‌ಹೆಂಡತಿ ಲಲಿತೆಯದು .ಮೊದಲು ಮಾವ ಶಿವಲಿಂಗಪ್ಪನ‌ನಾಟಕದ ಗುರುವನ್ನು ಪ್ರೀತಿಸಿದ ಕಾರಣಕ್ಕೆ ‌ಅವಙ್ನು ತಿರಸ್ಕರಿಸಿದ ಲಲಿತೆ ಆತ ಹೈಸ್ಕೂಲ್ ಟೀಚರ್ ಒಬ್ಬಳೊಂದಿಗೆ ಓಡಿಹೋದಾಗಲಲಿತಾ ನಿರಾಶಳಾಗುತ್ತಾಳೆ.ಆದರೆ ಬದುಕಿನ ಆಸಕ್ತಿ‌ಕಳೆದುಕೊಳ್ಳುವದಿಲ್ಲ. ಒಂದು ರೀತಿಯಲ್ಲಿ ಮನೆಯವರ ಪ್ರಕಾರ ನಿರ್ಗತಿಕನಂತೆ,ನಿರುಪಯುಕ್ತನಂತೆ ಇದ್ದ ,ಆದರೆ ಎದೆಯಲ್ಲಿ.ಕಲೆ ತುಂಬಿಕೊಂಡ ತನ್ನನ್ನು ಇಷ್ಟ ಪಟ್ಟಿದ್ದ ಮಾವನನ್ನೆ‌ ಹಟ ಹಿಡಿದು‌ ಮದುವೆಯಾಗುತ್ತಾಳೆ.ಮುಂದೆ ಬದುಕಿನುದ್ದ ಅವನ ಎಲ್ಲ ಅಪಸವ್ಯಗಳ ನಡುವೆ ಅವನ ಸಂಸಾರವನ್ನು‌ , ಕಡೆಗೆ ಅವನನ್ನು ಕೈಬಿಡದೆ‌ ಕಾಪಾಡುತ್ತಾಳೆ. ಮಕ್ಕಳು ತಂದೆಯನ್ನು‌ ಕೈ ಬಿಟ್ಡಾಗ ಮಕ್ಕಳೊಡನೆ ಉಳಿಯದೆ  ಗಂಡನೊಡನೆ ಹೊರಟು ಬರುತ್ತಾಳೆ ಮನೆ ಬಿಡುವಾಗ‌ ಬರಿಗೈಯಿಂದ ಬಂದ ಆಕೆ ತಂದ ಏಕ‌ಮಾತ್ರ ವಸ್ತುಗಂಡನಿಗೆ  ಅದೇ ಗುರು ಕೊಟ್ಟ ರುಮಾಲು.ಅಷ್ಟೇ ಏಕೆ ಮಾಸ್ತರರಪ್ರಕಾರ ‘ಅದರೊಳಗನ ಲಲಿತಾ ಅದಾಳ’ ಎನ್ನುವ ಸಾಲು ಸೂಚ್ಯವಾಗಿ ಬಹಳಷ್ಟು ಅಂಶಗಳನ್ನು ದಾಖಲಿಸುತ್ತದೆ. ನಾಟಕ‌ ಕಲೆಯ ಬಗೆಗೆ ನಾಟಕದ ಬಗೆಗೆ ಬರುವ ವಿವರಗಳು ಕಥೆಯ‌ಮಹತ್ವದ ಭಾಗಗಳಾಗಿವೆ.ನಾಟಕ‌ಮಾಸ್ತರ “ಆಟ ಅಂದ್ರ ಸರಳ ಅನಕೊಬ್ಯಾಡ್ರಿ ,ಉಸರ ಹೋಗಿ ಉಸರ ಬರತೇತಿ, ಈ ನಾಟಕ, ಮಣ್ಣು – ಮಸಿ ಸಲುವಾಗಿ ನಾವು ಎಷ್ಟ ಸಲ ವಾಗಿ ನಾವು ಎಷ್ಟ ಸಲ ಹುಟ್ಟಿ ಎಷ್ಟ ಸಲ ಸತ್ತೆವೋ ..ಅದು ದೇವರಿಗೆ ಗೊತ್ತು” ನಾಟಕದ ಪಾವಿತ್ರ್ಯದ ಕುರಿತು ಹೇಳುವ ಮಾತುಗಳು ನಾಟಕಕಾರರ ಅನುಭವ ಮತ್ತು‌ ಮಾಗಿದ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ.

ಅತ್ಯಾಧುನಿಕತೆಯ ಎಲ್ಲ ಅನೂಕೂಲಗಳಲ್ಲಿ ಬೆಳೆದು ನಿಂತ ಲಲಿತಾ ಮದುವೆಯನ್ನುವ ಸಾಂಪ್ರದಾಯಿಕ ಬಂಧನಕ್ಕೆ ಒಳಗಾಗಿ ಸ್ತ್ರೀ ಸ್ವಾಂತಂತ್ರ್ಯ ಮೊದಲಾದ ಮಾತುಗಳನ್ನು ಮರೆತು ತನ್ನ ಕೌಟುಂಬಿಕ ಚೌಕಟ್ಟಿನೊಳಗೇ ಮುಳುಗಿ ತನ್ಜ ಸ್ವಂತಿಕೆಯನ್ನು ತಾನೇ ಸರಂಡರ್ ಮಾಡುವ ವಸ್ತುವನ್ನೊಳಗೊಂಡ  ಕಥೆ .”ಮಾರುಕಟ್ಟೆಯ ಭಾಷೆ” ಎನ್ನುವದು. ಆಧುನಿಕ ಯುವತಿಯೆರಾದ ಲತಾ ಮತ್ತು ಲಲಿತಾ ವಿಶ್ವಿದ್ಯಾಲಯದಲ್ಲಿ ರಿಸರ್ಚ ಮಾಡುವ ಯುವತಿಯರು.ಸದಾ ಮಹಿಳಾ ಸ್ವಾತಂತ್ರ್ಯದ ಪರವಾಗಿರುವವರು.ಅವರಿಗೆ ಮನುಷ್ಯನ ವ್ಯಕ್ತಿತ್ವವನ್ನು‌ಮಾರಾಟಕ್ಕಿಡುವ ಮಾರುಕಟ್ಟೆಯ ಭಾಷೆ ಇಷ್ಟವಿಲ್ಲ. ಆದರೆ ವಿಜಯ ನನ್ನು ಪ್ರೀತಿಸುತ್ತಿದ್ದ ಲಲಿತಾ ತನ್ನೆಲ್ಲ ಆದರ್ಶಗಳನ್ನು ಗಾಳಿಗೆ ತೂರಿ ಇಲ್ಲಿಯವರೆಗೆ ತಾನು ಯಾವ ಮಾರುಕಟ್ಟೆಯ ಭಾಷೆಯನ್ನು ವಿರೋಧಿಧಿಸುತ್ತಿದ್ದಳೋ ಅದನ್ನೇ ಒಪ್ಪಿ ಅಂದರೆ ಸಾಂಪ್ರದಾಯಿಕ‌ಸಂಸಾರವ್ಯವಸ್ಥೆಯನ್ನೇ ಒಪ್ಪಿ ಅವಳು ತೆಪ್ಪಗಾಗುವದರ ಸೂಚನೆ ಕೊಡುತ್ತದೆ.ಬಹಿರಂಗದ ಹೋರಾಟವನ್ನು ಮಾತ್ರವಲ್ಲ ಅಂತರಂಗದ ತುಮುಲವ ನ್ನೂ ಕಳೆದುಕೊಂಡ ಲಲಿತಾಳ ಪಾತ್ರದ ನಡೆ ಅವಳ ಗೆಳತಿಗೆ  ಬಿಡಿಸಲಾಗದ ಒಗಟಾಗಿಯೇ ಉಳಿಯುತ್ತದೆ. ಕಡೆಯಲ್ಲಿ ತನ್ನಮನೆಗೆ ಬಂದ ಗೆಳತಿ ಲತಾ ತನ್ನ‌ ಪ್ರಬಂಧದಲ್ಲಿ‌‌ಬರೆದ  ಸ್ತ್ರೀ ಸ್ವಾತಂತ್ರ್ಯದ ಕುರಿತು ಬರೆದ ಸಾಲುಗಳಿಗೆವಿರೋಧ ವ್ಯಕ್ತ‌ಪಡಿಸುತ್ತಾಳೆ.”ಇವುಗಳನನ್ನು‌ನೀನೆ ಹೇಳಿದ್ದೆಯಲ್ಲೇ” ಎಂಬ ಗೆಳತಿ‌ ಲತಾಳ‌ ಮಾತಿಗೆ  ” ಇಲ್ಲಪಾ ನಾ ಹಿಂಗ ಹೇಳಾಕ ಮತ್ತ ಆ ರೀತಿ ಬರೀಲಿಕ್ಕ ಸಾದ್ಯ ಇಲ್ಲ,ಹೀಂಗ ಹೇಳೋದು ನಮ್ಮ ಸಂಸ್ಕೃತಿಯಲ್ಲ ” ಎನ್ನುವದು ಗೆಳತಿ‌ ಲತಾಳನ್ನು ಮೂಕ ವಿಸ್ಮಿತಳನ್ನಾಗಿ ಮಾಡುತ್ರದೆ.

“ತೆರಣಿಯ ಹುಳು” ಕಥೆ ನಾಯಕ ಪುಂಡಲೀಕ ರಿಕಾಮಿ ಮನುಷ್ಯ ಮತ್ತು ಕಮಲಿ ದಡ್ಡಿ .ಆದರೆ ಅವರ ಬೆಳವಣಿಗೆಯನ್ನು ಈ ಕಥೆ ಸೂಚಿಸುತ್ತದೆ.ಊರವರು ಯಾರಿಗೂ ಬೇಡವಾದ  ಪುಂಡಲಿಕಾದೇ ಊರಿಗೆ ಶಿಕ್ಷಕನಾಗಿ ಬರುತ್ತಾನೆ.ಉತ್ತಮ ಶಿಕ್ಷಕನಾಗಿ ರೂಪುಗೊಳ್ಳುತ್ತಾನೆ .ಊರವರಿಂದ ದಡ್ಡಿ, ಏತಕ್ಕೂ ಬಾರದವಳು ಎಂದೇ ಗುರುತಿಸಲಾಗುತ್ತಿದ್ದ ಕಮಲಿ ಊರ ಪಂಚಾಯತಿ ಅಧ್ಯಕ್ಷಳಾಗಿ ಊರನ್ನು ಬಯಲು ಶೌಚಮುಕ್ತ  ಗ್ರಾಮವಾಗಿ ಶ್ರಮಿಸುತ್ತಾಳೆ.ಕಥೆಯ ಬೆಳವಣಿಗೆಗಳಾವವೂ ಅಸಹಜ‌ ಎನ್ನಿಸದಿರುವದು‌ ಕಥೆಗಳ ಧನಾತ್ಮಕ ಅಂಶ.

ಸಂಕಲನದ ಕೊನೆಯ ಕಥೆ ” ಮರವಿದ್ದು ಫಲವೇನು” ಬದುಕಿನಲ್ಲಿ ಬರೀ‌ ಕಹಿಯನ್ನೇ ಉಂಡಿದ್ದ ಪಾರವ್ವನ ಕಥೆ. ಕಥೆಗೆ ನಿಜವಾಗಿ ಉತ್ಸಾಹ ತುಂಬುವದು ಪರಮೇಶಿಯ ಪಾತ್ರ.

ಹೀಗೆ ಬಸು ಅವರ ಕಥೆಗಳು ಬಹಳಷ್ಟು ಸಲ ಅದೇ ಪರಿಚಿತ  ಕಥಾ ವಸ್ತುವಿನ ಕುರಿತಿವೆ ಎನ್ನಿಸಿದರೂ ಹೊಸತನದ ನಿರೂಪಣೆ ಯಿಂದ , ತಮ್ಮ ಕಥನಗಾರಿಕೆಯ ತಂತ್ರದಿಂದಲೇ ಕುತೂಹಲ ತರುವಂತೆ ಮಾಡುತ್ತವೆ.ಅವರ ಭಾಷೆಯಂತೂ ತುಂಬ ಸಶಕ್ತವಾದುದು.ಗ್ರಾಮೀಣ ಬದುಕಿನ ವಿಶಿಷ್ಟ ಬನಿ ಅಲ್ಲಿದೆ.

ಬಸು ಅವರ ಕಥೆಗಳನ್ನು‌ಕುರಿತು ಖ್ಯಾತ ವಿಮರ್ಶಕರಾದ ಟಿ.ಪಿ‌ಅಶೋಕ ಅವರು ಹೊಡಿ ಚಕ್ಜಡಿ ಸಂಕಲನ ಕುರಿತು ಬರೆಯುತ್ತ ” ಆಧುನಿಕತೆಯ ಪ್ರವೇಶದಿಂದಾಗಿ ಗ್ರಾಮೀಣ ಬದುಕು ಪಲ್ಲಟಗೊಳ್ಳುವ ಪರಿ ಮತ್ತು ಪರಿಣಾಮಗಳ ಶೋಧ ಬಸು ಬೇವಿನಗಿಡದ ಅವರ ಕಥೆಗಳ ಒಂದು ಪ್ರಧಾನ ಆಶಯ” ಎನ್ನುತ್ತಾರೆ.ಆದರೆ”  ನೆರಳಿಲ್ಲದ ಮರ”  ಸಂಕಲನದ ಕಥೆಗಳು  ಅದರಾಚೆ ವಿಸ್ತರಿಸಲ್ಪಟ್ಟಿವೆ.

ಸಮಕಾಲೀನ ಕಥೆಗಾರರ ನಡುವೆ ತುಂಬ ವಿಶಿಷ್ಠ ಕಥೆಗಾರರಾದ ಬಸು ಅವರ ಮುಂದಿನ ರಚನೆಗಳನ್ನು ಇನ್ನಷ್ಡು ಕುತೂಹಲದಿಂದ ಸಾರಸ್ವತ ಲೋಕ‌ ಗಮನಿಸುತ್ತದೆ.


ಡಾ.ಯ.ಮಾ.ಯಾಕೊಳ್ಳಿ

Leave a Reply

Back To Top