ಕಾವ್ಯ ಸಂಗಾತಿ
ಮುಚ್ಚಿದ ಬಾಗಿಲು
ಶಂಕರಾನಂದ ಹೆಬ್ಬಾಳ

ಅಂತರಂಗದ ಬಾಗಿಲು
ತೆರೆಯಲೆ ಇಲ್ಲ
ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರ್ಯಗಳು
ತುಂಬಿ ತುಳುಕುತಿವೆ
ಎದೆಯಲ್ಲಿ ತನುಮನವು
ಪರಿಶುದ್ದವಿಲ್ಲದೆ
ಒಳಗಣ್ಣ ತೆರೆಯದೆ ಕುಳಿತೆ…!!
ಹರಿಯ ವೈಕುಂಠ
ಹರನ ಕೈಲಾಸ
ಕಂಗಳಲ್ಲಿ ನೋಡಿ ಖುಷಿಯಾದೆ
ಸೇರಲು ದಾನ ಧರ್ಮಮಾಡಿದೆ
ಕೊನೆಗೆ ಮೇಲಕ್ಕೂ ಹೋಗದೆ
ಕೆಳಕ್ಕೂ ಬಾರದೆ ಒಂದೆ ಸಮ
ಪಿಶಾಚಿಯಂತೆ ಅಲೆದೆ
ತ್ರಿಶಂಕು ನರಕದೊಳು
ಹುಳುವಾಗಿ ಇನ್ನೆಲ್ಲಿ ಹೋಗಲು
ದಾರಿಕಾಣದೆ ಹುಚ್ಚನಂತಾದೆ…..!!
ಷಡಂಗ ಧೂಪ ದೀಪದ
ಹೊಗೆಯಲ್ಲಿ ಪರಮಾತ್ಮನ
ಸ್ತುತಿಸಿದೆ ಒಳಗೆ
ಮನಮಾತ್ರ ಕೆಸರು ರಾಡಿ
ಪೂಜಾರಿಯು ಒಳಸೇರಿಸುತ್ತಿಲ್ಲ
ವೇದಗಳ ಅಭ್ಯಸಿಸಲೆ
ಪುರಾಣಗಳ ಪಠಿಸಲೆ
ಲಿಂಗಪೂಜೆಯಲಿ ನಿರತನಾಗಲೆ
ಏನು ಮಾಡುವುದು ದೇವ…!!
ಶಂಖ ಊದಿದೆ ನಗಾರಿ ಬಾರಿಸಿದೆ
ಉರುಳು ಸೇವೆ ಮಡೆಸ್ನಾನ
ನೂರು ಹತ್ತು ಹಲವು ಕಜ್ಜಗಳನು
ಪಲ್ಲಕ್ಕಿ ಹೊತ್ತೆ ನಾಮಹಾಕಿದೆ
ವಿಭೂತಿ ಬಡಿದೆ ರುದ್ರಾಕ್ಷಿ ಕಟ್ಟಿದೆ
ಜನಿವಾರ ಹಾಕಿ ದೇಗುಲ ಸುತ್ತಿದೆ
ಏನು ಮಾಡಲಿ ಏನು ತಿಳಿಯಲಿಲ್ಲ
ಬಾಗಿಲು ಮಾತ್ರ ಮುಚ್ಚಿದೆ…!!
ನಿರ್ಧರಿಸಿದ್ದೇನೆ ನಾಹಂ ಕೋಹಂ
ದಾಸೋಹಂ ತವ ದಾಸೊಹಂ
ಪರಸೇವೆಗೈಯುವ ಮಹತ್ಕಾರ್ಯ
ಕೈಲಾಸಕ್ಕೆ ವೈಕುಂಠಕ್ಕೆ ಇದೆ ಸೋಪಾನ
ತನುಮನದಲ್ಲಿ ಆ ಹರಿಹರರ ಧ್ಯಾನ
ತಲುಪುವುದೆ ಮನ ಆ ತಾಣ
ಬಕಪಕ್ಷಿಯಂತೆ ಕಾದು ಕುಳಿತಿರುವೆನು
ಮುಚ್ಚಿದ ಆ ಬಾಗಿಲು ತೆರೆವುದೆಂಬ
ಮಹತ್ವಾಕಾಂಕ್ಷೆ ಮನೊಭಿಲಾ಼ಷೆ
ಪಟ್ಟು ಹಿಡಿದ ಯೋಗಿಯಂತೆ….!!