ಅವನಿಗೆ ದಯೆ ಬರಲೆಯಿಲ್ಲ

ಕಾವ್ಯ ಸಂಗಾತಿ

ಅವನಿಗೆ ದಯೆ ಬರಲೆಯಿಲ್ಲ

ಶಂಕರಾನಂದ ಹೆಬ್ಬಾಳ

ಕರುಳು ಕಿತ್ತಿ ತಂತಿ ಮೀಟಿದೆ
ಕಲ್ಲು ಮುಳ್ಳುಗಳ ದಾರಿ ತುಳಿದೆ
ಬದುಕಿನ ಬವಣೆಯ ಬಾಣಲೆಯಲಿ,
ಬೆಂದು ಉಬ್ಬಿದ ಬೊಂಡವಾದೆ,
ಬೊಬ್ಬೆಯಿಟ್ಟು ಕೂಗಿದೆ,
ಅವನಿಗೆ ದಯೆ ಬರಲೆಯಿಲ್ಲ…!

ಸಿಡಿಲು ಹೊಡದ ಕಲ್ಲಾದೆ
ಮುಡಿಪು ಕೊಟ್ಟು ಭಕ್ತಿ ತೋರಿದೆ,
ಕಡಲು ಈಸುತ್ತ ಹರಿಯೆಂದೆ,ಹರನೆಂದೆ
ದೇವನ ಪಾದದಡಿ,
ಕೊರಗುವ ಕೋಮಲ ಹೂವಾದರೂ
ಅವನಿಗೆ ದಯೆ ಬರಲೆಯಿಲ್ಲ….!

ವಜ್ರದ ಮುಕುಟ ಹಾಕಿಸಿದೆ
ಅನ್ನ ದಾಸೋಹದಿ ಸಾತ್ವಿಕತೆ ಮೆರೆದೆ
ಮಾಡದ ಅಪರಾಧಗಳ ಮನ್ನಿಸಿ,
ಕೈವಲ್ಯದ ಪಥದಿ ನಡೆಸು ಎಂದೆ
ಅಗ್ನಿಯಲಿ ಉತ್ಸವಮೂರ್ತಿ ಹೊತ್ತು
ಭಕ್ತಯಲಿ ನಡೆದರೂ
ಅವನಿಗೆ ದಯೆ ಬರಲೆಯಿಲ್ಲ…!

ಅನಿಷ್ಟ ಮೌಢ್ಯಗಳ ನಿರ್ಭಂದಿಸಿದೆ
ಅನ್ಯಾಯ ಅಕ್ರಮಗಳ ತಡೆದುನಿಂತೆ,
ದೇಗುಲಗಳ ಜೀರ್ಣೊದ್ದಾರಕೆ ಶ್ರಮಿಸಿದೆ,
ಮಡಿಯಾದೆ,ಕೆರೆಗಳ ಶುದ್ದೀಕರಿಸಿದೆ,
ಹಾದಿಬೀದಿಗಳಿಗೆಲ್ಲ ನಿನ್ನ ಹೆಸರಿಟ್ಟರೂ…
ಅವನಿಗೆ ದಯೆ ಬರಲೆಯಿಲ್ಲ….!

ಅರಿಷಡ್ವರ್ಗಗಳ ಹಿಡಿದಿಟ್ಟೆ,
ಸತ್ಪಥದಲಿ ಸಾಗುವ ಛಲ ತೊಟ್ಟೆ,
ದೀನ ದಲಿತರ ಸೇವೆಗೆ ಜೀವ,
ಮುಡಿಪಾಗಿಟ್ಟು ಬದುಕು ದೂಡಿದೆ,
ನಿಷ್ಕಾರುಣ್ಯದ ಕಠಿಣ,
ಹೃದಯಿಯಾದ ಅವನಿಗೆ
ಕೊನೆಗೂ ಕಿಂಚಿತ್ತು ದಯೆ ಬರಲೆಯಿಲ್ಲ..!


Leave a Reply

Back To Top