ಕಾವ್ಯ ಸಂಗಾತಿ
ಕನಸ ತುಂಬಿದ ಕವಿತೆ
ಕನಸುಗಳು ಕವಿತೆಯಾದವು
ಕವಿತೆ ಕಣ್ಣಲ್ಲಿ
ತುಂಬಿಕೊಂಡಿತು.
ಆಸೆ ಅನವರತವಾಯಿತು
ಅಂಕುರದ ಟಿಸಿಲು
ಮತ್ತೆಲ್ಲೋ ಚಿಗುರಿತು.
ಬಾಳು ಬಸವಳಿಯಿತು
ಬೆಂಕಿ ಕಡಲಂತೆ
ತೋರಿ ತಂಪಾಯ್ತು.
ಇಂದು,ನಿನ್ನೆಯಾಗಿ
ನಾಳೆ ನೆನಪಿನ
ರಂಗೋಲಿಯಲ್ಲಿ ಚುಕ್ಕಿಯಾಯಿತು.
ಹಿಡಿದಿಡಲಾಗದ ಬೊಗಸೆ
ತುಂತುರಾಗಿ ಹರಿಯಿತು
ಮುತ್ತುಗಳು ಇಬ್ಬನಿಯಂತೆ ತೇಲಿತು.
ಜೀವಜಲದ ಬಿಂದುವಿನಲ್ಲಿ
ಸಿಂಧುವಾಗಿ ಸೇರಲು
ಕಾಲ ತಡೆದಿದೆ
ಹಿಡಿ ಗಾತ್ರದ ಪ್ರಾಣವೂ
ಹೋಗಲು ಪ್ರೀತಿಯನ್ನೇ ಬಯಸಿದೆ.
ತಪ್ಪು
ಎಲ್ಲರದ್ದಾಗಿದ್ದರೂ
ಹೊರುವ ಹೊಣೆ
ಒಬ್ಬರ ಮೇಲೆ
ಕಣ್ಣೀರು ಜಾರಿದಾಗ
ಬೀಳುವ ಹನಿ ಒಂದೇ ರೀತಿಯದ್ದು.
ಬದುಕಬೇಕೆಂಬ ತುಡಿತದ
ಹಿಂದೆ
ತನ್ಮಯತೆ ಇದೆ
ಹಸಿವಿನ ಹಂಬಲಕ್ಕೆ ಅಡಗಿದೆ.
ಬಿಚ್ಚಿ ಬಯಲಾದಾಗ
ಎಲ್ಲವೂ
ಕೊನೆಗೊಳ್ಳುವ ಕವಿತೆ
ಅಲ್ಲಿಯವರೆಗೆ
ಅರ್ಧ ಮುಚ್ಚಿಟ್ಟ ಸತ್ಯ
ಇರುವ ದಿನಗಳವರೆಗೂ.
****************
ಬರದ ಒಡಲು
ಮನಸಾರೆ ಅತ್ತು ಬಿಡು
ಕಣ್ಣೀರೆಲ್ಲ ಕಡಲಾಗಿ ಬರಲಿ
ಸಾಲು ಸಾಲು ನೆನಪುಗಳು
ನೆಲಮುಗಿಲ ತಾಗಲಿ.
ಅನಿಸಿಕೊಂಡು, ಮುನಿಸಿಕೊಂಡು
ಕರಗಿ, ಕರಗಿ ನೀರಾಗಿ
ಹೊರಟಾಗ ತಾಗಿದ ಕಲೆಯ
ಒರೆಸಿದ ಕೈಯ ಬಿಂದು.
ದೂರದಲಿ ಕಾಣುವ
ದನಿಯ ಆಲಿಸುತ್ತಾ ಹೊರಟರೆ
ಕ್ಷಣಕ್ಷಣಕ್ಕೂ
ಜಾರುತ್ತಲೇ ಹೋಯಿತು.
ಸಿಗಲಿಲ್ಲ ;ಸಾಕಾಗಲಿಲ್ಲ
ತೀರಲಿಲ್ಲ ;ತೀರಿಸಲಿಲ್ಲ
ದಡ ಮುಟ್ಟುವುದಾದರೂ ಹೇಗೆ?
ಬೇಗುದಿಯ ಬೇಗೆ
ಹಾಗೆ ಇದೆ
ಹಣತೆ ಹಚ್ಚುವ ಮೊದಲು
ಒಮ್ಮೆ ಕೇಳು
ನಿನಗೆ
ಬಿಸಿಯಾಗಿ ಬೆಂದು
ಉರಿದು ಬೆಳಕ ಬೀರುವ
ಮನಸ್ಸಿದೆಯಾ ಎಂದು.
ಕಾಣಿಸಿ, ಮಣಿಸಿ
ಮರ್ಮರಿಸಿ
ಮರೆಯಾದ ಮಣ್ಣಿಗೆ
ಫಲವತ್ತತೆಯ ಕಿರೀಟ
ಹೊತ್ತುಕೊಂಡು, ಹೆತ್ತುಕೊಟ್ಟು
ಬರಿದಾಗಿದೆ
ಬರದ ಒಡಲು.
****
ಹೆಸರು ಎನ್.ಆರ್ .ರೂಪಶ್ರೀ, ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ,ಮೈಸೂರು.
ಕಥೆ ಕವನ ಲೇಖನಗಳನ್ನು ಬರೆಯುವುದು ಹವ್ಯಾಸ. ಇದುವರೆಗೆ ಒಟ್ಟು ಆರು ಪುಸ್ತಕಗಳು ಪ್ರಕಟಗೊಂಡಿವೆ.
Very. beautiful. meaningful song. Thank. U. somuch