ಗಝಲ್
ಅಮೃತಾ ಉಮೇಶ್ ಶೆಟ್ಟಿ ಶಿವಪುರ

ಅಮ್ಮನು ಇಲ್ಲದ ವೇಳೆಲಿ ಮೆಲ್ಲನೆ ಬೆಣ್ಣೆಯ ಕದ್ದಿದ ನೆನಪಿದೆ ಇನ್ನೂ
ಅಣ್ಣನು ಸಲ್ಲದ ದೂರನು ಹೊರೆಸುತ ಬೆನ್ನಿಗೆ ಗುದ್ದಿದ ನೆನಪಿದೆ ಇನ್ನೂ
ಬಾಲ್ಯದ ಸ್ಮೃತಿ ಮೂಟೆಯ ಇಳಿಸಲು ಜಾಗವ ಅರಸಲು ಸಿಗಲೇ ಇಲ್ಲ
ಮಾವಿನ ಮರದಡಿ ತರಗೆಲೆ ಸರಿಸುತ ಹಣ್ಣನು ಮೆದ್ದಿದ ನೆನಪಿದೆ ಇನ್ನೂ
ಪಾಠದ ಪುಸ್ತಕ ತೆರೆಯದೆ ಬರೆಯದೆ ಆಡುತಾ ಕಳೆಯಿತು ಓದಿನ ಬದುಕು
ಅತ್ತೆಯು ಮೆತ್ತಗೆ ಕಿವಿಯನು ಹಿಂಡಿ ಅಕ್ಷರವ ತಿದ್ದಿದ ನೆನಪಿದೆ ಇನ್ನೂ
ತೋಡಿನ ನೀರಲಿ ಮೀನನು ಹಿಡಿದು ಬಾವಿಗೆ ಹಾಕಿ ಇಣುಕುತ ಕೂತೆ
ಹೊಳೆಯ ಬದಿಯ ಬಂಡೆಯ ಮೇಲೆ ಬಟ್ಟೆಯ ಅದ್ದಿದ ನೆನಪಿದೆ ಇನ್ನೂ
ಅಮ್ಮಿ ಬಳಸಿದ ಬಳಪ ಎಸೆಯದೆ ಕಿಸೆಯಲಿ ಇಡುತ ನಗುತ ನಡೆದಳು
ತೋಟದಿ ಆಟಕೆ ಓಡುತ ತೆಂಗಿನ ಹೊಂಡದಿ ಬಿದ್ದಿದ ನೆನಪಿದೆ ಇನ್ನೂ