ಗಜಲ್
ವಿಜಯಲಕ್ಷ್ಮಿ ಕೊಟಗಿ
ಅರಿವಿನ ತಾಣದಲಿಂದು ಅರಿವೆಯ ಎಳೆದಾಟ/
ಕೇಸರಿ ಹಸಿರ ನಡುವಲಿ ನೀಲಿಯ ಹಾರಾಟ/
ಗುರು ಗುರಿ ಎರಡೂ ಇಲ್ಲವಾಗಿದೆಯೋ ಇಂದು/
ಬುದ್ಧಿ ಮಾತಿಗೆ ಬಗ್ಗದ ಜಗ್ಗದ ಮೊಂಡಾಟ/
ಚಿಕ್ಕವರ ಬಾಯಲಿ ದೊಡ್ಡದೊಡ್ಡ ಮಾತುಗಳು/
ಹೆಗಲಿಗೆ ಯಾರದೋ ಕೋವಿ ಹೊರುವ ಒದ್ದಾಟ/
ತಲೆಗೇರಿದೆ ಧರ್ಮಾಂಧತೆ ಅಫೀಮಿನ ಅಮಲು/
ಉರಿವ ಮನೆಯಂಗಳದಿ ಕುಹಕಿಗಳ ಮೇಲಾಟ/
ತಾವೇ ಧರ್ಮ ರಕ್ಷಕರೆಂಬ ಸ್ವಘೋಷಣೆ/
ತ್ರಿವರ್ಣದ ಮಹತೆ ಮರೆತವರ ಹುಚ್ಚಾಟ/
ವಿವೇಕವಾಣಿಗೆ ಕಿವುಡಾಗಿವೆ ಯುವಜೀವ/
ಅಲ್ಲಾ ಹೋ ಅಕ್ಬರ್ ಜೈಶ್ರೀರಾಮ್ ಅರಚಾಟ/
ಪರಮಕ್ಕಳ ನೂಕಿ ಬಾವಿಯಾಳ ನೋಡುವ ಜನ/
ಮತ ಲೂಟಿಗೆ ಜಾತೀಯತೆ ಕೆಸರ ಎರಚಾಟ/
ಶಾರದೆಯ ಬದಿಸರಿಸಿ ಬಂದವಳು ಕರೋನಾ/
ಓದದೇ ಪಾಸಾಗಿರುವ ಖುಷಿಯ ಕುಣಿದಾಟ/
ವಿದ್ಯೆಯ ಘಮವನೂ ಮರೆಸಿದೆ ಬಟ್ಟೆಯ ಕಮಟು/
ಮಸಿ ಮೆತ್ತುವ ಮಕ್ಕಳಿಗೆ ಹೆತ್ತವರ ಕೊಂಡಾಟ/
ಭಾರತದ ಭವ್ಯ ಭವಿಷ್ಯ ಮಸುಕಾದ ಕನಸು/
ನಿಲ್ಲಿಸುವುದಿಲ್ಲ ವಿಜಿ ಐಕ್ಯತೆಯ ಹೋರಾಟ/