ಕಾವ್ಯ ಸಂಗಾತಿ
ಕೋಟಿ ಜನರ ಭೀಮ ಬಲ
ವಸುಂಧರಾ ಕದಲೂರು

ಕಡುಗತ್ತಲ ಹಾದಿಗೆ ಒದಗಿ ಬಂದ
ನೀಲಾಂಜನ ದೀಪವೇ; ಒಣನೆಲದ ಬೀಜಗಳಿಗೆ ಚೈತನ್ಯ ಉಣಿಸಿದ
ಬೆಳ್ಳಿಹನಿ ಮೋಡವೇ…
ಯಾವ ಅಮೃತ ಗಳಿಗೆಯಲಿ
ನೀನು ಎದ್ದು ಬಂದೆಯೋ; ಬಿದ್ದ
ಜನರ ಬುದ್ಧಿಯಾಗಿ ಅಸೀಮ
ಶಕ್ತಿ ತಂದೆಯೋ…
ಮಂತ್ರ ಮಂಗಳಾರತಿ ಒಲ್ಲದೇ
ಒಲಿವ ಜನರ ದೈವವೇ; ಮಾಟ
ತಂತ್ರ ಮೋಸಗಾರಿಕೆಯ ಕಡು
ವಿರೋಧಿ ಶೌರ್ಯವೇ…
ಕಾದಾಡಲು ಆಗದವರ ಬೆನ್ನ
ಕಾಯ್ವ ಗುರಾಣಿಯೇ; ರಣಕೇಕೆಗೆ
ಪ್ರತಿತಂತ್ರಕೆ ಬಿರುಸು ಬಾಣ
ಹೂಡುವಕ್ಷಯ ಬತ್ತಳಿಕೆಯೇ…
ತಂಬೆಲರಿನ ಪ್ರಾಣವಾಯು ನೀ;
ಒಡಲ ಬೇಗುದಿಗೆ, ಮೌನ
ರೋಧನಕೆ ಒದಗಿಬರುವ
ಸಾಂತ್ವನವೇ…
ಅತುಲ ಬೆಂಬಲ ನೀಡುವ
ಭೀಮಬಲವೇ; ನಮ್ಮ ಸಂವಿಧಾನವೇ
ನಿನಗೆ ಕೋಟಿ ಶರಣು…