ಕಾವ್ಯಸಂಗಾತಿ
ಗಜಲ್ (ವೆಲೆಂಟೈನ್ ಡೇ ಗೆ ಸಂಗಾತಿಗೆ)
ವಿನುತ ಹಂಚಿನಮನಿಯವರ ಗಜಲ್
ಸಂಜೆಯ ಮಧುರ ಸಂಗೀತದಲೆ ಪಸರಿಸಿತ್ತು ಗೆಳತಿ
ಅದು ನಿನ್ನ ಮಾದಕ ಕಿಲಕಿಲ ನಗುವೆ ಆಗಿತ್ತು ಗೆಳತಿ
ಮನೆ ಸಿಂಗಾರಗೊಂಡಿತ್ತು ನವಿಲು ಬಣ್ಣದಲಿ
ಅದು ನಿನ್ನ ನಲಿವ ಚೆಲುವ ನೆರಳಾಗಿತ್ತು ಗೆಳತಿ
ಶ್ರದ್ಧೆಯ ಪೂಜೆಯೊಂದು ನಡೆದಿತ್ತು ಮನೆಯಲಿ
ಅದು ನಿನ್ನ ನಿತ್ಯದ ಶಿಸ್ತಿನ ಕೆಲಸವಾಗಿತ್ತು ಗೆಳತಿ
ನಕ್ಷತ್ರ ಮಿನುಗುತ್ತಿದ್ದವು ಅನಂತ ಬಾನಂಗಳದಲಿ
ಅದು ನಿನ್ನ ಕಣ್ಣುಗಳ ಮಿಂಚಿನ ಬೆಳಕಾಗಿತ್ತು ಗೆಳತಿ
ಹೊಳೆವ ಮುತ್ತುಗಳ ಆಗರ ಕಂಡೆ ಸಾಗರದಾಳದಲಿ
ಅದು ನಿನ್ನ ಕೂದಲಿನಿಂದ ಹನಿದ ನೀರಾಗಿತ್ತು ಗೆಳತಿ
ಹಕ್ಕಿಗಳ ಇಂಚರದ ಕಲರವ ಕೇಳುತ್ತಿತ್ತು ಅಂಗಳದಲಿ
ಅದು ನಿನ್ನ ಕೊರಳ ಸುಮಧುರ ಧ್ವನಿಯಾಗಿತ್ತು ಗೆಳತಿ
ಹರಿಸುವುದಿತ್ತು ಪ್ರೀತಿಯ ಹಾಲು ಜೇನು ಬಾಳಿನಲಿ
ವಿನು ನಿನ್ನ ಕಷ್ಟಗಳಿಗೆ ಮುಲಾಮಾಗ ಬೇಕಾಯ್ತು ಗೆಳತಿ
ವಿನುತ ಹಂಚಿನಮನಿ