ಶ್ರೀ ಸಹದೇವ ಯರಗೊಪ್ಪ ರ ಬಿರಿದ ನೆಲದ ಧ್ಯಾನ ಕೃತಿಗೊಂದಿಷ್ಟು ಹೊನ್ನುಡಿ.

ಪುಸ್ತಕ ಸಂಗಾತಿ

ಸಹದೇವ ಯರಗೊಪ್ಪರ 

ಬಿರಿದ ನೆಲದ ಧ್ಯಾನ ಕೃತಿಗೊಂದಿಷ್ಟು ಹೊನ್ನುಡಿ.

ಆತ್ಮೀಯ ಅಧಿಕಾರಿ ಮಿತ್ರರು ಸಹೃದಯಿ ಗಜಲ್ ಲೇಖಕರು ಆದ  ಶ್ರೀ ಸಹದೇವ ಯರಗಪ್ಪನವರು  ಕೃಷಿ ಇಲಾಖೆಯಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಲೇ ತಮಗೆ ಸಂಪರ್ಕಕ್ಕೆ ಬರುವ ಗ್ರಾಮೀಣ ಬದುಕು,ಅಲ್ಲಿಯ ದುಡಿಯುವ ವರ್ಗ, ಕೃಷಿಕರ ಕುರಿತು ಬಹು ಮನೋಜ್ಞವಾಗಿ ಈ  ಬಿರಿದ ನೆಲದ ಧ್ಯಾನ ಸಂಕಲನದಲ್ಲಿ ಅನೇಕ ಗಜಲ್ ರಚಿಸಿದ್ದಾರೆ.ಈ ಸಂಕಲನ ಕೃಷಿಗೆ ಒಂದು ಸಂಕೇತವಾಗಿ ಸಹ ಗಮನಿಸಬಹುದು.

    ಸ್ವತಹ ಬಡತನದ ಸಣ್ಣ ಕೃಷಿ ಕುಟುಂಬದಿಂದ ಬಂದಂತಿರುವ ಶ್ರೀ ಸಹದೇವರವರು ಆ ಅನ್ನ ನೀಡುವ ಕೃಷಿಕನ ಬದುಕನ್ನು,ಒಟ್ಟಾರೆ ಭೂಮಿಯನ್ನು ನಂಬಿ ಬದುಕುವ ನಮ್ಮ ಮುಗ್ಧ ಗ್ರಾಮೀಣರ ಬದುಕು ಇಂದಿಗೂ ಹಸನಾಗಲಿಲ್ಲವೆಂಬ ಅಪಾರ ಮಾನವೀಯ ಕಾಳಜಿ ಇವರ ಒಟ್ಟಾರೆ ಗಜಲ್ ಕಾವ್ಯದ ಮೂಲ ಆಶಯ ಹಾಗೂ ಧೋರಣೆಯಾಗಿದೆ.

    ಒಬ್ಡ ಕವಿ ಸಮಾಜ ವಿಜ್ಞಾನಿಯಾಗಿಯು ಕಾರ್ಯನಿರ್ವಹಿಸಬಲ್ಲ ಎಂಬುದಕ್ಕೆ ಹಾಗೂ ಲೇಖಕನೊಬ್ಬ ಆ ಕಾಲಮಾನದ ಸಾಕ್ಷಿ ಪ್ರಜ್ಞೆಯಾಗಿ ದಾಖಲಿಸಬಲ್ಲ ಎಂಬುದಕ್ಕೆ ಆಧಾರ ಬೇಕಾದರೆ ಇವರ ಗಜಲ್ ಗಳ ಒಟ್ಟು ಧೋರಣೆ,ಮಾನವೀಯ ಹಾಗೂ ಜೀವಪರ ಕಾಳಜಿಯು ಒಂದು ಅಧ್ಯಯನದ ವಸ್ತು ಆಗಬಲ್ಲವು.ಈ ಮಾತನ್ನು ಈ ಸಂಕಲನದಲ್ಲಿಯ ಹಾಗೂ ಇವರ ಒಟ್ಟು ಬರವಣಿಗೆಯ ಕೇಂದ್ರ ಪ್ರಜ್ಞೆಯಾಗಿ ಗಮನಿಸಿ ಈ ಮಾತು ಪ್ರಜ್ಞಾ ಪೂರ್ವಕವಾಗಿ ಬಳಸುತ್ತಿದ್ದೇನೆ.

ಈ ಗಜಲ್ ಗಳು ನನ್ನ ಮಾತಿಗೆ ಪೂರಕವಾಗಿ ತಾವು ಗಮನಿಸಬಹುದು.

ಯಾಕೋ ಭೂಮಿ ತಾಯಿ ಹಸಿರು ಮುಕ್ಕಳಿಸಿ ಅಪ್ಪನ ಕೈ ಹಿಡಿಯಲೇ ಇಲ್ಲ

ಧುತ್ತನೆ ಊರ ಪಡಸಾಲೆಗೆ ನೆರೆ ಕಾಲಿಟ್ಟಾಗ ಹೆಗಲ ಅಂಬಾರಿಯಾದವನು ನನ್ನಪ್ಪ ()

    ಹಾಗಂತ ಇವರು ಕೇವಲ ಗ್ರಾಮೀಣ ಹಾಗೂ ರೈತರ ಬದುಕು ಕುರಿತು ಗಜಲ್ ಬರೆದಿದ್ದಾರೆಂದು ಯಾರು ಭಾವಿಸಬೇಕಾಗಿಲ್ಲ.ಇಂದಿನ ಸಾಮಾಜಿಕ ಬದುಕಿನ ವರ್ತಮಾನದ ತಲ್ಲಣಗಳು,ಮನುಷ್ಯ ಸಂಬಂಧಗಳು, ಕಡಿಮೆ ಆಗುತ್ತಿರುವ ಸಹಬಾಳ್ವೆ, ಕೃತಕಗೊಳ್ಳುತ್ತಿರುವ ಹಾಗೂ ಸಿಥಿಲಗೊಳ್ಳುತ್ತಿರುವ ಮಾನವೀಯ ಸಂಬಂಧಗಳು ಕುರಿತು ಸಹ ಹಲವು ಗಜಲ್ ಗಳು ಇಲ್ಲಿವೆ.

ಬೆಣ್ಣೆ ಮುಗಿದ ಮೇಲೆ ಬಂಧು ಬಳಗ ಯಾರು ಇಲ್ಲ ಎಣ್ಣೆ ಇರದ ದೀಪದಂತೆ…()

ಮನುಷ್ಯ ಬದುಕಿನ ಮೂಲ ದ್ರವ್ಯಗಳಾದ ಪ್ರೀತಿ ಪ್ರೇಮ,ವಿರಹ,ಸಂಕಟ,ಕಳೆದುಕೊಂಡವಳ ನೋವು, ಸಿಕ್ಕವಳ ಬಗೆಗಿನ ಖುಷಿ, ನಲಿವು, ಕಾಯುವಿಕೆ,ಹಂಬಲ ಹೀಗೆ ಗಜಲ್ ಕಾವ್ಯ ಬಯಸುವ ಸುಕೋಮಲ ಭಾವನೆಗಳು,ನವಿರುತನ ಒಳಗೊಂಡ ಅನೇಕ ಗಜಲ್ ಗಳು ಈ ಸಂಕಲನದಲ್ಲಿವೆ.

ಹೊಂಬಣ್ಣದ ಹಗಲು ಸೊರಗಿ ಕರಗುತ್ತಿದೆ ಒಲವ ಬಟ್ಟಲು ತುಂಬು ಸಾಕಿ

ನೀಲಿ ಬಣ್ಣದ ಸಂಜೆ ಕತ್ತಲು ತಬ್ಬುತ್ತಿದೆ  ಎದೆಯ ಬಟ್ಟಲು ತುಂಬು ಸಾಕಿ ()

    ಇದು ಅವರ ಎರಡನೇ ಗಜಲ್ ಸಂಕಲನವಾಗಿದ್ದು ಲೇಖಕ ಮಿತ್ರ ಸಹದೇವ ಯರಗಪ್ಪನವರಿಗೆ ಸಾಹಿತ್ಯ ಲೋಕ ಗುರುತಿಸಲಿ,ಇನ್ನೂ ಹೆಚ್ಚೆಚ್ಚು ಕೃತಿಗಳು ಬಂದು ಓದುವ,ಬೆನ್ನು ತಟ್ಟುವ ಖುಷಿ ನಮ್ಮದಾಗಲಿ ಎಂದು ಈ ಮೂಲಕ ಮನದುಂಬಿ ಹಾರೈಸುವೆ.


ಸಿದ್ಧರಾಮ ಹೊನ್ಕಲ್

Leave a Reply

Back To Top