ಲೇಖನ
ಪ್ರಾಣಿಗಳೇ ಗುಣದಲಿ ಮೇಲು.
ಶಿವಲೀಲಾ ಹುಣಸಗಿ
ಮನುಷ್ಯ ಮನುಷ್ಯರ ನಡುವಿನ ಸಂಬಂಧ ಬೆಸೆಯುವುದು ಯಾವುದರಿಂದ ಎಂಬ ಪ್ರಶ್ನೆ ನಮ್ಮೊಳಗೆ ಹುಟ್ಟಬೇಕಿದೆ.ಪ್ರಾಣಿಗಳಿಗಿಂತ ಭಿನ್ನವಾದ ನಾವು? ಗಳಿಸಿದ್ದೇನೆಂಬ ಚಿಂತನೆ ಸದಾ ಕಾಲ ತರ್ಕಾತೀತವಾಗಿ ಬೆನ್ನಹತ್ತಿದ್ದು, ಭೂತಗನ್ನಡಿಯ ಬಳಸೆಂದು ಪರೋಕ್ಷವಾಗಿ ಹೇಳಿದಂತೆ ಭಾಸವಾಗುತ್ತೆ.ನಮ್ಮನ್ನು ಕಂಡಾಕ್ಷಣ ಬಾಲ ಅಲ್ಲಾಡಿಸುತ್ತ ಓಡಿಬಂದು ಭುಜದೆತ್ತರಕೆ ಹಾರಿ ಅಪ್ಪಿ ಮುದ್ದಾಡುವ ನಾಯಿಯನ್ನು ಕಂಡಾಗೆಲ್ಲ ಆಶ್ಚರ್ಯ. ಅವುಗಳ ನಿರ್ಮಲ ಪ್ರೇಮ ನಾನು ನೀನು ಒಂದೇ ಅಲ್ಲವೇ ಎಂಬ ಧ್ವನಿ ಮೊಳಗಿದಂತೆಲ್ಲ ಎಲ್ಲ ತಾರತಮ್ಯ ದೂರತಳ್ಳಿ ಅದನಪ್ಪಿ ಅದರ ಪ್ರೇಮಕೆ ಶರಣೆಂದು ಬಾಗದ ಮನಸ್ಸು ಯಾರದು ಇರದು.
ಮೂಕ ಪ್ರಾಣಿಗಳು ತೋರುವ ಅವಿನಾಭಾವದ ಸೆಳೆತಗಳು ಒಂಟಿಯಾದ ಮನಕೆ ಜೊತೆಯಾಗುವುದುಂಟು.ಮಾಲಿಕನ ಮನೆಯನ್ನು ನಿಯತ್ತಾಗಿ ಕಾದು,ಹಾಕುವ ತುತ್ತು ಅನ್ನಕೆ ಬದ್ಧತೆಯ ಮೆರೆವ ಮೂಕ ಪ್ರಾಣಿಗಳು ನಮ್ಮ ಜೊತೆ ಸಂಬಂಧಕ್ಕಿಂತ ಹೆಚ್ಚು ಹಾಸುಹೊಕ್ಕಾಗಿವೆ.ಮಾತು ಬಲ್ಲವರಿಗಿಂತ ಮೂಕ ಸಂವೇದನೆ ಹೊಂದಿರುವ ನಮ್ಮ ನೆಚ್ಚಿನ ಪ್ರಾಣಿಗಳು ಹಲವಾರು.ಅವುಗಳಿಗೂ ನಮ್ಮ ಸ್ಪರ್ಶ,ಪ್ರೀತಿ,ಆಲಿಂಗನದ ಕವಚ ಪರಸ್ಪರ ಅರಿಯಲು ಸಾಕು.ಊಟ ಒಂದು ನೆಪ ಅಷ್ಟೇ ಮನಸ್ಸು ಸಂಪರ್ಕ ಕಲ್ಪಿಸುವ ಸಾಧನವಾಗಿ ಯಾವಾಗ ರೂಪಗೊಂಡಿತೆಂದು ಅರ್ಥೈಸಿಕೊಳ್ಳಲು ಹೃದಯ ಬೇಕು .
ಮಗಳಿಗೆ ನಾಯಿಮರಿಗಳೆಂದರೆ ಎಲ್ಲಿಲ್ಲದ ಪ್ರೀತಿ.ಅವು ಎಲ್ಲೆ ಕಂಡರೂ ತಡಮಾಡದೆ ಎತ್ತಿಕೊಂಡು ಎದೆಗವುಚಿಕೊಂಡು ಮುದ್ದಾಡುವ ಅವಳಿಗೆ ಎಚ್ಚರಿಸಿದ್ದು ಇದೆ.ನನಗೆ ನಾಯಿ,ಬೆಕ್ಕು ಸಾಕುವುದೆಂದರೆ ಆಗದು.ಕಾರಣ ಬಾಲ್ಯದಲ್ಲಿ ನನಗೊಂದು ನಾಯಿ ಅಟ್ಟಿಸಿಕೊಂಡು ಬಂದಿತ್ತು,ಅದನ್ನು ನಾನು ಧೈರ್ಯದಿಂದ ಓಡಿಸಿದ್ದೆ,ಆ ಸಂದರ್ಭದಲ್ಲಿ ಬಿದ್ದು ಮೊಣಕಾಲಿಗೆ ಮೊನಚುಕಲ್ಲು ನಾಟಿ ತಿಂಗಳು ಗಟ್ಟಲೇ ನಿಂತು ನಡಿಯಲಾಗದೆ ಆರೈಕೆಗೆ ಒಳಗಾಗಿದ್ದಕ್ಕೆ ನಾಯಿ ಕಂಡರೆ ಅದೇನೋ ಮುನಿಸು ಅಷ್ಟೇ ಬಿಟ್ಟರೆ ಬೇರೆನೂ ಇಲ್ಲ.
ಆದ್ರೆ…ನನ್ನ ಮಗಳು ಮೂರುದಿನದ ತನಕ ಪುಟ್ಟ ನಾಯಿಮರಿಯನ್ನು ತಂದು ತನ್ನ ಹಾಸಿಗೆಯಲ್ಲಿ ಬೆಚ್ಚಗೆ ಮುಚ್ಚಿಟ್ಟಿದ್ದು ಅರಿವಿಗೆ ಬರಲೇ ಇಲ್ಲ…ನಾಯಿಮರಿ ಒಮ್ಮೆಯು ಕುಂಯ್ಗುಡಲಿಲ್ಲ.ಹೊತ್ತೊತ್ತಿಗೆ ಹಾಲು ಕುಡಿಸುತ್ತ ಆಟವಾಡಿಕೊಂಡಿದ್ದು ಗೊತ್ತಾಗಿದ್ದು ಮೂರನೇ ದಿನ ರಾತ್ರಿ.ಅದಕೆ ಹಸಿವಾಗಿರಬೇಕು ಜೋರಾಗಿ ಒದರುತ್ತಿತ್ತು.ನಾನೋ ಗಾಬರಿಗೊಂಡು ಎಲ್ಲಿಂದ ಧ್ವನಿ ಬಂತೆಂದು ಹೋಗಿ ನೋಡಿದರೆ ಮಗಳ ರೂಮಿಂದ…ಹಾಲುಣಿಸುತ್ತಿದ್ದ ಮಗಳು ಗಾಬರಿಗೊಂಡು ಅಮ್ಮಾ ಈ ನಾಯಿ ಮರಿ ಕ್ಯೂಟ್ ಇದೆ ನಂಗ ಬೇಕೆಂದು ಅದನು ಗಟ್ಟಿಯಾಗಿ ಅಪ್ಪಿದ್ದಳು.
ಅಯ್ಯೋ! ಯಾರ ಮನೆಯ ನಾಯಿ ಮರಿ ಇದು.ಪಾಪ ಹಾಲುಕುಡಿವ ಈ ಹಸುಳೆಯನ್ನು ತಂದಿಯಲ್ಲೆ… ಯಾರದಿದು? ಇದು ಪಕ್ಕದ ಮನೆ ಆಂಟಿ ಮನೆದು. ನಾಳೆ ಕೊಟ್ಟ ಬರತಿನಿ…ಎಂದಾಗ ಸುಮ್ಮನಾದೆ.ಸಂಜೆ ಹೊತ್ತಿಗೆ ಮೇಡಂ ನಿಮ್ಮ ಮಗಳು ನಾಲ್ಕು ದಿನದ ಹಿಂದೆ ನಮ್ಮ ಮನೆಯಿಂದ ನಾಯಿಮರಿ ತಗೊಂಡು ಹೋಗಿದ್ದಾಳೆ ಇನ್ನು ವಾಪಸ್ ಕೊಟ್ಟಿಲ್ಲ.ನನ್ನ ಮಗ ಅಳತಿದ್ದಾನೆ ಆ ನಾಯಿ ಮರಿ ಕೊಡಿಯೆಂದಾಗ ಮಗಳತ್ತ ನೋಡಿದ ನೋಟಕೆ ಬುಟ್ಟಿಯಲ್ಲಿ ಬಚ್ಚಿಟ್ಟ ನಾಯಿ ಮರಿಯನ್ನು ಅವರ ಕೈಗೆ ಕೊಡುವಾಗ ಅವಳ ಮುಖ ಬಾಡಿತ್ತು.ಆತ ಬಿಡು ನಿಂಗ ನಾಯಿ ಮರಿ ತಾನೆ ಬೇಕು…ತಂದಕೊಡತಿನಿ ಅಂದಾಗ ಅವಳ ಮುಖದಲ್ಲಿ ಸಂತಸ ತೇಲುತ್ತಿತ್ತು.
ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರಾಣಿ ಪಕ್ಷಿಗಳನ್ನು ಪ್ರೀತಿಸದವರು ಇಲ್ಲವೆಂದೆ ಹೇಳಬೇಕು. ಒಂದಲ್ಲಾ ಒಂದು ಕಾರಣಕ್ಕಾದರೂ ಇಷ್ಟ ಪಟ್ಟೆ ಪಡುತ್ತಾರೆ.ಅವು ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವ ಜೀವಿಗಳು.ರಷ್ಯಾ ದೇಶದಲ್ಲಿ ಗಣಿಗಾರಿಕೆಯನ್ನು ಜೀವನಾಂಶವಾಗಿ ಕಂಡ ಅನೇಕ ಕುಟುಂಬಗಳಲ್ಲಿ ಜಾನ್ ಕುಟುಂಬವು ಒಂದು. ಗಣಿಗಾರಿಕೆಯಲ್ಲಿ ಕೆಲಸ ಮಾಡುವವರು ಮೂರು ಹೊತ್ತು ಬಂಡೆಗಳ ಅಡಿಯಲ್ಲಿ ಕಾಲ ಕಳೆಯಬೇಕಾಗಿರುತ್ತದೆ.ಊಟ,ನಿದ್ದೆ,ಇತ್ಯಾದಿ ಬಂಡೆಗಳ ಅಡಿಯಲ್ಲೆ…ಹೀಗಿರುವಾಗ ಜಾನ್ ಊಟದ ನಂತರ ವಿಶ್ರಾಂತಿ ಪಡೆಯುತ್ತಿರುವಾಗ ಒಂದು ಇಲಿ ಜಾನ್ ನ ಕೈ ಬೆರಳುಗಳನ್ನು ನೆಕ್ಕುತ್ತಿತ್ತು.ಇದನ್ನು ಗಮನಿಸಿದ ಜಾನ್ ಇಲಿಗೆ ಆಹಾರದ ಅವಶ್ಯಕತೆಯಿದೆಯೆಂದು ತಿಳಿದು ಸ್ವಲ್ಪ ಆಹಾರ ನೀಡಿದ,ಇದು ಪ್ರತಿನಿತ್ಯ ನಡೆಯುತ್ತಿತ್ತು.ಇಲಿ ಸರಿಯಾದ ಸಮಯಕ್ಕೆ ಹಾಜರಾಗುತ್ತಿತ್ತು.
ಒಮ್ಮೆ ಜಾನ್ ಊಟ ಮುಗಿಸಿ ಗಾಢನಿದ್ರೆಯಲ್ಲಿದ್ದಾಗ ಇಲಿ ಯಾವತ್ತು ಜಾನ್ ನನ್ನು ಕಚ್ಚಿ ಎಬ್ಬಿಸುತ್ತಿರಲಿಲ್ಲ. ಆದ್ರೆ ಅವತ್ತು ಮಾತ್ರ ಜಾನ್ ನನ್ನು ಕಚ್ಚಿ ಕಚ್ಚಿ ಎಬ್ಬಿಸಿತು.ಜಾನ್ ಎಚ್ಚರಗೊಂಡು ಇಲಿಗೆ ಆಹಾರ ನೀಡಿ ಕೆಲಸಕ್ಕೆ ಹೊರಟ.
ಜಾನ್ ಎದ್ದು ಹೊರಬಂದ ಸ್ವಲ್ಪದರಲ್ಲೇ ಬಂಡೆ ಕುಸಿದಿತ್ತು.ಆಗ ಜಾನ್ ತನ್ನ ಎಬ್ಬಿಸಿದ ಇಲಿಗೆ ಧನ್ಯವಾದ ಹೇಳಲು ಅತ್ತಕಡೆ ಬಂದಾಗ ಬಂಡೆಯ ಅಡಿಯಲ್ಲಿ ಇಲಿ ಪ್ರಾಣ ಕಳೆದುಕೊಂಡಿತ್ತು.ಒಂದು ವೇಳೆ ಇಲಿ ಎಬ್ಬಿಸದಿದ್ದರೆ ತಾವು ಪ್ರಾಣ ಕಳೆದುಕೊಳ್ಳಬೇಕಾಗಿತ್ತೆಂಬ ಸತ್ಯ ಅರಿವಾಗುವ ಹೊತ್ತಿಗೆ ಎಲ್ಲವು ಮುಗಿದಿತ್ತು.ಜಾನ್ ಮೂಕ ಪ್ರಾಣಿಯ ಮುಂಜಾಗ್ರತಾ ಸಂವೇದನೆ ಕಂಡು ಕಣ್ಣಲ್ಲಿ ದುಃಖ ಮಡುಗಟ್ಟಿತ್ತು.
ಮಾತು ಬಾರದಿದ್ದರೂ ಅವು ನಮ್ಮ ಅರ್ಥೈಕೊಂಡ ಬಗೆಯನ್ನು ಕೊಂಚ ವ್ಯವಧಾನದಿಂದ ನಿಭಾಯಿಸಿದರೆ ಎಲ್ಲವೂ ಒಳಿತೆಂಬ ಭಾವ….ಮನೆಯಲ್ಲಿ ಸಾಕದಿದ್ದರೂ ನಾವು ಹಾಕೋ ಅನ್ನಕೆ ಜೀವಿಗಳು ನಿಮ್ಮ ಮನೆಯ ಕಾದು ಋಣತೀರಿಸಿ ಬಿಡುತ್ತವೆ. ಅಂತ ಜೀವಿಗಳಿಂದ ಮಾತು ಬಲ್ಲ ನಮ್ಮಂತವರು ಕಲಿಯಬೇಕಾದದ್ದು ಸಾಕಷ್ಟಿದೆ….ಪ್ರಾಣಿಗಳೇ ಗುಣದಲಿ ಮೇಲು..ಎಂಬ ಹಾಡು ಮನವನ್ನು ಸೆಳೆಯುತ್ತಿತ್ತು….
ಹೌದರೀ ಮೇಡಂ.ತಮ್ಮ ಲೇಖನ ಸುಂದರ ಸತ್ಯ.ಅತೀ ಬುದ್ಧಿವಂತ ಮಾನವನಿಗಿಂತ ಈ ಮೂಕ ಪ್ರಾಣಿಗಳ ಮೌನ ಭಾವ ಮಾತುಗಳನ್ನು ಮೀರಿದ್ದು ಎಂಬ ತಮ್ಮ ಲೇಖನ ಮನಸ್ಸು ತಟ್ಟುವ ಮೂಲಕ ಓದಲು ಹೆಮ್ಮೆ ಎನಿಸುತ್ತದೆ ತಮ್ಮ ಸಾಹಿತ್ಯ ಶೈಲಿ ಗೆ.ಅಭಿನಂದನೆಗಳು
Good
super
ಚೆಂದದ ಬರಹ
Super madam
ಇಂದಿನ ಕಾಲಘಟ್ಟಕ್ಕೆ ಸೂಕ್ತವಾದ ಲೇಖನ.
ಅರ್ಥಪೂರ್ಣ ಹಾಗೂ ಪ್ರಾಣಿಗಳು ನಮಗಿಂತ ಮೇಲೆ…ಇಲಿಯ ತ್ಯಾಗ ಇಷ್ಟವಾತು,ನಾಯಿಯಂತು ನಮಗೆಲ್ಲ ಮಾದರಿ…ಚೆನ್ನಾಗಿದೆ.
ತುಂಬಾ ಮನೋಜ್ಞವಾಗಿದೆ. ಕುತೂಹಲಕಾರಿ ಅಭಿನಂದನೆಗಳು ಮೇಡಂ
ಮೂಕ ಪ್ರಾಣಿಗಳಿಗಿರುವ ನಿಯತ್ತು ಇವತ್ತು ಮನುಷ್ಯನಿಗಿಲ್ಲ. ಮೇಡಂ. ಹಣವೊಂದು ಸಿಕ್ಕರೇ ಎಲ್ಲಾ ಸಂಬಂಧಗಳು ಮೂಲೆಗುಂಪಾಗುತ್ತವೆ. ಆದರೆ ಮೂಕ ಪ್ರಾಣಿಗಳು ತೋರುವ ಪ್ರೀತಿ ಅದ್ಭುತ. ನಿಮ್ಮ ಲೇಖನವು ಅತ್ಯದ್ಭುತ.
ಮೂಕ ಪ್ರಾಣಿಗಳ ಮೇಲಿನ ಪ್ರೀತಿ. ಲೇಖನ ತುಂಬಾ ಚೆನ್ನಾಗಿದೆ