ಭಾವತೀರಯಾನ

ಪುಸ್ತಕ ಸಂಗಾತಿ

ಭಾವತೀರಯಾನ

.

ಯುವ ಲೇಖಕಿ ಅಮೃತಾ ಅವರ ಭಾವನೆ ಇಲ್ಲದವಳ ಭಾವತೀರಯಾನ ಪುಸ್ತಕ ಅವಲೋಕನ.

ಪುಸ್ತಕ ಬೆಲೆ 100 ರೂ

ಪುಟ ಸಂಖ್ಯೆ 88

ಪುಸ್ತಕಕ್ಕಾಗಿ

 7996498415 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ

ಮಂಡ್ಯ ಜಿಲ್ಲೆಯ ಲೇಖಕಿ ಅಮೃತ ಎಂ.ಡಿ.ಅವರ ಭಾವನೆಗಳಿಲ್ಲದವಳ ಭಾವ ತೀರಯಾನ ಗಜಲ್ ಸಂಕಲನದ ಶಿರ್ಷಿಕೆ ನೋಡಿ ಸ್ವಲ್ಪ ಕುತೂಹಲಗೊಂಡದ್ದು ನಿಜ.ಇಂತಹ ಇನ್ನೋವರ್ಟ ಜೀವಿಗಳ ಬಗ್ಗೆ ನನಗೆ ಸ್ವಲ್ಪ ಕುತೂಹಲ ಮೊದಲಿನಿಂದಲೂ…ಇಂಥಲ್ಲಿ ಮಾನಸಿಕ ಅಧ್ಯಯನಕ್ಕೆ ಒಂದಷ್ಟು ವಿಷಯ ಸಿಗುತ್ತದೆ.ಆ ಹಿನ್ನೆಲೆಯಲ್ಲಿ ಈ ಪುಟ್ಟ ಯುವತಿ ಅಮೃತ ಎಂ.ಡಿ.ಯ ಈ ಕೃತಿ ಬಗ್ಗೆ ಕೆಲ ಗುಂಪುಗಳಲ್ಲಿ ಎರಡು ಮೂರು ಸಲ ಪ್ರಸ್ಥಾಪಿಸಿದ್ದು ಉಂಟು.ಆದರೆ ಪುಸ್ತಕ ತಲುಪಲು ತಡ ಆಯಿತು.ಅದಕೆ ಅವರು ಕಳಿಸಿದ ಆರ್ಡಿನರಿ ಅಂಚೆ ಕಾರಣ.ಇನ್ನೊಂದು ಕಾರಣ ಅನೇಕ ಗೆಳೆಯರ ಒತ್ತಾಸೆಯಿಂದ ಬರೆಯಲು ಹಚ್ಚಿದ ಕೃತಿಗಳು ಕಾರಣ.ಆ ಮೂಲಕ ಹತ್ತಾರು ಕೃತಿಗಳಿಗೆ ಬರೆಯುವ ಹಾಗೂ ನಿರಂತರವಾಗಿ ಓಡಾಟದಲ್ಲಿ ಇರುವ ನನಗೆ ಈ ಕೃತಿ ಓದಲು ಬೇಗ ಆಗಲೇ ಇಲ್ಲ.ಆದರೆ ಒಳಮನಸ್ಸು ನನ್ನ ಸ್ವಭಾವ ಸಹಜವಾಗಿ ಈ ಕೃತಿಯಲ್ಲಿ ಭಾವನೆಗಳಿಲ್ಲದವಳ ಭಾವತೀರಯಾನ… ಯಾವ ಕಡೆ,ಯಾರ ಕಡೆ, ಹೇಗಿರಬಹುದು ಅಂತ ಯೋಚಿಸುತ್ತಲೇ ಇತ್ತು.

ಪುಸ್ತಕ ತೆರೆದು ನೋಡುತ್ತೇನೆ ಒಳಗಡೆ ನಮ್ಮ ರೂಪಕಗಳ ವಿಶಿಷ್ಟ ಲೇಖಕ ಚಂಪೂರ  ಭರಪೂರ ಭಾವಗಳ ಮುನ್ನುಡಿ, ಹೈತೋರ ಮಮತಾಮಯಿ ತಾಯಿಗರುಳಿನ ಆನಿಸಿಕೆ, ಯುವ‌ ಗಜಲ್ ಸಾಧಕ ನೂರು (ಸಾವಿರ)ಅಹ್ಮದ ರ ಭಾವಪೂರ್ಣ ಬೆನ್ನುಡಿ,ಇವರೆಲ್ಲರ ಜೊತೆಗೆ ಪ್ರಕಾಶಕ ನಮ್ಮ ನಂರುಷಿ ಯ ಖುಷಿ ಖುಷಿಯಾದ ಪ್ರಕಾಶಕರ ಮಾತುಗಳು ಹಾಗೂ ಸ್ವತಹ ಈ ಯುವ ಪ್ರತಿಭೆ ಅಮೃತಾ ಳ ಲೇಖಕಿಯ ಅಂತರಾಳದ ಭಾವಪೂರ್ಣ ಮಾತುಗಳು ಓದಿ ನಾನೇ ಈ‌ ಶಿರ್ಷಿಕೆ ನೋಡಿ ಬೆಸ್ತು ಬಿದ್ದೆ ಅನಿಸಿ ಸ್ವಲ್ಪ (ಹುಸಿ) ಕೋಪವೇ ಬಂದಿದೆ. ಈ ಹುಡುಗಿ ಇಂತಹ ಹೆಸರಿಟ್ಟು ನನ್ನಂತಹ ಭಾವಜೀವಿಗಳಿಗೆ ಚೀಟ ಮಾಡಿದಳು ಅನಿಸಿದ್ದು ಸುಳ್ಳಲ್ಲ.ಈ ಇಂತಹ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನದ ಬಹುಮಾನ ಈ ಶಿರ್ಷಿಕೆಯ ಕಾರಣ ಸಿಕ್ಕಿದೆ ಅನಿಸಿದ್ದು ನಿಜ.ಇರಲಿ ಸಂತೋಷ.

ಈ ಕೃತಿ ಭಾವನೆಗಳಿಲ್ಲದವಳ ಭಾವತೀರಯಾನದ ಮುಖವಾಡದಲಿ ಭರಪೂರ ಭಾವತುಂಬಿದ,ಅನೇಕ ಭಾವಗಳ ಮುಚ್ಚಿಟ್ಟು ನರಳುವ,ಒಳಗೆ ಕೊರಗುವ, ಮುದುಡಿದ ಮನಸುಗಳ ಪ್ರಾತಿನಿಧಿಕ ಸಂಕಲನವಾಗಿದೆ ಅನಿಸಿತು.ಇಂತಹ ಕಾರಣದಿಂದಲೇ ಆರಂಭದಲ್ಲಿ ಇನ್ನೋವರ್ಟ ಪದ ಬಳಸಿರುವೆ.ಇರಲಿ.ಎಲ್ಲಾ ಕೋಪ ಮುಚ್ಚಿಟ್ಟುಕೊಂಡು ಇಂತಹ ಭಾವನೆಗಳೇ ಇಲ್ಲದವಳು ಅಂತ ತೋರಿಸಿಕೊಳ್ಳುವ ಇಂಥವರೇ ಭಾವ ಸರೋವರವನ್ನೇ ತಮ್ಮ ಒಡಲಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಸ್ತ್ರೀ ಸಹಜ ಸಂಕೋಚ, ಕೌಟುಂಬಿಕ ಪರಿಸರ, ಸೋಷಿಯೋ ಎಕನಾಮಿಕ್ ಕಾರಣಗಳು,ಧಾರ್ಮೀಕ ಕಟ್ಟುಪಾಡುಗಳು, ಬೆಳೆದ ವಾತಾವರಣ,ಪಡೆದ ಸಂಸ್ಕಾರ, ಬದುಕಿನಲ್ಲಿ ಬಂದ ಕೆಲವು ಅವಘಡಗಳು ಇವರು ನಿರ್ಮೋಹಿ ತರ ಬದುಕಲು, ಹೆಣಗಲು ಹಚ್ಚುತ್ತದೆ. ಭಾವಗಳನು ಕೊಂದುಕೊಂಡು ನಗುವ ನಾಟಕಕ್ಕೆ ದೂಡುತ್ತದೆ.

ಇಂತಹವರು ಅಪಾರ ಜೀವನ ಪ್ರೇಮಿಗಳು, ಆಳದಲ್ಲಿ ಅಪಾರ ಕನಸುಗಾರರು,ನಿಜವಾದ ಜೀವನ, ಮಾನವೀಯ ಪ್ರೇಮಿಗಳು ಆಗಿರುತ್ತಾರೆ. ತಮ್ಮ ಹೂವಂತಹ ಅರಳುವ ಮನಸುಗಳ ಮುಚ್ಚಿಟ್ಟು ವಜ್ರದ ಕಠೋರತೆಯನು ಮಾತು ನಡೆಯಲಿ ತೋರುತ್ತಾ ಎಂತಹ ಕಟುಗಾರ ಮನಸು ಇವರದು ಎಂಬಂತೆ ವರ್ತಿಸುವುದು ಉಂಟು.ಆದರೆ ಇವರು ಸುಕೋಮಲತೆಯ ಮನಸಿನವರು,ಇತರರ ಮನಸು ನೋಯಿಸಲಾರರು, ಅಭದ್ರತೆಯಿಂದ ನರಳುವ ಕಾರಣಕ್ಕೆ ಬೇರೆಯವರ ತಂಟೆಗೆ ಹೋಗರು.ತಮ್ಮ ಪಾಡಿಗೆ ತಾವಿದ್ದರೂ ಸಹ ಎಲ್ಲರ ಒಳಿತು ಬಯಸುವ ಮನಸಿನವರು ಆಗಿರುತ್ತಾರೆ. ಯಾರಿಗಾದರೂ ಹಚ್ಚಿಕೊಂಡರೆ ಹಗಲಿರುಳು ಅವರಿಗಾಗಿ ಹಂಬಲಿಸುತ್ತ, ಅವರಿಗೆ ಗೊತ್ತಿಲ್ಲದಂತೆ ಸದಾ ಅವರ ಪ್ರೀತಿ ಮಮತೆ ಪ್ರಗತಿ ಖುಷಿಗೆ ಸಂತಸ ಪಡುವಂತಹ ಒಳ್ಳೆಯ ಮನಸಿಗರಾಗಿರುತ್ತಾರೆ. ತಮ್ಮ ಯಾವೊಂದು ಸಂಕಷ್ಟ ಹಂಚಿಕೊಳ್ಳದೇ ಒಳಗೊಳಗೆ ಸುಟ್ಟುಕೊಂಡು ಬೆಳಕು ನೀಡುವ ಕ್ಯಾಂಡಲ್ ಗುಣ ಇವರದು.ಪ್ರೇಮ,ಕಾಮ, ವಿರಹ,ಉತ್ಕಟತೆ,ಹೀಗೆ ಮನುಷ್ಯ ಸಹಜ ಸ್ವಭಾವಗಳು ಎಲ್ಲಿಯೂ ಕಾಣಿಸಿಕೊಳ್ಳದಂತೆ ಕಾಪಿಡುವ ಗುಣ ಇರುತ್ತದೆ. ಈ ಕಾರಣ ಬದುಕಿನಿಂದ ಪಡೆದುಕೊಳ್ಳುವ ಬದಲು ಕಳೆದುಕೊಳ್ಳುವುದೇ ಜಾಸ್ತಿ.ಎಂ.ಕೆ.ಇಂದಿರಾರ ಎರಡು ಮುಖ ಕಾದಂಬರಿ ಓದಿದವರಿಗೆ ನಾ ಹೇಳಿದ ಈ ಭಾವ ತೋರದ ಭಾವಜೀವಿಗಳ ಪರಿಚಯ ಆಗುತ್ತದೆ. ಡ್ವಿಯಲ್ ಪರ್ಸನಾಲಿಟಿ ಇಂತಹವರದು.

ಈ ಕೃತಿಯ ಬಗ್ಗೆ ಬರೆಯಲು ಹೊರಟು ಏನೇನೋ ಬರೀತಿದಾನೆ ಅನ್ಕೋಬೇಡಿ.ಮನೋ ವೈಜ್ಞಾನಿಕ ವಿಚಾರ ಇದು.ಭಾವನೆಗಳಿಲ್ಲದ ವ್ಯಕ್ತಿತ್ವವೇ ಇರಲು ಸಾಧ್ಯವಿಲ್ಲ.ಈ ಟೈಟಲ್ ಒಂದೇ ಕಾರಣದಿಂದ ಇಷ್ಟು ಬರೀಬೇಕಾತು. ಬರೀತಾ ಬರೀತಾ ಯೋಚನೆಗಳು ಒಂದು ವೇಗದಲ್ಲಿ ಬಿಚ್ಚಿ ಕೊಳ್ಳುತ್ತಾ ಹೋಗುತ್ತವೆ.ಅವೇ ಭಾವಯಾನಗಳು.

ಒಟ್ಟಾರೆ ಈ ಸಂಕಲನದ ಶಿರ್ಷಿಕೆ ಹೊರಮುಖ ತೋರಿದರೆ ಗಜಲ್ ಗಳು ಒಳಮುಖ ತೋರಿವೆ.ಅಪಾರ ಸುಂದರ, ಮೋಹಕ,ಕಾಡುವ,ಚಿಂತಿಸುವ,ಭಾವ ತೀವ್ರತೆಯನ್ನು ಉಂಟು ಮಾಡುವ ಗಜಲ್ ಗಳು ತಮ್ಮ ತಾಜಾತನದಿಂದ 💓 ಹೃದಯಕ್ಕೆ ಲಗ್ಗೆ ಹಾಕುವಂತಿವೆ.

ನೆನಪುಗಳ ಆರ್ಭಟಕ್ಕೆ ಹೃದಯವು 💓 ತತ್ತರಿಸಿ ಕಂಗಾಲಾಗಿ ನಲುಗುತ್ತಿದೆ

ನೆನಹುಗಳ ಇರುವಿಕೆಯ ನೆನಪು ನೀನಾಗಿ ಬರಲೊಲ್ಲೆಯ ಸಖ

ಹೊತ್ತಾಸೆಗಳು ಏನಿಲ್ಲ ಆದ್ರೂ ನಾ ಬರೆಯಬೇಕು

ಹುಚ್ಚುತನ ನನದಲ್ಲ ಆದ್ರೂ ನಾ ಬರೆಯಬೇಕು

ಕಣ್ಣೀರ ಹನಿಗಳು ಪೈಪೋಟಿಗೆ ಇಳಿದಿವೆ ಬಿಂಬಿಸಲು ಅಸಾಧ್ಯ

ನೋವ ಬಿಂದು ಸ್ಪರ್ಧಾ ಕಣಕ್ಕೆ ಇಳಿದಿದೆ ವರ್ಣಿಸಲು ಅಸಾಧ್ಯ

ಇಂತಹ ಮನದ ಸಂಕಟಕ್ಕೆ ಮುಲಾಮು ಸಿಕ್ಕದೇ ತೊಳಲಾಡುವ ಜೀವಗಳು ನಮ್ಮ ಸುತ್ತಲು ಸಿಗುತ್ತವೆ. ಅಂತಹ ನೊಂದ ಮನಸುಗಳ ಒಡಲಾಳದ ಅಸಹಾಯಕತೆ, ಕಣ್ಣೀರು,ಆಸೆ ನಿರಾಸೆಗಳು,ಕನಸುಗಳ ಭಾವಗಳನ್ನು ಅತ್ಯಂತ ಸೂಕ್ಷ್ಮ ಸಂವೇದನೆಯಿಂದ ಈ ಗಜಲ್ ಲೇಖಕಿ *ಅಮೃತಾ ಎಂ.ಡಿ.(ಅಮೃತಾ ಪ್ರೀತಂ ಅಲ್ಲ.ಆ ಪ್ರೇಮದ ಹುಡಿ ಕೈ ಗಂಟಿಸಿಕೊಂಡು ಬರೆದ ಆ ಅಮೃತಾ ಪ್ರೀತಂರ ಕೈ ಕುಲುಕಿ ಬಂದ ಈ ಕೈ ನನ್ನದು) ಅವರ ಈ ಮೊದಲ ಕೃತಿ ಓದಿ ಇಷ್ಟು ಮನದ ಮಾತು ಹಂಚಿಕೊಂಡಿರುವೆ.ಈ ಯುವ ಲೇಖಕಿಯ ಓದು ವಿಸ್ತಾರ ಆದಂತೆ ಪಕ್ವವಾದ ಬರೆಹ ತಾನೇ ತಾನಾಗಿ ಬರೆಯಿಸಿಕೊಳ್ಳುತ್ತದೆ.ಈ ಕೃತಿಯ ಹಿನ್ನೆಲೆಯಲ್ಲಿ ನನಗೆ ಕಾಡಿದ ಕೆಲವು ವಿಷಯ ಸಹ ಹಂಚಿಕೊಂಡಿರುವೆ.ಈ ಲೇಖಕಿಗೆ ಶುಭ ಕೋರಿ ಮುಗಿಸುವೆ.


ಸಿದ್ಧರಾಮ ಹೊನ್ಕಲ್

Leave a Reply

Back To Top