ಗಜಲ್

ಕಾವ್ಯ ಸಂಗಾತಿ

ಗಜಲ್

ರಾಜನಂದಾ ಘಾರ್ಗಿ

ಅರೆ ಶತಮಾನದ ಅನುಭವದ ಹಿಂದೆ ಅರಳುಗಣ್ಣಿನ ಹುಡುಗಿ ಜೀವಂತವಿದ್ದಾಳೆ
ನೆರೆತ ಬಿಳಿ ಕೂದಲುಗಳಡಿಯಲ್ಲಿ ಕನಸು ಕಾಣುವ ಬೆಡಗಿ ಜೀವಂತವಿದ್ದಾಳೆ

ಮನದಲ್ಲಿ ಆಶಯಗಳ ಮೆರವಣಿಗೆ ಕಣ್ಣಲ್ಲಿ ಕನಸುಗಳು ತುಂಬಿವೆ
ಹೃದಯಗಳಲ್ಲಿ ನುಗ್ಗುತ್ತ ರಾತ್ರಿಯ ನಿದ್ದೆ ಕದಿಯುತ್ತಿದ್ದ ತುಡುಗಿ ಜೀವಂತವಿದ್ದಾಳೆ

ಹೆಣ್ಣಾಗಿ ಹುಟ್ಟಿ ತನ್ನದಲ್ಲದ ಎಲ್ಲ ತಪ್ಪುಗಳಿಗೆ ಶಿಕ್ಷೆ ಅನುಭವಿಸಿಹಳು
ಜಗದ ಈ ನಿಯಮಗಳಿಗೆ ತೆಲೆಬಾಗದೇ ಸೆಟೆದ ಸಿಡುಗಿ ಜೀವಂತವಿದ್ದಾಳೆ.

ಶತಮಾನದ ಸಂಕೋಲೆಗಳ ಕೊಡವುತ ಎದ್ದಿಹಳು ಸಬಲ ಬಾಲೆ
ಕಳೆದುಕೊಂಡಿರುವ ಅಸ್ತಿತ್ವವ ಹುಡುಕಿ ಭವಿಷ್ಯವ ನೆನೆಯುತ್ತ ನಡುಗಿ ಜೀವಂತವಿದ್ದಾಳೆ

ಪ್ರತಿದಿನ ಪ್ರತಿಕ್ಷಣ ಜೀವಿಸುತ ಸಂಭ್ರಮಿಸುವ ಅನಿವಾರ್ಯತೆಯಲ್ಲಿಹಳು ರಾಜಿ
ಕಾಲದ ಗತಿಯಲ್ಲಿ ಸವೆಯುತ್ತಿರುವ ದೇಹದಲ್ಲಿ ಅಡಗಿ ಜೀವಂತವಿದ್ದಾಳೆ


Leave a Reply

Back To Top